ಡಾಲಿ ಧನಂಜಯ್ ನಾಯಕನಾಗಿ ನಟಿಸಿರುವ `ಹೊಯ್ಸಳ’ ಚಿತ್ರ ನಾನಾ ವಿಧಗಳಲ್ಲಿ ಆರಂಭದಿಂದಲೂ ಸುದ್ದಿ ಮಾಡುತ್ತಿದೆ. ಅಷ್ಟಕ್ಕೂ ಹೊಯ್ಸಳ ಎಂಬ ಶೀರ್ಷಿಕೆಯಲ್ಲಿಯೇ ಒಂದು ತೆರನಾದ ಖದರ್ ಇದೆ. ಅದಕ್ಕೆ ತಕ್ಕುದಾದಂಥಾ ಪಾತ್ರದಲ್ಲಿ ಡಾಲಿ ಕಾಣಿಸಿಕೊಂಡಿರುವ ವಿಚಾರ ಈಗಾಗಲೇ ಟ್ರೈಲರ್ ಮೂಲಕ ಜಾಹೀರಾಗಿದೆ. ಯಾವ ನಟರ ಪಾಲಿಗಾದರೂ ಇಪ್ಪತೈದನೇ ಚಿತ್ರವೆಂಬುದು ಮಹತ್ವದ ಘಟ್ಟ. ಹೊಯ್ಸಳ ಮೂಲಕ ಡಾಲಿ ಧನಂಜಯ್ ಆ ಹಂತ ತಲುಪಿಕೊಂಡಿರುತ್ತಾರೆ. ಇಪ್ಪತೈದನೇ ಚಿತ್ರವೆಂದ ಮೇಲೆ ಒಂದಷ್ಟು ವಿಶೇಷತೆಗಳಿರಲೇಬೇಕೆಂದು ಪ್ರೇಕ್ಷಕರು ನಿರೀಕ್ಷಿಸುತ್ತಾರಲ್ಲಾ? ಅದನ್ನೆಲ್ಲ ಗಮನದಲ್ಲಿಟ್ಟುಕೊಂಡೇ ನಿರ್ದೇಶಕರು ಈ ಸಿನಿಮಾವನ್ನು ಪೊರೆದಿದ್ದಾರೆ. ಇದೀಗ ಹೊಯ್ಸಳ ಚಿತ್ರದ ಭಾವಪರವಶಗೊಳಿಸುವ ಹಾಡೊಂದು ಬಿಡುಗಡೆಗೊಂಡಿದೆ!
ಹೊಯ್ಸಳ ವಿಜಯ್ ಎನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಆಕ್ಷನ್, ರೊಮ್ಯಾನ್ಸ್ ಸೇರಿದಂತೆ ಎಲ್ಲ ಗುಣಲಕ್ಷಣಗಳನ್ನು ಬೆರೆಸಿಯೇ ಅವರು ಈ ಸಿನಿಮಾವನ್ನು ರೂಪಿಸಿದ್ದಾರೆ. ಇದೀಗ ಹೊರ ಬಂದಿರುವ ಹಾಡನ್ನು ನೋಡಿದವರಂತೂ ಹೊಯ್ಸಳನ ಮೇಲೆ ಮತ್ತಷ್ಟು ಆಕರ್ಷಿತರಾಗಿದ್ದಾರೆ. `ಅರೇ ಇದು ಎಂಥ ಭಾವನೆ, ಬರೀ ಸುಡುವಂಥ ಕಾಮನೆ’ ಎಂಬ ಈ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ಅದನ್ನು ಹರಿಚರಣ್ ಹಾಡಿದ್ದಾರೆ. ಬಹುಶಃ ಈ ವರ್ಷದ ಮೆಲೋಡಿಯಸ್ ಹಾಡಾಗಿ, ಖಂಡಿತವಾಗಿಯೂ ಇದು ದಾಖಲಾಗುತ್ತದೆ.
ವಿಶೇಷವಾಗಿ, ಈ ಹಾಡು ಭಾವನಾತ್ಮಕವಾಗಿದೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ವೆರೈಟಿ ಸಾಂಗುಗಳ ಭರಾಟೆಯಲ್ಲಿ ತಂಗಾಳಿ ತೀಡಿದಂಥಾ ಮೆಲೋಡಿಯಸ್ ಹಾಡುಗಳನ್ನು ಪ್ರೇಕ್ಷಕರು ಕಳೆದುಕೊಂಡಂತಿದ್ದರು. ಅಂಥಾದ್ದೊಂದು ಹಾಡಿನ ಧ್ಯಾನದಲ್ಲಿರುವವರೆಲ್ಲ ಅಕ್ಷರಶಃ ಖುಷಿಗೊಳ್ಳುವಂತೆ ಈ ಹಾಡು ಮೂಡಿ ಬಂದಿದೆ. ಅದರಲ್ಲಿಯೂ ಭೋಳೇ ಶೈಲಿಯ ಹಾಡುಗಳಿಗೆ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿರುವ ಭಟ್ಟರು ಮತ್ತೆ ಟ್ರ್ಯಾಕಿಗೆ ಮರಳಿದ್ದಾರೆ. ಭಾವನಾತ್ಮಕ ಸಾಲುಗಳ ಮೂಲಕ ಕೇಳುಗರೆಲ್ಲರ ಮನಸೋಕಿದ್ದಾರೆ. ಈ ಹಾಡಿನಲ್ಲಿ ಡಾಲಿ ದಂನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇನ್ನೇನು ತೆರೆಗಾಣುವ ಸನ್ನಾಹದಲ್ಲಿರುವ ಹೊಯ್ಸಳನಿಗೆ ಈ ಹಾಡು ಮತ್ತಷ್ಟು ಆವೇಗ ತಂದುಕೊಟ್ಟಿರೋದಂತೂ ಸತ್ಯ!