ಪ್ರೀತಿ ಎಂಬುದು ಸಿನಿಮಾ ವಿಚಾರದಲ್ಲಿ ಯಾವತ್ತಿಗೂ ಸವಕಲಾಗದ ಮಾಯೆ. ಪ್ರೀತಿ, ಪ್ರೇಮಗಳ ಬಗ್ಗೆ ಲೆಕ್ಕವಿಡಲಾರದಷ್ಟು ಸಿನಿಮಾಗಳು ಬಂದಿದ್ದರೂ, ಅದನ್ನೇ ಕೇಂದ್ರವಾಗಿಟ್ಟುಕೊಂಡು ಮತ್ತೊಂದಷ್ಟು ಚಿತ್ರಗಳು ತಯಾರಾಗಿವೆ. ಅದು ಒಡ್ಡುವ ಬೊಗಸೆ ಮತ್ತು ಧ್ಯಾನಿಸುವ ಮನಸ್ಸು ಅದೆಷ್ಟು ಪ್ರಫಲ್ಲವಾಗಿರುತ್ತದೋ, ಕ್ರಿಯಾಶೀಲವಾಗಿರುತ್ತದೋ, ಅಷ್ಟೇ ತಾಜಾತನದಿಂದ ದಕ್ಕುವ ಮಾಯೆ. ಅಂಥಾದ್ದೊಂದು ತಾಜಾ ಅನುಭೂತಿ ಹೊತ್ತುಕೊಂಡು ಬಿಡುಗಡೆಗೆ ತಯಾರುಗೊಂಡಿರುವ ಚಿತ್ರ `ಕೈ ಜಾರಿದ ಪ್ರೀತಿ’!
ಶೀರ್ಷಿಕೆ ಕೇಳಿದರೇನೇ ಇದೊಂದು ಪ್ರೇಮ ಕಥಾನಕವೆಂಬ ಸ್ಪಷ್ಟವಾದ ಸುಳಿವು ಸಿಗುತ್ತದೆ. ಆದರೆ, ಇಲ್ಲಿರೋದು ಮಾಮೂಲಿ ಕಥೆಯಲ್ಲ; ಅದರೊಂದಿಗೆ ಮೆಲುವಾದೊಂದು ಸಂದೇಶವೂ ಇದೆಯೆಂಬ ಸೂಚನೆ ಚಿತ್ರತಂಡದ ಕಡೆಯಿಂದ ಸಿಗುತ್ತದೆ. ಈಗಾಗಲೇ ಹೊರ ಬಂದಿರುವ ಹಾಡುಗಳು ಮತ್ತು ಕಥೆಯಲ್ಲಿ ಅಡಕವಾಗಿರುವಂಥಾ ಒಂದಷ್ಟು ವಿಶೇಷ ಅಂಶಗಳ ಸುಳಿವುಗಳೊಂದಿಗೆ ಕೈ ಜಾರಿದ ಪ್ರೀತಿ ಪ್ರೇಕ್ಷಕರ ಮನಸಿಗಂಟಿಕೊಂಡಿದೆ. ಒಂದಷ್ಟು ಮಂದಿ ಈ ಸಿನಿಮಾದ ಬರುವಿಕೆಗಾಗಿ ಕಾತರರಾಗಿದ್ದಾರೆ.
ಅದ್ಯಾವುದೇ ಕನಸಾಗಿದ್ದರೂ ಕೂಡಾ ಅಚಲ ಶ್ರದ್ಧೆ, ಪರಿಶ್ರಮ ಮತ್ತು ಏನೇ ಆದರೂ ಮಾಡಿಯೇ ತೀರುವ ಛಾತಿಗಳಿಲ್ಲದೆ ಕೈಗೆಟುಕುವಂಥಾದ್ದಲ್ಲ. ಅಂಥಾದ್ದೊಂದು ಮನಃಸ್ಥಿತಿ ಇಲ್ಲದೇ ಹೋಗಿದ್ದರೆ, ಕೈ ಜಾರಿದ ಪ್ರೀತಿ ಸೃಷ್ಟಿಯಾಗಲು ಸಾಧ್ಯವಿರಲಿಲ್ಲ. ಈ ಸಿನಿಮಾ ನಿರ್ದೇಶಕಿ ಪುಷ್ಪ ಭದ್ರಾವತಿ ಅವರ ಹಿನ್ನೆಲೆಯೂ ಆ ಮಾತಿಗೆ ಪೂರಕವಾಗಿದೆ. ಅವರ ಮಗಳಾದ ಮಂಜುಳಾ ನಿರ್ಮಾಪಕಿಯಾಗಿ ಜವಾಬ್ದಾರಿ ಹೊತ್ತುಕೊಂಡು ನಾಯಕಿಯಾಗಿಯೂ ನಟಿಸಿದ್ದಾರೆ. ಅವರ ತಂಗಿ ಮಧು ಕೂಡಾ ನಾಯಕಿಯಾಗಿ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ದಶಕಗಳ ಹಿಂದೆ ನಾವೆಲ್ಲ ಭಾರತೀಯರು ಅಂತೊಂದು ಸಿನಿಮಾ ನಿರ್ದೇಶನ ಮಾಡಿದ್ದವರು ಪುಷ್ಪ ಭದ್ರಾವತಿ. ಆದರೆ ಆ ಸಿನಿಮಾ ತೆರೆಕಂಡಿತಾದರೂ, ನಿರೀಕ್ಷಿತ ಪ್ರಮಾಣದಲ್ಲಿ ಗೆದ್ದಿರಲಿಲ್ಲ. ಅದು ಎಂಥಾ ಆಘಾತ ಕೊಟ್ಟಿತ್ತೆಂದರೆ, ಪುಷ್ಪ ನಾನಾ ಅನಾರೋಗ್ಯದಿಂದ ಬೋಧ ಕಳೆದುಕೊಳ್ಳುವಂತಾಗಿತ್ತು. ಅದರಿಂದ ಚೇತರಿಸಿಕೊಂಡು, ಆ ನಂತರ ಮತ್ತದೇ ಹುರುಪಿನೊಂದಿಗೆ ಪುಷ್ಪಾ ನಿರ್ದೇಶನ ಮಾಡಿರುವ ಚಿತ್ರ ಕೈ ಜಾರಿದ ಪ್ರೀತಿ. ಇದರ ಹಿಂದೆ ಮತ್ತೊಂದು ಸಿನಿಮಾಕ್ಕಾಗುವಷ್ಟು ಕಥನಗಳಿದ್ದಾವೆ. ತನ್ನಿಬ್ಬರು ಮಕ್ಕಳ ಸಾಥ್ನೊಂದಿಗೆ ಪುಷ್ಪಾ ಈ ಸಿನಿಮಾವನ್ನು ನಿರ್ದೇಶನ ಮಾರಿರುವ ರೀತಿಯೇ ರೋಚಕವಾಗಿದೆ. ಒಂದು ಹಿನ್ನಡೆಯನ್ನು ಸಹಿಸಿಕೊಂಡು ಮತ್ತೆ ಅಮ್ಮನ ಕನಸಿಗೆ ಸಾಥ್ ಕೊಟ್ಟ ಈ ಹೆಣ್ಣುಮಕ್ಕಳ ಧೈರ್ಯವೂ ಸೋಜಿಗ ಮೂಡಿಸುತ್ತೆ. ಈ ಚಿತ್ರದ ಬಿಡುಗಡೆ ದಿನಾಂಕ ಇಷ್ಟರಲ್ಲಿಯೇ ಜಾಹೀರಾಗಲಿದೆ.