ಮಡದಿ ಭಾರವಾಗಿದ್ದಷ್ಟೂ ಬಹುಮಾನಕ್ಕೆ ಕಿಮ್ಮತ್ತು!
ನಮ್ಮ ದೇಶಕ್ಕೂ, ಇತರೇ ದೇಶಗಳಿಗೂ ನಾನಾ ವಿಚಾರಗಳಲ್ಲಿ ಸಾಮ್ಯತೆಗಳಿದ್ದಾವೆ. ನಮ್ಮಲ್ಲಿ ಮನರಂಜನೆಗೆಂದು ಆಡುವ, ಕೆಲ ಪ್ರದೇಶಗಳಿಗೆ ಮಾತ್ರವೇ ಸೀಮಿತವಾದ ಕೆಲ ಆಟಗಳು ಕೆಲ ದೇಶಗಳಲ್ಲಿ ಭಲೇ ಪ್ರಸಿದ್ಧಿ ಪಡೆದುಕೊಂಡಿವೆ. ಕೆಲವಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತಿ ಗಳಿಸಿಕೊಂಡಿವೆ. ಅದೆಲ್ಲದ್ರಲ್ಲಿ ಭಾರೀ ಖ್ಯಾತಿ ಗಳಿಸಿಕೊಂಡಿರೋದು ಹೆಂಡತಿಯನ್ನು ಎತ್ತಿಕೊಂಡು ಓಡೋ ಓಟ. ನಮ್ಮಲ್ಲಿ ಸ್ಥಳೀಯವಾಗಿ ಕೆಲವೆಡೆಗಳಲ್ಲಿ ಈ ಕ್ರೀಡೆ ಚಾಲ್ತಿಯಲ್ಲಿದೆ. ಆದ್ರೆ ಕೆಲ ಗಂಡಂದಿರು ಬಹುಮಾನದ ಆಸೆಯನ್ನು ಅದುಮಿಟ್ಟುಕೊಂಡು ಈ ಅಪಾಯಕಾರಿ ಆಟದಿಂದ ದೂರವುಳಿದು ಬಿಡ್ತಾರೆ.
ಅದೊಂದು ದೇಶದಲ್ಲಿ ಮಾತ್ರ ಅಲ್ಲಿನ ಗಂಡಂದಿರ ಪಾಲಿಗಿದು ಫೇವರಿಟ್ ಗೇಮ್. ಅಂದಹಾಗೆ, ಇಂಥಾದ್ದೊಂದು ಕ್ರೀಡೆ ರಾಜ ಮರ್ಯಾದೆಯೊಂದಿಗೆ ಚಾಲ್ತಿಯಲ್ಲಿರೋದು ಫಿನ್ಲ್ಯಾಂಡಿನಲ್ಲಿ. ಇಲ್ಲಿನ ಸೊಂಕಾಜಾರ್ವಿ ಎಂಬ ಪ್ರದೇಶದಲ್ಲಿ ಪ್ರತೀ ವರ್ಷ ಈ ಕ್ರೀಡೆ ನಡೆಯುತ್ತೆ. ಇದರಲ್ಲಿ ಪಾಲ್ಗೊಳ್ಳದು ಕೇವಲ ಫಿನ್ಲ್ಯಾಡಿನಿಂದ ಮಾತ್ರವಲ್ಲದೇ ಬೇರೆ ದೇಶಗಳಿಂದಲೂ ದಂಪತಿಗಳು ಆಗಮಿಸ್ತಾರೆ. ಗಂಡಂದಿರೆಲ್ಲ ತಂತಮ್ಮ ಹೆಂಡತಿಯರನ್ನ ಎತ್ತಿಕೊಂಡು ಓಡಿ ಸಂಬ್ರಮಿಸ್ತಾರೆ.
ವಿಶೇಷ ಅಂದ್ರೆ, ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಗಂಡಂದಿರು ತಮ್ಮ ಹೆಂಡತಿ ದಪ್ಪಗಿರಲಿ ಅಂತಾನೇ ಬಯಸ್ತಾರೆ. ಯಾಕಂದ್ರೆ, ಇದ್ರಲ್ಲಿ ಗೆದ್ದೋರ ಬಹುಮಾನದ ಪ್ರಮಾಣ ನಿಗಧಿಯಾಗೋದು ಹೆಂಡತಿಯ ತೂಕದ ಆಧಾರದ ಮೇಲೆ. ಇದ್ರಲ್ಲಿ ಗೆದ್ದಾತನ ಹೆಂಡತಿ ಎಷ್ಟು ತೂಕವಿರ್ತಾಳೋ ಅದಕ್ಕೆ ಸಮನಾದ ತೂಕದ ಬಿಯರ್ ಬಹುಮಾನವಾಗಿ ಸಿಗುತ್ತದಂತೆ. ಈ ಅಗಾಧ ಪ್ರಮಾಣದ ಬಿಯರಿನಾಸೆಗೇ ಹೆಚ್ಚಿನ ಮಂದಿಯ ಉತ್ಸಾಹ ಒತ್ತರಿಸಿಕೊಂಡಿರಲೂ ಬಹುದು.
ಹಾಗಂತ ಇದು ಮೋಜಿಗಾಗಿ ಈ ತಲೆಮಾರಿನ ಮಂದಿ ಚಾಲ್ತಿಗೆ ತಂದ ಕ್ರೀಡೆಯಲ್ಲ. ಅದಕ್ಕೆ ಶತಮಾನಗಳಷ್ಟು ಪುರಾತನ ಇತಿಹಾಸವಿದೆ. ಹತ್ತೊಂಬತ್ತನೇ ಶತಮಾನದಿಂದಲೂ ಈ ಕ್ರೀಡೆ ಚಾಲ್ತಿಯಲ್ಲಿದೆ. ಅಂದಿನ ಉತ್ಸಾಹ ಇಂದಿಗೂ ಕೂಡಾ ಕುಂದದೆ ಮುಂದುವರೆಯುತ್ತಿದೆ. ೧೯೯೨ರಲ್ಲಿ ಇದಕ್ಕೆ ಅಧಿಕೃತವಾಗಿ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಈ ಕ್ರೀಡೆಯನ್ನೀಗ ಇಂಟರ್ನ್ಯಾಷನಲ್ ವೈಫ್ ಕ್ಯಾರಿಯಿಂಗ್ ಚಾಂಪಿಯನ್ ಶಿಪ್ ಎಂಬ ಹೆಸರಿಂದ ಕರೆಯಲಾಗ್ತಿದೆ.