ಗಣಿದಂಧೆಯಲ್ಲಿಯೇ ಅಕ್ರಮಗಳನ್ನು ನಡೆಸುತ್ತಾ ಸಾವಿರಾರು ಕೋಟಿಗಳನ್ನು ಗುಡ್ಡೆ ಹಾಕಿಕೊಂಡು ಮೆರೆದಾಡಿದ್ದವನು ಜನಾರ್ಧನ ರೆಡ್ಡಿ. ಹಾಗೆ ಸಂಪಾದಿಸಿದ ಕಾಸನ್ನು ರಾಜಕಾರಣಕ್ಕೆ ಸುರಿದು, ಮಂತ್ರಿಗಿರಿ ಗಿಟ್ಟಿಸಿಕೊಂಡು ಒಂದಿಡೀ ವ್ಯವಸ್ಥೆಯೇ ಗಣಿಧೂಳಿನಲ್ಲಿ ಉಸಿರುಗಟ್ಟಿದಂಥಾ ವಾತಾವರಣವನ್ನ ಕರ್ನಾಟಕದ ಮಂದಿ ಯಾವತ್ತಿಗೂ ಮರೆಯುವಂತಿಲ್ಲ. ಇಂತಿಪ್ಪ ರೆಡ್ಡಿಯ ಪುತ್ರ ಕಿರೀಟಿಯೀಗ ನಾಯಕನಾಗಿ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದಾನೆ.
ಅಷ್ಟಕ್ಕೂ ಕಿರೀಟಿ ರಂಗಸ್ಥಳ ಪ್ರವೇಶ ಮಾಡಿ ವರ್ಷವಾಗುತ್ತಾ ಬಂದಿದೆ. ಆರಂಭದಲ್ಲಿ ಒಂದಷ್ಟು ಸದ್ದು ಮಾಡಿದ್ದು ಬಿಟ್ಟರೆ, ಆ ನಂತರದಲ್ಲಿ ಯಾವ ಸುದ್ದಿಯೂ ಇರಲಿಲ್ಲ. ಆ ಚಿತ್ರದ ಕಥೆಯೇನಾಯ್ತು? ಕಿರೀಟಿ ಬಂದಷ್ಟೇ ವೇಗವಾಗಿ ಗಾಯಬ್ ಆದನಾ ಅಂತೆಲ್ಲ ಬಹುಶಃ ಯಾರೂ ತಲೆಕೆಡಿಸಿಕೊಂಡಿರಲಿಕ್ಕಿಲ್ಲ. ಆದರೆ, ಇದೀಗ ಏಕಾಏಕಿ ಕಿರೀಟಿಯ ಸಿನಿಮಾ ಮಿಸುಕಾಡಿದೆ!
ಖುದ್ದು ಜನಾರ್ಧನ ರೆಡ್ಡಿಯೇ ಮಗನ ಸಿನಿಮಾ ಬಗ್ಗೆ ಒಂದಷ್ಟು ವಿವರಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾನೆ. ಅದರನ್ವಯ ಹೇಳೋದಾದರೆ, ಕಿರೀಟಿ ನಾಯಕನಾಗಿ ನಟಿಸುತ್ತಿರೋ ಜೂನಿಯರ್ ಚಿತ್ರದ ಬಹುಭಾಗದ ಚಿತ್ರೀಕರಣ ಮುಕ್ತಾಯಗೊಂಡಿದೆ. ಗಣಿಧೂಳಿನ ಕಾಸನ್ನು ಯಥೇಚ್ಛವಾಗಿ ಸುರಿದೇ ರೆಡ್ಡಿಗಾರು ಈ ಸಿನಿಮಾವನ್ನು ನಿರ್ಮಾಣ ಮಾಡಿದಂತಿದೆ. ಅದ್ದೂರಿಯಾಗಿ ತಯಾರಾಗಿದೆ ಎನ್ನಲಾಗುತ್ತಿರುವ ಈ ಚಿತ್ರದ ಮತ್ತೊಂದಷ್ಟು ವಿಚಾರಗಳು ಹೊಸಾ ವರ್ಷದ ಹೊಸ್ತಿಲಲ್ಲಿ ಎದುರುಗೊಳ್ಳಬಹುದೇನೋ…