ರಾಜಕಾರಣವೆಂಬದೀಗ ಹೊಲಸೆದ್ದು ನಾರುವ ಗಟಾರಕ್ಕಿಂತಲೂ ಕಡೆಯಾಗಿಬಿಟ್ಟಿದೆ. ಹಾಗಂತ ಸಾರಾಸಗಟಾಗಿ ಷರಾ ಬರೆಯಲು ಹಿಂದೆ ಮುಂದೆ ನೋಡುವಂತೆ ಮಾಡಬಲ್ಲ ಕೆಲವೇ ಕೆಲ ವ್ಯಕ್ತಿತ್ವಗಳು ಆ ವಲಯದಲ್ಲಿರೋದು ನಿಜ. ಅದರಾಚೆಗೆ ಪಿತಗುಡುತ್ತಿರುವ ಪ್ರಭೃತ್ತಿಗಳು ಜನಸಾಮಾನ್ಯರ ಪಾಲಿಗೆ ಕಂಟಕವಾಗಿರೋದು ಕಣ್ಣೆದುರಿನ ವಾಸ್ತವ. ರಾಜಕಾರಣ ಅಂದೇಟಿಗೆ ಭ್ರಷಾಚಾರ ಕಣ್ಣೆದುರು ನಿಲ್ಲುತ್ತದೆ. ಆದರೆ, ಕೆಲ ರಾಜಕಾರಣಿಗಳ ವಿಕೃತಿಗಳಿವೆಯಲ್ಲಾ? ಅದು ನಾಗರಿಕ ಸಮಾಜದ ಊಹೆಗೆ ನಿಲುಕದ ಕರಾಳ ಸತ್ಯ. ಇದೀಗ ಹಾಸನ ಸೀಮೆಯ ತುಂಬ ಇಟ್ಟಾಡುತ್ತಿರುವ ವಿಕೃತ ಯುವ ರಾಜಕಾರಣಿಯೊಬ್ಬನ ಕಾಮಪುರಾಣ ಮೇಲಕ್ಕಂಡ ಮಾತಿಗೆ ಸ್ಪಷ್ಟ ಸಾಕ್ಷಿಯಂತಿದೆ. ಕಂಡೋರ ಮನೆ ಹೆಣ್ಣುಮಕ್ಕಳನ್ನು ತನ್ನ ತೆವಲಿಗೆ ಬಳಸಿಕೊಂಡ ಈ ಗಳಗಂಟೆ ಪುರಾಣ ನಾಗರಿಕ ಸಮುದಾಯವನ್ನೇ ತಲೆತಗ್ಗಿಸುವಂತೆ ಮಾಡಿಬಿಟ್ಟಿದೆ. ಕಾಮದ ಕೊಚ್ಚೆಯಲ್ಲಿ ಉರುಳಾಡುವ ಇಂಥಾ ಹೇಸಿಗೆ ಹುಳಗಳ ಹುಟ್ಟಡಗಲೆಂಬ ಆಶಯದೊಂದಿಗೆ, ಒಟ್ಟಾರೆ ಗಲೀಜು ವೃತ್ತಾಂತದ ಒಳ ಹೊರಗಿನ ವಿಸೃತ ವರದಿ ಇಲ್ಲಿದೆ…
-ಸಂತೋಷ್ ಬಾಗಿಲಗದ್ದೆ
ಇನ್ನೇನು ಲೋಕಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಘಳಿಗೆಯಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಬಿರುಸಿನ ವಾತಾವರಣ ಮನೆಮಾಡಿದೆ. ಹೆಚ್ಚೇನಲ್ಲ; ದಿನವೊಂದರ ಹಿಂದೆ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅಂಥಾದ್ದೇ ಛಾಯೆಯಿತ್ತು. ಸೋಮವಾರದ ಮಧ್ಯಾಹ್ನ ಮಗುಚಿಕೊಳ್ಳುವ ವೇಳೆಯಲ್ಲಿ ಹಬ್ಬಿಕೊಂಡಿದ್ದೊಂದು ಸುದ್ದಿ ಮತ್ತು ಅದರ ಹಿಂದೆಯೇ ಕಣ್ಣೆದುರು ಪ್ರತ್ಯಕ್ಷವಾದ ಕಾಮಪುರಾಣವೊಂದು ಈ ಪ್ರತಿಷ್ಠಿತ ಕ್ಷೇತ್ರದ ಮಂದಿಯನ್ನೆಲ್ಲ ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ಮೂಲಕ ಹಾಸನ ಸೀಮೆಯಲ್ಲಿ ಗತ್ತು ಗೈರತ್ತು ಹೊಂದಿದ್ದ ಕುಟುಂಬದ ಕುಡಿಯೊಂದರ ಗಳಗಂಟೆ ಪುರಾಣವೀಗ ಹಾಸನದ ಹಾದಿಬೀದಿಗಳಲ್ಲಿ ಪಿತಗುಡಲಾರಂಭಿಸಿದೆ. ಈ ಕಾಮುಕ ನೂರಾರು ಹೆಣ್ಣುಮಕ್ಕಳನ್ನು ತನ್ನ ತೆವಲಿಗೆ ಬಳಸಿಕೊಂಡ ಪರಿ ಕಂಡು ಸೂಕ್ಷ್ಮವಂತರೆಲ್ಲ ಕುದ್ದು ಹೋಗಿದ್ದಾರೆ. ಯಾಕೆಂದರೆ, ಇದು ವರ್ಷದ ಹಿಂದೆ ಚಲ್ಲಣ ಕಳಚಿ ಪ್ರದರ್ಶನ ನೀಡಿದ್ದ ಬೆಳಗಾವಿಯ ಮುದಿ ಸಾಹುಕಾರನ ರಾಸಲೀಲೆಯನ್ನೇ ಮೀರಿಸುವ ಗಲೀಜು ವೃತ್ತಾಂತ. ಇದು ಈ ನಾಡಿನ ಮಟ್ಟಿಗೆ ಅತೀ ದೊಡ್ಡ ವಿಕೃತ ಲೈಂಗಿಕ ಹಗರಣವೆಂಬುದರಲ್ಲಿ ಯಾವ ಸಂಶಯವೂ ಇಲ್ಲ!
ನೆನ್ನೆದಿನ ಸಂಜೆಯ ಹೊತ್ತಿಗೆಲ್ಲ ಈ ಯುವ ನಾಯಕನ ರಾಸಲೀಲೆಯ ವೀಡಿಯೋಗಳಿರುವ ಪೆನ್ ಡ್ರೈವ್ ಗಳು ಹಾಸನದ ತುಂಬೆಲ್ಲ ಇಟ್ಟಾಡಿಬಿಟ್ಟಿವೆ. ಯಾವ ಕುಟುಂಬದ ಮೇಲೆ ಗೌರವದಿಂದ ಓಟು ಹಾಕಿದ್ದರೋ, ಯಾವ ಎಳೆ ನಿಂಬೇಕಾಯಿಯನ್ನು ಯವನಾಯಕನನ್ನಾಗಿ ರೂಪಿಸಿದ್ದರೋ ಆ ಪಾಪಿಯ ಭಯಾನಕ ಮುಖ ಕಂಡು ಹಾಸನದ ಮಂದಿ ಬೆಚ್ಚಿಬಿದ್ದಿದ್ದಾರೆ. ಈ ಅಯೋಗ್ಯ ಗೆದ್ದ ಮೊದಲ ಅವಧಿಯಲ್ಲಿ ಕೊಂಚ ತಲೆ ನೆಟ್ಟಗಿರುವವನಂತೆ ಮಾತಾಡಲಾರಂಭಿಸಿದ್ದ. ಹೊರಜಗತ್ತಿಗೆ ಘನತೆ, ಗಾಂಭೀರ್ಯವಿರುವ ವ್ಯಕ್ತಿತ್ವವಾಗಿ ಕಾಣಿಸಿಕೊಂಡಿದ್ದ. ಅದರ ಮರೆಯಲ್ಲಿ ಈತ ನಡೆಸಿದ್ದದ್ದು ಕಷ್ಟ ಹೇಳಿಕೊಂಡು ಬಂದ, ತನ್ನ ಪಕ್ಷಕ್ಕಾಗಿ ದುಡಿದ ಹೆಣ್ಣುಮಕ್ಕಳನ್ನು ಬೆತ್ತಲಾಗಿಸೋ ಹೀನ ಕಸುಬನ್ನಷ್ಟೇ. ಇದೀಗ ಅದೆಲ್ಲವೂ ಖುಲ್ಲಂಖುಲ್ಲಾ ಜಾಹೀರಾಗಿದೆ. ತನ್ನ ರಾಸಲೀಲೆ ಬಯಲಾಗೋ ಭಯದಲ್ಲಿ ಕಾನೂನಿನ ಮೂಲಕ ಬಚಾವಾಗಲು ನೋಡಿದ್ದ ಈತನೀಗ ಬೆತ್ತಲಾಗಿ ನಿಂತಿದ್ದಾನೆ!
ಡಿಸೆಂಬರಿನಲ್ಲಿಯೇ ಡೌಟು ಶುರು!
ಅಷ್ಟಕ್ಕೂ ಈಗ ಹಾಸನದ ಹಾದಿಬೀದಿಗಳಲ್ಲಿ ಹರಡಿಕೊಂಡಿರುವ ಈ ಕಾಮಪುರಾಣದ ಸುಳಿವು ಕಳೆದ ವರ್ಷದಂಚಿನಲ್ಲಿಯೇ ಸಿಕ್ಕಿಬಿಟ್ಟಿತ್ತು. ಈ ಯುವ ನಾಯಕನ ಕಾಮ ಪುರಾಣದ ಬಗ್ಗೆ ತಣ್ಣಗೆ ಒಂದಷ್ಟು ಗುಲ್ಲೆದ್ದುಬಿಟ್ಟಿತ್ತು. ಇದೇ ಹಂತದಲ್ಲಿ ಹೊಳೆನರಸೀಪುರ ಭಾಗದ ಬಿಜೆಪಿ ಮುಖಂಡ ಹಾಗೂ ವಕೀಲರೂ ಆಗಿರುವ ಒಬ್ಬರು ಪತ್ರವೊಂದರ ಮೂಲಕ ಸದರಿ ಯುವನಾಯಕನ ರಾಸಲೀಲೆಯ ಬಗ್ಗೆ ಬಿಜೆಪಿ ರಾಜ್ಯ ನಾಯಕರಿಗೆ ವಿಷಯ ಮುಟ್ಟಿಸುವ ಕೆಲಸ ಮಾಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದ ಆ ಬಿಜೆಪಿ ಮುಖಂಡ, ಯಾವ ಕಾರಣಕ್ಕೂ ಜೆಡಿಎಸ್ನೊಂದಿಗೆ ಮೈತ್ರಿ ಬೇಡ. ಒಂದು ವೇಳೆ ಮೈತ್ರಿ ಆದರೂ ಸಹ ಆ ಯುವ ರಾಜಕಾರಣಿಗೆ ಮಣೆ ಹಾಕಕೂಡದು. ಅದರಿಂದ ಬಿಜೆಪಿಗೇ ಭಾರೀ ಮುಜುಗರವಾಗಲಿದೆ. ಯಾಕೆಂದರೆ, ಆ ಯುವ ರಾಜಕಾರಣಿಯ ಎರಡು ಸಾವಿರ ಚಿಲ್ಲರೆ ರಾಸಲೀಲೆಯ ವೀಡಿಯೋಗಳಿದ್ದಾವೆ. ಅವು ಹೊರ ಬಂದರೆ ಮಾನ ಹೋಗೋದು ಗ್ಯಾರೆಂಟಿ ಎಂಬುದನ್ನು ಒತ್ತಿ ಹೇಳಿದ್ದರು.
ಒಂದು ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಆ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಒಂದಷ್ಟು ನಾಯಕರ ಜೊತೆಗೆ ಚರ್ಚಿಸಿ ಖಡಕ್ಕಾದ ತೀರ್ಮಾನ ಕೈಗೊಂಡಿದ್ದರೆ ಇಂಥಾ ಮುಜುಗರದ ವಾತಾವರಣ ಎದುರಿಸುವಂತಾಗುತ್ತಿರಲಿಲ್ಲ. ಅತ್ತ ಪತ್ರದ ಮೂಲಕ ಎಚ್ಚರಿಸಿದರೂ ರಾಜ್ಯಾಧ್ಯಕ್ಷ ಉಡಾಫೆ ತೋರಿಸಿದ್ದರು. ಕೊಂಚ ನಿರಾಳವಾದರೂ ಕೂಡಾ ಈ ಯುವ ಕಾಮಪಿಪಾಸುವಿಗೆ ಮಾನ ಹರಾಜಾಗುವ ಭಯ ಕಾಡಲಾಂಭಿಸಿತೇನೋ… ಅದರಿಂದಾಗಿಯೇ ಕಳೆದ ಡಿಸೆಂಬರಿನಲ್ಲಿ ತನಗೆ ಸಂಬಂಧಿಸಿದ ಯಾವುದೇ ಅಶ್ಲೀಲ ವೀಡಿಯೋಗಳಲ್ಲಿ ದೃಷ್ಯ ಮಾಧ್ಯಮವೂ ಸೇರಿದಂತೆ ಇತರೆ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದೆಂಬಂತೆ ಕೋರ್ಟಿನಿಂದ ಸ್ಟೇ ತಂದು ಬಿಟ್ಟಿದ್ದ. ಆದರೀಗ ಮತದಾನಕ್ಕೆ ಮೂರು ದಿನ ಬಾಕಿ ಇರುವಾಗಲೇ ಟೀವಿ ಚಾನೆಲ್ಲುಗಳು, ಸಾಮಾಜಿಕ ಜಾಲತಾಣಗಳ ಹಂಗಿಲ್ಲದೆ ಈತನ ಕಾಮಪುರಾಣ ಹಾಸನದ ತುಂಬೆಲ್ಲ ಪ್ರಸಾರವಾಗಿಬಿಟ್ಟಿದೆ!
ಅವನೋರ್ವ ವಿಕೃತ ಕಾಮಿ!
ಹೀಗೆ ಹಾಸನದ ಗಲ್ಲಿಗಳಲ್ಲಿ ಯುವ ನಾಯಕನ ರಾಸಲೀಲೆ ಪೆನ್ ಡ್ರೈವುಗಳ ಮೂಲಕ ಹಬ್ಬಿದ್ದರ ಹಿಂದೆ ಖಂಡಿತಾ ರಾಜಕಾರಣದ ಕಿಸುರಿರಬಹುದು. ಆದರೆ, ಇಲ್ಲಿ ಮುಖ್ಯವಾಗೋದು ಸಂಭಾವಿತನಂತೆ ಪೋಸು ಕೊಡುತ್ತಾ ಬಂದಿದ್ದ, ಪ್ರತಿಷ್ಠಿತ ಕುಟುಂಬದ ಕುಡಿಯ ಅಸಹ್ಯದ ಕಾಮುಕತನವಷ್ಟೇ. ಸದ್ಯದ ಮಟ್ಟಿಗೆ ಹಾಸನದ ಜನತೆಗೆಲ್ಲ ಆ ಯುವ ನಾಯಕ ಯಾರೆಂಬುದು ಸ್ಪಷ್ಟವಾಗಿದೆ. ಕಂಡೋರ ಮನೆ ಹೆಣ್ಣುಮಕ್ಕಳನ್ನು ಬೆತ್ತಲಾಗಿಸಿ ಆನಂದಿಸಿದ ಈತ ಅಕ್ಷರಶಃ ವಿಕೃತಕಾಮಿ ಎಂಬುದೂ ಕೂಡಾ ಪಕ್ಕಾ ಆಗಿಬಿಟ್ಟಿದೆ. ಹೀಗೆ ಹರಡಿಕೊಂಡಿರುವ ವೀಡಿಯೋಗಳು, ಸ್ಕ್ರೀನ್ ಶಾಟುಗಳೇ ಇವನೆಂಥಾ ಬರಗೆಟ್ಟ ಆಸಾಮಿ ಎಂಬುದಕ್ಕೆ ಸೂಕ್ತ ಉದಾಹರಣೆಯಂತಿವೆ. ಅಲ್ಲಿಗೆ ಹಾಸನ ಸೀಮೆಯಲ್ಲಷ್ಟೇ ಅಲ್ಲದೇ, ರಾಜಕೀಯವಾಗಿಯೂ ಪ್ರತಿಷ್ಠಿತ ಮನೆತನದ ಮಾನ ಒಂಚೂರೂ ಉಳಿಯದಂತೆ ಹರಾಜಾದಂತಾಗಿದೆ!
ಹೀಗೆ ಹಾಸನದ ತುಂಬೆಲ್ಲ ಪ್ರಜ್ವಲಿಸುತ್ತಿರುವ ಈ ಕಾಮಪುರಾಣದ ಸುತ್ತ ಅನೇಕ ರೂಮರುಗಳೂ ಹಬ್ಬಿಕೊಂಡಿವೆ. ಓರ್ವ ಜವಾಬ್ದಾರಿಯುತ ಜನನಾಯಕನಾಗಿ, ಯುವ ನಾಯಕನಾಗಿ ಈ ಮಾಡಿಕೊಂಡು ಬಂದಿದ್ದೆಲ್ಲವೂ ಇಂಥಾ ಮಣ್ಣು ತಿನ್ನೋ ಕೆಲಸಗಳನ್ನೇ. ಸಾಮಾನ್ಯವಾಗಿ ಎಲ್ಲ ಪಕ್ಷಗಳ ಪಡಸಾಲೆಯಲ್ಲಿಯೂ ಕಾರ್ಯಕರ್ತರು ಮುಖಂಡರುಗಳು ಅಡ್ಡಾಡುತ್ತಿರುತ್ತಾರೆ. ಅದರಲ್ಲಿ ಮಹಿಳೆಯರ ಸಂಖ್ಯೆಯೂ ದೊಡ್ಡದಿದೆ. ಹಾಗೆ ಪಕ್ಷಕ್ಕಾಗಿ ಶ್ರಮಿಸುವವರ ಮನೆಯ ಹೆಣ್ಣುಮಕ್ಕಳನ್ನು ಓರ್ವ ನಾಯಕ ಬೆತ್ತಲಾಗಿಸಿ ಸಂಭ್ರಮಿಸುತ್ತಾನೆಂದರೆ ಅದಕ್ಕಿಂತಲೂ ರಾಕ್ಷಸತನ ಬೇರ್ಯಾವುದಿದೆ? ಈ ಕಾಮಪುರಾಣದ ಇಂಚಿಂಚೂ ಕೂಡಾ ರಾಜಕೀಯದ ಪ್ರಭೆಯಲ್ಲಿ ಅಡ್ಡಾಡುವ ಹೆಣ್ಣುಮಕ್ಕಳಿಗೊಂದು ಪಾಠದಂತಿದೆ. ಯಾಕೆಂದರೆ, ಅವರಿರುವ ವಾತಾವರಣದಲ್ಲಿಯೂ ಇಂಥವನೊಬ್ಬ ವಿಕೃತ ಕಾಮಿಯಿದ್ದುಬಿಟ್ಟರೆ, ಏಕಾಏಕಿ ಅದೆಷ್ಟೋ ಜನರ ನೆಮ್ಮದಿಗೆ ಕೊಳ್ಳಿಯಿಟ್ಟಂತಾಗುತ್ತದೆ.
ಮಾನ ಕಳೆದುಕೊಂಡವರೆಷ್ಟು?
ಈವತ್ತಿಗೆ ದಿನವೊಂದು ಉರುಳಿಕೊಂಡರೂ ಯುವ ನಾಯಕನ ಕಾಮಪುರಾಣದ ಎಳೆ ಎಳೆಗಳು ಸಾಮಾಜಿಕ ಜಾಲತಾಣ, ವಾಟ್ಸಪ್ ಗಳ ಮೂಲಕ ಹರಿದಾಡುತ್ತಲೇ ಇದೆ. ಇದರಿಂದ ಆ ಯುವನಾಯಕನ ಮಾನವಷ್ಟೇ ಅಲ್ಲ; ಹಾಸನ ಭಾಗದ ನೂರಾರು ಮಹಿಳೆಯರ ನೆಮ್ಮದಿಗೂ ಬೆಂಕಿ ಬಿದ್ದಿದೆ. ವಿರೋಧ ಪಕ್ಷದ ಮಂದಿ ಈ ವೀಡಿಯೋ ಜಾಹೀರು ಮಾಡಿ, ಯುವ ರಾಜಕಾರಣಿಯನ್ನು ಬೆತ್ತಲುಯ ಮಾಡುವ ಭರದಲ್ಲಿ ಅದೆಷ್ಟೋ ಕುಟುಂಬಗಳ ನೆಮ್ಮದಿಗೂ ಬರೆ ಎಳೆದು ಬಿಟ್ಟಿವೆ. ಈಗ ಬಯಲಾಗಿರುವ ವೀಡಿಯೋಗಳಲ್ಲಿ ನೂರಾರು ಹೆಂಗಸರು ವೀಡಿಯೋ ಕಾಲ್ ಮೂಲಕ ಪ್ರಜ್ವಲ್ ಮುಂದೆ ಬೆತ್ತಲಾಗಿದ್ದಾರೆ. ಈ ಯುವ ನಾಯಕ ಉಡದಂತೆ ಹಣಕಿ ಹಾಕುತ್ತಾ ಅದೆಲ್ಲವನ್ನೂ ಸಂಭ್ರಮಿಸಿದ್ದಾನೆ.
ಹಾಗೆ ಯುವ ನಾಯಕನ ಮುಂದೆ ಬೆತ್ತಲಾದವರಲ್ಲಿ ಆತನ ಗೆಲುವಿಗಾಗಿ ಶ್ರಮಿಸಿದವರಿದ್ದಾರೆ. ಈ ಅಯೋಗ್ಯನ ಗೆಲುವಿಗಾಗಿ ಮಣ್ಣುಹೊತ್ತವರ ಮಡದಿಮಕ್ಕಳಿದ್ದರೂ ಅಚ್ಚರಿಯೇನಿಲ್ಲ. ಈ ಕಾಮುಕ ತೀರಾ ತನ್ನ ಮನೆಗೆಲಸದವರನ್ನೂ ಇಂಥಾ ವಿಕೃತಿಗೆ ಬಳಸಿಕೊಂಡಿದ್ದಾನೆಂಬ ರೂಮರುಗಳೂ ಇದ್ದಾವೆ ಇದರಲ್ಲಿ ಒಂದಷ್ಟು ಮಂದಿ ನಾನಾ ಕೆಲಸ ಕಾರ್ಯಗಳಿಗೋಸ್ಕರ ಈತನ ಸರಹದ್ದಿಗೆ ಬಂದವರಿದ್ದಾರೆ. ಅಂಥಾ ಎಲ್ಲ ಅನಿವಾರ್ಯತೆಗಳನ್ನೂ ಈ ಕಾಮಿಷ್ಠ ತನ್ನ ವಿಕೃತ ತೀಟೆಗೆ ಬಳಸಿಕೊಂಡಿರೋದು ಮಾತ್ರ ಅಕ್ಷಮ್ಯ. ದುರಂತವೆಂದರೆ, ಸಾವಿರಾರು ಸಂಖ್ಯೆಯ ವೀಡಿಯೋಗಳಲ್ಲಿ ಬೆತ್ತಲಾದ ಹೆಂಗಳೆಯರೆಲ್ಲ ಹಾಸನ ಸುತ್ತಮುತ್ತಲಿನವರೇ. ಅವರೆಲ್ಲರ ಗುರುತೂ ಕೂಡಾ ಸ್ಥಳೀಯರಿಗೆ ಸ್ಪಷ್ಟವಾಗಿಯೇ ಸಿಕ್ಕಿದೆ. ಅಂಥವರ ಮನೆಗಳೀಗ ಅಕ್ಷರಶಃ ರಣರಂಗವಾಗಿದೆ. ಹೆಣ್ಣುಮಕ್ಕಳನ್ನು ಬೆತ್ತಲುಗೊಳಿಸಿ ವೀಡಿಯೋ ಮಾಡಿಟ್ಟುಕೊಳ್ಳುವ ಈ ದುಷ್ಟನ ಹೀನ ಬುದ್ಧಿ ಸಾವಿರಾರು ಮಹಿಳೆಯರ ನೆಮ್ಮದಿಯನ್ನೇ ಕೊಂದು ಹಾಕಿದೆ!
ಮುಂಬೈ ಭೂಗತದ ಲಿಂಕು!
ಕಳೆದ ವರ್ಷದ ಕಡೇಯ ಭಾಗದಲ್ಲಿ ಈ ಯುವ ನಾಯಕನ ರಾಸಲೀಲೆಯ ಘಾಟು ಹೊಡೆಯಲಾರಂಭಿಸಿತ್ತಲ್ಲಾ? ಅದರ ಆಸುಪಾಸಲ್ಲಿಯೇ ನಾನಾ ಸರ್ಕಸ್ಸುಗಳು ನಡೆದಿವೆ. ಯಾವಾಗ ಈ ವೀಡಿಯೋಗಳೆಲ್ಲ ಯುವ ನಾಯಕನ ಮೊಬೈಲಿನಿಂದ ಬೇರೆಡೆಗೆ ಬಸಿಯಲ್ಪಟ್ಟಿತೋ, ಆ ಕ್ಷಣದಿಂದಲೇ ಪ್ರತೀ ವಿಡಿಯೋಗಳ ಸುತ್ತಲೂನ ಕೋಟಿ ಕೋಟಿ ವ್ಯವಹಾರ ಕುದುರಿಕೊಂಡಿತ್ತೆಂಬ ಮಾತೂ ಇದೆ. ಆ ನಂತರದಲ್ಲಿ ಅವೆಲ್ಲವೂ ಮುಂಬೈ ಭೂಗತಕ್ಕೆ ತಲುಪಿಕೊಂಡು, ಆ ಕೇಂದ್ರದಿಂದಲೇ ವ್ಯವಹಾರ ನಡೆದಿತ್ತೆನ್ನಲಾಗಿದೆ. ಈ ಹಿಂದೆ ಬೆಳಗಾವಿ ಸಾಹುಕಾರನನ್ನು ಬೆತ್ತಲೆ ನಿಲ್ಲಿಸಿದ್ದ ಕಾಂಗ್ರೆಸ್ ಪಟಾಲಮ್ಮು ಕೂಡಾ ಆ ವೀಡಿಯೋಗಳನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿತ್ತಂತೆ.
ಇಂಥಾದ್ದೊಂದು ಅವಘಡ ನಡೆದೀತೆಂಬುದನ್ನು ಹಾಸನದ ಹಳೆನಿಂಬೇಕಾಯಿಯ ಮುದ್ದಿನ ಪುತ್ರ ಎಳೆನಿಂಬೆಕಾಯಿಯಂಥಾ ಯುವ ನಾಯಕ ಕನಸಲ್ಲಿಯೂ ಊಹಿಸಿರಲಿಕ್ಕಿಲ್ಲ. ತನ್ನ ಮಾನ ಕೈಬದಲಾಗುತ್ತಾ ಮುಂಬೈ ಭೂಗತ ಜೀವಿಗಳ ಕೈ ಸೇರಿದ್ದನ್ನು ತಿಳಿದು ಕಂಗಾಲಾಗಿದ್ದ ಈ ಕಾಮಪಿಪಾಸು, ತನ್ನ ಲಿಂಕುಗಳ ಮೂಲಕ ವ್ಯವಹಾರ ಕುದುರಿಸಲು ಪ್ರತ್ನಿಸಿದ್ದ. ಅದೆಷ್ಟು ಕೋಟಿಗಳನ್ನಾದರೂ ಸುರಿದು ತನ್ನ ಮಾನ ಮುಚ್ಚಿಕೊಂಡು, ರಾಜಕೀಯ ಭವಿಷ್ಯ ಕಾಪಾಡಿಕೊಳ್ಳುವ ಪ್ರಯತ್ನವನ್ನೂ ಮಾಡಿದ್ದ. ಆದರೆ, ಅದಾಗಲೇ ವಿರೋಧಿ ಪಾಳೆಯದ ಮಂದಿ ಈತನಿಗಿಂತೂ ಒಂದಷ್ಟು ಹೆಜ್ಜೆ ಮುಂದೆ ಸಾಗಿಬಿಟ್ಟಿದ್ದರು. ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ಸ್ಟೇ ತಂದರೂ ಕೂಡಾ, ತನ್ನ ಮಾನ ಊರುಬಾಗಿಲಾಗುತ್ತದೆಂಬುದು ಈತನಿಗೆ ಸ್ಪಷ್ಟವಾಗಿಬಿಟ್ಟಿತ್ತು. ಆ ಹಂತದಲ್ಲಿ ಈ ವಿಚಾರ, ಕರುನಾಡಿನ ಖ್ಯಾತ ರಸಿಕ ರಾಜಕಾರಣಿ ಕಂ ಈ ಯುವ ನಾಯಕನ ಚಿಕ್ಕಪ್ಪನೂ ಆಗಿರುವ ವ್ಯಕ್ತಿಗೆ ತಲುಪಿಕೊಂಡು ಬಿಟ್ಟಿತ್ತು!
ಚಿಕ್ಕಪ್ಪನ ತಿಪ್ಪರಲಾಗ
ತನ್ನ ಸಹೋದರನ ಮಗ ಮಾಡಿದ ಮಣ್ಣುತಿನ್ನೋ ಕೆಲಸದ ಬಗ್ಗೆ ತಿಳಿದಾಕ್ಷಣವೇ ಆ ಪ್ರಭಾವಿ ರಾಜಕಾರಣಿ ಕಂ ಕಾಮುಕ ಯುವ ರಾಜಕಾರಣಿಯ ಚಿಕ್ಕಪ್ಪನಿಗೆ ಮತ್ತೊಂದು ಸುತ್ತಿಗೆ ಹೃದಯಬೇನೆ ಕಾಣಿಸಿಕೊಂಡು ಬಿಟ್ಟಿತ್ತು. ಹಾಗಂತ ಸುಮ್ಮನೆ ಕೂರುವಂತಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ತನ್ನ ಪಕ್ಷ ನಾಮಾವಶೇಷವಾಗುವ ಸೂಚನೆ ಸಿಕ್ಕಾಗಿನಿಂದಲೇ ಆತ ಹೈರಾಣಾಗಿ ಬಿಟ್ಟಿದ್ದರು. ಒಂದು ವೇಳೆ ನಿಂಬೆಹಣ್ಣು ಮಾಂತ್ರಿಕನೂ ಆಗಿರುವ ತನ್ನ ಸಹೋದರನ ಮಗನ ಕಾಮಪುರಾಣ ಬಯಲಾದರೆ ಒಂದಿಡೀ ಕುಟುಂಬದ ಘನತೆಗೆ ಕುತ್ತುಂಟಾಗುತ್ತದೆಂಬ ಸತ್ಯ ಚಿಕ್ಕಪ್ಪನನ್ನು ಕೊರೆಯಲಾರಂಭಿಸಿತ್ತು. ಅದಾಗಲೇ ಮಗರಾಯನ ಕಾಮಪುರಾಣ ಆಯಕಟ್ಟಿನಲ್ಲಿಕುಂತ ಮಂದಿಯ ಕೈಯಲ್ಲಿ ಪ್ರಜ್ವಲಿಸಲಾರಂಭಿಸಿತ್ತು.
ಹೀಗೆ ಯುವ ಕಾಮುಕನನ್ನು ಕಾಪಾಡಲು ಸಾಕ್ಷಾತ್ತು ಚಿಕ್ಕಪ್ಪನೇ ಅಖಾಡಕ್ಕಿಳಿದಿರುವ ಸುದ್ದಿ ತಿಳಿದು, ರಾಜಕೀಯ ವಿರೋಧಿ ಪಾಳೆಯ ಮತ್ತಷ್ಟು ಆವೇಗದೊಂದಿಗೆ ಆಕ್ಟೀವ್ ಆಗಿತ್ತು. ಅದು ಹೇಳಿಕೇಳಿ ಇಂಥಾ ಆಪರೇಷನ್ನುಗಳಲ್ಲಿ ಪಳಗಿಕೊಂಡಿದ್ದ ತಂಡ. ಅದಕ್ಕೆದುರಾಗಿ ನಿಂತಿದ್ದ ಯುವ ಕಾಮುಕನ ಚಿಕ್ಕಪ್ಪನವರು ತಮ್ಮ ಇಷ್ಟೂ ವರ್ಷದ ಅನುಭವವನ್ನು ಧಾರೆಯೆರೆದು, ತನ್ನ ಸಮಸ್ತ ಸಂಪರ್ಕಗಳನ್ನೂ ಬಳಸಿಕೊಂಡು ಸಂಧಾನ ನಡೆಸಲು ಪ್ರಯತ್ನಿಸಿದ್ದರು. ನಂತರ ಕೋಟಿ ಕೋಟಿ ಸುರಿಯಲು ತಯಾರಾಗಿ ವ್ಯವಹಾರಕ್ಕೆ ನಿಂತಿದ್ದರೆಂಬ ಮಾತೂ ಇದೆ. ಕಡೆಗೂ ಚಿಕ್ಕಪ್ಪನ ಶ್ರಮವೆಲ್ಲವೂ ಹಾಸನದ ಗಟಾರದಲ್ಲಿ ತೊಳೆದು ಹೋದಂತಾಗಿ, ಮಗನ ಸಾವಿರಾರು ಅಸಹ್ಯದ ವೀಡಿಯೋಗಳೆಲ್ಲ ವಿರೋಧಿ ಬಣದ ಕೈ ಸೇರಿ ಬಿಟ್ಟಿತ್ತು!
ಅಪ್ಪನದ್ದೂ ಅದೇ ಕಥೆ?
ಹೀಗೆ ಹಾಸನದಲ್ಲಿ ಈ ಬಾರಿ ಚುನಾವಣೆ ಗೆದ್ದುಕೊಳ್ಳುವ ಉಮೇದಿನಲ್ಲಿದ್ದ ಭಂಡ ಯುವನಾಯಕನ ಅಂಡಿಗೀಗ ಸರಿಕಟ್ಟಾಗಿಯೇ ಒದೆ ಬಿದ್ದಿದೆ. ಅಂದಹಾಗೆ, ಹೀಗೆ ಒಂದು ಪುಟಗೋಸಿಗೂ ಗತಿಯಿಲ್ಲದಂತೆ ಮಾನಗೆಡಿಸಿಕೊಂಡಿರುವ ಈ ಯುವ ನಾಯಕನ ಅಪ್ಪ ರಾಜ್ಯ ರಾಜಕಾರಣದಲ್ಲಿ ತನ್ನದೇ ಛಾಪು ಮೂಡಿಸಿರುವ ರಾಜಕಾರಣಿ. ಕೈಯಲ್ಲಿ ಸದಾ ಮಂತ್ರಿಸಿದ ಲಿಂಬೆ ಕಾಯಿಗಳನ್ನಿಟ್ಟುಕೊಂಡು ಓಡಾಡುವ ಈತ, ಆಗಾಗ ನಗೆಪಾಟಲಿಗೀಡಾಗೋದೂ ಇದೆ. ಈ ಹಿಂದೆ ತನ್ನ ಕೋಟಿ ಕಾರಿಗೆ ಅಡ್ಡ ಬಂದ ಬಡಪಾಯಿಯನ್ನು ಹೀನಾಮಾನ ನಿಂದಿಸಿದ್ದ ದುರಹಂಕಾರಿ ಹೆಂಗಸು ಈ ನಿಂಬೆಹಣ್ಣು ಸ್ಪೆಷಲಿಷ್ಟನ ಖಾಸಾ ಹೆಂಡತಿ. ಈ ಅಪರೂಪದ ದಂಪತಿಯ ಇಬ್ಬರು ಮಕ್ಕಳಲ್ಲಿ ಈ ಯುವ ನೇತಾರ ಮೊದಲನೆಯವನು.
ವಿಶೇಷವೆಂದರೆ, ಈಗ ಹಬ್ಬಿಕೊಂಡಿರುವ ಎಳೇನಿಂಬೆಕಾಯಿಯ ವೀಡಿಯೋ ಕಂಡು ಬೆಚ್ಚಿಬಿದ್ದಿರುವವರೆಲ್ಲ ಮತ್ತಷ್ಟು ಬೆದರುವಂಥಾ ಮತ್ತೊಂದು ರೂಮರ್ ಕೂಡಾ ಹಾಸನದ ತುಂಬಾ ಅಡ್ಡಾಡುತ್ತಿದೆ. ಈ ಯುವ ನಾಯಕನ ತಂದೆಯ ವೀಡಿಯೋಗಳೂ ಇವೆಯಂತೆ ಅನ್ನೋದು ಆ ರೂಮರುಗಳ ಸಾರಾಂಶ. ಇಷ್ಟು ಮಾತ್ರವಲ್ಲದೆ ಈ ಯುವ ನಾಯಕನ ಸಹೋದರನಿಗೂ ಅಂಥಾದ್ದೇ ಕಂಕಟವಿದೆ ಎಂಬಂಥಾ ಸುದ್ದಿಯೂ ಹರಿದಾಡುತ್ತಿದೆ. ಆ ಸುದ್ದಿ ನಿಜವಾ? ಒಂದು ವೇಳೆ ನಿಜವಾಗಿದ್ದರೆ ಅದು ಯಾರು ಉಡಿಯಲ್ಲಿದೆ? ಅದರ ಬಿಡುಗಡೆಗೂ ವಿರೋಧಿ ಪಾಳೆಯ ಮುಹೂರ್ತ ನಿಗಧಿ ಮಾಡಿಕೊಂಡಿದೆಯಾ? ಇಂಥಾ ಪ್ರಶ್ನೆಗಳೆದ್ದಿವೆ. ಸದರಿ ರಾಜಕಾರಣಿ ಹೋದಲ್ಲಿ ಬಂದಲ್ಲಿ ಲಿಂಬೆಹಣ್ಣು ಹಿಚುಕಿಕೊಂಡು ಓಡಾಡುತ್ತಿರೋದರ ಹಿಂದೆ ರಾಸಲೀಲೆ ಬಯಲಾಗೋ ಭಯ ಕೆಲಸ ಮಾಡುತ್ತಿರಲೂಬಹುದು!
ಸ್ತ್ರೀ ಕಂಟಕ
ಇದೀಗ ಮಾನ ಹರಾಜಾಗಿಸಿಕೊಂಡು ಕೂತಿರುವ ಯುವ ನಾಯಕನ ಚಿಕ್ಕಪ್ಪನ ರಸಿಕತೆ ಈ ನಾಡಿನ ಮಟ್ಟಿಗೆ ಸವಕಲು ಸಂಗತಿ. ಅವರ ಸ್ವಂತ ಮಗ ಒಂದು ಕಾಲದಲ್ಲಿ ಹೀನಾಮಾನ ಮೆರೆದಾಡಿದರೂ ಕೂಡಾ, ಆ ನಂತರದಲ್ಲಿ ಸಾದಾಸೀದಾ ಹುಡುಗನಾಗಿ ಬದಲಾಗಿ ಬಿಟ್ಟಿದ್ದ. ಕೊಂಚ ಸೆನ್ಸಿಬಲ್ ವ್ಯಕ್ತಿಯಾಗಿ ಕಾಣಿಸುವ ಈ ಹುಡುಗ ಹೀರೋ ಆಗಿ ಮೆರೆಯುವ ಕನಸು ಕಂಡಿದ್ದ. ಅದಕ್ಕಾಗಿ ಪಿತಾಶ್ರೀಯೇ ವೇದಿಕೆ ಸಜ್ಜುಗೊಳಿಸಿ ಎರಡೆರಡು ಸಿನಿಮಾಗಳಲ್ಲಿ ನಾಯಕನಾಗಿಯೂ ನಟಿಸಿದ್ದ. ಕಡೇಯದೊಂದು ಸಿನಿಮಾದಲ್ಲಿ ಈತನಿಗೆ ಗುಳಿಗೆನ್ನೆಯ ಮಾಯಾಂಗನೆಯೊಬ್ಬಳು ನಾಯಕಿಯಾಗಿದ್ದಳು. ನಂತರ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ವಿಚಾರ ಸೆಟ್ಟಿಂದಲೇ ಹೊರಬೀಳಲಾರಂಭಿಸಿತ್ತು.
ಈ ವಿಚಾರ ತಿಳಿಯುತ್ತಲೇ ಆ ಕುಟುಂಬದ ಹಿರಿಯ ವ್ಯಕ್ತಿ ಸಿಟ್ಟಾಗಿದ್ದರು. ಯಾಕೆಂದರೆ, ಅದಾಗಲೇ ತಮ್ಮ ಮಗ ಸಿನಿಮಾ ನಟಿಯ ಸಂಗದಲ್ಲಿ ಮಾಡಿಕೊಂಡ ಎಡವಟ್ಟು ಅವರಲ್ಲೊಂದು ರೇಜಿಗೆ ಮೂಡಿಸಿತ್ತು. ತಮ್ಮ ಮನೆತನಕ್ಕೆ ಸಿನಿಮಾದವರು ಸರಿಹೊಂದುವುದಿಲ್ಲ ಅಂತೆಲ್ಲ ತಿಳಿಹೇಳಿ ಮೊಮ್ಮಗನ ಮನಃಪರಿವರ್ತನೆ ಮಾಡಿದ್ದರು. ಈ ಹುಡುಗ ಗುಳಿಕೆನ್ನೆಯನ್ನುಕಷ್ಟಪಟ್ಟು ಮರೆತು ಬೇರೆ ಹುಡುಗಿಯೊಂದಿಗೆ ಮದುವೆಯಾಗಿದ್ದ. ಅದಾಗಲೇ ಈತನಿಂದ ಒಂದು ಮನೆಯನ್ನೂ ಗಿಫ್ಟಾಗಿ ಪಡೆದಿದ್ದ ಗುಳಿಕೆನ್ನೆಯಾಕೆ ಅದ್ಯಾವ ಪರಿ ಕಾಟ ಕೊಟ್ಟಿದ್ದಳೆಂದರೆ, ಈ ಹುಡುಗ ಫಸ್ಟ್ ನೈಟ್ ಮಾಡಿಕೊಳ್ಳಲೂ ಅವಕಾಶ ಕೊಟ್ಟಿರಲಿಲ್ಲವಂತೆ. ಕಡೆಗೂ ಆ ಕುಟುಂಬದ ಹಿರೀಕರು ಮಡಿಕೇರಿಯಲ್ಲಿ ಮಹಾಯಾಗವೊಂದನ್ನು ಮಾಡಿ ತಮ್ಮ ಕುಟುಂಬದ ಕುಡಿಯ ಸಂಸಾರ ನೆಟ್ಟಗಾಗಿಸಲು ಹೆಣಗಿದ್ದರು. ಖುದ್ದು ಹಿರಿಯರೇ ಗುಳಿಕೆನ್ನೆಗೆ ಫೋನಾಯಿಸಿ ತಂಟೆಗೆ ಬರದಂತೆ ಆವಾಜು ಹಾಕಿದ್ದರೆಂಬ ಮಾತೂ ಇದೆ. ಹಾಗಂತ ಈ ಹುಡುಗ ಕಾಮದ ದೃಷ್ಟಿಯಿಂದ ಆಹುಡುಗಿಯನ್ನು ಕಂಡಿರಲಿಲ್ಲ. ಆ ಹುಡುಗಿಯೇ ಈತನನ್ನು ಬಿಡಲೊಪ್ಪದೆ ಕಾಡಿಸಿದ್ದಳಷ್ಟೇ. ಆ ವಿಚಾರದಲ್ಲಿ ಸಿನಿಮಾ ಹುಡುಗಿ ತನ್ನ ಮನೆತನಕ್ಕೆ ಸರಿ ಹೊಂದೋದಿಲ್ಲವೆಂಬಂತೆ ಆ ಹಿರಿಯರು ಮಡಿವಂತಿಕೆ ತೋರಿಸಿದ್ದರು. ಅವರು ನಿಜಕ್ಕು ಯೌವನದಿಂದ ಇಳಿಗಾಲದವರೆಗೂ ಈ ವಿಚಾರದಲ್ಲಿ ಘನತೆ ಗೌರವ ಕಾಪಾಡಿಕೊಂಡವರು. ಅಂಥವರ ಮೊಮ್ಮಗ, ಈ ಯುವ ರಾಜಕಾರಣಿ ಕಂಡೋರ ಮನೆ ಹೆಣ್ಣುಮಕ್ಕಳ ಬದುಕನ್ನೇ ಬಲಿಬೀಳಿಸಿರೋದು ದುರಂತವಲ್ಲದೆ ಮತ್ತಿನ್ನೇನು?
ಇಂಥಾ ಕಾಮುಕ ಜನ ನಾಯಕನಾಗಬಹುದೇ?
ತನ್ನ ಕ್ಷಣಿಕ ಸುಖಕ್ಕೋಸ್ಕರ, ತನ್ನೊಳಗಿನ ವಿಕೃತಿ ನೀಗಿಕೊಳ್ಳಲೋಸ್ಕರ ಈ ಯುವ ನಾಯಕ ನೂರಾರು ಹೆಣ್ಣು ಜೀವಗಳ ಬದುಕನ್ನೇ ನರಕವಾಗಿಸಿದ್ದಾನೆ. ಈವತ್ತಿಗೆ ಹಾಸನ ಸೀಮೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಮಾನ ಕಳೆದುಕೊಂಡು ಕಂಗಾಲಾಗಿರುವ ಮಹಿಳೆಯರ ಕುಟುಂಬಿಕರ ಸಂಕಟಗಳನ್ನು ನೋಡಿದರೆ ನಿಜಕ್ಕೂ ಮರುಕ ಮೂಡಿಕೊಳ್ಳುತ್ತದೆ. ವೊರೋಧಿ ಪಾಳೆಯ ಇದೊಂದು ವಿಚಾರದಲ್ಲಿ ಸಂವೇದನೆಯಿಂದ ನಡೆದುಕೊಳ್ಳಬೇಕಿತ್ತೆಂಬ ಭಾವವೂ ಮೂಡಿಕೊಳ್ಳುತ್ತದೆ. ಇದರಾಚೆ ನೋಡಿದರೆ, ಈ ಘಟನೆ ರಾಜಕಾರಣದ ನೆರಳಲ್ಲಿ ಹೆಡೆಯೆತ್ತಿ ನಿಂತಿರುವ ಕರಾಳ ಸತ್ಯಗಳನ್ನು ಜಾಹೀರು ಮಾಡಿದೆ. ನಿಜಕ್ಕೂ ಈ ಕಾಮುಕ ಜನನಾಯಕನಾಗಲು ಅರ್ಹನಲ್ಲ. ಹೆಣ್ಣುಮಕ್ಕಳನ್ನು ಈ ಪರಿಯಾಗಿ ಬಳಸಿಕೊಂಡ, ಅವರೆಲ್ಲರ ಬದುಕನ್ನು ಸಾರಾಸಗಟಾಗಿ ಬರ್ಬಾದು ಮಾಡಿದ ಈತ ಯಾವ ಕ್ಷಮೆಗೂ ಅರ್ಹನಲ್ಲ.
ಇಂಥವರಿಗೆ ಸರಿಯಾದೊಂದು ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಪಕ್ಷಾತೀತವಾಗಿ ಎಲ್ಲರ ಮೇಲಿದೆ. ನಿಜ, ಈಗ ರಾಸಲೀಲೆಯ ವೀಡಿಯೋಗಳು ಹರಡಿಕೊಂಡಿರುವುದರ ಹಿಂದೆ ರಾಜಕೀಯದ ಕಿಸುರಿದೆ. ಹಾಗಂತ ಈ ಒಟ್ಟಾರೆ ಘಟನೆಯನ್ನು ರಾಜಕೀಯಗೊಳಿಸಿ, ಆ ಮೂಲಕ ಈ ಪ್ರಕಲರಣವನ್ನು ಹಳ್ಳ ಹಿಡಿಸುವುದು ತರವಲ್ಲ. ಹಾಗೊಂದು ವೇಳೆ ಯಾವನಾದರೂ ಈ ಯುವ ಕಾಮುಕನನ್ನು ರಕ್ಷಿಸಲು ಯತ್ನಿಸಿದರೆ, ಅಂಥವರಿಗೆಲ್ಲ ಬದುಕು ಕಳೆದುಕೊಂಡಿರುವ ಹೆಣ್ಣುಮಕ್ಕಳ ಶಾಪ ತಟ್ಟದೇ ಬಿಡುವುದಿಲ್ಲ. ಇಂಥಾ ಹಲಾಲುಕೋರ ಯುವ ನಾಯಕನ ತಂದೆ ಸಾರ್ವಜನಿಕವಾಗಿಯೇ ಪರಮ ಭಕ್ತನಂತೆ ಪೋಸು ಕೊಡುತ್ತಾನೆ. ಲಿಂಬೆಹಣ್ಣು ಹಿಸುಕುತ್ತಾ ಕ್ಷುದ್ರ ಜೀವಿಯಂತೆ ಅಡ್ಡಾಡುತ್ತಾನೆ. ಬಹುಶಃ ಆತ ವರ್ಷಗಳ ಹಿಂದೆಯೇ ಎಚ್ಚೆತ್ತುಕೊಂಡು ತನ್ನ ಮಗನ ಗಳಗಂಟೆಗೊಂದು ಮಂತ್ರಿಸಿದ ಲಿಂಬೆಹಣ್ಣು ಕಟ್ಟಿದ್ದರೆ, ಸಾವಿರಾರು ಹೆಂಗಳೆಯರ ಮಾನ ಉಳಿಯುತ್ತಿತ್ತೇನೋ…!