ಈ ಬಿಜೆಪಿ ಮಂದಿ ಜನರ ಗಮನವನ್ನು ಬೇರೆಡೆ ಸೆಳೆದುಕೊಂಡು, ಆ ಮೂಲಕ ಹುಳುಕು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಅಂತೊಂದು ಘನ ಗಂಭೀರವಾದ ಆರೋಪವಿದೆ. ಆ ಮಾತಿಗೆ ಸಾಕ್ಷಿಯೆಂಬಂತೆ ಇದೀಗ ನಂಜೇಗೌಡ, ಉರಿ ಗೌಡನೆಂಬ ಕಪೋಲಕಲ್ಪಿತ ವೀರರನ್ನು ಹುಟ್ಟುಹಾಕಿಯಾಗಿದೆ. ವಿನಾಯಕ ದಾಮೋದರ ಸಾವರ್ಕರ್ ಬಿಜೆಪಿ ಬತ್ತಳಿಕೆಯಿಂದ ಚಿಮ್ಮಿದ್ದ ಹಳೇ ಬಾಣ. ಒಂದು ಬಣದ ವೀರನೆನ್ನಿಸಿಕೊಂಡಿರೋ ಸಾವರ್ಕರ್ ಬಗೆಗಿನ ಪ್ರೇಮವನ್ನು ಮತ್ತಷ್ಟು ಗಟ್ಟಿಯಾಗಿಸುವ ನಿಟ್ಟಿನಲ್ಲಿ ವೀರ್ ಸಾವರ್ಕರ್ ಅಂತೊಂದು ಸಿನಿಮಾ ರೆಡಿಯಾಗುತ್ತಿದೆ. ಅದರಲ್ಲಿ ಸವಕಲು ಹೀರೋ ಸುನೀಲ್ ರಾವ್ ನಟಿಸುತ್ತಿರೋದೂ ಪಕ್ಕಾ ಆಗಿತ್ತು. ಇದೀಗ ಆ ಸಿನಿಮಾದ ನಾಯಕಿಯಾಗಿ, ಸಾವರ್ಕರ್ ಹೆಂಡತಿಯ ಪಾತ್ರಕ್ಕೆ ಜಾನ್ವಿಕಾ ಕಲಕೇರಿ ಆಯ್ಕೆಯಾಗಿದ್ದಾಳೆ!
ರವಿಚಂದ್ರನ್ ಪುತ್ರ ಮನೋರಂಜನ್ ನಾಯಕನಾಗಿ ನಟಿಸಿದ್ದ ಪ್ರಾರಂಭ ಎಂಬ ಚಿತ್ರದ ಮೂಲಕ ನಾಯಕಿಯಾಗಿ ಆಗಮಿಸಿದ್ದಾಕೆ ಜಾನ್ವಿಕಾ ಕಲಕೇರಿ. ಆರಂಭಿಕವಾಗಿ ಕೀರ್ತಿ ಕಲಕೇರಿ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ ಈಕೆ, ಇದೀಗ ಹೆಸರು ಬದಲಿಸಿಕೊಂಡು ಅದೃಷ್ಟ ಪರೀಕ್ಷೆಗಿಳಿದಂತಿದೆ. ಸನಾದಿ ಅಪ್ಪಣ್ಣನವರ ವಂಶದ ಕುಡಿಯಾದ ಜಾನ್ವಿಕಾ, ಆ ನಂತರದಲ್ಲಿ ಶಶಿಕುಮಾರ್ ಪುತ್ರನ ಚಿತ್ರದಲ್ಲಿಯೂ ನಟಿಸಿದ್ದಳು. ನಟನೆಯ ಮೂಲಕ ಒಂದಷ್ಟು ಭರವಸೆ ಮೂಡಿಸಿದ್ದ ಜಾನ್ವಿಕಾ ಇದೀಗ ಸಾವರ್ಕರ್ ಎಂಡತಿಯ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾಳೆ.
ಎಕ್ಸ್ಕ್ಯೂಸ್ ಮಿ ಅಂತೊಂದು ಸಿನಿಮಾದ ಯಶದ ಅಮಲಿನಲ್ಲಿಯೇ ತೇಲಾಡುತ್ತಿದ್ದ ಸುನೀಲ್, ಆ ನಂತರದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದನಾದರೂ ಅವ್ಯಾವುವೂ ಬರಖತ್ತಾಗಿರಲಿಲ್ಲ. ಒಂದಷ್ಟು ಸೋಲುಗಳ ಮುತ್ತಿಕೊಂಡ ನಂತರ, ಸುದೀರ್ಘಾವಧಿಯಲ್ಲಿ ಆತ ಅಜ್ಞಾತವಾಸದಲ್ಲಿದ್ದ. ಒಂದು ಕಾಲಕ್ಕೆ ಸುನೀಲ್ ಪ್ರತಿಭಾನ್ವಿತ ಅನಿಸಿಕೊಂಡಿದ್ದ ನಟನೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ತಲೆಯನ್ನು ಬುಜದ ಮೇಲಿರುವಂತೆ ನೋಡಿಕೊಂಡು, ಯಶಸ್ಸಿನ ತಿಮಿರನ್ನು ಕೊಂಚ ಸ್ಥಿಮಿತದಲ್ಲಿಟ್ಟುಕೊಂಡಿದ್ದರೆ, ಸುನೀಲ್ ಖಂಡಿತವಾಗಿಯೂ ಬೇರೊಂದು ಎತ್ತರಕ್ಕೆ ತಲುಪಿಕೊಂಡು ಬಿಡುತ್ತಿದ್ದ. ಅದೆಲ್ಲದರ ಫಲದಂತೆ ಹಬ್ಬಿಕೊಂಡಿದ್ದ ಸೋಲಿನ ಪರ್ವವನ್ನು ಕಳೆದ ವರ್ಷದಿಂದ ಸುನೀಲ್ ಕಳಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ. ಅದರ ಭಾಗವಾಗಿಯೇ ಇದೀಗ ವೀರ್ ಸಾವರ್ಕರ್ ಸಿನಿಮಾವನ್ನು ಒಪ್ಪಿಕೊಂಡಂತಿದೆ. ಈ ಮೂಲಕವಾದರೂ ಸುನೀಲ್ ವೃತ್ತಿ ಬದುಕು ಮತ್ತೆ ಮಿರುಗಲೆಂಬುದು ಹಾರೈಕೆ!