ನಾವು ಅಡಿಗಡಿಗೆ ಹೊರ ಜಗತ್ತಿನ ಅಚ್ಚರಿಗಳತ್ತ ಕಣ್ಣರಳಿಸಿ ನೋಡ್ತೇವೆ. ಅಲ್ಲಿನ ಅಗಾಧ ವಿಸ್ಮಯಗಳನ್ನು ಇಂಚಿಂಚಾಗಿ ನೋಡುತ್ತಾ ಸಖೇದಾಶ್ಚರ್ಯ ಹೊಮ್ಮಿಸ್ತೇವೆ. ಇಡೀ ಜಗತ್ತನ್ನೇ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಾಡಿ ನೋಡಲೇ ಬೇಕಾದ ಸ್ಥಳಗಳನ್ನ ಕಣ್ತುಂಬಿಕೊಳ್ಳಲು ಕಾತರರಾಗ್ತೇವೆ. ಆದ್ರೆ ಹಾಗೆ ಹೊರ ಜಗತ್ತಿನತ್ತ ಕಣ್ಣು ಕೀಲಿಸೋದ್ರಲ್ಲಿ ನಮ್ಮದೇ ದೇಹದ ಚಕಿತ ಸಂಗತಿಗಳತ್ತ ಅಸಡ್ಡೆ ತೋರಿಒಸುತ್ತೇವೆ. ನಮ್ಮೊಳಗೇ ನಾವರಿಯದ ಜಗತ್ತೊಂದಿದೆ, ನಮ್ಮ ದೇಹದ ಬಗ್ಗೆಯೇ ತಿಳಿದುಕೊಳ್ಳೋಕೆ ಸಾಕಷ್ಟಿದೆ ಅನ್ನೋ ವಿಚಾರವನ್ನ ಮರೆತೇ ಬಿಡುತ್ತೇವೆ.
ನಿಜವಾಗಿ ಹೇಳ್ಬೇಕಂದ್ರೆ ನಮ್ಮೆಲ್ಲ ದೇಹವೇ ಒಂದು ಅದ್ಭುತ ಜಗತ್ತು. ಅದರ ಮೇಲ್ಮೈ ಮತ್ತು ಒಳಗೆಲ್ಲಾ ಅಗೋಚರ ವಿಸ್ಮಯಗಳಿದ್ದಾವೆ. ಅದರಲ್ಲಿ ಹೊಕ್ಕುಳು ಕೂಡಾ ಸೇರಿಕೊಂಡಿದೆ. ಹೊಕ್ಕುಳೆಂದರೆ ಒಂದಷ್ಟು ರೊಮ್ಯಾಂಟಿಕ್ ಕಲ್ಪನೆಗಳಿದ್ದಾವೆ. ಸಿನಿಮಾಗಳಲ್ಲಿಯಂತೂ ರಸಿಕತೆ ಸ್ಫುರಿಸುವಂಥಾ ಸನ್ನಿವೇಶಗಳನ್ನ ನಟೀಮಣಿಯರ ಹೊಕ್ಕುಳ ಸುತ್ತಲೇ ಚಿತ್ರೀಕರಿಸಲಾಗಿದೆ. ಆದ್ರೆ ಅಂಥಾ ಹೊಕ್ಕುಳಲ್ಲಿ ಹೊಕ್ಕಿ ಕೂತಿರಬಹುದಾದ ಬ್ಯಾಕ್ಟೀರಿಯಾಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಕ್ಕಿಲ್ಲ.
ಈ ವಿಚಾರ ಗಂಡು ಮತ್ತು ಹೆಣ್ಣಿಗೂ ಅನ್ವಯಿಸುತ್ತೆ. ಇತ್ತೀಚೆಗೆ ಹೊರ ಬಂದಿರೋ ಒಂದು ಸಂಶೋಧನೆಯ ಪ್ರಕಾರವಾಗಿ ಹೇಳೋದಾದ್ರೆ ಮನುಷ್ಯನ ಹೊಕ್ಕುಳು ಬ್ಯಾಕ್ಟೀರಿಯಾಗಳ ಕೊಂಪೆ. ಹೊಕ್ಕುಳಿನ ರಚನೆಯೇ ಬ್ಯಾಕ್ಟೀರಿಯಾಗಳು ಜೀವಿಸಲು ಹೇಳಿ ಮಾಡಿಸಿದಂತಿದೆ. ಅದೆಷ್ಟೇ ಶುಚಿತ್ವ ಕಾಪಾಡಿಕೊಂಡ್ರೂ ಅಲ್ಲಿ ಬ್ಯಾಕ್ಟೀರಿಯಾಗಳು ಸದಾ ನೆಲೆಸ್ತಾವಂತೆ. ಒಂದು ವೇಳೆ ಶುಚಿತ್ರವದಲ್ಲಿ ಕೊರತೆ ಕಂಡು ಬಂದರಂತೂ ಅದು ಬ್ಯಾಕ್ಟೀರಿಯಾಗಳ ಆವಾಸ ಸ್ಥಾನವಾಗುತ್ತೆ.
ಸದರಿ ವರದಿ ಹೊಕ್ಕುಳಲ್ಲಿರೋ ಬ್ಯಾಕ್ಟೀರಿಯಾಗಳ ಸಂಖ್ಯೆಯ ಬಗ್ಗೆ ಗಾಬರಿ ಬೀಳುವಂಥಾ ಅಂಕಿ ಅಂಶಗಳನ್ನ ಬಿಡುಗಡೆ ಮಾಡಿದೆ. ಮನುಷ್ಯನ ಹೊಕ್ಕುಳಲ್ಲಿ ಎರಡು ಸಾವಿರದ ಮುನ್ನೂರು ಚಿಲ್ಲರೆ ಬ್ಯಾಕ್ಟೀರಿಯಾಗಳು ನೆಲೆಸುವಂಥಾ ಅವಕಾಶವಿರುತ್ತಂತೆ. ಸದಾ ಹೊಕ್ಕುಳ ಭಾಗದಲ್ಲಿ ಎರಡು ಸಾವಿರಕ್ಕೂ ಮೀರಿದ ಬ್ಯಾಕ್ಟೀರಿಯಾಗಳು ಇದ್ದೇ ಇರುತ್ತವಂತೆ. ಒಂದು ವೇಳೆ ಶುಚಿತ್ವದಲ್ಲಿ ಏರುಪೇರಾದರೆ ಈ ಬ್ಯಾಕ್ಟೀರಿಯಾಗಳಿಂದಲೇ ಆರೋಗ್ಯದಲ್ಲಿಯೂ ಏರುಪೇರಾಗೋ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.