ಕೊರೋನಾ ಮಾರಿ ವಕ್ಕರಿಸಿಕೊಂಡ ನಂತರದಲ್ಲಿ ಅದೇಕೋ ಸಾವೆಂಬುದು ಮತ್ತಷ್ಟು ಸಲೀಸಾದಂತಿದೆ. ಸಣ್ಣಪುಟ್ಟ ಖಾಯಿಲೆ ಕಸಾಲೆಗಳೂ ಭೀಕರ ಸ್ವರೂಪ ಪಡೆದು ಜೀವ ಬಲಿ ಪಡೆಯುತ್ತಿವೆ. ನಲವತ್ತರಾಚೆ ಹೊಂಚಿ ಕೂರುತ್ತಿದ್ದ ಸಾವೆಂಬುದೀಗ ಮೂವತ್ತರ ಆಸುಪಾಸಿನಲ್ಲೇ ಗಸ್ತು ಹೊಡೆಯಲು ಶುರುವಿಟ್ಟಿದೆ. ತೀರಾ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಅಸುನೀಗಿದ ಪುನೀತ್ ಅಗಲಿಕೆ ಜೀವ ಹಿಂಡುತ್ತಿರುವಾಗಲೇ, ಅದನ್ನು ಹೋಲುವ ಮತ್ತೊಂದಷ್ಟು ಸಾವುಗಳು ಸಂಭವಿಸುತ್ತಿವೆ. ಇದೀಗ ಆ ಸೂತಕದ ಛಾಯೆ ಮಲೆಯಾಳಂ ಚಿತ್ರರಂಗಕ್ಕೆ ಕವುಚಿಕೊಂಡಿದೆ!
ಕಳೆದ ಒಂದಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದುಕೊಂಡು, ಇದೀಗ ತಾನೇ ಸ್ವತಂತ್ರ ನಿರ್ದೇಶಕರಾಗಿದ್ದವರು ಜೋಸೆಫ್ ಮನು. ಪಾದರಸದಂತಿದ್ದ ಮೂವತ್ತೊಂದರ ಪ್ರಾಯದ ಜೋಸೆಫ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸಾಕಷ್ಟು ಭರವಸೆ ಮೂಡಿಸಿದ್ದ ಈ ಯುವ ನಟನ ಅಕಾಲಿಕ ನಿರ್ಗಮನದಿಂದ ಮಾಲಿವುಡ್ಗೆ ಮಂಕು ಕವಿದಂತಾಗಿದೆ. ಅಷ್ಟಕ್ಕೂ ಜೋಸೆಫ್ರದ್ದು ಸಾಯುವ ವಯಸ್ಸೇನಲ್ಲ. ಆದರೆ ನ್ಯುಮೋನಿಯಾ ಸಮಸ್ಯೆ ಎಂಬುದು ಆತನನ್ನು ಹೈರಾಣು ಮಾಡಿತ್ತು. ಮೊನ್ನೆದಿನ ಜೋಸೆಫ್ ಆಸ್ಪತ್ರೆ ಪಾಲಾಗಿ ಪರಿಸ್ಥಿತಿ ಬಿಗಡಾಯಿಸಿದ್ದರೂ ಕೂಡಾ ಇಂಥಾ ದುರ್ವಾರ್ತೆಯನ್ನು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ.
ಆದರೆ, ಎಲ್ಲ ಹರಕೆ ಹಾರೈಕೆಗಳನ್ನೂ ಮೀರಿ ಜೋಸೆಫ್ ಮನು ಎದ್ದು ನಡೆದಿದ್ದಾರೆ. ಈ ಮೂಲಕ ಕೇರಳ ಚಿತ್ರರಂಗ ಈಗ ತಾನೇ ಚಿಗುರುತ್ತಿದ್ದ ಪ್ರತಿಭಾವಂತ ನಿರ್ದೇಶಕನನ್ನು ಕಳೆದುಕೊಂಡಂತಾಗಿದೆ. ಈಗೊಂದಷ್ಟು ವರ್ಷಗಳಿಂದ ಘಟಾನುಘಟಿ ನಿರ್ದೇಶಕರ ಗರಡಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಅನುಭವ ಪಡೆದುಕೊಂಡಿದ್ದವರು ಜೋಸೆಫ್. ಇಂಥಾ ಅನುಭವ ಪಡೆದುಕೊಂಡ ನಂತರ ಕಳೆದ ವರ್ಷವಷ್ಟೇ `ನ್ಯಾನ್ಸಿ ರಾಣಿ’ ಅಂತೊಂದು ಸಿನಿಮಾವನ್ನ ನಿರ್ದೇಶನ ಮಾಡಿದ್ದರು. ಆ ಚಿತ್ರದಲ್ಲಿ ಅರ್ಜುನ್ ಅಶೋಕನ್ ಮತ್ತು ಅಹನಾ ಕೃಷ್ಣ ನಾಯಕ ನಾಯಕಿಯರಾಗಿ ನಟಿಸಿದ್ದರು. ಇನ್ನೇನು ಆ ಚಿತ್ರ ತೆರೆಗಾಣುವ ಸನ್ನಾಹದಲ್ಲಿತ್ತು. ದುರಂತವೆಂದರೆ, ತನ್ನ ಮೊದಲ ಕನಸು ಪ್ರೇಕ್ಷಕರೆದುರು ಕಣ್ತೆರೆಯೋ ಮುನ್ನವೇ ಜೋಸೆಫ್ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ.