ಈಗೊಂದೆರಡು ದಶಕಗಳ ಹಿಂದೆ ಕಾಲದ ಕಾಲುಗಳಿಗೆ ಈ ಪಾಟಿ ವೇಗ ಇರಲಿಲ್ಲವೇನೋ… ಹೀಗಂತ ಸೆನ್ಸಿಟಿವ್ ಮನಸ್ಥಿತಿಯ ಜನರಿಗೆಲ್ಲ ಒಂದಲ್ಲ ಒಂದು ಹಂತದಲ್ಲಿ ಅನ್ನಿಸಿರುತ್ತೆ. ಅದು ಭ್ರಮೆಯೋ, ವಾಸ್ತವವೋ ಭಗವಂತನೇ ಬಲ್ಲ. ಆದರೆ ಆ ಕಾಲಘಟ್ಟದಲ್ಲಿ ಎಲ್ಲವೂ ನಿಧಾನವಾಗಿ ಚಲಿಸಿತ್ತೇನೋ ಅಂತಲೇ ಭಾಸವಾಗುತ್ತೆ. ಹಾಗಿದ್ದ ಮೇಲೆ ಆ ದಿನಮಾನದಲ್ಲಿ ಹುಟ್ಟಿದ ಮಕ್ಕಳು ಬೇಗ ಬೆಳೆಯೋದುಂಟೇ? ಮಕ್ಕಳು ಹುಟ್ಟಿ ಅವು ದೊಡೋರಾಗೋದಕ್ಕೂ ಕೂಡಾ ಸುದೀರ್ಘ ಕಾಲಮಾನವೇ ಬೇಕಾಗುತ್ತಿತ್ತೇನೋ ಅನ್ನಿಸುತ್ತೆ. ಅದೇ ರೀತಿ ಈಗಿನ ಕಾಲಮಾನದಲ್ಲಿ ಕಣ್ಣೆದುರೇ ಹುಟ್ಟಿದ ಮಕ್ಕಳು ಬಹು ಬೇಗನೆ ಬೆಳೆಯುತ್ತಿದ್ದಾರೇನೋ ಎಂಬಂತೆಯೂ ಗುಮಾನಿ ಮೂಡುತ್ತೆ.
ಈಗ ನೆನ್ನೆ ಮೊನ್ನೆ ಹುಟ್ಟಿದ ಮಕ್ಕಳೂ ವೇಗವಾಗಿ ಬೆಳೆಯುತ್ತವೆ. ನಮ್ಮ ಜಮಾನಕ್ಕಿಂತಲೂ ಸ್ಪೀಡಾಗಿ ವರ್ತಿಸಲಾರಂಭಿಸುತ್ತವೆ. ಮೊಬೈಲಿನಂಥ ಉಪಕರಣಗಳನ್ನು ನಮಗಿಂತಲೂ ಲೀಲಾಜಾಲವಾಗಿ ಬಳಸೋದನ್ನೂ ಕಲಿತುಕೊಳ್ಳುತ್ತವೆ. ಹಾಗಾದ್ರೆ ನಿಜಕ್ಕೂ ಈ ಜಮಾನದ ಮಕ್ಕಳ ಬೆಳವಣಿಗೆ ವೇಗವಾಗಿದೆಯಾ? ಅಥವಾ ಹಾಗನ್ನಿಸೋದು ನಮ್ಮ ಭ್ರಮೆಯಾ? ಗೊತ್ತಿಲ್ಲ. ಆದರೆ ಒಂದು ಸಂಶೋಧನೆ ಯಾವ ಕಾಲಮಾನದಲ್ಲಿ ಮಕ್ಕಳು ವೇಗವಾಗಿ ಬೆಳೆಯುತ್ತವೆ ಅನ್ನೋದನ್ನ ಪತ್ತೆಹಚ್ಚಿದೆ. ಇಂಥಾದ್ದೊಂದು ಅಧ್ಯಯನ ನಡೆಸಿರುವವರು ನ್ಯಾಸ್ವಿಲ್ಲೆಯ ಮಕ್ಕಳ ಆಸ್ಪತ್ರೆಯ ಎಂಡಿ ಆಗಿರೋ ಜೋಸೆಫ್ ಜಿûಗಾಂಟೆ.
ಜೋಸೆಫ್ ವರ್ಷಗಳ ಕಾಲ ಪುಟ್ಟ ಮಕ್ಕಳ ಬೆಳವಣಿಗೆಯ ರೂಪುರೇಷೆಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಮಳೆಗಾಲ, ಚಳಿಗಾಲ, ಬೇಸಿಗೆ ಕಾಲಗಳಲ್ಲಿ ಯಾವ ಹಂತದಲ್ಲಿ ಮಕ್ಕಳಲ್ಲಿ ಬೆಳವಣಿಗೆ ವೇಗವಾಗಿರುತ್ತದೆಂಬುದರ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಕಡೆಗೂ ಬೇಸಿಗೆ ಕಾಲದಲ್ಲಿಯೇ ಬೆಳವಣಿಗೆಯ ತೀವ್ರತೆ ಹೆಚ್ಚೆಂಬ ಅಂಶವನ್ನು ಪತ್ತೆಹಚ್ಚಿದ್ದಾರೆ. ಇನ್ನುಳಿದಂತೆ ಮಳೆಗಾಲದ ಥಂಡಿ ವಾತಾವರಣದಲ್ಲಿ ಮಕ್ಕಳ ಬೆಳವಣಿಗೆ ಅಷ್ಟಾಗಿರೋದಿಲ್ಲವಂತೆ. ಅಲ್ಲಿಗೆ ಆರೋಗ್ಯವೂ ಸೇರಿದಂತೆ ಎಲ್ಲ ವಿಚಾರದಲ್ಲಿಯೂ ಬೇಸಿಗೆಯೇ ಬೆಟರ್ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ.