ಕನ್ನೇರಿ ಸೃಷ್ಟಿಸಿದ ಸಾಮಾಜಿಕ ಪರಿವರ್ತನೆಗೆ ಸಾಟಿಯಿಲ್ಲ!
ಒಂದು ಸಿನಿಮಾ ಗಟ್ಟಿಯಾದ ಕಂಟೆಂಟು ಹೊಂದಿದ್ದರೆ ಪ್ರಚಾರದ ಭರಾಟೆಯಾಚೆಗೂ ಜನಮಾನಸವನ್ನ ಸೆಳೆಯಬಲ್ಲದು ಎಂಬುದಕ್ಕೆ ಕನ್ನೇರಿ ತಾಜಾ ಉದಾಹರಣೆಯಾಗಿ ನಿಂತಿದೆ. ಯಾವತ್ತಿದ್ದರೂ ನೆಲಮೂಲದ, ನಮ್ಮ ನಡುವಿನ ಸಂಕಟಗಳಿಗೆ ಧ್ವನಿಯಾಗುವಂಥಾ ನೈಜ ಕಥಾನಕಗಳತ್ತ ಪ್ರೇಕ್ಷಕರು ಆಕರ್ಷಿತರಾಗುತ್ತಾರೆ. ಅಂಥಾದ್ದೇ ನೈಜ ಘಟನೆಯೊಂದಕ್ಕೆ ಕನ್ನಡಿ ಹಿಡಿದಿರುವ ಚಿತ್ರ ಕನ್ನೇರಿ. ಈ ಚಿತ್ರದಲ್ಲಿ ಪ್ರತೀ ಪಾತ್ರಗಳೂ ಪ್ರೇಕ್ಷಕರ ಪಾಲಿಗೆ ಸರ್ಪ್ರೈಸ್ ಆಗಿರಬೇಕೆಂಬಂತೆ ನಿರ್ದೇಶಕ ನೀನಾಸಂ ಮಂಜು ರೂಪಿಸಿದ್ದಾರೆ. ಅದೆಲ್ಲದರ ಫಲವೆಂಬಂತೆ ಕನ್ನೇರಿಯೀಯ ಯಶಸ್ವಿಯಾಗಿ ನೂರು ದಿನಗಳನ್ನು ದಾಟಿಕೊಂಡು ನೂರಾ ಐದನೇ ದಿನದ ಸಂಭ್ರಮವನ್ನು ಆಚರಿಸಿಕೊಂಡಿದೆ. ಸಿನಿಮಾ ಪಾಲಿಗೆ ಸಂಭ್ರಮವೆಂಬುದು ದಿನ, ವಾರಗಳಿಗೆ ಸೀಮಿತವಾಗಿರುವ ಈ ಘಳಿಗೆಯಲ್ಲಿ ಕನ್ನೇರಿ ದಾಖಲಿಸಿದ ಅಮೋಘ ಗೆಲುವಿದೆಯಲ್ಲಾ? ಅದು ಪ್ರತೀ ಸಿನಿಮಾ ಪ್ರೇಮಿಗಳನ್ನೂ ಥ್ರಿಲ್ ಆಗಿಸುವಂಥಾದ್ದು!
ಇತ್ತೀಚಿನ ವರ್ಷಗಳಲ್ಲಿ ಸಿನಿಮಾವೊಂದು ನೂರರ ಗಡಿ ದಾಟಿಕೊಂಡಿದ್ದ ಉದಾಹರಣೆಗಳಿಲ್ಲ. ನೂರರ ಸಂಭ್ರಮವೆಂಬುದು ಮೆಲುಕು ಹಾಕಿ ಮುದಗೊಳ್ಳಬಹುದಾದಂಥಾ ಗತವೈಭವವಷ್ಟೇ ಎಂಬಂತಾಗಿತ್ತು. ನೆಲೆ ಕಂಡುಕೊಳ್ಳಲು ಕೋಟಿ ಕೋಟಿ ಬಜೆಟ್ಟಿನ ದೊಡ್ಡ ಚಿತ್ರಗಳೇ ತಿಣುಕಾಡುವ ಈ ಹೊತ್ತಿನಲ್ಲಿ ಕನ್ನೇರಿಯ ಗೆಲುವಿನ ಯಾನ ಭಿನ್ನವಾಗಿ ಕಾಣಿಸುತ್ತದೆ. ಹಾಗಂತ, ಕನ್ನೇರಿಯ ಹಾದಿಯೇನು ಆರಂಭದಿಂದಲೂ ಸುಗಮವಾಗಿರಲಿಲ್ಲ. ಬೆಂಗಳೂರಿನಂಥಾ ಪ್ರದೇಶಗಳಲ್ಲಿ ಈ ಚಿತ್ರ ನೆಲೆಗೊಳ್ಳುವುದೇ ಕಷ್ಟ ಎಂಬಂಥಾ ವಾತಾವರಣ ಸೃಷ್ಟಿಯಾಗಿತ್ತು. ನೋಡಿದವರೆಲ್ಲ ಬಹುವಾಗಿ ಮೆಚ್ಚಿಕೊಂಡರೂ ಕೂಡಾ ಸಿನಿಮಾ ಮಂದಿರಗಳಲ್ಲಿ ನೆಲೆ ಕಂಡುಕೊಳ್ಳುವುದು ಅಷ್ಟು ಸಲೀಸಿನ ಸಂಗತಿಯಾಗಿರಲಿಲ್ಲ. ಆದರೆ ಮೈಸೂರು ಮತ್ತು ಹೆಚ್ಡಿ ಕೋಟೆ ಭಾಗದ ಜನ ಈ ಸಿನಿಮಾವನ್ನು ಅಪ್ಪಿಕೊಂಡು ಕೊಂಡಾಡಿದ ಪರಿ ಯಾರಾದರೂ ಮೆಚ್ಚಿಕೊಳ್ಳುವಂತಿದೆ.
ಯಾವ ನೋವೇ ಆದರೂ ಅದನ್ನು ಅನುಭವಿಸಿದವರಿಗಷ್ಟೇ ಗಾಢವಾಗಿ ತಾಕುತ್ತದೆ. ಈ ಕಾರಣದಿಂದಲೇ ಕಾಡಿನಿಂದ ಎತ್ತಂಗಡಿಯಾಗಿ ನರಳುತ್ತಿರುವ ಮೈಸೂರು, ಹೆಚ್ಡಿ ಕೋಟೆ ಮುಂತಾದ ಭಾಗಗಳ ಜನ ಕನ್ನೇರಿಯನ್ನು ತಮ್ಮದೇ ಭವಣೆಗಳ ದೃಷ್ಯ ರೂಪಕದಂತೆ ಪರಿಭಾವಿಸಿಕೊಂಡು ನೋಡಿದರು. ಅದರಲ್ಲಿಯೂ ಇಂಥಾ ಸಾಮಾಜಿಕ ನೆಲೆಗಟ್ಟಿನ ಚಿತ್ರವೊಂದು ಸಮಾಜದ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರುವಂತಾಗೋದೂ ಮಹಾ ವಗೆಲುವೇ. ಈ ನಿಟ್ಟಿನಲ್ಲಿ ನೋಡ ಹೋದರೆ ಕನ್ನೇರಿಗೆ ಬಹು ದೊಡ್ಡ ಗೆಲುವು ಲಭಿಸಿದೆ. ಹೆಚ್ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರು ಈ ಚಿತ್ರವನ್ನು ನೋಡಿ ಪ್ರಭಾವಿತರಾಗಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಕನ್ನೇರಿಯಂಥಾದ್ದೇ ಕೇಸೊಂದು ಈ ಭಾಗದ ಜನರ ಮೇಲೆ ಅಮರಿಕೊಂಡಿತ್ತು. ಚಿಕ್ಕ ಮಾದು ವರು ತಾವೆ ಮುಂದೆ ನಿಂತು ಇಪ್ಪತ್ನಾಲಕ್ಕು ಗಂಟೆಗಳೊಳಗಾಗಿ ಆ ಕೇಸನ್ನು ತೆಗೆಸಿ ಹಾಕಿದ್ದರಂತೆ. ಕನ್ನೇರಿ ಪ್ರಭಾವಿಸಿದ ಪರಿಗೆ ಮತ್ಯಾವ ಸಾಕ್ಷಿ ಬೇಕು?
ಆರಂಭಕಾಲದಲ್ಲಿ ಗಾಡಿಗಳಲ್ಲಿ ಜನರನ್ನು ಕರೆದುಕೊಂಡು ಹೋಗಿ ಚಿತ್ರ ನೋಡುವಂತೆ ಪ್ರೇರೇಪಿಸಲಾಗಿತ್ತು. ನಿರ್ದೇಶಕ ನೀನಾಸಂ ಮಂಜು ಹೊಸಾ ಬಗೆಯ ಪ್ರಚಾರದತ್ತ ಭಾರೀ ಗಮನ ಹರಿಸಿದ್ದರು. ಹಾಗೆ ನೋಡಿದ ಮಂದಿಯ ಬಾಯಿಂದ ಬಾಯಿಗೆ ಹರಡಿಕೊಂಡ ಸದಭಿಪ್ರಾಯವೇ ಕನ್ನೇರಿಯನ್ನು ನೂರು ದಿನದ ವರೆಗೂ ಕಾಲೂರಿ ನಿಲ್ಲುವಂತೆ ಮಾಡಿದೆ. ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಕನ್ನೇರಿ ಅದ್ಯಾವ ಪರಿಯಾಗಿ ಪ್ರಭಾವಿಸಿದೆಯೆಂದರೆ, ಅವರೇ ಮುಂದೆ ನಿಂತು ಈ ಚಿತ್ರದ ನೂರನೇ ದಿನದ ಸಂಭ್ರಮವನ್ನು ಆಚರಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಕನ್ನೇರಿ ಯಶಸ್ವಿಯಾಗಿ ನೂರನೇ ದಿನವನ್ನು ದಾಟಿಕೊಂಡಿದೆ. ಈ ಮೂಲಕ ಹೊಸಾ ದಾಖಲೆ ಸೃಷ್ಟಿಸಿದೆ.
ನೀನಾಸಂ ಮಂಜು ಕೈಗೆತ್ತಿಕೊಂಡಿದ್ದ ಕಥಾ ವಸ್ತು, ನಿರೂಪಣೆ ಮಾಡಿದ್ದ ರೀತಿ, ಪಾತ್ರಗಳನ್ನು ಕಟ್ಟಿ ನಿಲ್ಲಿಸಿದ್ದ ಪರಿಗಳೆಲ್ಲವೂ ಕನ್ನೇರಿಯ ಪ್ಲಸ್ ಪಾಯಿಂಟುಗಳೇ. ಇಲ್ಲಿನ ಪ್ರತೀ ಪಾತ್ರಗಳೂ ಕೂಡಾ ಪ್ರೇಕ್ಷಕರನ್ನು ಕಾಡಿದ್ದವು. ಎಂಕೆ ಮಠ, ಅರ್ಚನಾ ಮಧುಸೂಧನ್, ಕರಿಸುಬ್ಬು, ಅನಿತಾ ಭಟ್, ಅರುಣ್ ಸಾಗರ್, ಸರ್ದಾರ್ ಸತ್ಯ ಮುಂತಾದವರೆಲ್ಲ ತಂತಮ್ಮ ಪಾತ್ರಗಳನ್ನು ಆವಾಹಿಸಿಕೊಂಡು ನಟಿಸಿದ್ದರು. ಅದೆಲ್ಲದರಿಂದಾಗಿ ಈ ಚಿತಚ್ರ ಸೂಪರ್ ಹಿಟ್ ಆಗಿದೆ. ಪರಭಾಷಾ ಚಿತ್ರಗಳ ಹಾವಳಿ, ದೊಡ್ಡ ಸಿನಿಮಾಗಳ ಭರಾಟೆಗಳೆಲ್ಲವನ್ನೂ ಮೀರಿಕೊಂಡು ನೂರನೇದಿನ ದಾಟಿಕೊಂಡಿದೆ. ಇದು ಕನ್ನಡ ಚಿತ್ರರಂಗದ ಪಾಲಿಗೆ ಒಳಿತಿನ ಸೂಚನೆಯಂತೆಯೇ ಕಾಣಿಸುತ್ತಿದೆ.