ಕನ್ನಡ ಚಿತ್ರರಂಗದ ಅಸಲೀ ತಾಕತ್ತೇನೆಂಬುದೀಗ ಇಡೀ ದೇಶಕ್ಕೇ ಗೊತ್ತಾಗಿದೆ. ಬರೀ ಪ್ಯಾನಿಂಡಿಯಾ ಲೇಬಲ್ಲಿನ ಚಿತ್ರಗಳು ಮಾತ್ರವಲ್ಲ; ಕರ್ನಾಟಕಕ್ಕೆ ಮಾತ್ರವೇ ಸೀಮಿತವಾಗಿ ತಯಾರುಗೊಂಡ ಚಿತ್ರಗಳೂ ಕೂಡಾ ರಾಷ್ಟರಮಟ್ಟದಲ್ಲಿ ಸದ್ದು ಮಾಡುತ್ತಿವೆ. ಕೋಟಿ ಕೋಟಿ ಬಾಚಿಕೊಳ್ಳುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸುವಂತಿವೆ. ಅದಕ್ಕೊಂದು ತಾಜಾ ಉದಾಹರಣೆ ಕಾಂತಾರ. ಇದೀಗ ಶ್ರೀನಗರ ಕಿಟ್ಟಿ ಅಭಿನಯದ ಗೌಳಿ ಚಿತ್ರದ ಮೂಲಕ ಆ ಸಮ್ಮೋಹಕ ಇತಿಹಾಸ ಮರುಕಳಿಸಲಿದೆಯಾ? ಈ ನೆಲದ ಘಮಲಿನ ನೈಜ ಕಥಾನಕವನ್ನೊಳಗೊಂಡಿರುವ ಗೌಳಿ ರಾಷ್ಟ್ರ ಮಟ್ಟದಲ್ಲಿ ಕಮಾಲ್ ಮಾಡಲಿದೆಯಾ? ಇಂಥಾ ಅನೇಕ ನೆಲೆಯಲ್ಲಿ ಪ್ರಶ್ನೆಗಳು ಮೂಡಿಕೊಂಡಿವೆ. ಈ ಸಿನಿಮಾದ ಟೀಸರ್ ನೋಡಿದವರೆಲ್ಲರ ಮನಸಲ್ಲಿ ಹೌದೆಂಬ ಉತ್ತರ ಗಟ್ಟಿಯಾಗಿ ಬೇರೂರಿಕೊಂಡಿದೆ!
ಯಾವುದೇ ಪ್ರಚಾರದ ಗಿಮಿಕ್ಕುಗಳಿಲ್ಲದೆ, ತೆರೆಗಾಣುವ ಹಾದಿಯಲ್ಲಿ ಯಾವ ಕಾರ್ಯತಂತ್ರಗಳನ್ನೂ ಅನುಸರಿಸದೆ, ತಾನೇತಾನಾಗಿ ಚಿತ್ರವೊಂದು ಈ ಪರಿಯಾಗಿ ಭರವಸೆ ಮೂಡಿಸೋದಿದೆಯಲ್ಲಾ? ಅದು ಅಪರೂಪದ ಗೆಲುವೊಂದರ ಸ್ಪಷ್ಟ ಸೂಚನೆ. ಈ ನಿಟ್ಟಿನಲ್ಲಿ ನೋಡೋದಾದರೆ, ಗೌಳಿ ಈ ಹೊಸಾ ಸಂವತ್ಸರವನ್ನು ಅಮೋಘ ಗೆಲುವಿನ ಮೂಲಕ ಸಂಪನ್ನಗೊಳಿಸುವ ಲಕ್ಷಣಗಳು ಸ್ಪಷ್ಟವಾಗಿಯೇ ಗೋಚರಿಸುತ್ತಿವೆ. ಈ ಮೂಲಕ ಯುವ ನಿರ್ದೇಶಕ ಸೂರಾ ಕನ್ನಡ ಚಿತ್ರರಂಗದ ಘನತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಶುಭ ಸೂಚನೆಗಳೂ ಕಾಣಿಸಲಾರಂಭಿಸಿವೆ. ಇಂಥಾ ಎಲ್ಲ ನಿರೀಕ್ಷೆ, ಭರವಸೆಗಳಿಗೆ ಕಾರಣವಾಗಿರೋದು ಗೌಳಿಯ ನೈಜ ಆಂತರ್ಯ, ಗಟ್ಟಿತನ ಎಂಬುದೇ ಚಿತ್ರಪ್ರೇಮಿಗಳೆಲ್ಲರ ಪಾಲಿಗೆ ಸಂಭ್ರಮದ ಸಂಗತಿ.
ನಿರ್ಮಾಪಕ ರಘು ಸಿಂಗಂ
ಅಷ್ಟಕ್ಕೂ ಗೌಳಿ ಚಿತ್ರೀಕರಣ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಲೇ ಸಾಗಿ ಬಂದಿದೆ. ಇದರ ಫಸ್ಟ್ ಲುಕ್ಕಿನಲ್ಲಿಯೇ ಹೊಸತನದ ಛಾಯೆ ಲಕಲಕಿಸಿತ್ತು. ವಿಶೇಷವೆಂದರೆ, ಈ ಸಿನಿಮಾ ಮೂಲಕ ಶ್ರೀನಗರ ಕಿಟ್ಟಿ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಎಲ್ಲವೂ ಇದ್ದರೂ ಅದೇಕೋ ಪುಷ್ಕಳ ಗೆಲುವೊಂದು ಕಿಟ್ಟಿಯ ಪಾಲಿಗೆ ಮರೀಚಿಕೆಯಾಗಿ ಬಿಟ್ಟಿತ್ತು. ಒಂದು ಬ್ರೇಕ್ಗಾಗಿ, ವೃತ್ತಿ ಬದುಕು ಮತ್ತೆ ಕಳೆಗಟ್ಟಿಕೊಳ್ಳುವ ಕ್ಷಣಗಳಿಗಾಗಿ ಕಾದು ಕೂತಿದ್ದ ಕಿಟ್ಟಿ ಪಾಲಿಗೆ ವರವಾಗಿ ಸಿಕ್ಕ ಚಿತ್ರ ಗೌಳಿ. ಬಹುಶಃ ಇದರಲ್ಲಿನ ಕಿಟ್ಟಿಯ ಗೆಟಪ್ಪು ನೋಡಿದ ಯಾವ ನಟರಿಗಾದರೂ ಈ ಪಾತ್ರ ತನಗೆ ಸಿಗಬೇಕಿತ್ತೆಂಬಂಥಾ ಆಸೆ ಮೂಡದಿರಲು ಸಾಧ್ಯವಿಲ್ಲ. ಈಗಿರುವ ವಾತಾವರಣ, ಈ ಸಿನಿಮಾ ತಯಾರುಗೊಂಡಿರುವ ರೀತಿಗಳನ್ನೆಲ್ಲ ಗಮನಿಸಿದರೆ, ಖಂಡಿತವಾಗಿಯೂ ಕಿಟ್ಟಿ ವೃತ್ತಿಬದುಕಿಗೆ ಗೌಳಿ ಹೊಸಾ ಆವೇಗ ತಂದುಕೊಡಲಿದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.
ನಿರ್ದೇಶಕ ಸೂರ
ಟೀಸರ್ ಮೂಲಕವೇ ಇಷ್ಟೆಲ್ಲ ಭಾವಗಳನ್ನ ಮೂಡಿಸಿರುವ ಗೌಳಿ ಪ್ಯಾನಿಂಡಿಯಾ ಮಟ್ಟದಲ್ಲಿ ಕಮಾಲ್ ಮಾಡೋ ಸೂಚನೆಗಳಿವೆ. ಟೀಸರ್ನಲ್ಲಿಯೇ ಇದರ ಮೇಕಿಂಗ್, ಅದ್ದೂರಿತನಗಳ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈವತ್ತು ಗೌಳಿ ಬಗ್ಗೆ ಪಡಿಮೂಡಿಕೊಂಡಿರೋ ಎಲ್ಲ ಪಾಸಿಟಿವ್ ಟಾಕ್ಗಳ ಹಿಂದಿರೋ ಶಕ್ತಿ ನಿರ್ಮಾಪಕರಾದ ರಘು ಸಿಂಗಂ ಎಂದರೆ ತಪ್ಪೇನಲ್ಲ. ಸಾಮಾನ್ಯವಾಗಿ ಬಹುತೇಕ ನಿರ್ಮಾಪಕರು ಜನಪ್ರಿಯ ಮಾದರಿಗಳು ಮತ್ತು ಗೆದ್ದ ಹೀರೋಗಳನ್ನಿಟ್ಟುಕೊಂಡು ರೇಸಿಗೆ ನಿಲ್ಲುವ ಉಮೇದು ಹೊಂದಿರುತ್ತಾರೆ. ಆದರೆ ನೆಲಮೂಲದ ಭಿನ್ನ ಕಥಾನಕವನ್ನು ಎದೆಗವುಚಿಕೊಂಡು ಪೊರೆಯುವ ಮನಸಿರುವವರ ಸಂಖ್ಯೆ ವಿರಳವಾಗಿದೆ. ಆ ಸಾಲಿಗೆ ನಿರಾಯಾಸವಾಗಿ ಸೇರಿಸಬಹುದಾಗ ಅಭಿರುಚಿ ಹೊಂದಿರುವವರು ರಘು ಸಿಂಗಂ!
ರಘು ಮೂಲತಃ ಉದ್ಯಮಿ. ಆದರೆ, ಆರಂಭ ಕಾಲದಿಂದಲೂ ಅಪಾರವಾದ ಸಿನಿಮಾ ಪ್ರೇಮ ಹೊಂದಿದ್ದ ರಘು, 2009ರ ಸುಮಾರಿಗೆ ನಿರ್ಮಾಣ ವಿಭಾಗದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ನಂತರ ಒಂದಷ್ಟು ಸಿನಿಮಾಗಳ ನಿರ್ಮಾಣದಲ್ಲಿ ಭಾಗಿಯಾಗುತ್ತಾ, ತಮ್ಮೊಳಗಿನ ಕನ ಸು ನನಸಾಗಿಸೋದರತ್ತ ತುಡಿಯುತ್ತಿದ್ದ ಅವರ ಪಾಲಿಗೆ ಅಚಾನಕ್ಕಾಗಿ ಎದುರಾದವರು ಯುವ ನಿರ್ದೇಶಕ ಸೂರ. ಹಾಗೆ ನೋಡಿದರೆ, ಸಿನಿಮಾ ನಿರ್ಮಾಣ ಎಂಬುದೂ ಕೂಡಾ ಒಂದು ಉದ್ಯಮವೇ. ಹಾಗಂತ ನಿರ್ಮಾಪಕರಿಗೆ ವ್ಯವಹಾರದಾಚೆಯ ಪ್ರೀತಿ ಇಲ್ಲದೇ ಹೋದರೆ ಚೆಂದದ ಸಿನಿಮಾಗಳು ರೂಪುಗೊಳ್ಳಲು ಸಾಧ್ಯವಾಗೋದಿಲ್ಲ. ಹೀಗಿದ್ದರೂ ಕೂಡಾ ನಿರ್ಮಾಣದ ವಿಚಾರದಲ್ಲಿಯೂ ಭಿನ್ನ ಅಭಿರುಚಿ ಇಟ್ಟುಕೊಂಡು, ಮಾಡಿದರೆ ಇಂಥಾ ಸಿನಿಮಾ ನಿರ್ಮಾಣ ಮಾಡಬೇಕೆಂಬಂಥಾ ನಿಖರ ಗುರಿ ಹೊಂದಿರುವವರು ಕಡಿಮೆ. ಆದರೆ, ರಘು ಸಿಂಗಂ ಅವರ ದಾರಿಯೇ ಬೇರೆ!
ನೈಜ ಘಟನೆ ಆಧರಿಸಿದ, ರಗಡ್ ಸಿನಿಮಾವೊಂದನ್ನು ನಿರ್ಮಾಣ ಮಾಡಬೇಕೆಂಬುದು ರಘು ಅವರ ಬಹು ವರ್ಷಗಳ ಕನಸಾಗಿತ್ತು. ಆ ಪ್ರಯತ್ನದಲ್ಲಿದ್ದ ಅವರನ್ನು ಭೇಟಿಯಾಗಿ, ಒಂದೇ ಏಟಿಗೆ ಸೆಳೆಯುವಂಥಾ ರಾ ಕಥಾನಕವೊಂದನ್ನು ತೆರೆದಿಟ್ಟವರು ಪ್ರತಿಭಾನ್ವಿತ ಯುವ ನಿರ್ದೇಶಕ ಸೂರ. ಅದು ನೈಜ ಚಿತ್ರಣವೇ ಆವಿರ್ಭವಿಸಿದಂತಿದ್ದ ಕಥೆ. ಸಿರಸಿಗೆ ಆತುಕೊಂಡಂತಿರುವ ಯಲ್ಲಾಪುರ ಭಾಗದವರಾದ ಸೂರ, ಅಲ್ಲಿ ನೆಲೆಸಿರುವ ಗೌಳಿ ಸಮುದಾಯದ ನಡುವೆ ನಡೆದ ನೈಜ ಘಟನಾವಳಿಗಳಿಗೆ ಸಿನಿಮಾ ರೂಪ ನೀಡಿದ್ದರು. ಅದನ್ನು ಕೇಳಿ ಥ್ರಿಲ್ ಆದ ರಘು ಸಿಂಗಂ ಆ ಕ್ಷಣವೇ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿದ್ದರಂತೆ. ಆ ನಂತರ ಗೌಳಿ ಎಂಬ ರಗಡ್ ಶೀರ್ಷಿಕೆ ಫಿಕ್ಸಾಗಿ, ಅದಕ್ಕೆ ಶ್ರೀನಗರ ಕಿಟ್ಟಿ ನಾಯಕನಾಗಿ ನಿಕ್ಕಿಯಾಗಿ, ಉಳಿಕೆ ಪಾತ್ರ ವರ್ಗದ ಆಯ್ಕೆ ಕಾರ್ಯಗಳೆಲ್ಲವೂ ಖುದ್ದು ರಘು ಅವರ ಸಮ್ಮುಖದಲ್ಲಿಯೇ ಫೈನಲ್ ಆಗಿದ್ದವು.
ಆ ನಂತರದಲ್ಲಿ ತಿಂಗಳುಗಟ್ಟಲೆ ಶಿರಸಿ, ಯಲ್ಲಾಪುರ ಸೀಮೆಯಲ್ಲಿ ಚಿತ್ರೀಕರಣವಾದ ಅನುಭವ ರಘು ಸಿಂಗಂ ಅವರ ಮನಸಲ್ಲಿ ರೋಮಾಂಚಕ ಅನುಭೂತಿಯಂತೆ ಅಚ್ಚೊತ್ತಿದೆ. ಅವರು ಹಣಕಾಸಿನ ಅಂಕೆಯಿಲ್ಲದೆ, ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಹವಾ ಸೃಷ್ಟಿಸಲು ಏನು ಬೇಕೋ ಅದೆಲ್ಲವನ್ನೂ ವ್ಯವಸ್ಥೆ ಮಾಡಿಸಿದ್ದಾರೆ. ನಿರ್ದೇಶಕ ಸೂರ ಆರಂಭದಲ್ಲಿ ಮಾತು ಕೊಟ್ಟಿದ್ದಕ್ಕಿಂತಲೂ ಒಂದಷ್ಟು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿ ಗೌಳಿಯನ್ನು ರೂಪಿಸಿದ್ದಾರೆಂಬ ಮೆಚ್ಚುಗೆ ರಘು ಅವರಲ್ಲಿದೆ. ಇದೀಗ ಚಿತ್ರೀಕ,ರಣವನ್ನೆಲ್ಲ ಮುಗಿಸಿಕೊಂಡಿರುವ ಗೌಳಿ ಸೆನ್ಸಾರ್ನತ್ತ ಮುಖ ಮಾಡಿ ನಿಂತಿದೆ.
ಇನ್ನೇನು ಶೀಘ್ರದಲ್ಲಿಯೇ ಟ್ರೈಲರ್ ಲಾಂಚ್ ಮಾಡಲು ರಘು ಸಿಂಗಂ ತಯಾರಾಗುತ್ತಿದ್ದಾರೆ. ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಗೌಳಿಯನ್ನು ತೆರೆಗಾಣಿಸುವ ಯೋಚನೆಯೂ ಅವರಲ್ಲಿದೆ. ಒಟ್ಟಾರೆಯಾಗಿ ಒಂದು ಅಪರೂಪದ ರಗಡ್ ಸಿನಿಮಾ ಮಾಡಿರುವ ಆತ್ಮತೃಪ್ತಿ ಮತ್ತು ಅದು ದೊಡ್ಡ ಮಟ್ಟದಲ್ಲಿ ಗೆಲುವು ಕಾಣುತ್ತದೆಂಬ ಅಚಲ ಆತ್ಮವಿಶ್ವಾಸ ಅವರಲ್ಲಿದೆ. ಸದ್ಯಕ್ಕೆ ಪ್ರೇಕ್ಷಕರ ನಡುವೆ ಗೌಳಿ ಹುಟ್ಟು ಹಾಕಿರುವ ಕ್ರೇಜ್ ನೋಡಿದರೆ, ಗೌಳಿಗೆ ರೋಮಾಂಚಕ ಗೆಲುವು ಸಿಗುವುದು ಗ್ಯಾರೆಂಟಿ ಎಂಬಂತಿದೆ. ಈ ಚಿತ್ರದ ಮೂಲಕ ಕನಸುಗಾರ, ಸಾಹಸಿ ನಿರ್ಮಾಪಕ ಕನ್ನ ಡ ಚಿತ್ರರಂಗಕ್ಕೆ ಸಿಕ್ಕಂತಾಗಿದೆ. ಗೌಳಿ ದೊಡ್ಡ ಮಟ್ಟದ ಗೆಲುವು ಕಾಣಲಿ. ರಘು ಸಿಂಗಂ ಇನ್ನೂ ಅನೇಕ ಭಿನ್ನ ಬಗೆಯ ಯಶಸ್ವೀ ಚಿತ್ರಗಳನ್ನು ನಿರ್ಮಾಣ ಮಾಡಲೆಂಬುದು ಹಾರೈಕೆ!
Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.