ಇದು ಮಾನವ ಕಳ್ಳಸಾಗಣೆಯ ಭೀಕರ ಮುಖ!
ಅದು ಯಾರ ಕಣ್ಣೀರಿಗೂ, ಯಾವ ಯಾಚನೆಗೂ ಕರಗದ ಅಪ್ಪಟ ಕಲ್ಲು ಮನಸಿನವರ ವಿಕೃತ ಲೋಕ. ದೇಶ ವಿದೇಶಗಳ ತುಂಬೆಲ್ಲ ಹಬ್ಬಿಕೊಂಡಿರೋ ಮಾನವ ಕಳ್ಳ ಸಾಗಣೆಯ ಜಾಲವಿದೆಯಲ್ಲಾ? ಅದರ ಒಂದೊಂದು ಮಾಹಿತಿಗಳೂ ಎದೆ ಅದುರಿಸುತ್ತವೆ. ಅದರ ಮುಂದೆ ಇದುವರೆಗೆ ಬಂದ ಅಷ್ಟೂ ಸಿನಿಮಾ ಸೀನುಗಳು ಡಲ್ಲು ಹೊಡೆಯುತ್ತವೆ. ಅಂಥಾ ಅಮಾನವೀಯ, ರಕ್ಕಸರ ಮಾಫಿಯಾ ಲೋಕವದು. ನಮ್ಮ ಸುತ್ತಾ ಆಗಾಗ ಮಿಸ್ಸಿಂಗ್ ಕೇಸುಗಳು ಘಟಿಸುತ್ತಿರುತ್ತವೆ. ಮಕ್ಕಳು ಕಾಣೆಯಾಗುತ್ತವೆ. ಹೆಣ್ಣು ಮಕ್ಕಳು ಕಣ್ಮರೆಯಾಗುತ್ತವೆ. ಹೆಂಗಸರು ಸುಳಿವಿಲ್ಲದಂತೆ ಕಣ್ಮರೆಯಾಗಿ ಬಿಡುತ್ತವೆ. ಅದರ ಸುತ್ತ ಜನರಿಗೆ ತೋಚಿದಂಥಾ ರೂಮರ್ಗಳು ಹಬ್ಬಿಕೊಳ್ಳುತ್ತವೆ. ಆದರೆ ನಮ್ಮ ನಡುವಿಂದಲೇ ಹಾಗೆ ಕಾಣೆಯಾದವರು ಮಾನವ ಕಳ್ಳ ಸಾಗಣೆದಾರರ ವಿಷವ್ಯೂಹದಲ್ಲಿ ಸಿಕ್ಕು ಒದ್ದಾಡುತ್ತಿರಬಹುದೆಂಬ ಸಣ್ಣ ಕಲ್ಪನೆಯೂ ನಮಗಿರೋದಿಲ್ಲ.
ಈ ಮಾನವ ಕಳ್ಳ ಸಾಗಣೆಯದ್ದು ಸಾಗರದಷ್ಟು ವಿಶಾಲವಾದ ವ್ಯಾಪ್ತಿ ಇದೆ. ಅದರಲ್ಲಿ ಮಕ್ಕಳ ಕಿಡ್ನಾಪ್ ಮತ್ತು ಮಾರಾಟ ಜಾಲದ್ದೊಂದು ಭೀಕರ ಮಜಲು. ನಾಲಕ್ಕರಿಂದ ಹತ್ತರ ಪ್ರಾಯದ ಮಕ್ಕಳೇ ಈ ದಂಧೆಕೋರರ ಪ್ರಧಾನ ಟಾರ್ಗೆಟ್. ಆ ಪ್ರಾಯದ ಮಕ್ಕಳು ಹೆತ್ತವರ ಕಿರುಬೆರಳು ತಪ್ಪಿಸಿಕೊಂಡು ಕೊಂಚ ಮರೆಯಾದರೂ ಕಂಗಾಲಾಗುತ್ತವೆ. ಅಪರಿಚಿತರ ಮುಂದೆ ಬೆದರಿ ನಿಲ್ಲುತ್ತವೆ. ಅಂಥಾ ಅಸಹಾಯಕ ಮುಗ್ಧತೆಯೇ ಈ ಮಾಫಿಯಾ ಮಂದಿಯ ಬಂಡವಾಳ. ಈ ವಯೋಮಾನದ ಮಕ್ಕಳನ್ನು ಅಪಹರಿಸೋ ಜಾಲ ಬಹು ಹಿಂದಿನಿಂದಲೂ ಇತ್ತು. ನೀವೇನಾದರೂ ತೊಂಭತ್ತರ ದಶಕದ ಕೂಸುಗಳಾಗಿದ್ದರೆ, ಆ ಕಾಲದಲ್ಲಿ ಮಕ್ಕಳ ಕಳ್ಳರ ಬಗ್ಗೆ ಹಬ್ಬಿಕೊಂಡಿದ್ದ ಅಂತೆಕಂತೆಗಳ ಅರಿವಿರುತ್ತೆ. ಆವತ್ತಿಗೆ ಅದು ಯಾರೋ ಕಿಡಿಗೇಡಿಗಳು ಹಬ್ಬಿಸಿದ ರೂಮರ್ ಅಂದುಕೊಂಡವರಿದ್ದರು.
ಆದರೆ, ನಿಜಕ್ಕೂ ಮಕ್ಕಳ ಕಳ್ಳ ಸಾಗಣೆಯ ದಂಧೆ ಆರಂಭವಾಗಿದ್ದು ಆ ಕಾಲಘಟ್ಟದಲ್ಲಿಯೇ. ಇಂಥಾದ್ದೊಂದು ದಂಧೆ ಚಾಲ್ತಿಯಲ್ಲಿದೆ ಅನ್ನೋ ಸತ್ಯ ಜಗತ್ತಿಗೆ ತೆರೆದುಕೊಂಡಿದ್ದು ತೊಂಭತ್ತರ ದಶಕದಲ್ಲಿಯೇ. ಆ ದಿನಗಳಲ್ಲಿ ಒಂದು ಮೂಲೆಯಿಂದ ಮಕ್ಕಳನ್ನು ಕದ್ದೊಯ್ದು ಮತ್ಯಾವುದೋ ಮೂಲೆಯಲ್ಲಿ ಥರ ಥರದ ಹಿಂಸೆಗೆ ತಳ್ಳುತ್ತಿದ್ದರು. ಇಂಥಾ ಮಕ್ಕಳು ತೊಂಭತ್ತರ ದಶಕದ ನಡುಗಾಲದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದ್ದದ್ದು ಕುದುರೆ ರೇಸಿನ ಹಣವಂತರ ಹುಚ್ಚಿಗೆ. ಗಲ್ಫ್ ದೇಶಗಳ ಹಣವಂತರಿರುತ್ತಾರಲ್ಲಾ? ಅವರಿಗೆ ಇಂಥಾ ಮಕ್ಕಳನ್ನು ದಂಧೆಕೋರರು ಮಾರಾಟ ಮಾಡುತ್ತಿದ್ದರು. ಹಾಗೆ ಈ ಮಕ್ಕಳನ್ನು ಖರೀದಿಸಿದ ಹಣವಂತ ರಕ್ಕಸರು ಜಗವರಿಯದ ಪುಟ್ಟ ಕಂದಮ್ಮಗಳಿಗೆ ತೋರಿಸುತ್ತಿದ್ದದ್ದು ಅಕ್ಷರಶಃ ನರಕವನ್ನೇ.
ನಿಮಗೆ ಅಚ್ಚರಿಯಾಗಬಹುದು, ಈ ಮಕ್ಕಳಿಗೂ ಕುದುರೇ ರೇಸಿಗೂ ಅದ್ಯಾವ ಸಂಬಂಧ ಎಂಬ ಪ್ರಶ್ನೆಯೂ ಕಾಡಬಹುದು. ಅದಕ್ಕೆ ಸಿಗುವ ಉತ್ತರದಲ್ಲಿ ಅಮಾನವೀಯ ವಾಸ್ತವ ಅಡಗಿದೆ. ಗಲ್ಫ್ ರಾಷ್ಟ್ರಗಳ ಕುಳಗಳು ಅಗಾಧ ಮಟ್ಟದಲ್ಲಿ ಕುದುರೆ ರೇಸಿನ ಹುಚ್ಚು ಹತ್ತಿಸಿಕೊಂಡಿರುತ್ತಾರೆ. ಅವರೆಲ್ಲ ಇಂಥಾ ಬಡಪಾಯಿ ಮಕ್ಕಳನ್ನು ಕುದುರೆಯ ಬಾಲಕ್ಕೆ ಕಟ್ಟುತ್ತಿದ್ದರು. ಬಾಲಕ್ಕೇನೋ ಕಟ್ಟಿದ ಅರಿವಾಗುತ್ತಲೇ ಕುದುರೆಗಳು ಹುಚ್ಚೆದ್ದು ಓಡಲಾರಂಭಿಸುತ್ತಿದ್ದವು. ಈ ಮಕ್ಕಳು ಭಯದಿಂದ ಕಿರುಚಿದಷ್ಟೂ ಕುದುರೆಯ ವೇಗವೂ ಹೆಚ್ಚಾಗುತ್ತಿತ್ತಂತೆ. ಒಂದು ವೇಳೆ ಕುದುರೆಯ ಬಾಲಕ್ಕೆ ಕಟ್ಟಿದ ಕೂಸು ನಡುವಲ್ಲೇ ಬಿದ್ದರೆ ಸತ್ತೇ ಹೋಗುತ್ತಿತ್ತು. ಗಾಯಗೊಂಡು ಬದುಕುಳಿದವುಗಳಿಗೆ ಯಾವ ಆರೈಕೆಯೂ ಸಿಗುತ್ತಿರಲಿಲ್ಲ. ಕೇವಲ ಕುದುರೆ ರೇಸಿಗೆ ಮಾತ್ರವಲ್ಲದೆ, ಹಣವಂತ ಕಾಮಪಿಪಾಸುಗಳು ಲೈಂಗಿಕವಾಗಿಯೂ ಬಳಸಿಕೊಳ್ಳುತ್ತಿದ್ದರೆಂಬ ಆಘಾತಕರ ಸಂಗತಿಯನ್ನೂ ಕೆಲ ತನಿಖೆಗಳು ಬಯಲಾಗಿಸಿವೆ.
ಅದರಲ್ಲಿಯೂ ಈ ಜಾಲಕ್ಕೆ ಸಿಕ್ಕ ಹೆಣ್ಣು ಮಕ್ಕಳಿಗಂತೂ ಥರ ಥರದ ನರಕದರ್ಶನ ಖಾಯಂ. ಒಂದಷ್ಟು ಕಾಲ ಕೂಲಿ ಕೆಲಸ, ಗಾರೆ ಕೆಲಸದಂಥವುಗಳಿಗೆ ಬಳಸಿಕೊಂಡು ಆ ಮೇಲೆ ವೇಶ್ಯಾ ದಂಧೆಯ ಕೂಪಕ್ಕೆ ತಳ್ಳಲಾಗುತ್ತಿತ್ತು. ಕೆಲ ಮಹಿಳೆಯರನ್ನು ಹೊತ್ತೊಯ್ದು ಯಾರೋ ತೃಷೆ ಹೊಂದಿರೋ ಹಣವಂಗತರಿಗೆ ಮಾರಿ ಬಿಡುತ್ತಿದ್ದರು. ಇಂದಿಗೂ ಕೂಡಾ ಈ ದಂಧೆ ನಾನಾ ರೂಪಗಳಲ್ಲಿ ಚಾಲ್ತಿಯಲ್ಲಿದೆ. ಇದಕ್ಕೆ ಮೊನ್ನೆ ದಿನ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಸಿಕ್ಕ ಬಾಂಗ್ಲಾ ಮೂಲದ ಮಹಿಳೆಯರಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಆದರೂ ಕೂಡಾ ಈ ದುಷ್ಟ ದಂಧೆಯನ್ನು ಬೇರು ಸಮೇತ ಕಿತ್ತೆಸೆಯಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಈ ಮಾಫಿಯಾಗೆ ಪ್ರಭಾವಿಗಳ ನೆರಳಿದೆ. ಅದೆಲ್ಲವನ್ನೂ ಮಟ್ಟ ಹಾಕದಿದ್ದರೆ, ಕಾನೂನು ಕಟ್ಟಳೆಗಳಿಗಾಗಲಿ, ಮನುಷ್ಯತ್ವಕ್ಕಾಗಲಿ ಯಾವ ಕಿಮ್ಮತ್ತೂ ಉಳಿಯುವುದಿಲ್ಲ.