ಬಹುತೇಕ ಎಲ್ಲ ಪಕ್ಷಗಳಲ್ಲೀಯೂ ಇದೀಗ ಟಿಕೆಟ್ ಹಂಚಿಕೆಯ ಬೇಗುದಿ ಮೇರೆ ಮೀರಿಕೊಂಡಿದೆ. ಬಿಜೆಪಿಯಂತೂ (bjp) ಸದ್ಯಕ್ಕೆ ಅಂಥಾ ಅಸಹನೆಗಳ ದಾವಾನಲವಾಗಿ ಬದಲಾಗಿ ಬಿಟ್ಟಿದೆ. ಸೂಕ್ಷ್ಮವಾಗಿ ಗಮನಿಸಿದರೆ, ಚುನಾವಣೆಯ ಸಂಧಿ ಕಾಲದಲ್ಲಿ ಮಾತ್ರವೇ ಎಚ್ಚೆತ್ತುಕೊಳ್ಳುವ ಜಾಯಮಾನದ ಜೆಡೆಎಸ್ನೊಳಗೂ (jds) ಈ ಬಾರಿ ಟಿಕೆಟ್ಗಾಗಿನ ಕೋಲಾಹಲ ಜೋರಾಗಿದೆ. ಬಹುಶಃ (devegowda) ದೇವೇಗೌಡರ ಕುಟುಂಬದ ಹೊರಗಿನ ಮಂದಿ ಹೀಗೆ ಟಿಕೆಟಿಗಾಗಿ ಮುಸುಕಿನ ಗುದ್ದಾಟ ನಡೆಸಿದ್ದರೆ ಅದಕ್ಕೆ ಈ ಪರಿಯಾಗಿ ಪ್ರಾಶಸ್ತ್ಯ ಸಿಗುತ್ತಿರಲಿಲ್ಲವೇನೋ… ಆದರೆ, ಅಲ್ಲೀಗ ಅಣ್ಣ ತಮ್ಮನ ನಡುವೆ, ಅತ್ತಿಗೆ ನಾದಿನಿಯರ ನಡುವೆ ಕಾದಾಟ ಶುರುವಾಗಿದೆ!
ಇದರ ಭಾಗವಾಗಿಯೇ ಭವಾನಿ ರೇವಣ್ಣ ಬಹು ಹಿಂದಿನಿಂದಲೇ ಜೋರು ಧ್ವನಿಯಲ್ಲಿ ಅಖಾಡಕ್ಕಿಳಿದಿದ್ದರು. ಹೀಗೆ ಅಣ್ಣ ತಮ್ಮ, ಅವರ ಹೆಂಡಿರು ಮಕ್ಕಳಿಗೆಲ್ಲ ಟಿಕೆಟು ಕೊಟ್ಟು ಕೊಟ್ಟೇ ಜೆಡಿಎಸ್ ಇದ್ದ ನೆಲೆಯನ್ನೂ ಕಳೆದುಕೊಂಡು ಬರುತ್ತಿದೆ. ಹಾಗೇನಾದರೂ ಈ ಬಾರಿ ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣಗೆ ಟಿಕೇಟು ಕೊಟ್ಟಿದ್ದರೆ, ಅದು ಜೆಡಿಎಸ್ಗೆ ಮತ್ತಷ್ಟು ಹಿನ್ನಡೆ ತಂದೊಡ್ಡುತ್ತಿತ್ತು. ವಿರೋಧಿ ಪಾಳೆಯಕ್ಕೆ ಆಡಿಕೊಳ್ಳಲೊಂದು ಅಸ್ತ್ರ ಖುದ್ದು ಜೇಡಿಎಸ್ ಕಡೆಯಿಂದಲೇ ಸಿದ್ಧವಾದಂತಾಗುತ್ತಿತ್ತು. ಈ ವಿಚಾರದಲಿ ಕುಮಾರಸ್ವಾಮಿ ಆರಂಭದಿಂದಲೇ ನಾಜೂಕಿನ ನಡೆ ಅನುಸರಿಸಿಕೊಂಡು ಬಂದಿದ್ದಾರೆ. ಕಡೆಯೂ ಆ ಜಾಣ ನಡೆಯ ಅಂತಿಮ ಫಲಿತಾಂಶ ಹೊರ ಬಂದು, ಅದನ್ನು ಕಂಡು ವಿರೋಧಿ ಪಡೆಯೇ ಅವಾಕ್ಕಾಗಿಬಿಟ್ಟಿದೆ!
ಯಾಕೆಂದರೆ, ಹಾಸನದಲ್ಲಿ ದೇವೇಗೌಡರ ಕುಟುಂಬದಾಚೆಗೆ ಸ್ವರೂಪ್ಗೆ ಜೆಡಿಎಸ್ ಟಿಕೇಟ್ ಖಾತರಿಗೊಳಿಸಲಾಗಿದೆ. ಇನ್ನೇನು ಭವಾನಿಗೇ ಅಲ್ಲಿನ ಟಿಕೇಟು ಫಿಕ್ಸ್ ಅಂದುಕೊಂಡಿದ್ದವರಿಗೆಲ್ಲ ಅಚ್ಚರಿಯಾಗಿದೆ. ಆದರೆ, ಹಾಸನ ಕೈ ತಪ್ಪಿದರೂ, ಯಾವ ಕ್ಷೇತ್ರದಲ್ಲಾದರೂ ಟಿಕೇಟು ಸಿಗದಿದ್ದರೆ ಭವಾನಿ ಸುಮ್ಮನಿರುವಂತೆ ಕಾಣುತ್ತಿಲ್ಲ. ಆಕೆಯ ಪರವಾಗಿ ರೇವಣ್ಣ ಕೂಡಾ ಅನಿವಾರ್ಯವಾಗಿ ಬಂಡೇಳುವ ಸಾಧ್ಯತೆಗಳಿವೆ. ದೇವೇಗೌಡರ ಅಂತಃಪುರದ ಮೂಲಗಳ ಪ್ರಕಾರ, ಅದಕ್ಕೂ ಕೂಡಾ ಈಗಾಗಲೇ ಕಾರ್ಯ ತಂತ್ರ ರೆಡಿಯಾಗಿದೆ. ಒಂದುವೇಳೆ, ಭವಾನಿ ಕಣಕ್ಕಿಳಿಯುತ್ತೇನೆಂದು ರಚ್ಚೆ ಹಿಡಿದರೆ ಮೈಸೂರಿನ ಚಾಮರಾಜ ಕ್ಷೇತ್ರದಿಂದ ಟಿಕೇಟು ಕೊಡಲು ತಯಾರಿ ನಡೆದಿದೆ. ಅಂತೂ ಟಿಕೆಟ್ ಭೂಮಿಕೆಯ ಕೌಟುಂಬಿಕ ಕಲಹವನ್ನು ಕುಮ್ಮಿ ಅತ್ಯಂತ ನಾಜೂಕಿನಿಂದಲೇ ಪರಿಹರಿಸಿದ್ದಾರೆ!