ನಮ್ಮ ದೇಶಕ್ಕೆ ಅತೀ ಶೀತ ಮತ್ತು ಅತ್ಯುನ್ನತ ಉಷ್ಣ ವಾತಾವರಣ ಅಪರಿಚಿತವೇನಲ್ಲ. ಅತ್ತ ಜಮ್ಮು ಕಾಶ್ಮೀರದಲ್ಲಿ ಚಳಿ ನಡುಗಿಸಿದ್ರೆ, ಇತ್ತ ಮರುಭೂಮಿ ಪ್ರದೇಶಗಳಲ್ಲಿ, ಬಯಲು ಸೀಮೆಗಳಲ್ಲಿ ಬೆವರಿನ ಧಾರೆ ಹರಿಸೋ ಉಷ್ಣ ವಾತಾವರಣವಿರುತ್ತೆ. ನಮ್ಮ ಪಾಲಿಗೆ ಅತೀ ಹೆಚ್ಚು ತಾಪಮಾನ ಅಂದ್ರೆ ಎಷ್ಟಿರಬಹುದು? ಅದು ನಲವತ್ತು ಡಿಗ್ರಿ ಸೆಲ್ಷಿಯಸ್ ಸಮೀಪ ಹೋದಾಗಲೇ ಜೀವ ಬೇಯಲಾರಂಭಿಸುತ್ತೆ. ನಲವತ್ತೆರಡರ ಹೊಸ್ತಿಲು ತಲುಪಿದ್ರೆ ಮುಗಿದೆ ಹೋಯ್ತು.
ನಮ್ಮ ಪಾಲಿನ ಗರಿಷ್ಠ ತಾಪಮಾನ ಅಂದ್ರೆ ಅದು. ಹಾಗಂತ ಅದೇನು ಕಡಿಮೆಯದ್ದಲ್ಲ. ಅದರ ಬೇಗುದಿ ಎಂಥಾದೆಂಬುದು ಅಂಥಾ ಪ್ರದೆಶಗಳಲ್ಲಿ ವಾಸಿಸೋ ಜನರಿಗೆ ಮಾತ್ರವೇ ಗೊತ್ತಿರಲು ಸಾಧ್ಯ. ಹಾಗಿರೋವಾಗ ನಾವ್ಯಾರೂ ನೂರರ ಗಡಿ ದಾಟಿದ ತಾಪಮಾನವನ್ನ ಊಹಿಸಲೂ ಸಾಧ್ಯವಿಲ್ಲ. ಆದ್ರೆ ಅಷ್ಟು ಪ್ರಮಾಣದ ರಣಭೀಕರ ತಾಪಮಾನದಿಂದ ಭಣಗುಡುವ ಪ್ರದೇಶವೊಂದು ಈ ಭೂಮಂಡಲದಲ್ಲಿದೆ. ಅಲ್ಲಿನ ಕನಿಷ್ಠ ತಾಪಮಾನವೇ ತೊಂಬತ್ತೆಂಟು ಡಿಗ್ರಿ ಸೆಲ್ಷಿಯಸ್ನಷ್ಟಿರುತ್ತೆ.
ಅಂಥಾ ಭಯಾನಕ ತಾಪಮಾನ ಹೊಂದಿರೋ ಜಗತ್ತಿನ ಏಕೈಕ ಪ್ರದೇಶ ಇಥಿಯೋಫಿಯಾದಲ್ಲಿದೆ. ಅಲ್ಲಿನ ದಲ್ಲಾಲ್ ಅನ್ನೋ ಪ್ರದೇಶದಲ್ಲಿ ವರ್ಷದ ಬಹು ಭಾಗ ನೂರು ಡಿಗ್ರಿಯಾಚೆಗೆ ಕೊತಗುಡುತ್ತಿರುತ್ತೆ. ನಿಮಗೆ ಅಚ್ಚರಿ ಅನಿಸಬಹುದೇನೋ… ಇಡೀ ಜಗತ್ತು ಚಳಿಯಿಂದ ನಡುಗೋ ಕಾಲದಲ್ಲಿಯೂ ಅಲ್ಲಿಯ ತಾಪಮಾನ ಯಥಾಪ್ರಕಾರವಿರುತ್ತೆ. ಆ ಪ್ರದೇಶದಲ್ಲಿ ಚಳಿಯೇ ಸೆಖೆಯಾಗಿ ಬೆವರಾಡೋವಷ್ಟು ತಾಪಮಾನವಿರುತ್ತೆ. ಈ ಕಾರಣದಿಂದಲೇ ಅದು ಜಗತ್ತಿನ ಹಾಟೆಸ್ಟ್ ಸ್ಪಾಟ್ ಆಗಿ ಗುರುತಿಸಿಕೊಂಡಿದೆ.