ಹೊರಗೆಲ್ಲೋ ಇರುವ ಒಂದಷ್ಟು ಹುಳ ಹುಪ್ಪಟೆ, ಕ್ರಿಮಿ, ಕೀಟಗಳನ್ನ ನೋಡಿ ಮುಖ ಕಿವುಚುತ್ತೇವೆ. ಬ್ಯಾಕ್ಟೀರಿಯಾಗಳೆಂದರೆ ಹೌಹಾರುತ್ತೇವೆ. ಅಲ್ಲೆಲ್ಲೋ ಗಲೀಜು ಕಂಡರೆ ಮುಖ ಸಿಂಡರಿಸಿ ಕೊಸರಾಡುತ್ತೇವೆ. ಆದರೆ ನಮ್ಮ ದೇಹವೇ ಅಂಥಾದ್ದೆಲ್ಲದರ ಗುಡಾಣ ಅನ್ನೋ ಸತ್ಯವನ್ನ ಮಾತ್ರ ಮರೆತು ಮುನ್ನಡೆಯುತ್ತೇವೆ. ಕೊಂಚ ಸ್ವಚ್ಛತೆಯತ್ತ ಅನಾದರ ತೋರಿದರೂ ಹೊರಗಿನ ಗಲೀಜುಗಳನ್ನೇ ಮೀರಿಸುವಂಥಾ ಅಸಹ್ಯಗಳಿಂದ ನಮ್ಮ ದೇಹ ತುಂಬಿ ತುಳುಕುತ್ತೆ. ಅದುವೇ ನಮ್ಮ ದೇಹವನ್ನು ಕಾಯಿಲೆಯ ಕೊಂಪೆಯಾಗಿಸೋ ಅಪಾಯ ತುಸು ದೂರದಲ್ಲೇ ಹೊಂಚು ಹಾಕಿ ಕೂತಿದೆ ಅನ್ನೋದು ಕಟು ವಾಸ್ತವ.
ಮೈ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋ ಪಾಠವನ್ನ ಬುದ್ಧಿ ಬಲಿಯುತ್ತಲೇ ಎಲ್ಲರೂ ಕಲಿತುಕೊಳ್ಳುತ್ತಾರೆ. ಆದರೆ ಒಂದು ಹಂತದಲ್ಲಿ ಬಹುತೇಕರು ಸ್ವಚ್ಛತೆಯನ್ನು ಅಷ್ಟಾಗಿ ಪರಿಪಾಲಿಸೋದಿಲ್ಲ. Siಞಳ್ಲ ಅಂಗಗಳು ಹಾಗಿರಲಿ; ನಾವು ತುಂಬಾ ಮುತುವರ್ಜಿ ವಹಿಸುವ, ಸೌಂದರ್ಯಕ್ಕಾಗಿ ಹಪಾಹಪಿಸುವ ಮುಖವೇ ಎಚ್ಚರ ತಪ್ಪಿದರೆ ಹುಳಗಳಿಂದ ಮಿಜಿಗುಡಬಹುದು. ನಮ್ಮ ದೇಹದಲ್ಲಿನ ಚರ್ಮ ಆಗಾಗ ಹಳತಾಗುತ್ತಿರುತ್ತವೆ. ಹಳೇ ಚರ್ಮದ ಜೀವಕೋಶಗಳು ಒಣಗುತ್ತವೆ. ಹಾಗೆ ಒಣಗಿದ ಚರ್ಮ ಸ್ವಚ್ಛತೆ ಇಲ್ಲದಾಗ ಹುಳಗಳ ಆವಾಸ ಸ್ಥಾನವಾಗುತ್ತೆ.
ಕಾಲ ಕಾಲಕ್ಕೆ ಮುಖವನ್ನು ಸ್ವಚ್ಛವಾಗಿಟ್ಟುಕೊಂಡರೆ ಪರವಾಗಿಲ್ಲ. ಇಲ್ಲದೇ ಹೋದಲ್ಲಿ ಅನಾಹುತಕಾರಿ ಹುಳಗಳು ಮುಖದಲ್ಲಿಯೇ ಉತ್ಪತ್ತಿಯಾಗುತ್ತವೆ. ಅವು ಭಯಾನಕವಾಗ ರೋಗ ರುಜಿನಗಳಿಗೂ ಕಾರಣವಾಗುತ್ತವಂತೆ. ಇನ್ನೂ ಅಪಾಯಕಾರಿ ಅಂಶವೆಂದರೆ ಅಂಥಾ ಹುಳುಗಳು ಚರ್ಮದಿಂದ ಚರ್ಮಕ್ಕೆ ದಾಟಿಕೊಳ್ಳುತ್ತವೆ. ಇಂಥಾ ಹುಳುಗಳು ವಯಸ್ಸಾದವರ ಮುಖಗಳಲ್ಲಿ ಉತ್ಪತ್ತಿಯಾಗೋ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದಲೇ ಪರಸ್ಪರ ಭೇಟಿಯಾದಾಗ ತಬ್ಬಿಕೊಂಡು ಲೊಚಕ್ಕನೆ ಮುತ್ತಿಡೋದು, ಮುತ್ತಿಗೆ ಮುಖವೊಡ್ಡೋದಕ್ಕಿಂತ ಲಕ್ಷಣವಾಗಿ ಕೈ ಕುಲುಕಿ ಪಾರಾಗೋದು ನಿಜಕ್ಕೂ ಸುರಕ್ಷಿತ!