ಆತ ಬ್ರಿಟಿಷರ ಬಂದೂಕಿಗೆ ಎದೆಯೊಡ್ಡಿದ್ದ ದ ಗ್ರೇಟ್ ಗಾಮ!
ನಾನಾ ಕ್ಷೇತ್ರಗಳಲ್ಲಿ ಪ್ರಸಿದ್ಧರಾದವರನ್ನು ಗೂಗಲ್ ಎಂಜಿನ್ನಿನ ಡೂಡಲ್ನಲ್ಲಿ ಗೌರವಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ನಮ್ಮ ವರನಟ ಡಾ ರಾಜ್ಕುಮಾರ್ ಕೂಡಾ ಆ ಗೌರವಕ್ಕೆ ಪಾತ್ರರಾಗಿದ್ದಾರೆ. ಅದನ್ನು ಕಂಡು ಸಮಸ್ತ ಕನ್ನಡಿಗರೂ ಹೆಮ್ಮೆಪಟ್ಟುಕೊಂಡಿದ್ದಾರೆ. ಆದರೆ ಬಹಳಷ್ಟು ಸಲ ಹೀಗೆ ಡೂಡಲ್ಲಿನಲ್ಲಿ ಗೌರವಿಸಲ್ಪಡುವವರ ಬಗ್ಗೆ ಆ ಕ್ಷಣದವರೆಗೂ ಬಹುತೇಕರಿಗೆ ಏನೆಂದರೆ ಏನೂ ಅರಿವಿರುವುದಿಲ್ಲ. ಇದೀಗ ಗಾಮಾ ಪೈಲ್ವಾನ್ರನ್ನು ಗೂಗಲ್ ಅದೇ ರೀತಿಯಲ್ಲಿ ಗೌರವಿಸಿದೆ. ಈ ಹೊತ್ತಿನಲ್ಲಿ ಮತ್ತೆ ಈ ಪೈಲ್ವಾನ್ ಯಾರು? ಅವರ ಹಿನ್ನೆಲೆಯೇನು? ಅವರು ಮಾಡಿರುವ ಸಾಧನೆಗಳೇನು ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಬಗ್ಗೆ ಕೆದಕುತ್ತಾ ಹೋದರೆ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳು ಜಾಹೀರಾಗುತ್ತವೆ.
ಗಾಮಾ ಪೈಲ್ವಾನ್ ಭಾರತದ ಹೆಮ್ಮೆಯ ಕುಸ್ತಿ ಪಟು. ಇಡೀ ವಿಶ್ವ ಮಟ್ಟದಲ್ಲಿ ಕುಸ್ತಿಪಟುವಾಗಿ ಹೆಸರುವಾಸಿಯಾಗಿದ್ದ ಗಾಮ, ೧೯೧೦ರಲ್ಲಿ ಭಾರತಕ್ಕೆ ವಿಶ್ವ ಕುಸ್ತಿ ಪ್ರಶಸ್ತಿಯನ್ನು ತಂದು ಕೊಟ್ಟಿದ್ದರು. ಇವರ ಮೂಲ ಹೆಸರು ಗುಲಾಮ್ ಮೊಹಮದ್. ಪಂಜಾಬಿನ ಅಮೃತಸರದ ಬಡ ಕುಟುಂಬದಲ್ಲಿ ಹುಟ್ಟಿದ್ದ ಗಾಮಾಗೆ ಆರಂಭದಿಂದಲೂ ಕುಸ್ತಿಯ ಬಗ್ಗೆ ಅಪರಿಮಿತವಾದ ಸೆಳೆತವಿತ್ತು. ಅದನ್ನೇ ಧ್ಯಾನದಂತೆ ಹಚ್ಚಿಕೊಂಡಿದ್ದ ಈತ ಕಣಕ್ಕಿಳಿದರೆ ಎದುರಾಳಿಗಳಿಗೆ ಉಳಿಗಾಲ ಇಲ್ಲ ಎಂಬಂಥಾ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದರು. ದೇಶ ಮಟ್ಟದಲ್ಲಿ ಪ್ರಸಿದ್ಧಿ ಹಬ್ಬಿಕೊಂಡಿತ್ತು. ಹೀಗೆ ತನ್ನ ಕುಸ್ತಿಯ ಕಸುವಿನಿಂದಲೇ ಬಡತನದ ನಡುವೆಯೂ ಗಾಮಾ ಮೇಲೆದ್ದು ನಿಂತು ಮಿಂಚಿದ್ದೇ ಒಂದು ಸಾಹಸಗಾಥೆ.
ಗಾಮಾಗೂ ತಾನು ಕುಸ್ತಿಪಟುವಾಗಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು, ಪ್ರಶ್ತಿ ಗೆದ್ದು ಭಾರತಕ್ಕೆ ಹೆಮ್ಮೆ ತರಬೇಕೆಂಬ ಆಸೆಯಿತ್ತು. ಆದರೆ ಹಾಸಿ ಹೊದೆಯುವಂತಿದ್ದ ಬಡತನ ಮಾತ್ರ ಆತನ ಪಾಲಿಗೆ ಅಡ್ಡಗಾಲಾಗಿತ್ತು. ಅಂಥಾ ಹೊತ್ತಿನಲ್ಲಿ ವರದಂತೆ ಎದುರಾದವನು ಆ ಕಾಲದಲ್ಲಿಯೇ ಬಂಗಾಳ ಸೀಮೆಯಲ್ಲಿ ಅಗರ್ಭ ಶ್ರೀಮಂತನೆನಿಸಿಕೊಂಡಿದ್ದ ಶರತ್ ಕುಮಾರ್ ಎಂಬಾತ. ಆ ಕಾಲಕ್ಕೆ ೧೯೧೦ರಲ್ಲಿ ಲಂಡನ್ನಿನಲ್ಲಿ ಜಾನ್ಬುಲ್ ಎಂಬ ವಿಶ್ವ ಕುಸ್ತಿ ಸ್ಪರ್ಧೆ ನಡೆಯುವುದರಲ್ಲಿತ್ತು. ಅದಕ್ಕೆ ಶರತ್ ಕುಮಾರ್ ಮಿತ್ರಾ ಅವರೇ ಖರ್ಚೆಲ್ಲ ನೋಡಿಕೊಂಡು ಗಾಮಾನನ್ನು ಕರೆದೊಯ್ದಿದ್ದರು. ಆದರೆ ಎಲ್ಲ ಶಕ್ತಿ ಇದ್ದರೂ ಗಾಮಾನಿಗೆ ಎದುರಾದದ್ದು ದೊಡ್ಡ ಮಟ್ಟದ ಅವಮಾನ!
ಗಾಮಾ ಇದ್ದದ್ದು ಕೇವಲ ೫.೭ ಅಡಿ ಎತ್ತರ ಮಾತ್ರ. ಆತನ ದೇಹದ ತೂಕ ಕೂಡಾ ಹೆಚ್ಚೇನಿರಲಿಲ್ಲ. ಇಂಥಾ ಆಸಾಮಿ ಲಂಡನ್ನಿನಲ್ಲಿ ನೆರೆದಿದ್ದ ದೈತ್ಯ ದೇಹಿ ಕುಸ್ತಿ ಪಟುಗಳನ್ನು ಯಾವ ಕಾರಣಕ್ಕೂ ಎದುರಿಸಲಾರ ಎಂಬ ತೀರ್ಮಾನಕ್ಕೆ ಆಯೋಜಕರು ಬಂದಿದ್ದರಂತೆ. ಹೀಗೆ ನಿರಾಕರಿಸುತ್ತಲೇ ಗಾಮಾನ ಜಾಗದಲ್ಲಿ ಬೇರ್ಯಾರೇ ಇದ್ದಿದ್ದರೂ ಲಂಡನ್ನಿನಿಂದ ಬರಿಗೈಲಿ ಹಿಂತಿರುಗುತ್ತಿದ್ದರು. ಆದರೀತ ಕುಸ್ತಿ ಮೈದಾನಕ್ಕೆ ನುಗ್ಗಿ ತನ್ನನ್ನು ಲಂಡನ್ನಿನ ಯಾವ ಕುಸ್ತಿ ಪಟುವೂ ಗೆಲ್ಲಲಾರ, ತನ್ನೊಂದಿಗೆ ಯಾರೂ ಐದು ನಿಮಿಷಕ್ಕಿಂತ ಹೆಚ್ಚು ಕಾಲ ಕಾದಾಟ ನಡೆಸಲಾರರೆಂದು ಸವಾಲು ಹಾಕಿದ್ದ. ಹಾಗೆ ಅಖಾಡಕ್ಕಿಳಿದ ಈತ ಇಬ್ಬರು ಪೈಲ್ವಾನರನ್ನು ಎರಡೇ ನಿಮಿಷಗಳಲ್ಲಿ ಸೋಲಿಸಿದ್ದ. ಅದನ್ನು ನೋಡಿ ಅವಾಕ್ಕಾದ ವ್ಯವಸ್ಥಾಪಕರು ಬೇರೆ ನಿರ್ವಾಹವಿಲ್ಲದೆ ಗಾಮಾನಿಗೆ ವಿಶ್ವ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದರು.
೧೯೯೦ರ ಸೆಪ್ಟೆಂಬರ್ ಹತ್ತನೇ ತಾರೀಕಿನಂದು ಲಂಡನ್ನಿನ ಕಣದಲ್ಲಿ ಗಾಮಾಗೆ ಅಕ್ಷರಶಃ ಅಗ್ನಿ ಪರೀಕ್ಷೆ ಎದುರಾಗಿತ್ತು. ಅದಾಗಲೇ ಚಾಂಪಿನ್ ಎಂದು ಗುರುತಿಸಿಕೊಂಡಿದ್ದ ಅಮೆರಿಯಾದ ರೋಲರ್ ಎಂಬಾತನನ್ನು ಎದುರಿಸಬೇಕಾಗಿತ್ತು. ಗಾಮಾ ಆತನನ್ನು ವೀರೋಚಿತವಾಗಿ ಸೋಲಿಸಿದ್ದ. ಆ ನಂತರ ಆಸ್ಟ್ರೇಲಿಯಾದ ಜಿಬಿಸ್ಕೋನೊಂದಿಗೆ ಮೂರು ಘಂಟೆಗಳ ಕಾಲ ಸತತವಾಗಿ ಹೋರಾಡಿ ಮಣಿಸಿದ್ದ. ಆದರೆ ಅಲ್ಲಿಯೂ ತಾರ ತಮ್ಯ ಮಾಡಿ ಸ್ಪರ್ಧೆಯನ್ನು ಮುಂದೂಡಿದ್ದ. ಮಾರನೇ ದಿನ ಗಾಮಾ ಅದೇ ಉತ್ಸಾಹದಿಂದ ಕಣಕ್ಕಿಳಿದರೆ ಜಿಬಿಸ್ಕೋ ನಾಪತ್ತೆಯಾಗಿದ್ದ. ಮುಂಚಿನ ದಿನ ಗಾಮಾ ಕೊಟ್ಟಿದ್ದ ಏಟುಗಳು ಆತನನ್ನು ಮೇಲೇಳಲಾರದಂತೆ ಮಲಗಿಸಿದ್ದವು. ಆ ದಿನವೇ ಗಾಮಾಗೆ ಕುಸ್ತಿಯಲ್ಲಿ ವಿಶ್ವ ಚಾಂಪಿಯನ್ ಪಟ್ಟ ಸಿಕ್ಕಿತ್ತು. ಆ ಪ್ರಶಸ್ತಿಯೊಂದಿಗೇ ಗಾಮಾ ಭಾರತಕ್ಕೆ ಹಿಂತಿರುಗಿ ಸಂಚಲನ ಸೃಷ್ಟಿಸಿದ್ದ.
ಕೇವಲ ಕುಸ್ತಿ ಪಟುವಾಗಿ ಭಾರತಕ್ಕೆ ಖ್ಯಾತಿ ತಂದುಕೊಟ್ಟಿದ್ದರೆ ಗಾಮಾ ಬರೀಯ ಕುಸ್ತಿ ಪಟುವಾಗಿಯಷ್ಟೇ ಉಳಿಯುತ್ತಿದ್ದ. ಆದರೀತ ನೋಡ ನೋಡುತ್ತಲೇ ಬ್ರಿಟೀಷರ ದಾಸ್ಯದ ಸಂಕೋಲೆಯಿಂದ ಭಾರತವನ್ನು ಬಿಡಿಸಿಕೊಳ್ಳಲು ವೀರಾಧಿ ವೀರನಂತೆ ಕಣಕ್ಕಿಳಿದ. ೧೯೧೯ರಲ್ಲಿ ಜಲಿಯನ್ ವಾಲ್ಬಾಗ್ ಹೋರಾಟದಲ್ಲಿ ಗಾಮಾ ಕೂಡಾ ಭಾಗಿಯಾಗಿದ್ದರು. ಅವರನ್ನು ಬ್ರಿಟೀಷ್ ಅಧಿಕಾರಿಗಳು ಬಂಧಿಸಿ ಚಿತ್ರ ಹಿಂಸೆ ನೀಡಿ, ಅದೇನೇ ಆಮಿಷ ಒಡ್ಡಿದರೂ ಇತರೆ ಹೋರಾಟಗಾರರ ಬಗ್ಗೆ ಸುಳಿವು ಬಿಟ್ಟುಕೊಡದ ಗಟ್ಟಿಗ ಗಾಮಾ. ಇದರಿಂದ ರೊಚ್ಚಿಗೆದ್ದ ಬ್ರಿಟಿಷರು ಗಾಮಾನಿಗೆ ಕೊಡಬಾರದ ಹಿಂಸೆ ಕೊಟ್ಟರು. ಆತ ವಿಶ್ವ ಚಾಂಪಿಯನ್ ಅನ್ನೋದನ್ನೂ ಲೆಕ್ಕಿಸದೆ ಸಾಧಾರಣ ವ್ಯಕ್ತಿಗಿಂತ ಕಡೆಯಾಗಿ ನಡೆಸಿಕೊಂಡಿದ್ದರು. ಅನ್ನಾಹಾರವಿಲ್ಲದೆ ಬಳಲಿದ ಈತನನ್ನು ಭಾರತದಿಂದ ಕಡೆಗಣಿಸಲಾಗಿತ್ತು. ಹೇಗೋ ಈಗಿನ ಪಾಕಿಸ್ತಾನ ಪ್ರಾಂತ್ಯ ಸೇರಿಕೊಂಡ ಗಾಮಾ ೧೯೫೩ರಲ್ಲಿ ಅತ್ಯಂತ ದಾರುಣವಾಗಿ ಕೊನೆಯುಸಿರೆಳೆದಿದ್ದರು.