ಸೂಪರ್ ಸ್ಟಾರ್ ರಜನೀಕಾಂತ್ ಸದಾ ಸುದ್ದಿ ಕೇಂದ್ರದಲ್ಲಿರುವ ನಟ. ಅವರು ಸಿನಿಮಾವೊಂದರಲ್ಲಿ ಬ್ಯುಸಿಯಾಗಿದ್ದರೂ, ಅದರ ನಡುವೆ ಕೊಂಚ ಬಿಡುವಾಗಿದ್ದರೂ ಅವರ ಸುತ್ತ ಒಂದಷ್ಟು ಸುದ್ದಿಗಳು ಗಿರಕಿ ಹೊಡೆಯುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ರಜನಿ ಮಾನಸಿಕವಾಗಿ ನೊಂದು ಮಾತಾಡುವ ಮೂಲಕ ಒಂದಷ್ಟು ಚರ್ಚೆಗೀಡಾಗಿದ್ದರು. ಝೀರೋ ಪರ್ಸೆಂಟಿನಿಂದ ನಟನಾಗಿ ಮೇಲೆದ್ದು ಬಂದು, ಸೂಪರ್ ಸ್ಟಾರ್ ಆದ ರಜನೀಕಾಂತ್ ಬಾಯಲ್ಲಿ ಅಂಥಾ ಮಾತುಗಳನ್ನು ಕೇಳಿದ ಮಂದಿ ಒಂದಷ್ಟು ಕಸಿವಿಸಿಗೊಳಗಾದದ್ದು ನಿಜ. ಆದರೆ, ಇಂಥಾ ಯಾವುದೇ ತೊಳಲಾಟಗಳೂ ತನ್ನ ವೃತ್ತಿ ಬದುಕಿಗೆ ಬ್ರೇಕ್ ಹಾಕದಂತೆ ಎಚ್ಚರ ವಹಿಸುತ್ತಲೇ ಬಂದವರು ರಜನೀಕಾಂತ್. ಅವರೀಗ ಎಲ್ಲ ತಳಮಳಗಳನ್ನೂ ಕೊಡವಿಕೊಂಡು, ಮತ್ತದೇ ಹುರುಪಿನೊಂದಿಗೆ ಎದ್ದು ನಿಂತಿದ್ದಾರೆ. ಅದರ ಫಲವಾಗಿಯೇ ಅವರ ಮುಂದಿನ ಚಿತ್ರ ‘ಜೈಲರ್’ ದೊಡ್ಡ ಮಟ್ಟದಲ್ಲಿ ಸೌಂಡು ಮಾಡಲಾರಂಭಿಸಿದೆ!
ರಜನೀಕಾಂತ್ ಈಗೊಂದಷ್ಟು ವರ್ಷಗಳಿಂದ ಪುಷ್ಕಳವಾದೊಂದು ಗೆಲುವು ಕಾಣದೆ ತತ್ತರಿಸಿದಂತಿತ್ತು. ಅವರನ್ನು ಅತೀವವಾಗಿ ಮೆಚ್ಚಿಕೊಳ್ಳುವ, ಆರಾಧಿಸುವ ಮಂದಿಗೂ ಅದೊಂದು ಕೊರಗು ಬಿಡದೇ ಕಾಡುತ್ತಿರೋದು ಸತ್ಯ. ಇಂಥಾ ಹೊತ್ತಿನಲ್ಲಿಯೇ ರಜನೀ ಆಂತರಿಕ ತೊಳಲಾಟದಿಂದ ತ್ರಾಣ ಕಳೆದುಕೊಂಡವರಂತೆ, ವೈಯಕ್ತಿಕ ಬದುಕಿನಲ್ಲಿ ತಟುಕು ನೆಮ್ಮದಿಗೂ ತತ್ವಾರ ಅನುಭವಿಸುತ್ತಿರುವವರಂತೆ ಮಾತಾಡಿದರೆ ಅಭಿಮಾನಿಗಳಿಗೆ ಹೇಗಾಗಬೇಡ? ಇಂಥಾದ್ದೊಂದು ಸಂದಿಗ್ಧ ಕಾಲಘಟ್ಟದಲ್ಲಿ ರಜನಿ ಮತ್ತೆ ಫಾರ್ಮಿಗೆ ಮರಳಿದ್ದಾರೆ. ಅವರೀಗ ಜೈಲರ್ ಅವತಾರದಲ್ಲಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಇದೀಗ ಆ ಚಿತ್ರದ ರಗಡ್ ಪೋಸ್ಟರ್ ಒಂದು ಜಾಹೀರಾಗುವ ಮೂಲಕ ರಜನಿ ಖದರ್ ಮತ್ತೆ ಪ್ರಜ್ವಲಿಸಿದೆ.
ಅಂದಹಾಗೆ, ಜೈಲರ್ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಚಿತ್ರ. ತನ್ನದೇ ಧಾಟಿಯಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ಕೊಡಮಾಡಿರುವ ನೆಲ್ಸನ್, ತಮಿಳಿನಲ್ಲಿ ಸ್ಟಾರ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿ ರಜನೀಕಾಂತ್ ಮತ್ತು ನೆಲ್ಸನ್ ಕಾಂಬಿನೇಷನ್ನಿನಲ್ಲಿ ಈ ಚಿತ್ರ ಸೆಟ್ಟೇರಿದೆ. ನೆಲ್ಸನ್ ನಿರ್ದೇಶನದ ಬಗ್ಗೆ ಪ್ರೇಕ್ಷಕರಲ್ಲೊಂದು ನಂಬಿಕೆ ಇದೆ. ಈ ಕಾರಣದಿಂದಲೇ ಜೈಲರ್ ಬಗ್ಗೆ ವ್ಯಾಪಕ ನಿರೀಕ್ಷೆ ಪಡಿಮೂಡಿಕೊಂಡಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ರಜನಿ ಒಂದಷ್ಟು ಕಾಲದ ವನವಾಸದಿಂದ ಮತ್ತೆ ಹೊರಬರಲು ಸಾಧ್ಯವಾಗಬಹುದೇನೋ. ಅಂಥಾದ್ದೊಂದು ಗೆಲುವು ಜೈಲರ್ ಮೂಲಕ ರಜನಿಗೆ ದಕ್ಕಲೆಂದು ಕೋಟ್ಯಾಂತರ ಅಭಿಮಾನಿಗಳು ಮನಸಾರೆ ಹಾರೈಸುತ್ತಿದ್ದಾರೆ.
ರಜನೀಕಾಂತ್ ಯಾವುದೇ ಹೊಸಾ ಸಿನಿಮಾದತ್ತ ಹೊರಳಿಕೊಂಡಾಗಲೂ ದೊಡ್ಡ ಮಟ್ಟದಲ್ಲಿ ಕ್ರೇಜ್ ಮೂಡಿಕೊಳ್ಳುತ್ತೆ. ಆ ಚಿತ್ರಕ್ಕೆ ತಾನೇತಾನಾಗಿ ಭಾರೀ ಪ್ರಚಾರವೂ ಸಿಗುತ್ತದೆ. ಈ ಬಾರಿ ರಜನೀ ಚಿತ್ರಕ್ಕೆ ನೆಲ್ಸನ್ ಸಾರಥ್ಯವಿರೋದರಿಂದ ಆ ನಿರೀಕ್ಷೆ ನೂರ್ಮಡಿಸಿರೋದು ಸುಳ್ಳಲ್ಲ. ತಮಿಳು ಚಿತ್ರರಂಗದಲ್ಲಿ ನೆಲ್ಸನ್ ಅಂತಲೇ ಪ್ರಸಿದ್ಧಿ ಪಡೆದುಕೊಂಡಿರುವ ನೆಲ್ಸನ್ ದಿಲೀಪ್ ಕುಮಾರ್, ೨೦೧೦ರಲ್ಲಿ ತೆರೆಕಂಡಿದ್ದ ವೆಟೈ ಮನ್ನಾನ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ಸಿಲಂಬರಸನ್ ಮತ್ತು ಹರ್ಷಿಕಾ ಮೋಟ್ವಾನಿ ನಟಿಸಿದ್ದ ಈ ಚಿತ್ರ ಅದೇಕೋ ಅರ್ಧದಲ್ಲಿಯೇ ನಿಂತು ಹೋಗಿತ್ತು. ಆ ನಂತರ ಏರಿಳಿತ ಕಾಣುತ್ತಾ ಬಂದಿದ್ದ ನೆಲ್ಸನ್ ೨೦೧೮ರಲ್ಲಿ ತೆರೆಗಂಡಿದ್ದ, ನಯನತಾರಾ ಲೀಡ್ ರೋಲಿನಲ್ಲಿ ನಟಿಸಿದ್ದ ಕೊಲಮಾವು ಕೋಕಿಲ ಎಂಬ ಹಾಸ್ಯ ಬೆರೆತ ಚಿತ್ರದ ಮೂಲಕ ಕಮರ್ಶಿಯಲ್ ಆಗಿಯೂ ಗೆದ್ದಿದ್ದರು. ಆ ನಂತರ ಕಾರ್ತಿಕೇಯನ್ ನಾಯಕನಾಗಿದ್ದ ಡಾಕ್ಟರ್ ಚಿತ್ರವೂ ಗೆಲುವು ತಂದುಕೊಟ್ಟಿತ್ತು. ಅದು ವಿಜಯ್ ನಟನೆಯ ಬೀಸ್ಟ್ ಚಿತ್ರದ ಮೂಲಕವೂ ಮುಂದುವರೆದಿತ್ತು. ಈ ನಟಿಟಿನಲ್ಲಿ ನೋಡೋದಾದರೆ, ಜೈಲರ್ ಎಂಬುದು ನೆಲ್ಸನ್ ವೃತ್ತಿ ಬದುಕಿನಲ್ಲಿ ಬಹುಮುಖ್ಯ ಚಿತ್ರವಾಗಿ ದಾಖಲಾಗುತ್ತದೆ.