ಯುವಕರಿಗೂ ಸ್ಫೂರ್ತಿಯಾಗೋ ಅವರ್ಯಾರು ಗೊತ್ತಾ?
ಶಾಲಾ ಕಾಲೇಜಿನ ಘಟ್ಟ ದಾಟಿದ ಬಳಿಕ ಓದೋದು ಕಷ್ಟ ಎಂಬುದು ಅನೇಕರ ಅನುಕೂಲಸಿಂಧು ಸಿದ್ಧಾಂತ. ಮತ್ತೂ ಅನೇಕರು ಓದೋ ಆಸೆ ಇದ್ದರೂ ಮನೆ ಮಕ್ಕಳು ಸಂಸಾರ ಅಂತ ಕಳೆದು ಹೋಗೋದೇ ಹೆಚ್ಚು. ಆದರೆ ಬಿಹಾರದ ೯೮ ವರ್ಷದ ಅಜ್ಜ ಮಾಡಿದ ಸಾಧನೆಯ ಕಥೆ ಕೇಳಿದರೆ ಹಾಗೆ ಅನಿವಾರ್ಯತೆಗಳ ಮಡುವಿನಲ್ಲಿ ಮುಳುಗಿ ಹೋದವರೆಲ್ಲ ತಾವೇನೋ ಕಳೆದುಕೊಂಡಿದ್ದೇವೆ ಎಂಬಂಥಾ ಚಿಂತೆಗೆ ಬೀಳೋದು ಖಚಿತ. ಬಿಹಾರದ ರಾಜ್ಕುಮಾರ್ ವೈಷ್ಯ ೯೮ರ ಇಳೀವಯಸಿನಲ್ಲಿ ನಳಂದ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪೂರೈಸೋ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಮೊನ್ನೆ ನಡೆದ ನಳಂದಾ ಮುಕ್ತ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ಮೇಘಾಲಯದ ರಾಜ್ಯಪಾಲರಾದ ಗಂಗಾ ಪ್ರಸಾದ್ ರಾಜ್ ಕುಮಾರ್ ಅವರಿಗೆ ಮಾಸ್ಟರ್ ಡಿಗ್ರಿ ಪ್ರದಾನ ಮಾಡಿದ್ದಾರೆ. ಈ ಸಂದರ್ಭದಲ್ಲೇ ಈ ವಯೋವೃದ್ಧನ ಓದೋ ಆಸಕ್ತಿ, ಅಂದುಕೊಂಡಿದ್ದನ್ನು ಪಟ್ಟು ಬಿಡದೆ ಮಾಡುವ ಛಲವನ್ನು ಮೆಚ್ಚಿ ಕೊಂಡಾಡಿದ್ದಾರೆ. ಈ ಮೂಲಕ ಎಕನಾಮಿಕ್ಸ್ನಲ್ಲಿ ಎಂಎ ಮಾಡುವ ಈ ತಾತನ ಕನಸು ನನಸಾಗಿದೆ!
ರಾಜ್ ಕುಮಾರ್ ವೈದ್ಯ ೧೯೪೦ರಲ್ಲಿಯೇ ಪದವಿ ಪೂರೈಸಿದ್ದರು. ಮನೆಯಲ್ಲಿ ಬಡತನವಿದ್ದರೂ ಓದಿನಲ್ಲಿ ಅತೀವ ಆಸಕ್ತಿ ಹೊಂದಿದ್ದ ರಾಜ್ಕುಮಾರ್ ಅವರಿಗೆ ಇನ್ನೂ ಓದಬೇಕೆಂಬ ಕನಸಿತ್ತು. ಆದರೆ ಪದವಿ ಪೂರೈಸೋ ಕಾಲದಲ್ಲಿಯೇ ಹೆಗಲೇರಿಕೊಂಡ ಜವಾಬ್ದಾರಿ ಓದನ್ನು ಅಲ್ಲಿಗೇ ಬಿಟ್ಟು ನೌಕರಿ ಹಿಡಿಯುವಂತೆ ಮಾಡಿತ್ತು. ಆ ನಂತರ ಮದುವೆಯಾಗಿ ಮಕ್ಕಳು ಸಂಸಾರ ಅಂತ ಕಳೆದು ಹೋದರೂ ಓದನ್ನು ಮುಂದುವರೆಸ ಬೇಕೆಂಬ ಹಂಬಲ ಇದ್ದೇ ಇತ್ತು. ಆದರೆ ನಾನಾ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ.
ಕಡೆಗೂ ರಾಜ್ಕುಮಾರ್ ಅವರು ಇಳೀ ವಯಸಿನಲ್ಲಿ ನಳಂದಾ ಓಪನ್ ಯೂನಿವರ್ಸಿಟಿ ಮೂಲಕ ಎಂಎ ಪದವಿ ಓದಲಾರಂಭಿಸಿದರು. ಅವರ ಮಕ್ಕಳು ಮೊಮ್ಮಕ್ಕಳೂ ಕೂಡಾ ಅದಕ್ಕೆ ತುಂಬು ಸಹಕಾರ ನೀಡಿದರು. ಅವರ ಉತ್ಸಾಹ ಎಂಥಾದ್ದಿತ್ತೆಂದರೆ, ವಯಸಿನ ಆಧಾರದಲ್ಲಿ ಯಾವ ರಿಯಾಯಿತಿಯನ್ನೂ ಬಯಸಲಿಲ್ಲ. ಎಲ್ಲ ಪರೀಕ್ಷೆಗಳನ್ನೂ ಕೂಡಾ ವಿದ್ಯಾರ್ಥಿಗಳ ನಡುವೆ ಕೂತು ವಿದ್ಯಾರ್ಥಿಯಂತೆಯೇ ಬರೆದಿದ್ದರು. ವಯೋಸಹಜ ಆಯಾಸವಿದ್ದರೂ ಲೆಕ್ಕಿಸದೆ ಪಟ್ಟು ಹಿಡಿದು ಓದಿದ ರಾಜ್ಕುಮಾರ್ ಕಡೆಗೂ ತೊಂಭತ್ತೆಂಟರ ಹೊಸ್ತಿಲಲ್ಲಿ ಯಶಸ್ವಿಯಾಗಿ ಎಂಎ ಮುಗಿಸಿಕೊಂಡಿದ್ದಾರೆ. ಆ ಮೂಲಕ ಇತರರಿಗೂ ಸ್ಫೂರ್ತಿಯಾಗಿದ್ದಾರೆ.