ಐಸ್ಕ್ರೀಮ್ ಎಂದಾಕ್ಷಣ ಬಾಯಲ್ಲಿ ನೀರೂರಿಸಿಕೊಳ್ಳದಿರುವವರೇ ವಿರಳ. ಮಕ್ಕಳಿಂದ ಮೊದಲ್ಗೊಂಡು ಮುದುಕರವರೆಗೂ ಐಸ್ ಕ್ರೀಂ (ice cream) ಅಭಿಮಾನಿಗಳಿದ್ದಾರೆ. ಈಗಂತೂ ನಾನಾ ವೆರೈಟಿಗಳ ಐಸ್ ಕ್ರೀಂಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಒಂದು ಫ್ಲೇವರ್ ಇಷ್ಟವಿಲ್ಲದಿದ್ದರೆ ನೂರಾರು ಫ್ಲೇವರುಗಳು ನಿಮಗಾಗಿ ಕಾದು ಕೂತಿರುತ್ತವೆ. ಅದರಲ್ಲಿ ಒಂದಷ್ಟು ಫ್ಲೇವರುಗಳು ಇಷ್ಟವಿಲ್ಲ ಅನ್ನುವವರು ಸಿಗಬಹುದು. ಆದರೆ ಸಾರಾಸಗಟಾಗಿ ಐಸ್ ಕ್ರೀಮನ್ನೇ ಒಲ್ಲೆ ಅನ್ನುವರು ಸಿಗೋದು ಅಪರೂಪ. ಇಂಥಾದ್ದೊಂದು ಸಾರ್ವಕಾಲಿಕ ಫೇವರಿಟ್ ತಿನಿಸು ಹುಟ್ಟಿಕೊಂಡಿದ್ದು ಹೇಗೆ? ಇಂಥಾ ಕಲ್ಪನೆ ಮೊದಲು ಮೂಡಿಕೊಂಡಿದ್ದು ಯಾವ ಕಾಲಮಾನದಿಂದ ಅನ್ನೋ ಬೆಚ್ಚಗಿನ ಆಲೋಚನೆಗೆ ತಣ್ಣಗಿನ ಐಸ್ಕ್ರೀಮು ಕಿಚ್ಚು ಹಚ್ಚುತ್ತೆ.
ಈ ನಿಟ್ಟಿನಲ್ಲಿ ಹುಡುಕಾಡಿದರೆ ಇಂಥಾದ್ದೇ ಕಾಲಮಾನದಲ್ಲಿ ಐಸ್ ಕ್ರೀಂ ಆವಿಷ್ಕರಿಸಲ್ಪಟ್ಟಿತು ಅಂತ ನಿಖರವಾಗಿ ಹೇಳುವಂಥಾ ಅಂಶಗಳು ಪತ್ತೆಯಾಗೋದಿಲ್ಲ. ಯಾಕಂದ್ರೆ, ಅದರ ಹುಟ್ಟು ಮನುಷ್ಯನ ರೂಪಾಂತರಗಳಷ್ಟೇ ಸಂಕೀರ್ಣವಾಗಿದೆ. ನಾನಾ ಬಗೆಯಲ್ಲಿ ಟ್ರೈ ಮಾಡುತ್ತಾ, ಹಲವಾರು ಕಾಲಮಾನಗಳಲ್ಲಿ ಹೈ ಫೈ ಜನರ ನಾಲಗೆಗಳನ್ನು ತಣ್ಣಗಾಗಿಸುತ್ತಾ ರುಚಿ ಹತ್ತಿಸಿದ ಐಸ್ ಕ್ರೀಮಿಗೆ ಶತಮಾನಗಳಷ್ಟು ಹಿಂದಿನ ಐತಿಹ್ಯವಿದೆ!
ಅದರ ಜಾಡು ಕ್ರಿಸ್ತಪೂರ್ವ 200ನೇ ಶತಮಾನಕ್ಕೆ ಕೊಂಡೊಯ್ದು ನಿಲ್ಲಿಸುತ್ತೆ. ಆಹಾರಪ್ರಿಯರ ದೇಶವಾದ ಚೀನಾದಲ್ಲಿಯೇ ಅದರ ಮೂಲ ಬೇರುಗಳೂ ಪತ್ತೆಯಾಗುತ್ತವೆ. ಆ ಕಾಲಮಾನದಲ್ಲಿ ಮೊದಲು ಐಸ್ ಕ್ರೀಂನ ಕಲ್ಪನೆ ಒಂದು ಮಟ್ಟಿಗೆ ವಾಸ್ತವ ರೂಪಕ್ಕಿಳಿಯಿತು ಅನ್ನಲಾಗುತ್ತೆ. ಹಾಲು ಮತ್ತು ಅಕ್ಕಿಯನ್ನು ಒಟ್ಟಿಗೆ ಬೆರೆಸಿ ಅದನ್ನು ಹಿಮದಲ್ಲಿ ಪ್ಯಾಕ್ ಮಾಡೋ ಮೂಲಕ ಮೊದಲ ಐಸ್ ಕ್ರೀಂ ಆವಿಷ್ಕರಿಸಲಾಗಿತ್ತಂತೆ. ಇನ್ನುಳಿದಂತೆ ರೋಮನ್ ರಾಜರುಗಳಿಗೆ ತಾಜಾ ಐಸ್ ಅನ್ನು ಇಂದಿನ ಐಸ್ ಕ್ರೀಮಿನಂತೆಯೇ ಮೆಲ್ಲುವ ಶೋಕಿ ಇತ್ತು. ಅದಕ್ಕಾಗಿ ಹಿಮ ಗಿರಿಗಳ ನೆತ್ತಿಗೆ ಗುಲಾಮರನ್ನು ಕಳಿಸಿ ತಾಜಾ ಐಸ್ಗಳನ್ನು ತರಿಸುತ್ತಿದ್ದರಂತೆ.
ಮಾರ್ಕೋ ಪೋಲೋ ಎಂಬಾತ ಚೀನಾ ಪ್ರವಾಸದ ವೇಳೆ ಐಸ್ ಕ್ರೀಮ್ ನ ಸವಿಯುಂಡು ಅದನ್ನು ಇಟಲಿಗೆ ಪರಿಚಯಿಸಿದ ಎಂಬ ನಂಬಿಕೆಯೂ ಇದೆ. ಇನ್ನು ಹತ್ತೊಂಬತ್ತನೇ ಶತನಾನದಲ್ಲಿ ಅಮೆರಿಕಾದ ಬೀದಿಗಳಲ್ಲಿ ಬಾನುವಾರದಂದು ಐಸ್ ಕ್ರೀಂ ಸೋಡಾಗಳನ್ನು ಮಾರಾಟ ಮಾಡಲಾಗುತ್ತಿತ್ತಂತೆ. ಹಾಗೆ ಕಾಲದಿಂದ ಕಾಲಕ್ಕೆ ಸಾಗಿ ಬಂದ ಐಸ್ ಕ್ರೀಮ್ ಇಂದು ಪಕ್ಕಾ ಆಧುನಿಕ ಅವತಾರದಲ್ಲಿ ಎಲ್ಲೆಡೆ ಪ್ರಚಲಿತದಲ್ಲಿದೆ. ಬಹುಶಃ ಅದೀಗ ಸ್ವಾದ ಹರಡದ ಭೂಭಾಗಗಳೇ ಪ್ರಪಂಚದಲ್ಲಿ ಸಿಗಲಿಕ್ಕಿಲ್ಲವೇನೋ…