ನಮ್ಮಲ್ಲಿ ಉಗುಳೋದು ಅನ್ನೋದಕ್ಕೆ ನಾನಾ ಅರ್ಥಗಳಿವೆ. ಬಾಯಲ್ಲಿನ ಎಂಜಲನ್ನ ಹೊರ ಹಾಕೋ ಪ್ರಕ್ರಿಯೆಗೆ ಹಾಗನ್ನಲಾಗುತ್ತದೆ. ಆದರೆ ಉಗಿಯೋದು ಎಂಬ ಪದ ಬೈಯೋದಕ್ಕೆ ಪರ್ಯಾಯ ಎಂಬಂತೆ ಚಾಲ್ತಿಯಲ್ಲಿದೆ. ಕೆಲ ಮಂದಿಗೆ ಬೈಯೋದ್ರಲ್ಲಿ ಖುಷಿ ಸಿಗಬಹುದು. ಆದರೆ ಖುಷಿಯಿಂದ ಬೈಸಿಕೊಳ್ಳುವವರು ಸಿಗೋದು ಅಪರೂಪ. ಅದರಲ್ಲಿಯೂ ಮದುವೆ ಮುಂಜಿಗಳಂಥ ಸಂದರ್ಭದಲ್ಲಿ ಯಾರ ಮೇಲಾದರು ಸಿಟ್ಟು ಬಂದರೂ ಅದುಮಿಕೊಂಡಿರಬೇಕಾಗುತ್ತೆ. ಯಾಕಂದ್ರೆ ಬೈದು ಖುಷಿಯ ಮೂಡು ಹಾಳು ಮಾಡಲು ಯಾರಿಗೂ ಇಷ್ಟವಿರೋದಿಲ್ಲ. ಆದ್ರೆ ಅದೊಂದು ದೇಶದಲ್ಲಿ ಮಾತ್ರ ಉಗಿತವೂ ಆಶೀರ್ವಾದದಂತೆ ಬಳಕೆಯಲ್ಲಿದೆ ಅಂದ್ರೆ ನಂಬ್ತೀರಾ?
ತುಸು ಕಷ್ಟವಾದರೂ ನಂಬದೆ ಬೇರೆ ದಾರಿಗಳಿಲ್ಲ. ದೂರದ ಗ್ರೀಸ್ ದೇಶದಲ್ಲಿ ಅಂಥಾದ್ದೊಂದು ವಿಚಿತ್ರ ಸಂಪ್ರದಾಯ ಚಾಲ್ತಿಯಲ್ಲಿದೆ. ಆ ದೇಶದಲ್ಲಿ ಉಗಿತ ಎಂಬುದು ಬಹುಶಃ ಯಾರಲ್ಲಿಯೂ ಬೇಸರ ಮೂಡಿಸೋದಿಲ್ಲ. ಯಾಕಂದ್ರೆ ಅದುವೇ ಅವರೆಲ್ಲರ ಪಾಲಿಗೆ ಆಶೀರ್ವಾದ. ಅಲ್ಲಿನ ಜನರಿಗೇನಾದ್ರೂ ಮಾಮೂಲಿಯಾಗಿ ಉಗಿದ್ರೂ ಆಶೀರ್ವಾದ ಮಾಡಿದರು ಅಂತ ನಡ ಬಾಗಿಸಿ ಧನ್ಯವಾದ ಸಮರ್ಪಿಸಬಹುದೇನೋ… ಅಲ್ಲಿ ರೂಢಿಯಲ್ಲಿರುವ ಸಂಪ್ರದಾಯವೇ ಅಂಥಾದ್ದಿದೆ.
ಅಲ್ಲಿ ಮದುವೆಯಂಥ ಸಮಾರಂಭಗಳಲ್ಲಿಯೂ ವಧೂವರರಿಗೆ ಉಗಿಯೋ ಮೂಲಕವೇ ಆಶೀರ್ವಾದ ಮಾಡಲಾಗುತ್ತೆ. ಹಾಗಂತ ಕ್ಯಾಕರಿಸಿ ಮುಖಕ್ಕುಗಿಯುತ್ತಾರೆ ಅಂದುಕೊಳ್ಳಬೇಕಿಲ್ಲ. ಅಲ್ಲಿ ಬೈಗುಳದ ಪದವೊಂದಿದೆ. ಅದರ ಮೂಲಕವೇ ಬೈದು ಆಶೀರ್ವಾದ ಮಾಡಲಾಗುತ್ತೆ. ಬಂದವರೆಲ್ಲರೂ ಅದನ್ನೆ ಮುಂದುವರೆಸುತ್ತಾರೆ. ಇನ್ನುಳಿದಂತೆ ಅದಾಗ ತಾನೇ ಹುಟ್ಟಿದ ಪುಟ್ಟ ಮಗವಿಗೂ ಕೂಡಾ ಅದೇ ಶೈಲಿಯಲ್ಲಿಯೇ ಆಶೀರ್ವಾದ ಮಾಡಲಾಗುತ್ತೆ. ನಮ್ಮಲ್ಲಿಯೂ ಕೆಟ್ಟದಾಗಿ ಉಗಿಯೋ ಮೂಲಕ ಆಚರಿಸೋ ಹಬ್ಬಗಳಿದ್ದಾವೆ. ಆದರೆ ಉಗಿತವೇ ಆಶೀರ್ವಾದ ಅಂತಿರೋ ಸಂಪ್ರದಾಯ ಗ್ರೀಸ್ನಲ್ಲಿ ಮಾತ್ರವೇ ಕಾಣ ಸಿಗಲು ಸಾಧ್ಯ.