ಗೆಲ್ಲಲೇ ಬೇಕೆಂಬ ಛಲದ ಹಾದಿಗೆ ಕಾಲೂರಿದವರು ಯಾವತ್ತಿದ್ದರೂ ಗೆದ್ದೇ ಗೆಲ್ತಾರೆ. ಅಡಿಗಡಿಗೆ ನಸೀಬು ಕಣ್ಣಾಮುಚ್ಚಾಲೆಯಾಡಿದ್ರೂ ಗೆಲುವೆಂಬುದು ದಕ್ಕಿಯೇ ತೀರುತ್ತೆನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿದ್ದಾವೆ. ಯಾರದ್ದೋ ಶ್ರಮಕ್ಕೆ ವಾರಸೂದಾರರಾಗೋರ ಗೆಲುವು ನೀರ ಮೇಲಿನ ಗುಳ್ಳೆಯಿದ್ದಂತೆ. ಆ ಕ್ಷಣಕ್ಕದು ಆಕರ್ಷನೀಯವಾಗಿ ಕಂಡರೂ ಅದು ಹೆಚ್ಚು ಕಾಲ ಉಳಿಯುವಂಥಾದ್ದಲ್ಲ. ಆದರೆ ಅಗಾಧ ಪರಿಶ್ರಮಕ್ಕೊಲಿಯೋ ಗೆಲುವು ಸಾವಿನಲ್ಲೂ ಕೈ ಹಿಡಿಯುತ್ತೆ.
ಈ ಮಾತು ನಿಮಗೆ ಉತ್ಪ್ರೇಕ್ಷೆ ಅನ್ನಿಸೀತೇನೋ. ಆದ್ರೆ ಈ ಸ್ಟೋರಿ ಕೇಳಿದ್ರೆ ಖಂಡಿತಾ ನಿಮ್ಮ ಮನಸ್ಥಿತಿ ಬದಲಾಗುತ್ತೆ. ಅಂದಹಾಗೆ ಈಗ ಹೇಳ ಹೊರಟಿರೋ ಕಥೆ ಜನಪ್ರಿಯ ಜಾಕಿಯೊಬ್ಬನದ್ದು. ಕುದುರೆ ರೇಸ್ ಅನ್ನೋದು ಇಡೀ ಜಗತ್ತಿನ ತುಂಬೆಲ್ಲ ಕ್ರೇಜ್ ಇರುವಂಥಾದ್ದು. ಅದರ ಹಿನ್ನೆಲೆಯಲ್ಲಿರೋ ಜೂಜು ಅನೇಕರ ಬದುಕನ್ನ ಬರ್ಬಾದು ಮಾಡಿದ್ರೂ ಕುದುರೆ ರೇಸಿನ ಜಾಕಿಗಳಿಗೆ ಗೆಲುವ ಶ್ರಮಕ್ಕಷ್ಟೇ ದಕ್ಕುತ್ತೆ. ಈ ಮಾತಿಗೆ ಜಾಕಿ ಫ್ರಾಂಕ್ ಹೇಯ್ಸ್ ತಾಜಾ ಉದಾಹರಣೆ.
ಫ್ರಾಂಕ್ ಹೇಯ್ಸ್ ಕುದುರೆ ರೇಸ್ ಪ್ರಿಯರಿಗೆಲ್ಲ ಪರಿಚಿತ ಹೆಸರು. ಈತ ಕುದುರೆ ಜಾಕಿಯಾಗಿ ಹಲವಾರು ವರ್ಷಗಳ ಕಾಲ ಶ್ರಮ ವಹಿಸಿದ್ದ. ಆ ಕ್ಷೇತ್ರದಲ್ಲಿ ಮಹಾ ಗೆಲುವು ದಾಖಲಿಸಲಾಗಿಯೇ ಜೀವಿತದ ಪ್ರತೀ ಕ್ಷಣಗಳನ್ನ ಮುಡಿಪಾಗಿಟ್ಟಿದ್ದ. ಆ ಕ್ಷಣಗಳೆಲ್ಲವೂ ಸಾಕಾರಗೊಳ್ಳೋ ಘಳಿಗೆ ಎದುರಾದದ್ದು ಜೂನ್ 4 1923ರಂದು. ಆವತ್ತು ಅಮೆರಿಕಾದ ನ್ಯೂಯಾರ್ಕ್ ಸ್ಟೇಟ್ನ ಬೆಲ್ಮಾಂಟ್ ಪಾರ್ಕಿನಲ್ಲಿ ಕುದುರೆ ರೇಸ್ ಇತ್ತು. ಅದರಲ್ಲಿಯೇ ದುರಂತವೋ, ಅದೃಷ್ಟವೋ ಅನ್ನಲಾಗದಂಥಾ ಘಟನೆಯೊಂದು ಸಂಭವಿಸಿತ್ತು.
ಫ್ರಾಂಕ್ ಹೇಯ್ಸ್ ಪಾಲಿಗೆ ಅದು ಜೀವನದ ಸುವರ್ಣ ಘಳಿಗೆ. ಕುದುರೆಗೊಂದು ಹೂಮುತ್ತನ್ನಿಟ್ಟು ಪ್ರೀತಿಯಿಂದ ಮೈಸವರಿಯೇ ಆತ ರೇಸ್ ಅಖಾಡಕ್ಕಿಳಿದಿದ್ದ. ಅದೊಂದು ರೋಮಾಂಚಕ ಓಟ. ಆದ್ರೆ ಅರ್ಧ ದಾರಿಯಲ್ಲಿಯೇ ಫ್ರಾಂಕ್ಗೆ ಹೃದಯಾಘಾತವಾಗಿತ್ತು. ಆತ ಕುದುರೆಯ ಮೇಲೆ ಸಂಪೂರ್ಣವಾಗಿ ಕವುಚಿಕೊಂಡಿದ್ದ. ಕುದುರೆ ಶವವನ್ನ ಹೊತ್ತುಕೊಂಡೇ ವಾಯುವೇಗದಲ್ಲಿ ಓಡಿ ಗುರಿ ಮುಟ್ಟಿತ್ತು. ಫ್ರಾಂಕ್ ಹೇಯ್ಸ್ನ ಜೀವಮಾನದ ಕನಸು ನನಸಾಗಿತ್ತು. ಆದರೆ ಆ ಕ್ಷಣವನ್ನ ಆನಂದಿಸಲು ಆತ ಬದುಕಿರಲಿಲ್ಲ.