ನಾವು ಭಾರತದಲ್ಲಿ ಮಾತ್ರವೇ ಭೂತ ಪ್ರೇತಗಳ ಬಾಧೆ ಇರುತ್ತೆ ಅಂದುಕೊಂಡಿರುತ್ತೇವೆ. ಅದಕ್ಕೆ ಕಾರಣವಾಗಿರೋದು ನಮ್ಮ ಸಮಾಜದಲ್ಲಿ ಶತ ಶತಮಾನಗಳಿಂದಲೂ ಹಾಸುಹೊಕ್ಕಾಗಿರೋ ಕೆಲವಾರು ನಂಬಿಕೆಗಳು. ಆದರೆ ಯಾವ ದೇಶಗಳನ್ನೂ ಕೂಡಾ ಈ ಭಯ ಆವರಿಸಿಕೊಳ್ಳದೆ ಬಿಟ್ಟಿಲ್ಲ. ಬಹುತೇಕ ಎಲ್ಲ ಪ್ರದೇಶಗಳಲ್ಲಿಯೂ ಕೂಡಾ ಭೂತ ಪ್ರೇತಗಳ ಭಯ ತೀವ್ರವಾಗಿದೆ. ಅಲ್ಲೆಲ್ಲ ಭೂತ ಚೇಷ್ಟೆಯ ಪ್ರದೇಶಗಳು, ಅದರ ಸುತ್ತ ಬೆಚ್ಚಿ ಬೀಳಿಸುವಂಥಾ ದೃಷ್ಟಾಂತಗಳೂ ಹೇರಳವಾಗಿದ್ದಾವೆ. ಕೆನಡಾದಲ್ಲಿರೋ ಸ್ಟೀಮಿಂಗ್ ಟನಲ್ ಅದಕ್ಕೊಂದು ತಾಜಾ ಉದಾಹರಣೆ.
ಸ್ಟೀಮಿಂಗ್ ಟನಲ್ ಇರೋದು ಕೆನಡಾದ ಒಂಟಾರಿಯೋ ಪ್ರದೇಶದಲ್ಲಿ. ಅಲ್ಲಿಂದ ವಾಯುವ್ಯ ದಿಕ್ಕಿನಲ್ಲಿಯೇ ವಿಶ್ವ ಪ್ರಸಿದ್ಧ ನಯಾಗರ ಜಲಪಾತವಿದೆ. ಈ ಟನಲ್ ಸುತ್ತ ಹತ್ತಾರು ಕಥೆಗಳೇ ಇದ್ದಾವೆ. ಅವೆಲ್ಲವೂ ಬೆಚ್ಚಿ ಬೀಳಿಸುವಂಥವುಗಳು. ಅದು ಸುಣ್ಣದ ಕಲ್ಲುಗಳಿಂದ ನಿರ್ಮಿಸಲಾಗಿರೋ ಪುರಾತನ ಸುರಂಗ. ಅದರ ಮೇಲೆ ರೂಲು ಹಳಿಗಳಿದ್ದಾವೆ. ಅದರೊಳಗೆ ರಾತ್ರಿ ಹೊತ್ತು ಹೋಗಿ ಕ್ಯಾಂಡಲ್ಲು ಹಚ್ಚಿದರೆ ಬೆಂಕಿಯ ಕೆನ್ನಾಲಿಗೆಗೆ ಬಿದ್ದ ಹುಡುಗಿಯೊಬ್ಬಳ ಆಕ್ರಂದನ ಸ್ಪಷ್ಟವಾಗಿಯೇ ಕೇಳಿಸುತ್ತದೆಯಂತೆ.
ಅಲ್ಲಿ ಅಂಥಾ ಹಾರರ್ ಶಬ್ಧ ಕೇಳಿಸೋದರ ಹಿಂದೆಯೂ ಒಂದು ಕಥೆಯಿದೆ. ಅದೆಷ್ಟೋ ವರ್ಷಗಳ ಹಿಂದೆ ಪಾಪಿ ತಂದೆಯೊಬ್ಬ ತನ್ನ ಮಗಳನ್ನೇ ಆ ಸುರಂಗದೊಳಗೆ ಎಳೆದೊಯ್ದು ಅತ್ಯಾಚಾರ ಮಾಡಿದ್ದನಂತೆ. ನಂತರ ಆಕೆಯನ್ನು ಕೊಂದು ಅಲ್ಲಿಯೇ ಸುಟ್ಟು ಹಾಕಿದ್ದನಂತೆ. ಹಾಗೆ ದಾರುಣವಾಗಿ ಸತ್ತ ಆ ಹುಡುಗಿಯ ಆತ್ಮವೇ ಹಾಗೆ ಚೀರಾಡುತ್ತದೆ ಅಂತ ಜನ ನಂಬಿದ್ದಾರೆ. ಈಗಲೂ ಭಯ ಪಟ್ಟುಕೊಂಡೇ ಒಂದಷ್ಟು ಮಂದಿ ರಾತ್ರಿ ಹೊತ್ತು ಹೋಗಿ ಕ್ಯಾಂಡಲ್ಲು ಹಚ್ಚಿದಾಗಲೂ ಛೀತ್ಕಾರ ಕೇಳಿಸುತ್ತದೆಯಂತೆ. ಉಳಿದಂತೆ ರಾತ್ರಿ ಹೊತ್ತಿನಲ್ಲಿ ಆ ದಿಕ್ಕಿನಿಂದ ಭಯಾನಕ ಶಬ್ಧಗಳು ಕೇಳಿಸುತ್ತವೆಯಂತೆ.