ಕರಣ್ ಮಾನ ಮೇಯ್ಲ್ನಲ್ಲಿದೆ!
ಸಿನಿಮಾ ಮಂದಿ ನಾನಾ ಪ್ರಾಕಾರದಲ್ಲಿ ಕಳವು ಮಾಡೋದಕ್ಕೆ ಒಂದು ಸುದೀರ್ಘವಾದ ಇತಿಹಾಸವೇ ಇದೆ. ಇಂಥಾ ಅಕ್ಷರಗಳವು ವೃತ್ತಾಂತ ಕೇವಲ ಸಿನಿಮಾ ವಲಯಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಪತ್ರಿಕೋದ್ಯಮ ಸೇರಿದಂತೆ ಎಲ್ಲ ಕ್ರಿಯಾಶೀಲ ವಲಯಕ್ಕೂ ಹಬ್ಬಿಕೊಂಡಿದೆ. ಯಾರದ್ದೋ ಸರಕನ್ನು ತಮ್ಮದೆಂದು ಹೇಳಿಕೊಂಡು ಮೆರೆಯುವವರು, ಯಾರೋ ಬರೆದಿದ್ದಕ್ಕೆ ತಾನೇ ಅಪ್ಪ ಅಂದುಕೊಂಡು ಅವರಿವರ ಬಳಿ ಮೆಚ್ಚುಗೆ ಗಿಟ್ಟಿಸಿಕೊಳ್ಳುವವರು, ಕನಿಷ್ಟ ಒಂದು ಕ್ರೆಡಿಟ್ಟು ಕೊಡಬೇಕೆಂಬ ಖಬರೂ ಇಲ್ಲದ ಲಫಂಗರು ಈ ವಲಯಗಳಲ್ಲಿದ್ದಾರೆ. ಸಿನಿಮಾದಲ್ಲಂತೂ ಯಾರೋ ಕನಸು ಕಟ್ಟಿಕೊಂಡು ಕಥೆ ಬರೆದಿರುತ್ತಾರೆ. ಮತ್ಯಾರೋ ಅದನ್ನು ಲಪಟಾಯಿಸಿ ಮೈಲೇಜು ಪಡೆದುಕೊಳ್ಳುತ್ತಾರೆ. ಅಂಥಾದ್ದೊಂದು ಘನ ಗಂಭೀರ ಆರೋಪವೀಗ ಬಾಲಿವುಡ್ಡಿನ ನಿರ್ದೇಶಕ ಕಂ ನಿರ್ಮಾಪಕ ಕರಣ್ ಜೋಹರ್ಗೂ ಮೆತ್ತಿಕೊಂಡಿದೆ!
ನಿರ್ದೇಶಕನಾಗಿ ಬಾಲಿವುಡ್ಡಿಗೆ ಪ್ರವೇಶ ಮಾಡಿ, ಆ ನಂತರದಲ್ಲಿ ನಿರ್ಮಾಪಕನಾಗಿಯೂ ನೆಲೆ ಕಂಡುಕೊಂಡಿರುವಾತ ಕರಣ್ ಜೋಹರ್. ಹೆಸರು, ಖ್ಯಾತಿ, ಹಣವೆಲ್ಲವನ್ನೂ ಮಾಡಿಕೊಂಡಿಕೊಂಡಿರುವ ಕರಣ್ ಧರ್ಮ ಪ್ರೊಡಕ್ಷನ್ಸ್ ಹೆಸರಿನಲ್ಲಿ ಸ್ವಂತದ ನಿರ್ಮಾಣ ಸಂಸ್ಥೆಯನ್ನೂ ಮಾಡಿಕೊಂಡಿದ್ದಾರೆ. ಅದರ ಕಡೆಯಿಂದ ಬಹು ಕೋಟಿ ಕಿಮ್ಮತ್ತಿನ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ನಿರ್ಮಾಣ ಸಂಸ್ಥೆಯಡಿಯಲ್ಲಿ ಸಿನಿಮಾಕ್ಕಾಗಿ ಕಥೆ ಬೇಕೆಂಬ ಬಗ್ಗೆ ಕರಣ್ ಆಹ್ವಾನ ನೀಡಿದ್ದರಂತೆ. ಅದಕ್ಕೆ ದಂಡಿ ದಂಡಿಯಾಗಿ ಕಥೆಗಳು ಬಂದು ಬಿದ್ದಿದ್ದವಲ್ಲಾ? ಅದರಲ್ಲೊಂದನ್ನು ಕಾಪಿ ಮಾಡಿ ಜಗ್ಗುಗ್ ಜೀಯೋ ಚಿತ್ರವನ್ನು ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಕರಣ್ ಜೋಹರ್ ಮೇಲೆ ಇಂಥಾದ್ದೊಂದು ಆರೋಪ ಮಾಡಿರೋದು ವಿಶಾಲ್ ಸಿಂಗ್ ಎಂಬಾತ. ವಿಶಾಲ್ ಧರ್ಮ ಪ್ರೊಡಕ್ಷನ್ ಸಂಸ್ಥೆಗೆ ತಾನು ಕಳಿಸಿರುವ ಸ್ಕ್ರಿಫ್ಟಿನ ದಾಖಲೆಯೊಂದಿಗೇ ಇಂಥಾ ಆರೋಪ ಮಾಡಿದ್ದಾನೆ. ಕರಣ್ ಯಾವುದೇ ಕ್ರೆಡಿಟ್ಟು ಕೊಡದೆ ತನ್ನ ಕಥೆ ಕದ್ದಿದ್ದಾರೆಂದು ತಗಾದೆ ತೆಗೆದಿದ್ದಾನೆ. ತಾನು ಜೋಹರ್ ಸಂಸ್ಥೆಗೆ ಮೇಯ್ಲ್ ಮಾಡಿರೋದರ ಸ್ಕ್ರೀನ್ ಶಾಟನ್ನೂ ಹಂಚಿಕೊಂಡಿದ್ದಾನೆ. ಮೊನ್ನೆಯಷ್ಟೇ ಜಗ್ಗುಗ್ ಜೀಯೋ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಅದಕ್ಕೆ ಪ್ರಶಂಶೆಗಳೂ ಕೇಳಿ ಬರುತ್ತಿವೆ. ಇಂಥಾ ಹೊತ್ತಿನಲ್ಲಿ ಈ ಥರದ್ದೊಂದು ವಿವಾದವೆದ್ದಿರೋದು ಕರಣ್ಗೆ ತಲೆ ನೋವು ತರಿಸಿದೆ.
ಒಂದು ವೇಳೆ ಕರಣ್ ಆ ಕಥೆಗಾರನನ್ನು ಯಾಮಾರಿಸಿ ಕಥೆ ಕಾಪಿ ಹೊಡೆದಿದ್ದೇ ಆದರೆ ಅದಕ್ಕಿಂತಲೂ ದೊಡ್ಡ ಅಪರಾಧ ಯಾವುದೂ ಇಲ್ಲ. ಯಾಕೆಂದರೆ, ಯಾರೋ ಬರೆದದ್ದನ್ನು ದೇಪಿಕೊಂಡು ತಮ್ಮದೆಂಬಂತೆ ಪೋಸು ಕೊಡೋದು, ಮೈಲೇಜು ಗಿಟ್ಟಿಸಿಕೊಳ್ಳೋದು ಮಾನವಂತರು ಮಾಡೋ ಕೆಲಸವಲ್ಲ. ಅಂಥಾ ಕಳ್ಳತನದಿಂದ ಮಾಡಿದ ಸಿನಿಮಾವಾಗಲಿ, ಯಾವುದೇ ಆಗಿರಲಿ ಹೆಚ್ಚು ದಿನ ಬಾಳಿಕೆ ಬರುವುದೂ ಇಲ್ಲ. ಹೇಳಿಕೇಳಿ ಇದೊಂದು ಕ್ರಿಯಾಶೀಲ ಕೆಲಸವಾದ್ದರಿಂದ ಯಾರನ್ನೋ ಯಾಮಾರಿಸಿ ಬಚಾವಾಗಬಹುದೆಂದರೆ ಅದು ಅಪ್ಪಟ ಮುಠ್ಠಾಳತನ. ಈ ನಿಟ್ಟಿನಲ್ಲಿ ನೋಡಹೋದರೆ, ತಪ್ಪು ಮಾಡಿದ್ದಕ್ಕೆ ಕ್ಷಮೆ ಕೇಳೋದೊಂದೇ ಕರಣ್ ಜೋಹರ್ ಮುಂದಿರುವ ಏಕೈಕ ಆಯ್ಕೆಯಂತೆ ಕಾಣಿಸುತ್ತಿದೆ. ಆ ಕಥೆಗಾರನ ಮೇಯ್ಲ್ನಲ್ಲಿಯೇ ಕರಣ್ ಮಾನ ಅಡಗಿದೆ. ಇಂಥಾ ಇನ್ನೆಷ್ಟು ಕಳ್ಳರ ಜನ್ಮ ಜಾತಕ ಅದ್ಯಾರ್ಯಾರ ಮೇಯ್ಲ್ನಲ್ಲಿದೆಯೋ ಬಲ್ಲೋರ್ಯಾರು…!