ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತಾಡುತ್ತಲೇ ಪ್ರವರ್ಧಮಾನಕ್ಕೆ ಬಂದಿದ್ದವನು ಹಾರ್ದಿಕ್ ಪಟೇಲ್. ಗುಜರಾತಿನ ಪಾಟಿದಾರ್ ಸಮುದಾಯದ ಪರವಾಗಿ ಮಾತಾಡುತ್ತಾ, ಅದರ ನಾಯಕನಾಗಿಯೂ ಗುರುತಿಸಿಕೊಂಡಿದ್ದ ಈತನ ಮೇಲೆ ಬಿಜೆಪಿ ಐಟಿ ಸೆಲ್ಲಿನ ಮಂದಿ ಪ್ರಹಾರವನ್ನೇ ನಡೆಸಿದ್ದರು. ಮೋದಿ ವಿರುದ್ಧ ಮಾತಾಡಿದವರೆಲ್ಲ ದೇಶದ್ರೋಹಿಗಳೆಂಬ ಕಾನ್ಸೆಪ್ಟಿನಲ್ಲಿ ಶತಾಯಗತಾಯ ಪಟೇಲನ ಮೇಲೆರಗಿದ್ದರು. ಇದೀಗ ಅದೇ ಹಾರ್ದಿಕ್ ಪಟೇಲನನ್ನು ಬಿಜೆಪಿ ಮಂದಿ ಹಾರ್ದಿಕವಾಗಿ ಪಕ್ಷದೊಳಗೆ ಬಿಟ್ಟುಕೊಂಡಿದ್ದಾರೆ.
ಪಾಟಿದಾರ್ ಸಮುದಾಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಭುಗಿಲೇಳುತ್ತಲೇ ಚಿಕ್ಕ ವಯಸ್ಸಿನಲ್ಲಿಯೇ ಭಾರೀ ಪಬ್ಲಿಸಿಟಿ ಪಡೆದುಕೊಂಡಿದ್ದವನು ಹಾರ್ದಿಕ್. ಅದರೊಂದಿಗೇ ಮೋದಿ ವಿರುದ್ಧ ಹರಿಹಾಯುತ್ತಾ ಬಂದಿದ್ದ ಈತ ಏಕಾಏಕಿ ಕಾಂತಿಕಾರಿ ಯವ ಮುಖಂಡನೆನಿಸಿಕೊಂಡಿದ್ದ. ಯಾವಾಗ ಈ ಸಂಬಂಧವಾಗಿ ಎಲ್ಲಾ ದಿಕ್ಕುಗಳಿಂದಲೂ ಪ್ರತಿರೋಧ ಆರಂಭವಾಯ್ತೋ, ಆಗ ಬಚಾವಾಗಬೇಕೆಂದರೆ ಯಾವುದಾದರೊಂದು ಪಕ್ಷದ ನೆರಳಿರಬೇಕೆಂಬುದು ಪಟೇಲನಿಗೆ ಪಕ್ಕಾ ಆಗಿತ್ತು. ಆಗ ಆತ ಬಂದು ನಿಂತಿದ್ದದ್ದು ಕಾಂಗ್ರೆಸ್ ಪಡಸಾಲೆಗೆ.
ಹಾಗೆ ಪಟೇಲ ಕಾಂಗ್ರೆಸ್ ಸೇರಿಕೊಳ್ಳುತ್ತಲೇ ರಾಸಲೀಲೆ ಮುಂತಾದವುಗಳ ಮೂಲಕ ಆತನನ್ನು ಹಣಿಯುವ ಪ್ರಯತ್ನ ನಡೆದಿತ್ತು. ಬಿಜೆಪಿ ಮಂದಿ ಆತನಿಗೆ ನಾಡದ್ರೋಹಿ, ದೇಶ ದ್ರೋಹಿ ಅಂತೆಲ್ಲ ಯಥೇಚ್ಛವಾಗಿ ಬಿರುದು ಬಾವಲಿಗಳನ್ನು ನೀಡಿದ್ದರು. ಅಂಥವನನ್ನು ಸೇರಿಕೊಂಡ ಕಾಂಗ್ರೆಸ್ ವಿರುದ್ಧವೂ ಟೀಕೆ ಮಾಡಿದ್ದರು. ಹೀಗಿರುವಾಗಲೇ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ರೊಳ್ಳೆ ತೆಗೆದ ಪಟೇಲ ಪಕ್ಷದಿಂದ ಹೊರ ನಡೆದಿದ್ದ. ಇದೀಗ ಕಡೆಗೂ ಬಿಜೆಪಿ ಪಾಲಾಗಿದ್ದಾನೆ. ಅಲ್ಲಿಗೆ ಒಂದು ದೇಶದ್ರೋಹಿ, ನಾಡದ್ರೋಹಿ ಎಲಿಮೆಂಟು ದೇಶಭಕ್ತರ ಖಾತೆಗೆ ಜಮೆಯಾದಂತಾಗಿದೆ!