ಶೋಧ ನ್ಯೂಸ್ ಡೆಸ್ಕ್: ದೇಶಾದ್ಯಂತ ಅಬ್ಬರಿಸಿದ್ದ ಮುಂಗಾರು ಮಳೆ, ಹಿಂಗಾರು ಆರಂಭವಾಗುತ್ತಲೇ ತುಸು ಶಾಮತವಾದಂತಿತ್ತು. ಮೊದಲ ಮಳೆಯಿಂದಲೇ ಗರಿಬಿಚ್ಚಿಕೊಂಡಿದ್ದ ಅನಾಹುತಗಳಿಂದಾಗಿ ತತ್ತರಿಸಿ ಹೋಗಿದ್ದ ದೇಶವಾಸಿಗಳು ಇದೀಗ ಕೊಂಚ ನಿರಾಳವಾದಂತಿದ್ದರು. ಆದರೆ ವರುಣ ಅದೇಕೋ ಆ ನೆಮ್ಮದಿಯನ್ನು ಮತ್ತೆ ಕಸಿದುಕೊಳ್ಳುವ ಶಪಥ ಮಾಡಿದಂತಿದೆ. ಇದರ ಭಾಗವಾಗಿಯೇ ದೇಶಾದ್ಯಂತ ಅಲ್ಲಲ್ಲಿ ಮತ್ತೆ ಮಳೆ ಆರ್ಭಟಿಸುತ್ತಾ, ಜನ ಜೀವನವನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಈ ಮುಂಗಾರು ಹಿಮಾಚಲಪ್ರದೇಶಕ್ಕೆ ಆರಂಭದಲ್ಲಿಯೇ ಶಾಕ್ ಕೊಟ್ಟಿತ್ತು. ಅದರಿಂದ ಜನ ಚೇತರಿಸಿಕೊಳ್ಳುವ ಮುನ್ನವೇ ಇದೀಗ ಮತ್ತೆ ಅಲ್ಲಿ ಅನಾಹುತಗಳ ಸರಣಿ ಶುರುವಾಗಿದೆ.
ಅದರಲ್ಲಿಯೂ ಪ್ರವಾಸಿಗರನ್ನು ಸದಾ ಸೆಳೆಯುವ ಸುಂದರ ತಾಣವಾದ ಕುಲುವಿನಲ್ಲೀಗ ಭೂ ಕುಸಿತದ ಪ್ರಮಾಣ ಅತಿಯಾಗುತ್ತಿದೆ. ಅಲ್ಲಿ ಕೊಡಗನ್ನೇ ಮೀರಿಸುವ ಪ್ರಮಾಣದಲ್ಲಿ ವ್ಯಾಪಕವಾಗಿ ಭೂ ಕುಸಿತ ಸಂಭವಿಸುತ್ತಿವೆ. ಇದರಿಂದಾಗಿ ಇಲ್ಲಿನ ಪ್ರಮುಖ ಸಂಪರ್ಕ ರಸ್ತೆಗಳು ಕುರುಹೂ ಇಲ್ಲದಂತೆ ಕುಸಿತ ಕಂಡಿವೆ. ಅದೆಷ್ಟೋ ಮನೆಗಳ ಮೇಲೆ ಗುಡ್ಡ ಕುಸಿದಿದೆ. ಮತ್ತಷ್ಟು ಮನೆಗಳು ಧರಾಶಾಯಿಯಾಗಿವೆ. ಇದೆಲ್ಲದರಿಂದಾಗಿ, ದಿನದೊಪ್ಪತ್ತಿನಲ್ಲಿಯೇ ಕುಲು ಪ್ರದೇಶದಲ್ಲಿ ಭೂಕುಸಿತಕ್ಕೆ ಇಪ್ಪತ್ತೇಳಕ್ಕೂ ಅಧಿಕ ಜನ ಬಲಿಯಾಗಿದ್ದಾರೆ.
ಹಿಮಾಚಲ ಪ್ರದೇಶದ ವಿಪತ್ತು ನಿರ್ವಹಣಾ ತಂಡ ಕುಲುವಿನ ಚಂಬಾ ಪ್ರದೇಶದಲ್ಲಿ ಕುಸಿದ ರಸ್ತೆಗಳನ್ನು ನವೀಕರಣ ಗೊಳಿಸಲು, ಕುಸಿತ ಕಂಡ ಮನೆಗಳ ಅಡಿಯಿಂದ ಜೀವಗಳನ್ನು ಕಾಪಾಡಲು ಹರಸಾಹಸ ಪಡುತ್ತಿದೆ. ನೂರಾರು ಮಂದಿ ಏಕ ಕಾಲದಲ್ಲಿಯೇ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡರೂ ಕೂಡಾ ಯಾವ ಪ್ರಯೋಜನವೂ ಆಗುತ್ತಿಲ್ಲ. ಒಂದು ಕಡೆಯಲ್ಲಿ ಕಾರ್ಯಾಚರಣೆ ಮುಗಿಯುವ ಮುನ್ನವೇ ಮತ್ತೊಂದೆಡೆಯಲ್ಲಿ ಅನಾಹುತಗಳು ಸಂಭವಿಸುತ್ತಿವೆ. ವಿಪತ್ತು ನಿರ್ವಹಣಾ ತಂಡ ಸಾಮಾಜಹಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವೀಡಿಯೋಗಳೇ ಹಿಮಾಚಲ ಪ್ರದೇಶದ ಇಂದಿನ ಸ್ಥಿತಿಯನ್ನು ಜಾಹೀರು ಮಾಡುವಂತಿದೆ.