ಯಾವುದೋ ಘಳಿಗೆಯಲ್ಲಿ ಹೆಗಲೇರಿಕೊಂಡು, ಸಂಪೂರ್ಣವಾಗಿ ಆವರಿಸಕೊಳ್ಳುವ ಚಟಗಳು ಕೊಂಚ ಯಾಮಾರಿದರೂ ಜೀವಕ್ಕೇ ಕಂಟಕವಾಗಿ ಬಿಡುತ್ತವೆ. ಮೊದ ಮೊದಲು ಯಾವುದೋ ದುಃಖಕ್ಕೆ, ಹಳವಂಡಕ್ಕೆ, ಹತಾಶೆಗೆ ಸಾಥ್ ಕೊಡುವಂತೆ ಕಾಣಿಸೋ ಇಂಥಾ ಚಟಗಳೇ ಬದುಕನ್ನ ಆಪೋಶನ ತೆಗೆದುಕೊಂಡ ದಂಡಿ ದಂಡಿ ಉದಾಹರಣೆಗಳಿದ್ದಾವೆ. ಅದರಲ್ಲಿಯೂ ನಶೆಯ ಉತ್ತುಂಗದ ಸ್ಥಿತಿ ತಲುಪಿಸೋ ಗಾಂಜಾ ಗುಂಗು ಹತ್ತಿಕೊಂಡಂರಂತೂ ಬದುಕು ಲಯ ತಪ್ಪಿತೆಂದೇ ಅರ್ಥ. ಹಾಗೆ ಗಾಂಜಾ ನಶೆಯ ನಂಟು ಬೆಳೆಸಿಕೊಂಡವರೆಲ್ಲ ಬೆಚ್ಚಿ ಬೀಳುವಂಥಾ ಸಂಶೋಧನಾ ವರದಿಯೊಂದೀಗ ಜಾಹೀರಾಗಿದೆ!
ಇಂಥಾದ್ದೊಂದು ವರದಿಯನ್ನು ಬಹುಕಾಲದ ಸಂಶೋಧನೆಯ ನಂತರ ಹೊರಗೆಡವಿರೋದು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ತಂಡ. ಇದರ ನೆರಳಿನಲ್ಲಿ ಹತ್ತಾರು ಮಂದಿ ತಜ್ಞರು ವರ್ಷಾಂತರಗಳ ಕಾಲ ವಿಸ್ತøತವಾದ ಅಧ್ಯಯನ ನಡೆಸಿದ್ದರು. ಆ ಅಧ್ಯಯನಗಳ ಕೇಂದ್ರ ಬಿಂದುವಾಗಿದ್ದದ್ದು ಗಾಂಜಾ ಸೇವನೆ ಮನುಷ್ಯನ ದೇಹದ ಮೇಲೆ ಬೀರುವಂಥಾ ವ್ಯತಿರಿಕ್ತ ಪರಿಣಾಮಗಳ ಕುರಿತಾಗಿತ್ತು. ಇದರ ಫಲವಾಗಿಯೇ ಅವರು ಭೀಕರ ಸತ್ಯವೊಂದನ್ನು ಕಂಡುಕೊಂಡಿದ್ದರೆ. ಅದರ ಪ್ರಕಾರವಾಗಿ ಹೇಳುವುದಾದರೆ, ನಿಯಮಿತವಾಗಿ ಗಾಂಜಾ ಸೇವಿಸೋದರಿಂದ ನಾನಾ ಅನಾರೋಗ್ಯಗಳು ಉಂಟಾಗುತ್ತವೆ. ಅಂಥವರು ಇತರರಿಗಿಂತ ಬೇಗನೆ ಹೃದಯಾಘಾತಕ್ಕೀಡಾಗುವ ಅಪಾಯ ಹೆಚ್ಚಿನದ್ದಿದೆ!
ಗಾಂಜಾವನ್ನು ಧೂಮಪಾನದ ಮೂಲಕ ಸೇವಿಸುವವರು, ಆಹಾರದ ಮೂಲಕ ತೆಗೆದುಕೊಳ್ಳುವವರಿಗೆ ಈ ಕಂಟಕ ಹೆಚ್ಚಾಗಿದೆ. ರಕ್ತ ನಾಳಗಳ ಮೇಲೆ ಗಾಂಜಾ ಮೊದಲು ಪರಿಣಾಮ ಬೀರಿ ಅವುಗಳನ್ನು ಸಂಕುಚಿತಗೊಳಿಸುತ್ತವೆ. ಕೊಲೇಸ್ಟ್ರಾಲ್ ಅನ್ನು ನರಗಳಲ್ಲಿ ಶೇಖರಣೆಯಾಗುವಂತೆ ಮಾಡಿ ಸರಾಗವಾದ ರಕ್ತ ಸಂಚಾರಕ್ಕೆ ಕಂಟಕವುಂಟು ಮಾಡುತ್ತದೆ. ಇದರಿಂದ ನಾಬನಾ ಸಮಸ್ಯೆಗಳು ಬಂದೆರಗುತ್ತವೆ. ಅದುವೇ ಮುಂದೆ ಹೃದಯಾಘಾತಕ್ಕೂ ಎಡೆ ಮಾಡಿ ಕೊಡುತ್ತದೆ. ಇತ್ತೀಚೆಗಂತೂ ಎಳೇ ವಯಸಿನವರಲ್ಲಿಯೂ ಹೃದಯಾಘಾತ ಪ್ರಕರಣಗಳು ಅತಿಯಾಗಿ ಕಾಣಿಸಿಕೊಳ್ಳುತ್ತಿವೆ. ಅದಕ್ಕೆ ಗಾಂಜಾದಂಥಾ ಮಾದಕ ಪದಾರ್ಥಗಳ ಸೇವನೆಯೂ ಕೂಡಾ ಪ್ರಧಾನ ಕಾರಣವಾಗಿರುವ ಸಾಧ್ಯತೆಗಳಿದ್ದಾವೆ. ಇಂಥಾ ಚಟದಾಸರೆಂದರೆ ಸಾವಿಗೆ ತುಂಬಾ ಪ್ರೀತಿ. ಗಾಂಜಾ ಸೇವಿಸುವವರ ಮೇಲದಕ್ಕೆ ಪ್ರೀತಿ ತುಸು ಹೆಚ್ಚೇ ಇರುತ್ತದೆಂಬುದನ್ನು ಸದರಿ ಸಂಶೋಧನೆ ಪತ್ತೆಹಚ್ಚಿದೆ!