ಮನುಷ್ಯ ಕೇವಲ ಬುದ್ಧಿವಂತ ಮಾತ್ರವಲ್ಲ, ಧೈರ್ಯವಂತ ಜೀವಿಯಾಗಿಯೂ ಗುರುತಿಸಿಕೊಂಡಿದ್ದಾನೆ. ಯಾವ ಧೈತ್ಯರೇ ಎದುರಾಗಿ ನಿಂತರೂ ಬಡಿದು ಬಿಸಾಡಬಲ್ಲ ಪರಾಕ್ರಮಿಗಳೂ ಮನುಷ್ಯ ಜೀವಿಗಳ ನಡುವಲ್ಲಿದ್ದಾರೆ. ಹಾಗೆ ನಾನಾ ಪರಾಕ್ರಮ ತೋರಿಸುವವರೊಳಗೂ ವಿಚಿತ್ರವಾದ ಭಯಗಳು ತಣ್ಣಗೆ ಕೂತು ಬಿಟ್ಟಿರುತ್ತವೆ. ಮನಃಶಾಸ್ತ್ರ ಈ ವಿಚಾರವನ್ನ ದಾಖಲೆ ಸಮೇತವಾಗಿ ಪ್ರಚುರಪಡಿಸ್ತಾನೆ ಬಂದಿದೆ.
ಕೆಲವರಿಗೆ ಎತ್ತರದ ಭಯ. ಮತ್ತೆ ಕೆಲ ಮಂದಿಗೆ ಪಾತಾಳ, ನೀರು ಗಾಳಿ, ಬೆಂಕಿ, ಕ್ರಿಮಿ ಕೀಟಗಳು… ಮನುಷ್ಯ ಹೀಗೆ ಹೆಜ್ಜೆ ಹೆಜ್ಜೆಗೂ ಭಯ ಪಡ್ತಾನೇ ಬದುಕ್ತಿರ್ತಾನೆ. ನೀವು ತೀರಾ ಜಿರಳೆಗಳಿಗೂ ಭಯ ಪಡುವ ಒಂದಷ್ಟು ಮಂದಿಯನ್ನ ನೋಡಿರ್ತೀರಿ. ಆದ್ರೆ ಈ ಜಗತ್ತಲ್ಲಿ ನಿರುಪದ್ರವಿ ತರಕಾರಿಗಳಿಗೂ ಭಯ ಬೀಳೋ ಜನರಿದ್ದಾರೆ, ಅಂಥಾದ್ದೊಂದು ಕಾಯಿಲೆ ಇದೆ ಅಂದ್ರೆ ನಂಬೋದು ತುಸು ಕಷ್ಟವಾದೀತೇನೋ.
ಆದ್ರೆ ನಂಬದೆ ವಿಧಿಯಿಲ್ಲ. ಯಾಕಂದ್ರೆ ಲ್ಯಾಚನೋಫೋಭಿಯಾ ಬಾಧಿತ ವ್ಯಕ್ತಿಗಳಿಗೆ ಕೆಲ ತರಕಾರಿಗಳೂ ಕೂಡಾ ಹಾವು, ಹುಳು ಹುಪ್ಪಟೆಗಳಂತೆ ಭಯ ಬೀಳಿಸ್ತಾವಂತೆ. ಪುಟ್ಟ ಮಕ್ಕಳು ಕೆಲ ತರಕಾರಿಗಳನ್ನ ಮುಟ್ಟೋದಿಲ್ಲ. ದೊಡ್ಡವರಿಗೂ ಕೂಡಾ ಆಗಿ ಬರದ ತರಕಾರಿಗಳ ಪಟ್ಟಿಯೊಂದಿರತ್ತೆ. ಹಾಗಂತ ಅದು ಬರೀ ಬಾಯಿರುಚಿಯ ಮ್ಯಾಟರ್ ಖಂಡಿತಾ ಅಲ್ಲ. ಅಲ್ಲಿ ಲ್ಯಾಚನೋಫೋಭಿಯಾದ ಹಾಜರಿ ಇದ್ದಿರಬಹುದು. ಅದುವೇ ತರಕಾರಿಗಳ ರೂಪದಲ್ಲಿ ಭಯ ಹುಟ್ಟಿಸ್ತಿರಬಹುದು.