ಮಲೆನಾಡ ಪ್ರತಿಭೆ ನವನ್ ನಿರ್ದೇಶನದ ಮೊದಲ ಚಿತ್ರ!
ಈಗೊಂದಷ್ಟು ದಿನಗಳಿಂದ ಕಂಬ್ಳಿಹುಳ ಚಿತ್ರದ ಚೆಂದದ ಚಿಟ್ಟೆಯಂಥಾ ಹಾಡೊಂದು ಎಲ್ಲಡೆ ಹರಿದಾಡುತ್ತಿದೆ. ಯಾವುದೇ ಸಿನಿಮಾಗಳ ಸುದ್ದಿ ಹೊರ ಬಂದರೂ, ಅದರ ಹಾಡಿಗಾಗಿ ಕಾದು ಕೂರುವ ಒಂದು ವರ್ಗವೇ ಇದೆ. ಅಂಥಾದ್ದೊಂದು ಕಾಯುವಿಕೆಯನ್ನು ಸಾರ್ಥಕಗೊಳಿಸುವಲ್ಲಿ ಕಂಬ್ಳಿಹುಳ ಚಿತ್ರತಂಡ ಯಶ ಕಂಡಿದೆ. ಈ ಚಿತ್ರ ಟೈಟಲ್ ಲಾಂಚ್ ಆದ ಘಳಿಗೆಯಿಂದಲೇ ಜನರನ್ನು ಸೆಳೆದುಕೊಂಡಿತ್ತು. ಮಲೆನಾಡಿನ ಪ್ರತಿಭೆ ನವನ್ ಶ್ರೀನಿವಾಸ್ ನಿರ್ದೇಶನದ ಚೊಚ್ಚಲ ಚಿತ್ರವಿದು. ಹೊಸಬರ ಹಾಜರಿ ಇರುವಲ್ಲಿ ಹೊಸತೇನೋ ಸೃಷ್ಟಿಯಾಗುತ್ತದೆಂಬುದು ಚಿತ್ರರಂಗದಲ್ಲಿರುವ ನಂಬಿಕೆ. ಕಂಬ್ಳಿಹುಳದ ವಿಚಾರದಲ್ಲಿಯೂ ಅದು ನಿಜವಾಗುವ ನಿರೀಕ್ಷೆಗಳಿದ್ದಾವೆ. ಇದೇ ಬುಧವಾರ ಬಿಡುಗಡೆಗೊಂಡಿರೋ ಹಾಡೊಂದು ಸೃಷ್ಟಿಸಿರುವ ಸಂಚಲನವನ್ನು ಗಮನಿಸಿದರೆ ಕಂಬ್ಳಿಹುಳ ಬೇರೆಯದ್ದೇ ರೀತಿಯ ಕರಾಮತ್ತು ಸೃಷ್ಟಿಸುತ್ತದೆಂಬ ನಂಬಿಕೆ ಗಾಢವಾಗುತ್ತದೆ.
ಜಾರಿಬಿದ್ದರೂ ಯಾಕೀ ನಗು, ಚಾಚೂ ತಪ್ಪದೆ ದಿನವೂ ಸಿಗು ಎಂಬ ಈ ಹಾಡು ವಿಜಯ್ ಪ್ರಕಾಶ್ ಮತ್ತು ಸಂಗೀತ ರವೀಂದ್ರನಾಥ್ ಕಂಠಸಿರಿಯಲ್ಲಿ ಚೆಂದಗೆ ಮೂಡಿ ಬಂದಿದೆ. ಈ ಹಾಡಿನಲ್ಲಿಯೇ ಟೈಟಲ್ಲಿನಲ್ಲಿ ಕೂತ ಕಂಬ್ಳಿಹುಳ ಚಿಟ್ಟೆಯಾಗುತ್ತೆ. ಅದರ ಪರಾಗ ಪ್ರತೀ ಕೇಳುಗರೆದೆಗೂ ಮೆಲುವಾಗಿ ಮೆತ್ತಿಕೊಳ್ಳುತ್ತೆ. ಅದರ ಸಾಹಿತ್ಯ, ಸನ್ನಿವೇಶಗಳೆಲ್ಲವೂ ಒಂದೇ ಸಲಕ್ಕೆ ನಾಟಿಕೊಳ್ಳುವಂತಿದೆ. ಅಷ್ಟರ ಮಟ್ಟಿಗೆ ಚೆಂದಗೆ ಮೂಡಿ ಬಂದಿರುವ ಈ ಹಾಡನ್ನು ಕರುನಾಡಿನ ಸಿನಿಮಾ ಪ್ರೇಮಿಗಳೆಲ್ಲ ಅಕ್ಷರಶಃ ಸಂಭ್ರಮಿಸುತ್ತಿದ್ದಾರೆ. ಬಿಡುಗಡೆಯಾಗಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಈ ಹಾಡು ವ್ಯಾಪಕವಾಗಿ ಹರಿದಾಡುತ್ತಿದೆ. ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳಲ್ಲಿಯೂ ಮೆಚ್ಚುಗೆ ಪಡೆದುಕೊಂಡು ಮುಂದುವರೆಯುತ್ತಿದೆ.
ಈ ಹಿಂದೆ ಒಂದಷ್ಟು ಅಪರೂಪದ ಕಿರುಚಿತ್ರಗಳನ್ನು ನಿರ್ದೇಶನ ಮಾಡುವ ಮೂಲಕ ಗುರುತಿಸಿಕೊಂಡಿದ್ದವರು ನವನ್ ಶ್ರೀನಿವಾಸ್. ಜೋಡಿ ಕುದುರೆ, ಗೋಣಿ ಚೀಲ ಮುಂತಾದ ಕಿರುಚಿತ್ರಗಳನ್ನು ನಿರ್ದೇಶನ ಮಾಡೋ ಮೂಲಕ ನವನ್ ಅಚ್ಚರಿ ಮೂಡಿಸಿದ್ದರು. ಯಾಕೆಂದರೆ, ಅದರಲ್ಲಿ ಅಪ್ಪಟ ಸಿನಿಮಾ ಫೀಲ್ ಇತ್ತು. ಎಂಥವರೂ ಮೆಚ್ಚಿಕೊಳ್ಳುವಂಥಾ ಹೊಸತನವಿತ್ತು. ಅದನ್ನು ನೋಡಿದ ಪ್ರತಿಯೊಬ್ಬರಲ್ಲಿಯೂ ನವನ್ ಕೈಚಳಕ ನಂಬಿಕೆ ಹುಟ್ಟಿಸಿತ್ತು. ಅದರ ಬಲದಿಂದಲೇ ನವನ್ ಇದೀಗ ಕಂಬ್ಳಿಹುಳ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಮೊದಲ ಹೆಜ್ಜೆಯಲ್ಲಿಯೂ ಸಾಕಷ್ಟು ಭರವಸೆ, ನಿರೀಕ್ಷೆಗಳನ್ನು ಹುಟ್ಟುಹಾಕಿದ್ದಾರೆ.
ಹಾಗಾದರೆ, ಈ ಚಿತ್ರದ ಕಥೆ ಯಾವ ಬಗೆಯದ್ದು ಎಂಬ ಪ್ರಶ್ನೆ ಮೂಡಿಕೊಳ್ಳೋದು ಸಹಜ. ಕಂಬ್ಳಿಹುಳದ ಹಾಡು ಕೇಳಿದ, ನೋಡಿದವರಲ್ಲಿ ಇದೊಂದು ಅಪ್ಪಟ ಪ್ರೇಮ ಕಥಾನಕವೆಂಬ ಭಾವ ಮೂಡಿಕೊಂಡಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ. ಅದು ಸತ್ಯವೂ ಇರಬಹುದು. ಆದರೆ ಅದರಾಚೆಗಿನ ಅಚ್ಚರಿಗಳೇ ನಿಜವಾಗಿ ಈ ಚಿತ್ರದ ಅಂತಃಶಕ್ತಿ. ಈ ಬಗ್ಗೆ ಚಿತ್ರತಂಡದಿಂದ ಸಣ್ಣ ಸುಳಿವೂ ಸಿಗೋದಿಲ್ಲವಾದರೂ, ಕಂಬ್ಳಿಹುಳದ ಬಗ್ಗೆ ಗರಿಗೆದರಿಕೊಂಡಿರುವ ನಿರೀಕ್ಷೆಯನ್ನು ಮೀರಿದ ಅಂಶಗಳು ಈ ಚಿತ್ರದಲ್ಲಿದೆ ಎಂಬ ಭರವಸೆ ಅವರಲ್ಲಿದೆ. ಈಗಾಗಲೇ ಸರ್ವ ತಯಾರಿಯನ್ನೂ ಮುಗಿಸಿಕೊಂಡಿರುವ ಕಂಬ್ಳಿಹುಳ ಸಿನಿಮಾ ಮಂದಿರದಲ್ಲಿ ಸರಿದಾಡುವ ಕಾಲ ಸನ್ನಿಹಿತವಾಗಿದೆ.
ಗ್ರೇ ಸ್ಕ್ವೇರ್ ಸ್ಟೂಡಿಯೋಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ರಂಗಭೂಮಿ ಕಲಾವಿದರಿಗೆ ವಿಶೇಷವಾದ ಪ್ರಾಧಾನ್ಯತೆ ಕೊಡಲಾಗಿದೆ. ರೋಹಿತ್ ಕುಮಾರ್, ದೀಪಕ್ ರೈ ಪಣಾಜೆ, ಸಂಧ್ಯಾ ಅರೆಕೆರೆ ಮುಂತಾದ ರಂಗಭೂಮಿ ನಂಟಿನ ಕಲಾವಿದರು ಕಂಬ್ಳಿಹುಳಕ್ಕೆ ಸಾಥ್ ಕೊಟ್ಟಿದ್ದಾರೆ. ಮಲೆನಾಡಿನ ಸುಂದರ ವಾತಾವರಣದಲ್ಲಿ ಗರಿಬಿಚ್ಚಿಕೊಳ್ಳುವ ಈ ಕಥೆಯನ್ನು ಛಾಯಾಗ್ರಾಹಕ ಸತೀಶ್ ರಾಜೇಂದ್ರ ಸಮ್ಮೋಹಕವಾಗಿ ದೃಷ್ಯೀಕರಿಸಿದ್ದಾರಂತೆ. ಸವಿನ್, ಪುನಿತ್ ಗುರು ಮತ್ತು ವಿಜಯ್ ಈ ಚಿತ್ರವನ್ನು ಅದ್ದೂರಿಯಾಗಿಯೇ ನಿರ್ಮಾಣ ಮಾಡಿದ್ದಾರೆ. ಅಂಜನ್ ನಾಗೇಂದ್ರ ಮತ್ತು ಅಶ್ವಿತಾ ಆರ್ ಹೆಗಡೆ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಟ್ರೈಲರ್ ಅನ್ನು ಲಾಂಚ್ ಮಾಡಿ, ಅದರ ಬೆನ್ನಲ್ಲಿಯೇ ಬಿಡುಗಡೆಯ ದಿನಾಂಕ ಘೋಶಿಸಲು ಚಿತ್ರತಂಡ ತಯಾರಾಗಿ ನಿಂತಿದೆ.