ಮೇರೆ ಮೀರಿಕೊಂಡಿರುವ ರಾಜಕೀಯ ವೈಷಮ್ಯದ ನಡುವೆ ಮನುಷ್ಯತ್ವವೇ ಮರೆಯಾಗಿ ಬಿಟ್ಟಿದೆ. ಇಲ್ಲಿ ಕೊಲೆ, ಹೊಡದಾಟ ಬಡಿದಾಟಗಳೆಲ್ಲವೂ ಸೆನ್ಸಿಟಿವ್ ವಿಚಾರಗಳಾಗುಳಿದಿಲ್ಲ. ಅದೂ ಕೂಡಾ ರಾಜಕೀಯ ಅಸ್ವಿತ್ವಕ್ಕಾಗಿನ ಹೋರಾಟದಂತೆ, ಬಲಪ್ರದರ್ಶನದಂತೆಯೇ ಬಿಂಬಿಸಲ್ಪಡುತ್ತಿದೆ. ಇಂಥಾ ರಾಕ್ಷಸೀಯ ಕೃತ್ಯಗಳನ್ನು ಪಕ್ಷಾಧಾರಿತವಾಗಿ ಬೆಂಬಲಿಸುವಂಥಾ ಹೀನ ಮನಃಸ್ತಿತಿ ನಿಜಕ್ಕೂ ಪ್ರಜ್ಞಾವಂತರಲ್ಲೊಂದು ಆತಂಕ ಹುಟ್ಟಿಸಿಬಿಟ್ಟಿದೆ. ಸೈದ್ಧಾತಿಕ ಭಿನ್ನಾಭಿಪ್ರಾಯ, ಪಕ್ಷ ಭೇದಗಳಿಗೆಲ್ಲ ಕೈ ಮಿಲಾಯಿಸೋದು, ಜೀವ ತೆಗೆಯುವುದೇ ಅಂತಿಮ ಫಲಿತಾಂಶ ಎಂಬಂಥಾ ಅನಾಹುತಕಾರಿ ಮನಃಸ್ಥಿತಿ ವೇಗವಾಗಿ ಹಬ್ಬುತ್ತಿದೆ. ಅದರ ಭಾಗವಾಗಿಯೇ ಇಂದೀಗ ಮಧ್ಯಪ್ರದೇಶದ ಇಂಧೋರ್ನಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಒಬ್ಬ ಬಿಜೆಪಿ ಮುಖಂಡನನ್ನು ಕೊಲೆ ಮಾಡಲೆತ್ನಿಸಿದ್ದಾನೆ.
ಈ ಪ್ರಕರಣದಲ್ಲಿ ಆರೋಪಿಯಾಗಿರುವಾತ, ಇಂಧೋರ್ನ ವಾರ್ಡ್ ನಂಬರ್ ಇಪ್ಪತ್ತೆರಡರ ಕಾಂಗ್ರೆಸ್ ಕಾರ್ಪೋರೇಟರ್ ರಾಜು ಭಡೋರಿಯಾ. ರಾಜುವಿಗೂ ಬಿಜೆಪಿ ಮುಖಂಡ ಚಂದು ಶಿಂಧೆ ಎಂಬಾತನಿಗೂ ರಾಜಕೀಯ ಕಾರಣಗಳಿಗಾಗಿ ವೈಮನಸ್ಯ ಮೂಡಿಕೊಂಡಿತ್ತು. ಇವರಿಬ್ಬರ ನಡುವೆ ಸಾಕಷ್ಟು ಸಲ ಮಾರಾಮಾರಿಗಳೂ ಕೂಡಾ ನಡೆದಿದ್ದವು. ಅದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಕಾರ್ಪೋರೇಟರ್ ರಾಜು ಭಡೋರಿಯಾ, ಶಿಂಧೆಯನ್ನು ಮುಗಿಸುವ ಪ್ಲಾನು ಮಾಡಿದ್ದ. ಅದರನ್ವಯ ಕೆಲ ದಿನಗಳ ಹಿಂದೆ ಜೀವ ತೆಗೆಯಲು ನುಗ್ಗಿದ್ದನಾದರೂ, ಆ ಪ್ರಯತ್ನ ವಿಫಲವಾಗಿತ್ತು.
ಈ ಸಂಬಂಧವಾಗಿ ಶಿಂಧೆ ದೂರು ನೀಡಿದ್ದರಿಂದ ಪೊಲೀಸರು ರಾಜುವನ್ನು ಬಂಧಿಸಿದ್ದರು. ರಾಜಕೀಯವಾಗಿ ಭಲೇ ಪ್ರಭಾವಿಯಾಗಿರುವ ರಾಜು ಭಡೋರಿಯಾ ಮೊನ್ನೆ ದಿನ ಬೇಲ್ ಪಡೆದು ಹೊರಬಂದಿದ್ದ. ಆತ ಒಂದು ಕೊಲೆ ಮಾಡಲು ಯತ್ನಿಸಿದ್ದ ಹಂತಕ. ಆದರೂ ಕಾಂಗ್ರೆಸ್ ಮಂದಿ ಬೇಲ್ ಪಡೆದು ಹೊರ ಬಂದ ರಾಜುವನ್ನು ಜೈಕಾರಗಳೊಂದಿಗೆ ಬರಮಾಡಿಕೊಂಡಿದ್ದಾರೆ. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಆತನಿಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ಇದೊಂದು ರೀತಿಯಲ್ಲಿ ಕೊಲೆಯನ್ನು ಉತ್ತೇಜಿಸಿ, ಸಾವನ್ನು ಸಂಭ್ರಮಿಸುವ ಹೀನ ಮನಃಸ್ಥಿತಿ ಎಂಬ ಟೀಕೆಗಳು ಎಲ್ಲಡೆಯಿಂದ ತೂರಿ ಬರುತ್ತಿದ್ದಾವೆ.