ಜೈಲೆಂಬುದು ಪರಿವರ್ತನೆಯ ತಾಣವಿದ್ದಂತೆ. ಆಯಾ ಸಮಯ ಸಂದರ್ಭ ಮತ್ತು ಆಂತರಿಕ ವಿಕೃತಿಯಿಂದ ಅಪರಾಧ ಪ್ರಕರಣಗಳು ಸಂಭವಿಸುತ್ತವೆ. ಅಂಥವರನ್ನು ಕಾನೂನು ಸಮ್ಮತವಾಗಿ ಜೈಲಿಗೆ ತಳ್ಳಿ, ಅಲ್ಲಿ ಒಂದಷ್ಟು ವರ್ಷಗಳ ಕಾಲ ಇರುವಂತೆ ಮಾಡಿ, ಮನಃಪರಿವರ್ತನೆಯಾಗುವಂತೆ ನೋಡಿಕೊಳ್ಳೋದೇ ಜೈಲೆಂಬುದರ ಹಿಂದಿರುವ ಕಾನ್ಸೆಪ್ಟು. ಆದರೆ ಪ್ರತಿಯೊಂದರಲ್ಲಿಯೂ ಕಾಸು ಕೀಳುವ ಕೂಳು ಬಾಕ ಅಧಿಕಾರಿಗಳೇ ಎಲ್ಲಡೆ ತುಂಬಿಕೊಂಡಿರೋದರಿಂದ ಈವತ್ತಿಗೆ ಜೈಲೂ ಕೂಡಾ ಐಷಾರಾಮಿ ಪ್ರದೇಶವಾಗಿದೆ. ಅಲ್ಲಿ ಪ್ರಭಾವೀ ಕೈದಿಗಳು ಕೈಚಾಚಿದರೆ, ಹೊರಜಗತ್ತಿನಲ್ಲಿರುವಂಥಾ ಅಷ್ಟೂ ಸೌಕರ್ಯಗಳು ಬಂದು ಬೀಳುತ್ತವೆ. ಇಂಥಾ ವಾತಾವರಣವಿರೋದರಿಂದಲೇ ಇಂದೋರ್ ಜೈಲಿನಲ್ಲಿ ಮಹಿಳಾ ಕೈದಿಯ ಕೈಲಿ ಹೊಚ್ಚ ಹೊಸಾ ಸ್ಮಾರ್ಟ್ ಫೋನ್ ಸದ್ದು ಮಾಡಿದೆ.
ಇಂದೋರ್ನ ಜಿಲ್ಲಾ ಕಾರಾಗೃಹದಲ್ಲಿ ಇಂಥಾದ್ದೊಂದು ಕೃತ್ಯ ನಡೆದಿದೆ. ತಿಹಾರ್ ಜೈಲಿನಿಂದ ಮೂವತೈದು ವರ್ಷ ವಯಸ್ಸಿನ ಮಹಿಳಾ ಕೈದಿಯನ್ನು ಕೆಲ ದಿನಗಳ ಹಿಂದೆ ವಿಚಾರಣೆಗಾಗಿ ಇಂದೋರ್ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಒಂದಷ್ಟು ಪ್ರಭಾವ ಹೊಂದಿದ್ದ ಈ ಕೈದಿ, ಮಹಿಳಾ ಸಿಬ್ಬಂದಿಗೆ ಕಾಸಿನಾಸೆ ತೋರಿಸಿದ್ದಳು. ಅದಕ್ಕೆ ಮರುಳಾದ ಜೈಲಿನ ಮಹಿಳಾ ಸಿಬ್ಬಂದಿ, ಹೊಸಾ ಸ್ಮಾರ್ಟ್ ಫೋನ್ ಒಂದರ ವ್ಯವಸ್ಥೆ ಮಾಡಿದ್ದರು. ಇತ್ತೀಚೆಗೆ ಮೇಲಾಧಿಕಾರಿಗಳು ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಹಿಳಾ ಕೈದಿಯ ಕೈಲಿದ್ದ ಮೊಬೈಲನ್ನು ವಶಪಡಿಸಿಕೊಳ್ಳಲಾಗಿದೆ. ಅದಕ್ಕೆ ಕಾರಣಳಾಗಿದ್ದ ಮಹಿಳಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಇಂದು ದೇಶದ ಅಷ್ಟೂ ಜೈಲುಗಳಲ್ಲಿ ಮೇರೆ ಮೀರಿಕೊಂಡಿರುವ ಮಾಫಿಯಾಗಳನ್ನು ನೋಡಿದರೆ ಕೈದಿಯ ಕೈಯಲ್ಲಿ ಮೊಬೈಲು ಕುಣಿಸಿದ್ದನ್ನು ಕಂಡು ಏನೆಂದರೆ ಏನೂ ಅನ್ನಿಸಲು ಸಾಧ್ಯವಿಲ್ಲ. ನಮ್ಮ ಕರ್ನಾಟಕದ ಜೈಲುಗಳಲ್ಲಿಯೇ ಹಣವಂತ ಕೈದಿಗಳಿಗೆ ಸಕಲ ಸೌಕರ್ಯಗಳನ್ನು ಕಲ್ಪಿಸುವ ಚಾಳಿ ಇದೆ. ಜೈಲೊಳಗೆ ಪಾತಕ ಮಾಡಿ ಬರುವ ರೌಡಿಗಳಿಗೂ ವಿಐಪಿ ಸೆಲ್ಲು ಕೊಟ್ಟು ಉಪಚರಿಸುವಂಥಾದ್ದೂ ನಡೆಯುತ್ತಿದೆ. ಸಿಗರೇಟು, ಬೀಡಿ, ಗಾಂಜಾ ಸೇರಿದಂತೆ ಎಲ್ಲವೂ ಜೈಲುಗಳೊಳಗೆ ಖುಲ್ಲಂಖುಲ್ಲ ಸರಬರಾಜಾಗುತ್ತಿವೆ!