ಇದೀಗ ಸಾಮಾಜಿಕ ಜಾಲತಾಣವೆಂಬ ಮಾಯೆಗೆ ಎಲ್ಲರೂ ಮರುಳಾಗಿದ್ದಾರೆ. ದಿನದ ಬಹುಪಾಲು ಸಮಯವನ್ನು ಸಾಮಾಜಿಕ ಜಾಲತಾಣದ ಸಾಹಚರ್ಯದಲ್ಲಿಯೇ ಕಳೆಯುವ ಗೀಳು ಬಹುತೇಕರಿಗೆ ಅಂಟಿಕೊಂಡಿದೆ. ಆರಂಭ ಕಾಲದಲ್ಲಿ ಒಂದಷ್ಟು ರೋಮಾಂಚಕ ಫೀಲ್ ಹುಟ್ಟಿಸಿದ್ದ ಸಾಮಾಜಿಕ ಜಾಲತಾಣಗಳಿಂದು ನಾನಾ ವಂಚನೆಗಳ ಅಡ್ಡೆಯಂತಾಗಿ ಹೋಗಿದೆ. ಇದುವರೆಗೆ ಹೊರ ಜಗತ್ತಿನಲ್ಲಿ ನಡೆಯುತ್ತಿದ್ದ ಕಾನೂನು ಬಾಹಿರ ದಂಧೆ, ವಿಕೃತಿಗಳೆಲ್ಲವೂ ಸಾಮಾಜಿಕ ಜಾಲತಾಣದಲ್ಲಿಂದು ಝಾಂಡಾ ಊರಿವೆ. ಇಂಥಾದ್ದರಿಂದಾಗಿ ಮಹಿಳೆಯರು, ಹೆಣ್ಣುಮಕ್ಕಳಿಗಂತೂ ಆನ್ಲೈನ್ ಕಂಟಕ ಬಹುವಾಗಿಯೇ ಕಾಡಲು ಶುರುವಿಟ್ಟಿದೆ. ಅದರ ಪರಿಣಾಮವೀಗ ಭಾರತದ ತುಂಬೆಲ್ಲ ದಟ್ಟವಾಗಿಯೇ ಕಾಣಿಸಿಕೊಳ್ಳಲು ಶುರುವಿಟ್ಟುಕೊಂಡಿದೆ.
ಫೇಸ್ ಬುಕ್ ಎಂಬುದು ಎಲ್ಲರ ಪಾಲಿಗೂ ವರವಾಗಿ ಬಂದಿರುವಂಥಾ ಅಭಿವ್ಯಕ್ತಿ ಮಾಧ್ಯಮ. ಈ ಮೂಲಕದಿಂದಲೇ ಹೊರಜಗತ್ತಿಗೆ ತೆರೆದುಕೊಂಡ ಪ್ರತಿಭೆಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಂಥವರಲ್ಲಿ ಮಹಿಳೆಯರೂ ಸೇರಿದ್ದಾರೆ. ಆದರೆ, ಫೇಸ್ ಬುಕ್ ಜಗತ್ತಿನಲ್ಲಿ ಮಹಿಳೆಯರಿಗೆ ಅಂಥಾ ರಕ್ಷಣೆಯೇನಿಲ್ಲ. ಇಂಥಾ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ಮಹಿಳೆಯರು ಒಂದು ಕಾಲದಲ್ಲಿ ತಮ್ಮ ಫೋಟೋಗಳನ್ನು ಹಾಕಿಕೊಂಡು ಸಂಭ್ರಮಿಸುತ್ತಿದ್ದರು. ಆದರೀಗ ಅದಕ್ಕೂ ಭಯ ಪಡುವಂಥಾ ದುಃಸ್ಥಿತಿ ಎದುರಾಗಿದೆ. ಇಂಥಾ ಫೋಟೋಗಳನ್ನು ಬಳಸಿಕೊಂಡು ವಿಕೃತಿ ಮೆರೆಯುವ, ಈ ಮೂಲಕ ಯಾರದ್ದೋ ಬದುಕನ್ನು ಸರ್ವನಾಶ ಮಾಡುವ ಸೈಕೋ ಸಂತತಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡಾರ ಹೂಡಿವೆ.
ಒಂದು ಕಾಲದಲ್ಲಿ ಹಾದಿ ಬೀದಿಗಳಲ್ಲಿ ಠಳಾಯಿಸುತ್ತಿದ್ದರಲ್ಲಾ ಕಾಮುಕರು? ಅಂಥವರ ಲೊಕೇಷನ್ನೀಗ ಸಾಮಾಜಿಕ ಜಾಲತಾಣಗಳಿಗೆ ಶಿಫ್ಟ್ ಆಗಿ ಬಿಟ್ಟಿದೆ. ಇಂಥಾ ಪಲ್ಲಟದಿಂದ ಭಾರತೀಯ ಮಹಿಳೆಯರು ಚಿಂತೆಗೀಡಾಗಿದ್ದಾರೆ. ಈ ಥರದ ಗೌಪ್ಯತೆಯ ಭಯದಿಂದ ಭಾರತೀಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಫೇಸ್ಬುಕ್ ತೊರೆಯುತ್ತಿದ್ದಾರೆಂಬುದನ್ನು ಫೇಸ್ಬುಕ್ನ ಅಂಗಸಂಸ್ಥೆಯಾದ ಮೆಟಾ ನಡೆಸಿರುವ ಸರ್ವೆ ಜಾಹೀರು ಮಾಡಿದೆಗಿದು ಫೇಸ್ಬುಕ್ ಸಂಸ್ಥೆಗೆ ಭಾರತದಲ್ಲೆದುರಾಗಿರುವ ಹಿನ್ನಡೆಯೂ ಹೌದು. ಈ ಸಂಬಂಧವಾಗಿ ಒಂದಷ್ಟು ಬದಲಾವಣೆ ತಂದು, ಮಹಿಳೆಯರಿಗೂ ಫೇಸ್ಬುಕ್ ಸೇಫ್ ಎಂಬಂಥಾ ಫೀಲ್ ಹುಟ್ಟಿಸುವಂತೆ ಮಾಡುವಲ್ಲಿ ತಂತ್ರಜ್ಞರು ಶ್ರಮಿಸುತ್ತಿದ್ದಾರಂತೆ. ಅದು ಫಲ ಕೊಟ್ಟರೆ ಭಾರತೀಯ ಮಹೆಳೆಯರಲ್ಲಿ ಮೂಡಿಕೊಂಡಿರುವ ಫೇಸ್ಬುಕ್ ಭಯ ನಿವಾರಣೆಯಾಗಬಹುದು!