ಸಿನಿಮಾ ಸಂಬಂಧಿ ವ್ಯಕ್ತಿಗಳು ಸಾಮಾನ್ಯವಾಗಿ ಸಾಮಾಜಿಕ ವಿಚಾರಗಳಿಗೆ ತಲೆ ಹಾಕೋದು ಕಡಿಮೆ. ಇನ್ನು ಕೆಲ ಮಂದಿ ಸಾಮಾಜಿಕ ಕಾಳಜಿ ಇರುವಂತೆ ತೋರಿಸಿಕೊಂಡು ಯಾವುದೋ ಪಕ್ಷಗಳಿಗೆ ಬಕೀಟು ಹಿಡಿಯುವ, ಆ ಮೂಲಕ ಪುಗಸಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆ ಅನುಸರಿಸೋದೂ ಇದೆ. ತಮಿಳುನಾಡಿನಲ್ಲಿ ಹೋರಾಟಗಾರ, ನಟ ಮತ್ತು ಸ್ಟಂಟ್ ಮಾಸ್ಟರ್ ಆಗಿ ಗುರುತಿಸಿಕೊಂಡಿರುವ ಕನಲ್ ಕಣ್ಣನ್ ಅಂಥಾದ್ದೇ ಕೆಟಗರಿಗೆ ಸೇರಿಕೊಳ್ಳುವ ಆಸಾಮಿ. ತನ್ನನ್ನು ತಾನು ಆಕ್ಟಿವಿಸ್ಟ್ ಅಂತ ಕರೆದುಕೊಳ್ಳುವ ಕಣ್ಣನ್ ಹಲವಾರು ಬಾರಿ ವಿವಾದಾತ್ಮಕ ಹೇಳಿಕೆಗಳ ಮೂಲಕ ಪ್ರಚಾರ ಪಡೆಯುತ್ತಿರುತ್ತಾನೆ. ಇದೀಗ ತಮಿಳುನಾಡಿನ ಅಸ್ಮಿತೆಯಂತಿರುವ, ಕೋಟ್ಯಂತರ ಮಂದಿಯನ್ನು ಪ್ರಭಾವಿಸಿರುವ ಪ್ರಖರ ವಿಚಾರವಾದಿ ಪೆರಿಯಾರ್ ಅವರ ಪ್ರತಿಮೆ ಧ್ವಂಸಗೊಳಿಸುವಂತೆ ಹೇಳಿಕೆ ಕೊಡುವ ಮೂಲಕ ಬಹುತೇಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಕಣ್ಣನ್ ಇಂಥಾ ಪ್ರಚೋದನಾಕಾರಿ ಭಾಷಣಗಳ ಮೂಲಕ ಸದ್ದು ಮಾಡುತ್ತಿರೋದು ಇದೇ ಮೊದಲ ಬಾರಿಯೇನಲ್ಲ. ಆದರೆ ಈ ಬಾರಿ ಮಾತ್ರ ಬಹುಪಾಲು ಮಂದಿಯನ್ನು ಪ್ರಭಾವಿಸಿರುವ, ತಮಿಳುನಾಡಿನಾದ್ಯಂತ ಜನರ ಆಚಾರ ವಿಚಾರಗಳಲ್ಲಿ ನೆಲೆಗೊಂಡು ದೇಶಾದ್ಯಂತ ಪ್ರಭಾವ ಬೀರಿರುವ ಪೆರಿಯಾರ್ ಬಗ್ಗೆ ಮಾತಾಡಿದ್ದಾನೆ. ಶ್ರೀರಂಗಂನ ಶ್ರೀ ರಂಗನಾಥ ದೇವಾಲಯದ ಆವರಣದಲ್ಲಿ ಪೆರಿಯಾರ್ ಅವರ ಪ್ರತಿಮೆಯೊಂದಿದೆ. ಆ ಪ್ರತಿಮೆ ಅಲ್ಲಿರಬಾರದು. ಅದನ್ನು ಜನರೇ ಕೆಡವಬೇಕೆಂಬಂತೆ ಕಣ್ಣನ್ ಹೇಳಿಕೆ ಕೊಟ್ಟಿದ್ದಾನೆ. ಈ ಸಂಬಂಧವಾಗಿ ರೊಚ್ಚಿಗೆದ್ದಿರುವ ತಮಿಳಿಗರು ನಾನಾ ಪ್ರದೇಶಗಳಿಂದ ಕಣ್ಣನ್ ಮೇಲೆ ಕೇಸು ಜಡಿಯಲಾರಂಭಿಸಿದ್ದಾರೆ.
ಹೀಗೆ ಜನಾಕ್ರೋಶ ವ್ಯಾಪಕವಾಗುತ್ತಲೇ ಪುದುಚೇರಿ ಪೊಲೀಸರು ಕಣ್ಣನ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ಮುಲಕ ಆತ ಜೈಲುಪಾಲಾಗಿದ್ದಾನೆ. ಹೀಗೆ ಸುಖಾಸುಮ್ಮ ನಎ ಪೆರಿಯಾರ್ ಬಗ್ಗೆ ಮಾತಾಡಿರುವ ಕಣ್ಣನ್ ಬೆಂಬಲಕ್ಕೆ ಕರ್ನಾಟಕದ ಮಾಧ್ಯಮ ಪ್ರಣೀತ ಸಿಂಗಂ ಅಣ್ಣಾಮಲೈ ನಿಂತಿದ್ದಾರೆ. ಶ್ರೀರಂಗಂನ ಬಹುಪಾಲು ಮಂದಿ ದೇವಸ್ಥಾನದ ಆವರಣದಿಂದ ಪೆರಿಯಾರ್ ಪ್ರತಿಮೆಯನ್ನು ತೆರವುಗೊಳಿಸಬೇಕೆಂದು ಬಯಸುತ್ತಿದ್ದಾರೆ ಎಂದಿದ್ದಾರೆ. ಹೀಗೆ ಹೇಳಿದ ಮಾಜಿ ಸಿಂಗಂ ಮೇಲೆಯೂ ಜನ ಸಿಟ್ಟಾಗಿದ್ದಾರೆ. ತಮಿಳುನಾಡು ಸೇರಿಕೊಂಡು ಅಲ್ಲಿನ ಬಿಜೆಪಿ ವಕ್ತಾರಿಕೆ ವಹಿಸಿಕೊಂಡಿರುವ ಅಣ್ಣಾಮಲೈ ಮೇಲೂ ಒಂದಷ್ಟು ಕೇಸು ಬೀಳೋ ಸಾಧ್ಯತೆಗಳಿದ್ದಾವೆ.