ಕಾಡುವ ಕಥೆಯೊಂದು ಎಲ್ಲರೆದೆಯಲ್ಲಿ ಹಾಡಾದ ಸೋಜುಗ!
ಈ ನೆಲದ ಸೊಗಡಿನ ಸಿನಿಮಾಗಳನ್ನು ಕನ್ನಡದ ಪ್ರೇಕ್ಷಕರು ಕಡೆಗಣಿಸಿದ ಉದಾಹರಣೆಗಳೇ ಇಲ್ಲ. ಇಂಥಾ ಕಥೆಯನ್ನೊಳಗೊಂಡು ಯಾವುದೇ ಹೈಪುಗಳಿಲ್ಲದೆ ತೆರೆಕಂಡ ಚಿತ್ರಗಳು ಭರಪೂರ ಪ್ರದರ್ಶನ ಕಂಡು, ಅದ್ಭುತವೆಂಬಂಥ ಗೆಲುವು ದಾಖಲಿಸಿದ ಉದಾಹರಣೆಗಳು ಸಾಕಷ್ಟಿದ್ದಾವೆ. ಆ ಸಾಲಿಗೆ ನೀನಾಸಂ ಮಂಜು ನಿರ್ದೇಶನದ ಕನ್ನೇರಿ ಚಿತ್ರವೂ ಸೇರಿಕೊಂಡಿದೆ. ಈ ಸಿನಿಮಾ ಸಾಕಷ್ಟು ಎಡರು ತೊಡರುಗಳನ್ನು ದಾಟಿಕೊಂಡು ಯಶಸ್ಸಿನತ್ತ ಮುನ್ನುಗ್ಗಿದೆ. ಎಲ್ಲರೂ ಅಚ್ಚರಿ ಪಡುವಂತೆ, ಖುಷಿಗೊಳ್ಳುವಂತೆ ಯಶಸ್ವೀ ಪ್ರದರ್ಶನದ ಎಪ್ಪತೈದು ದಿನಗಳನ್ನು ಪೂರೈಸಿಕೊಂಡಿದೆ. ಈ ಮೂಲಕ ಚಿತ್ರತಂಡದ ಶ್ರಮ ಸಾರ್ಥಕವಾಗಿದೆ. ಇದೇ ಖುಷಿಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿರುವ ಚಿತ್ರತಂಡ ಸಂತಸ ಹಂಚಿಕೊಂಡಿದೆ.
ನಿರ್ದೇಶಕ ನೀನಾಸಂ ಮಂಜು ರಂಗಭೂಮಿಯಲ್ಲಿ ಹದಗೊಂಡ ಪ್ರತಿಭೆ. ಹಲವಾರು ವರ್ಷಗಳಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದುಕೊಂಡು ಈಗಾಗಲೇ ಅವರು ಹಿರಿತೆರೆಯಲ್ಲಿಯೂ ನಿರ್ದೇಶಕನಾಗಿ ನೆಲೆ ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ ರಂಗಭೂಮಿಯಿಂದ ಬಂದವರ ಬಗ್ಗೆ ಚಿತ್ರರಂಗದಲ್ಲಿ ವಿಶೇಷವಾದ ಆಸ್ಥೆ, ಅಕ್ಕರೆಗಳಿವೆ. ಯಾಕೆಂದರೆ ಗಟ್ಟಿ ಪ್ರತಿಭೆಗಳು ಚಿತ್ರರಂಗಕ್ಕೆ ಆಗಮಿಸೋದು ರಂಗಭೂಮಿಯಿಂದಲೇ. ಕನ್ನೇರಿಯ ಭರಪೂರ ಗೆಲುವಿನ ಮೂಲಕ ನೀನಾಸಂ ಮಂಜು ಆ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸಿದ್ದಾರೆ.
ಅಷ್ಟಕ್ಕೂ ಈ ಚಿತ್ರ ಆರಂಭದಿಂದಲೂ ತಾನೇತಾನಾಗಿ ಸದ್ದು ಮಾಡಿದ್ದೇ ತನ್ನ ಭಿನ್ನ ಕಥಾನಕದ ಸುಳಿವಿನ ಮೂಲಕ. ನಮ್ಮ ನಡುವೆಯೇ ನಡೆಯುತ್ತಿರುವ, ನಾವು ಅಷ್ಟಾಗಿ ಪರಿಗಣಿಸದ ಕಥೆಯೊಂದನ್ನು ಆಯ್ಕೆ ಮಾಡಿಕೊಳ್ಳುವಲ್ಲಿಯೇ ನೀನಾಸಂ ಮಂಜು ಆರಂಭಿಕ ಗೆಲುವು ಪಡೆದುಕೊಂಡಿದ್ದಾರೆ. ಅದರ ಫಲವಾಗಿಯೇ ಈ ಚಿತ್ರ ಪ್ರತೀ ಸನ್ನಿವೇಶಗಳಲ್ಲಿಯೂ ನೋಡುಗರ ಆಳಕ್ಕಿಳಿದಿದೆ. ಕಣ್ಣಾಲಿಗಳನ್ನು ತೇವಗೊಳಿಸಿ ಕಾಡಿದೆ. ಆ ಕಾರಣದಿಂದಲೇ ಕನ್ನೇರಿ ಗೆಲುವಿನ ಬೆನ್ನೇರಿ ಯಶಸ್ವಿಯಾಗಿ ಎಪ್ಪತೈದು ದಿನಗಳನ್ನು ಪೂರೈಸಿಕೊಂಡಿದೆ. ನೂರರತ್ತ ನವೋತ್ಸಾಹದಿಂದ ದಾಪುಗಾಲಿಡುತ್ತಿದೆ.
ಕಾಡನ್ನೇ ಜೀವದ ಭಾಗದಂತೆ ಹಚ್ಚಿಕೊಂಡು, ಅದನ್ನೇ ಉಸಿರಾಗಿಸಿಕೊಂಡ ಜೀವಗಳ ಆತ್ಮ ಮರ್ಮರ ಈ ಕಥೆಯ ಪ್ರಧಾನ ಅಂಶ. ಕಾಡು ಬಿಟ್ಟು ಬೇರೇನೂ ಅರಿಯದೆ, ಕೇವಲ ಉಪ್ಪು, ಮೆಣಸಿನಂತಾ ಅಗತ್ಯ ವಸ್ತುಗಳಿಗೆ ಮಾತ್ರವೇ ನಾಡಿನೊಂದಿಗೆ ಸಂಪರ್ಕವಿಟ್ಟುಕೊಂಡ ಜನರವರು. ನಿಜಕ್ಕೂ ಒಂದಷ್ಟಾದರೂ ಕಾಡುಗಳು ಯಥಾ ಪ್ರಕಾರ ಉಳಿದುಕೊಂಡಿದ್ದಾವೆಂದರೆ ಅದರಲ್ಲಿ ಈ ಕಾಡಿನ ಮಕ್ಕಳ ಪಾತ್ರ ದೊಡ್ಡದಿದೆ. ಆದರೆ ಕಾಡು ಉಳಿಸುವ ಜೋಕು ಮಾಡುತ್ತಲೇ ಆಳೋ ಸರ್ಕಾರಗಳು ಈ ಜೀವಗಳನ್ನು ಒಕ್ಕಲೆಬ್ಬಿಸುತ್ತಿವೆ. ಹಾಗೆ ನಾಡಿಗೆ ತಳ್ಳಲ್ಪಟ್ಟ ನಂತರದಲ್ಲಿ ಕಾಡಿನ ಮಕ್ಕಳು ಎಂತೆಂಥಾ ಸಂದರ್ಭಗಳನ್ನು ಎದುರಿಸುತ್ತಾರೆ? ಯಾವ್ಯಾವ ಬಗೆಯ ದುಷ್ಟ ಶಕ್ತಿಗಳು ಅವರನ್ನು ಕಾಡುತ್ತವೆಂಬ ಆಂತರ್ಯ ಈ ಚಿತ್ರದ್ದು. ಅದನ್ನು ನೀನಾಸಂ ಮಂಜು ಕಟ್ಟಿ ಕೊಟ್ಟಿರುವ ರೀತಿಯೇ ಸಮ್ಮೋಹಕವಾಗಿದೆ.
ಇದರೊಳಗಿನ ಪಾತ್ರಗಳೂ ಕೂಡಾ ನೋಡುಗರ ಆಳಕ್ಕಿಳಿದಿವೆ. ಕಾಡಿನ ಯಜಮಾನ ಬೊಮ್ಮಜ್ಜನಾಗಿ ನಟಿಸಿರುವ ಎಂ.ಕೆ ಮಠ್ ಅವರ ಅಮೋಘ ನಟನೆ ಪ್ರೇಕ್ಷಕರ ಮನಗೆದ್ದಿದೆ. ಮೊದಲ ಪ್ರಯತ್ನವಾದರೂ ಅರ್ಚನಾ ಮಧುಸೂಧನ್ ನಟಿಸಿರುವ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನುಳಿದಂತೆ ಅನಿತಾ ಭಟ್, ಅರುಣ್ ಸಾಗರ್, ಕರಿಸುಬ್ಬು ಪಾತ್ರಗಳೂ ನೋಡುಗರನ್ನು ಕಾಡುತ್ತಿವೆ. ಒಟ್ಟಾರೆಯಾಗಿ ಎಲ್ಲರಿಗೂ ತಾಕುವ ಜಾಣ್ಮೆಯೊಂದಿಗೆ ನೀನಾಸಂ ಮಂಜು ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಚಿತ್ರವೊಂದು ವಾರಗಳಾಚೆಗೆ ಕಾಲೂರಿ ನಿಲ್ಲುವುದೇ ಕಷ್ಟ ಎಂಬಂಥಾ ಈ ಹೊತ್ತಿನಲ್ಲಿ ಕನ್ನೇರಿಯ ಗೆಲುವು ಮೈಲಿಗಲ್ಲಿನಂತೆಯೇ ಕಾಣಿಸುತ್ತದೆ. ಈ ಚಿತ್ರ ನೂರರ ಸಂಭ್ರಮವನ್ನೂ ಆಚರಿಸುವಂತಾಗಲೆಂದು ಹಾರೈಸೋಣ.