ಭಾರತದಂಥಾ ಅಗಾದ ವಿಸ್ತಾರದ, ಅಗೋಚರ ರೀತಿ ರಿವಾಜುಗಳಿರೋ ದೇಶದಲ್ಲಿ ಅದಕ್ಕೆ ತಕ್ಕುದಾದ ಒಂದಷ್ಟು ನಂಬಿಕೆಗಳೂ ಬೆಸೆದುಕೊಂಡಿರುತ್ತವೆ. ಅದರಲ್ಲಿ ಒಂದಷ್ಟು ಮೂಢ ನಂಬಿಕೆಯ ಲಿಸ್ಟು ಸೇರಿಕೊಂಡು ಕಣ್ಮರೆಯಾಗಿವೆ ಅನ್ನಲಾಗುತ್ತೆ. ಆದರೆ ಆ ಲಿಸ್ಟಿನಲ್ಲಿರೋ ಎಲ್ಲ ಮೂಢ ನಂಬಿಕೆಗಳೂ ಸಂಪೂರ್ಣವಾಗಿ ನಾಮಾವಶೇಷ ಹೊಂದಿವೆ ಅನ್ನಲಾಗೋದಿಲ್ಲ. ಯಾಕೆಂದರೆ ಒಂದು ವೇಳೆ ಅಂಥವೆಲ್ಲ ಮರೆಯಾಗಿದ್ದೇ ಹೌದಾಗಿದ್ದರೆ ದೆವ್ವ ಭೂತಗಳೆಂಬ ವಿಲಕ್ಷಣ ನಂಬಿಕೆಗಳು ನಮ್ಮೆಲ್ಲರ ಜೀವನದ ಪಥದ ಇಕ್ಕೆಲದಲ್ಲಿ ಈ ಪಾಟಿ ಗಸ್ತು ಹೊಡೆಯುತ್ತಿರಲಿಲ್ಲ!
ಈಗಲೂ ನಮ್ಮಲ್ಲಿ ದೆವ್ವ ಭೂತಗಳ ಹಾಟ್ ಸ್ಪಾಟುಗಳಿದ್ದಾವೆ. ಅದೆಷ್ಟೋ ಕೋಟೆ ಕೊತ್ತಲಗಳು, ಕೆಲ ಪ್ರದೇಶಗಳ ಭೂತ ಬಾಧೆಯಿಂದ ಪಾಳು ಬಿದ್ದಿವೆ. ಇನ್ನೂ ಕೆಲ ಪ್ರದೇಶಗಳು ಆ ಭಯದ ನೆರಳಲ್ಲಿಯೇ ಇದ್ದಾವೆ. ಅಂಥಾ ಪ್ರದೇಶಗಳಲ್ಲಿ ದೆಹಲಿ ಕಂಟೋನ್ಮೆಂಟ್ ಏರಿಯಾ ಕೂಡಾ ಒಂದು. ಈ ಪ್ರದೇಶವನ್ನು ದೆಹಲಿ ಕ್ಯಾಂಟ್ ಎಂದೂ ಕರೆಯಲಾಗುತ್ತದೆ. ಈ ಪ್ರದೇಶದಲ್ಲಿ ನಿರಾಳವಾಗಿ ಮೈ ಚಾಚಿಕೊಂಡಂತಿರೋ ಒಂದು ರಸ್ತೆ ಇದೆ. ಇದು ಸಖಲ ಮಾಲೀನ್ಯಗಳಿಂದ ಗಬ್ಬೆದ್ದಿರೋ ದೆಹಲಿಯ ಅತೀ ಸ್ವಚ್ಛ ರಸ್ತೆ ಎಂದೂ ಖ್ಯಾತವಾಗಿದೆ. ಆದರೂ ಕೂಡಾ ಈ ರಸ್ತೆಯಲ್ಲಿ ಜನ ಭೀತಿಯಿಂದಲೇ ಸಂಚರಿಸುತ್ತಾರೆ. ರಾತ್ರಿ ಹೊತ್ತು ಅತ್ತ ಸುಳಿಯೋದೆಂದರೂ ಬೆಚ್ಚಿಬಿದ್ದು ಬೆವರಾಡುತ್ತಾರೆ.
ಆ ಭಯಕ್ಕೆ ಕಾರಣವಾಗಿರೋದು ಒಂದು ಹೆಣ್ಣು ದೆವ್ವ ಅಂದರೆ ನಂಬಲೇ ಬೇಕು. ಈ ರಸ್ತೆಯ ಸುತ್ತ ಈ ಭಾಗದಲ್ಲಿ ನಾನಾ ದಂತಕಥೆಗಳು ಹರಡಿಕೊಂಡಿವೆ. ಈ ರಸ್ತೆಯಲ್ಲಿ ಯಾರಾದರೂ ಬೈಕ್ ಸವಾರರು ರಾತ್ರಿ ಹೊತ್ತು ಸಂಚರಿಸಿದರೆ ಬಿಳಿ ಸೀರೆಯುಟ್ಟ ದೆವ್ವ ಪ್ರತ್ಯಕ್ಷವಾಗುತ್ತಂತೆ. ನಂತರ ಅದು ಡ್ರಾಪ್ ಕೇಳುತ್ತಂತೆ. ಒಂದು ವೇಳೆ ಡ್ರಾಪ್ ಕೊಡಲು ನಿರಾಕರಿಸಿ ಮುಂದುವರೆದರೆ ಆ ಸವಾರ ಎಷ್ಟು ವೇಗವಾಗಿ ಬೈಕ್ ಚಲಾಯಿಸಿದರೂ ಅದಕ್ಕಿಂತಲೂ ವೇಗವಾಗಿ ಸಾಗಿ ಬಂದು ಚಮಕ್ಕು ಕೊಟ್ಟು ಕಣ್ಮರೆಯಾಗುತ್ತದೆಯಂತೆ. ಇಂಥಾ ಕಥೆಗಳಿಂದಾಗಿ ಆ ರಸ್ತೆಯತ್ತ ರಾತ್ರಿ ಹೊತ್ತು ಹೊರಳುವ ಸಾಹಸವನ್ನು ಹೆಚ್ಚಿನವರು ಮಾಡೋದಿಲ್ಲ. ಸದ್ಯಕ್ಕೆ ಇದರ ಹಿಂದಿರೋ ವಾಸ್ತವ ಮತ್ತು ಸತ್ಯಾಸತ್ಯತೆಗಳು ಬಯಲಾಗಿಲ್ಲ.