ಈ ಜಗತ್ತಿನ ಜೀವಜಾಲದ ಸಂಕೀರ್ಣ ಸ್ಥಿತಿ ಯಾವ ಸಂಶೋಧನೆಗಳಿಗೂ ಸಹ ಅಷ್ಟು ಸಲೀಸಾಗಿ ನಿಲುಕುವಂಥಾದ್ದಲ್ಲ. ಇದುವರೆಗೂ ಹಲವಾರು ವಿಜ್ಞಾನಿಗಳು, ಸಂಶೋಧಕರು ಈ ಜಾಲದ ಬೆಂಬಿದ್ದು ಹುಡುಕಾಡುತ್ತಲೇ ಇದ್ದಾರೆ. ಹಾಗೆ ಹೊರಟು ನಿಂತಾಗೆಲ್ಲ ಅವರರ ಮುಂದೆ ಜೀವ ಜಗತ್ತಿನ ಪರಮಾದ್ಭುತಗಳು ಹಂತ ಹಂತವಾಗಿ ತೆರೆದುಕೊಳ್ಳುತ್ತಲೇ ಸಾಗುತ್ತಿವೆ. ಚಾರ್ಲ್ಸ್ ಡಾರ್ವಿನ್ರಂಥವರು ಜೀವ ಜಗತ್ತಿನ ರಹಸ್ಯಗಳನ್ನು ತಪಸ್ಸಿನಂತೆ ಭೇದಿಸಿ ಒಂದಷ್ಟು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಆ ನಂತರವೂ ಸಾಕಷ್ಟು ಮಂದಿ ಅದೇ ದಾರಿಯಲ್ಲಿ ಮುಂದುವರೆದಿದ್ದಾರೆ. ಆದರೂ ಈ ಕ್ಷಣಕ್ಕೂ ಇದು ಜೀವ ಜಗತ್ತು ಎಂಬರ್ಥದಲ್ಲಿ ಚೌಕಟ್ಟು ಹಾಕಿ ಹೇಳುವಂಥಾ ವಾತಾವರಣವಿಲ್ಲ. ಯಾಕೆಂದರೆ, ಅದೊಂದು ಸಮುದ್ರವನ್ನೂ ಮೀರಿದ ಆಳ ವಿಸ್ತಾರವುಳ್ಳ ವಿಚಾರವೆಂಬುದು ಎಲ್ಲರಿಗೂ ಮನದಟ್ಟಾಗಿದೆ. ಅದರ ಫಲವಾಗಿಯೇ ಹೊಸ ಹೊಸಾ ಅಚ್ಚರಿಗಳು ಎದುರಾಗುತ್ತಿವೆ. ಅದನ್ನು ನೋಡುತ್ತಾ ಕಣ್ಣರಳಿಸಿ ಖುಷಿಪಡುವ ಸುಖವಷ್ಟೇ ನಮ್ಮದು!
ಈ ಏಡಿಗಳು ಪ್ರಪಂಚದಲ್ಲಿರುವ ಜೀವ ಸಂಕುಲದಲ್ಲಿಯೇ ಒಂದಷ್ಟು ವೈವಿಧ್ಯತೆಯನ್ನೊಳಗೊಂಡಿರುವ ಜೀವಿಗಳು. ಸ್ಥಳೀಯವಾಗಿ ನೋಡುವುದಾದರೆ ಅವುಗಳಲ್ಲಿ ಬಹಳಷ್ಟು ಪ್ರಬೇಧಗಳಿದ್ದಾವೆ. ನಮ್ಮ ಜನರ ಪಾಲಿಗೆ ಅದು ಅದ್ಭುತ ಆಹಾರವೂ ಹೌದು. ಹಾಗಂತ ನಮ್ಮ ಕಣ್ಣೆದುರಿಗಿರುವುದಷ್ಟೇ ಏಡಿಗಳ ಪ್ರಬೇಧ ಅಂದುಕೊಳ್ಳಬೇಕಾಗಿಲ್ಲ. ಯಾಕೆಂದರೆ ಅವುಗಳ ಆವಾಸ ಸ್ಥಾನಗಳು ಜನವಸತಿ ಪ್ರದೇಶದ ಆಸುಪಾಸಿನಿ ನೀರ ತೋರೆ, ನದಿ ತಟ, ಸಮುದ್ರ ಮಾತ್ರವಲ್ಲದೇ ಅಬೇಧ್ಯ ಅರಣ್ಯಗಳ ಗರ್ಭದವರೆಗೂ ಹಬ್ಬಿಕೊಂಡಿದೆ. ಸದ್ಯ ಇದೀಗ ಎಲ್ಲರೂ ಅಚ್ಚರಿಗೀಡಾಗುವಂಥಾ ಅಪರೂಪದ ಪ್ರಭೇದದ ಏಡಿಯೊಂದನ್ನು ಪತ್ತೆಹಚ್ಚಲಾಗಿದೆ. ಅದು ಸಿಕ್ಕಿರೋದು ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿ ತೀರದಲ್ಲಿ.
ಏಡಿಗಳೆಂದರೆ ಕಠಿಣವಾದ, ನುಣುಪಾದ ಮೇಲ್ಪದರ ಹೊಂದಿರೋ ಜೀವಿಗಳೆಂಬ ಅಂದಾಜು ನಮ್ಮೆಲ್ಲರಿಗಿದೆ. ಆಸ್ಟ್ರೇಲಿಯಾದಲ್ಲಿ ಅದಕ್ಕೆ ತದ್ವಿರುದ್ಧವಾದ, ಮೈತುಂಬಾ ದಟ್ಟವಾಗಿ ರೋಮಗಳನ್ನು ಹೊಂದಿರುವ ಏಡಿ ಪತ್ತೆಯಾಗಿದೆ. ಹತ್ತಿರದಿಂದ ನೋಡಿದರೆ ಸ್ಪಾಂಜ್ನಂತೆ ಭಾಸವಾಗುವ ಆ ಏಡಿಗಳಿಗೆ ಜೀವ ವಿಜ್ಞಾನಿಗಳು ಲ್ಯಾಮಾರ್ಕೋಡ್ರೋಮಿಯಾ ಬೀಗಲ್ ಅಂತ ಹೆಸರಿಟ್ಟಿದ್ದಾರೆ. ಅದನ್ನು ಡ್ರೊಮಿಡೆ ಕುಟುಂಬಕ್ಕೆ ಸೇರಿದ್ದೆಂದೂ ಉಲ್ಲೇಖಿಸಿದ್ದಾರೆ. ಆಡು ಭಾಷೆಯಲ್ಲಿದನ್ನು ಸ್ಪಾಂಜ್ ಏಡಿ ಅಂತ ಕರೆದರೂ ಅಡ್ಡಿಯೇನಿಲ್ಲ. ಅಂತೂ ಇದು ಏಡಿಗಳ ಸಮೂಹದಲ್ಲಿಯೇ ಅತ್ಯಂತ ಅಪರೂಪದ ಪ್ರಬೇಧ. ಅವು ಆಸ್ಟ್ರೇಲಿಯಾ ಕಡಲ ತೀರವನ್ನು ಹೊರತುಪಡಿಸಿ ಮತ್ತೆಲ್ಲೆಲ್ಲಿ ಕಾಣ ಸಿಗುತ್ತವೆ? ಅವುಗಳ ಜೀವನ ಕ್ರಮ ಇತರೇ ಏಡಿಗಳಿಗಿಂದ ಹೇಗೆ ಭಿನ್ನವಾಗಿದೆ ಎಂಬ ದಿಸೆಯಲ್ಲಿ ಅಧ್ಯಯನಗಳು ನಡೆಯುತ್ತಿವೆ.