ಜೈಲಲ್ಲಿಟ್ಟರೂ ಆತ ಹೇಗೆ ಎಸ್ಕೇಪ್ ಆಗ್ತಿದ್ದ ಗೊತ್ತಾ?
ಈಗ ಎಲ್ಲಿ ನೋಡಿದ್ರೂ ಬರೀ ಡ್ರಗ್ಸ್ನದ್ದೇ ಸುದ್ದಿ. ಕರ್ನಾಟಕದಲ್ಲಿ ಅದ್ಯಾವ ಕಾಲದಿಂದ್ಲೋ ಹಬ್ಬಿಕೊಂಡಿದ್ದ ಡ್ರಗ್ಸ್ ದಂಧೆಯ ಬೇಸಿಗೇ ಈಗ ಬೆಂಕಿ ಬಿದ್ದಿದೆ. ಸಿಸಿಬಿ ಅಧಿಕಾರಿಗಳಂತೂ ಈ ಬಾರಿ ಈ ದಂಧೆಯನ್ನ ಥಂಡಾ ಹೊಡೆಸೋ ಸಂಕಲ್ಪದೊಂದಿಗೆ ಕಾರ್ಯಾಚರಣೆ ನಡೆಸ್ತಿದ್ದಾರೆ. ಹಾಗಾದ್ರೆ ಇದರ ಬೇರುಗಳಿರೋದು ಕರ್ನಾಟದಲ್ಲಿ ಮಾತ್ರವಾ? ಯಾಕೆ ಈ ಬಾರಿ ಬರೀ ಕರ್ನಾಟಕದಲ್ಲಿ ಮಾತ್ರವೇ ಇದರ ಸದ್ದಾಗ್ತಿದೆ ಅನ್ನೋ ಹತ್ತಾರು ಪ್ರಶ್ನೆಗಳಿದ್ದಾವೆ. ಆದ್ರೆ ಡ್ರಗ್ಸ್ ದಂಧೆಯ ಆಳ ಅಗಲ ಅರಿಯಬೇಕಾದ್ರೆ ಇಂಟರ್ನ್ಯಾಷನಲ್ ಡ್ರಗ್ಸ್ ಮಾಫಿÀಯಾದ ಭೀಕರ ಸ್ವರೂಪವನ್ನೊಮ್ಮೆ ಜಾಲಾಡಲೇ ಬೇಕು.
ಕೊಕೇನ್, ಮರಿಜುವಾನ ಸೇರಿದಂತೆ ಡ್ರಗ್ಸ್ನಲ್ಲಿ ನಾನಾ ವಿಧಗಳಿದ್ದಾವೆ. ಅದೊಂದು ನಶೆಯೇರಿಸೋ ಮಾಯಾಲೋಕ. ಈವತ್ತಿಗೆ ಕರ್ನಾಟಕದಲ್ಲಿ ಪಡ್ಡೆ ಹುಡುಗರ ಕೈಗೂ ಸಲೀಸಾಗಿ ಸಿಗೋ ಡ್ರಗ್ಸ್ ದೂರದ ದೇಶಗಳಿಂದ ಲೀಲಾಜಾಲವಾಗಿಯೇ ಸರಬರಾಜಾಗುತ್ತೆ. ಇಂದು ಅಂತಾರಾಷ್ಟ್ರೀಯ ಭದ್ರತಾ ವ್ಯವಸ್ಥೆ ಬಿಗುವಾಗಿದೆ. ಆದ್ರೂ ದೇಶದಿಂದ ದೇಶಕ್ಕೆ ಸಲೀಸಾಗಿ ಅದು ಸಾಗಾಟವಾಗ್ತಿರೋದೇ ಆ ದಂಧೆ ಬೆಳೆದು ನಿಂತಿರೋ ರೀತಿಗೆ ಸಾಕ್ಷಿ.
ಹಾಗೆ ಕಾನೂನು ಕಟ್ಟಳೆಗಳ ಕಣ್ತಪ್ಪಿಸಿ, ಘಟಾನುಘಟಿಗಳನ್ನೇ ಬಲೆಗೆ ಕೆಡವಿಕೊಂಡು ಈ ಮಾಫಿಯಾ ಬೆಳೆದು ನಿಂತಿದೆ. ಆ ಮಾಫಿಯಾ ಜಗತ್ತಿನಲ್ಲಿ ಚಾಣಾಕ್ಷತೆಯೇ ಬೆರಗಾಗುವಂಥಾ ಚಾಣಾಕ್ಷ ಡಾನ್ಗಳಿದ್ದಾರೆ. ಅಂಥಾ ಡಾನ್ಗಳಿಗೆಲ್ಲ ಕೌಟುಂಬಿಕವಾಗಿಯೇ ಸ್ಮಗ್ಲಿಂಗ್ ಹಿನ್ನೆಲೆಯಿರುತ್ತೆ. ಅಂಥವರಿಗೆ ಪೊಲೀಸ್, ಕಾನೂನು, ಕೋರ್ಟು, ಜೈಲುಗಳೆಲ್ಲವೂ ಲೆಕ್ಕಕ್ಕಿಲ್ಲ. ಯಾವ ಪೊಲೀಸರೂ ಅವರನ್ನು ತಹಬಂದಿಯಲ್ಲಿಡೋಕೆ ಈವರೆಗೂ ಸಾಧ್ಯವಾಗಿಲ್ಲ. ಈಗ ಹೇಳ ಹೊರಟಿರೋದು ಅಂಥಾದ್ದೇ ಓರ್ವ ಅಂತಾರಾಷ್ಟ್ರೀಯ ಡ್ರಗ್ಸ್ ಡಾನ್ ಒಬ್ಬನ ಕಥೆ. ಅದರಲ್ಲಿ ಅವನದ್ದೇ ಕಾಲಮಾನದಲ್ಲಿ ಘಟಿಸಿದ್ದ ಭೀಕರ ಗ್ಯಾಂಗ್ ವಾರ್ ಕೂಡಾ ಮಿಳಿತವಾಗಿದೆ.
ಆತ ಜೊವಾಕ್ವಿನ್ ಗುಜ್ಮಾನ್ ಲೋರಾ. ಇವನ ಹೆಸರು ಕೇಳಿದ್ರೇನೇ ಈವತ್ತಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವರ ಅಳ್ಳೆ ಅದುರುತ್ತೆ. ಈತ ಹುಟ್ಟಾ ಸ್ಮಗ್ಲರ್. ಈತ ಮೆಕ್ಸಿಕನ್ ಡ್ರಗ್ ಲಾರ್ಡ್. ಸಿನಾಲೋವಾ ಡ್ರಗ್ ಕಾರ್ಟಲ್ನ ಸಾರಥಿ. ಹೀಗಂದಾಕ್ಷಣ ಭಯಾನಕವಾದ ಆಕೃತಿಯೊಂದು ಯಾರ ಮನಸಲ್ಲಾದ್ರೂ ಮೊಳೆತುಕೊಳ್ಳುತ್ತೆ. ಅಷ್ಟಕ್ಕೂ ಆತನ ಪರಾಕ್ರಮಗಳೇ ಅಂಥಾದ್ದಿದೆ. ಆದರೆ ಈ ಆಸಾಮಿಯನ್ನು ಯಾರೂ ಕೂಡಾ ಆ ಆಕಾರದಲ್ಲಿ ಪತ್ತೆಹಚ್ಚೋಕೆ ಸಾಧ್ಯವೇ ಇಲ್ಲ. ಯಾಕಂದ್ರೆ, ಆತ ಈ ಪಾಟಿ ನಟೋರಿಯಸ್ ಅಂತ ಅವನನ್ನ ನೋಡಿದ ಯಾರಿಗೇ ಆದ್ರೂ ಅನ್ನಿಸೋಕೆ ಸಾಧ್ಯಾನೇ ಇಲ್ಲ. ಐದೂವರೆ ಅಡಿಯ ಈತ ಓರ್ವ ಸಾದಾಸೀದಾ ಸಂಸಾರಸ್ಥನಂತೆಯೇ ಕಾಣಿಸ್ತಾನೆ. ಆದ್ರೆ ಅಂತಾರಾಷ್ಟ್ರೀಯ ಭದ್ರತಾ ವ್ಯವಸ್ಥೆಗೇ ಚಳ್ಳೆಹಣ್ಣು ತಿನ್ನಿಸೋ ಈತನ ಲೀಲೆಗಳು ಮಾತ್ರ ಊಹಾತೀತ.
ಮೆಕ್ಸಿಕೋ ಮೂಲದ ಜೊವಾಕ್ವಿನ್ ಗುಜ್ಮಾನ್ ಲೋರಾ ಹುಟ್ಟಿದ್ದೇ ಸ್ಮಗ್ಲಿಂಗ್ ವಾತಾವರಣದಲ್ಲಿ. ಆತನ ಸಂಬಂಧಿಕನೋರ್ವ ಆ ಕಾಲದಲ್ಲಿಯೇ ಕುಖ್ಯಾತ ಡ್ರಗ್ ಡೀಲರ್ ಆಗಿದ್ದ. ಆತನ ಸಾಹಚರ್ಯದಲ್ಲಿ ಬೆಳೆದ ಜೊವಾಕ್ವಿನ್ ಆ ದಂಧೆಯಲ್ಲಿ ಎಳವೆಯಿಂದ್ಲೇ ಪಳಗಲಾರಂಭಿಸಿದ್ದ. ನಂತರ ಆ ಸಂಬಂಧಿಕ ಈ ದಂಧೆ ತೊರೆದಾಗ ಅದರ ಸಾರಥ್ಯ ವಹಿಸಿಕೊಂಡಿದ್ದವನು ಜೊವಾಕ್ವಿನ್. ಆ ನಂತರದ್ದೆಲ್ಲವೂ ರೋಚಕ ಕಥನ. ಈತ ನೋಡ ನೋಡ್ತಿದ್ದಂತೆಯೇ ಸಿನಾಲೋವಾ ಡ್ರಗ್ ಕಾರ್ಟಲ್ನ ನಾಯಕನಾಗಿ ಬೆಳೆದ. ಈವತ್ತಿಗೂ ಯುನೈಟೆಡ್ ಸ್ಟೇಟ್ಸ್ಗೆ ಭಾರೀ ಮೊತ್ತದ ಡ್ರಗ್ಸ್ ಸಪ್ಲೈ ಆಗುತ್ತೆ. ಅದೆಲ್ಲವನ್ನೂ ಕೂಡಾ ಜೊವಾಕ್ವಿನ್ ಆಪರೇಟ್ ಮಾಡ್ತಾನೆ. ಆತ ನಡೆದು ಬಂದಿರೋ ಹೆಜ್ಜೆ ಜಾಡೇ ರೋಚಕ. ಜೊವಾಕ್ವಿನ್ ಭಯಾನಕವಾದ ಪ್ರತಿರೋಧಗಳನ್ನ ಹಿಮ್ಮೆಟ್ಟಿಸಿಕೊಂಡೇ ಬೆಳೆದು ನಿಂತಿದ್ದ.
ಮೆಕ್ಸಿಕನ್ ಪ್ರದೇಶದಲ್ಲಿ ಇತ್ತೀಚಿನ ದಶಕಗಳಲ್ಲಿ ಹಲವಾರು ಡ್ರಗ್ ಕಾರ್ಟಲ್ಗಳು ಹುಟ್ಟಿಕೊಂಡಿದ್ವು. ಅದರ ಒಂದೊಂದು ಕಾರ್ಟಲ್ ಅನ್ನೂ ಒಬ್ಬೊಬ್ಬ ಡಾನ್ ಆಳುತ್ತಿದ್ದ. ಆದ್ರೆ ಯಾರೂ ಕೂಡಾ ಜೊವಾಕ್ವಿನ್ನನ್ನು ಹಿಮ್ಮೆಟ್ಟಿಸೋಕೆ ಸಾಧ್ಯವಾಗಿರ್ಲಿಲ್ಲ. ಇದೇ ಹೊತ್ತಿನಲ್ಲಿ 2006ರಲ್ಲಿ ಜೊವಾಕ್ವಿನ್ ಇಷಾರೆಯಂತೆ ಒಂದು ಕಾರ್ಟಲ್ ಮುಖ್ಯಸ್ಥನ ಹೆಣ ಉರುಳಿಸಲಾಗಿತ್ತು. ಅದುವೇ ಡ್ರಗ್ ಕಾರ್ಟಲ್ಗಳ ಮಹಾ ಕದನಕ್ಕೆ ನಾಂದಿ ಹಾಡಿತ್ತು. ಆ ಕದನದಲ್ಲಿ ಅಂದಾಜು ಅರವತ್ತು ಸಾವಿರದಷ್ಟು ಮಂದಿ ಸತ್ತು ಬಿದ್ದಿದ್ರು. ಇದೊಂದು ಸಂಗ್ರಾಮದಿಂದಲೇ ಜೊವಾಕ್ವಿನ್ ಮತ್ತಷ್ಟು ವರ್ಷಸ್ಸು ಬೆಳೆಸಿಕೊಂಡಿದ್ದ. ಅತೀ ಶ್ರೀಮಂತ ಡ್ರಗ್ ಡಾನ್ ಆಗಿಯೂ ಹೆಸರುವಾಸಿಯಾದ. ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹವಾ ಎಬ್ಬಿಸಿದ್ದ ಅಂದ ಮೇಲೆ ಅವನ ಮೇಲೆ ಭದ್ರತಾ ಪಡೆಗಳ ಕಣ್ಣು ಬೀಳದಿರಲು ಸಾಧ್ಯವೇ? ಆದ್ರೆ ಜೊವಾಕ್ವಿನ್ನನ್ನು ಬಂಧಿಸೋದು ಅಷ್ಟು ಸಲೀಸಿನ ಸಂಗತಿಯಾಗಿರ್ಲಿಲ್ಲ. ಯಾಕಂದ್ರೆ ಅವನ್ ಅಂಥಾ ಪ್ರಳಯಾಂತಕ.
1993 ರಿಂದ 2001ರ ವರೆಗೂ ಹಲವಾರು ಬಾರಿ ಬಂಧಿಸೋ ಪ್ರಯತ್ನಗಳು ನಡೆದಿದ್ವಾದ್ರೂ ಅದು ಸಾಧ್ಯವಾಗಿರ್ಲಿಲ್ಲ. ಕಡೆಗೂ ಒಂದು ಸಲ ಆತನನ್ನು ಬಂಧಿಸಿ ಜೈಲಿಗೆ ತಳ್ಳಲಾಗಿತ್ತು. ಇನ್ನು ಈ ಡ್ರಗ್ಸ್ ಡಾನ್ನ ಯುಗಾಂತ್ಯವಾಯ್ತೆಂದೇ ಸುದ್ದಿಯಾಗಿತ್ತು. ವಿರೋಧಿ ಡ್ರಗ್ಸ್ ಕಾರ್ಟಲ್ಗಳು ಖುಷಿಯಿಂದ ಕೇಕೆ ಹಾಕಿದ್ವು. ಆದ್ರೆ ಜೊವಾಕ್ವಿನ್ ಆ ಖುಷಿಯನ್ನ ಹೆಚ್ಚು ಕಾಲ ಬದುಕಲು ಬಿಡಲಿಲ್ಲ. ಭದ್ರತಾ ಪಡೆಗಳಿಗೇ ಆತ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಕಡೆಗೂ ಆತನನ್ನ 2015ರ ಫೆಬ್ರವರಿ 22 ರಂದು ಬಂಧಿಸಲಾಗಿತ್ತು. ಆಗಂತೂ ಭದ್ರತಾ ಪಡೆಗಳು ಆತನನ್ನು ಮಿಸುಕದಂತೆ ನೋಡಿಕೊಂಡು ಜೈಲಲ್ಲಿಟ್ಟಿದ್ರು. ಅದು ಅತ್ಯಂತ ಬಿಗುವಿನಮ ಸೆಕ್ಯೂರಿಟಿ ಇದ್ದ ಜೈಲು. ಜೊವಾಕ್ವಿನ್ ಮಿಸುಕಾಡಲೂ ಸಾಧ್ಯವಿರಲಿಲ್ಲ. ಆತ ಎಂಥಾ ಪ್ರಳಯಾಂತಕ ಅಂದ್ರೆ ಶವರ್ ಅಡಿಯಲ್ಲಿದ್ದ ಪುಟ್ಟ ಕಿಟಕಿಯನ್ನೇ ದೊಡ್ಡದಾಗಿ ಕೊರೆದು ಪರಾರಿಯಾಗಿದ್ದ.
ಹೀಗೆ ಯಾರ ಅಂಕೆಗೂ ಸಿಗದ ಈತನಿಗೀಗ ಅರವತ್ಮೂರು ವರ್ಷ ವಯಸ್ಸು. ಆದರೂ ಯಾರ ಕೈಗೂ ಸಿಗದೆ ಬಚ್ಚಿಟ್ಟುಕೊಂಡಿದ್ದಾನೆ. ಯಥಾಪ್ರಕಾರವಾಗಿಯೇ ದಂಧೆ ನಡೆಸ್ತಿದ್ದಾನೆ. ಆತನ ಪ್ರಧಾನ ಮಾರ್ಕೆಟ್ ಇರೋದೇ ಅಮೆರಿಕಾದಂಥಾ ದೇಶಗಳಲ್ಲಿ. ಬೇರೆ ದೇಶಗಳ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿ ಮೆರೆಯೋ ಡೊನಾಲ್ಡ್ ಟ್ರಂಪ್ಗೂ ಕೂಡಾ ಈತನ ಕೂದಲನ್ನು ಕೊಂಕಿಸಲೂ ಸಾಧ್ಯವಾಗ್ತಿಲ್ಲ. ಅದು ಜೊವಾಕ್ವಿನ್ ನಿಜವಾದ ತಾಖತ್ತು. ಅಂದಹಾಗೆ ಈತನ ಬಗ್ಗೆ ಲೆಕ್ಕವಿರದಷ್ಟು ಹಾಲಿವುಡ್ ಸಿನಿಮಾಗಳು ತಯಾರಾಗಿವೆ.