ಲೋಕಸಭಾ ಚುನಾವಣೆಯ (mp election) ಅಖಾಡ ರಂಗೇರಿಕೊಂಡಿದೆ. ಬಹುತೇಕ ಎಲ್ಲ ಪಕ್ಷಗಳಲ್ಲಿಯೂ ಟಿಕೆಟ್ ಲಾಬಿ, ಆಂತರಿಕ ಜಟಾಪಟಿಗಳು ಮೇರೆಮೀರಿವೆ. ಆದರೆ, ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರ ಹಿಡಿಯುವ ಉಮೇದಿನಲ್ಲಿರುವ ಬಿಜೆಪಿಯ ಒಡಲು ಮಾತ್ರ ಕರ್ನಾಟಕದ ಮಟ್ಟಿಗೆ ಅಕ್ಷರಶಃ ಧಗಧಗಿಸಲಾರಂಭಿಸಿದೆ. ಯಾಕೆಂದರೆ, ಎಲ್ಲರ ನಿರೀಕ್ಷೆ ಮೀರಿ ಜಗಜಟ್ಟಿಗಳಂತೆ ಮೆರೆಯುತ್ತಿದ್ದ, ಮಾತೆತ್ತಿದರೆ ಮತಗಳ ನಿಡುವೆ ಪೆಟ್ರೋಲು ಸುರಿದ ಬೆಂಕಿ ಹಚ್ಚುತ್ತಿದ್ದವರಿಗೇ ಟಿಕೇಟು ಕೈತಪ್ಪೋದು ಗ್ಯಾರೆಂಟಿ ಎಂಬಂತಾಗಿದೆ. ಸದ್ಯದ ಮಟ್ಟಿಗೆ ಮೈಸೂರು-ಕೊಡಗು ಲೋಕಸಭಾ ಕ್ರೇತ್ರದಲ್ಲಿ ಪ್ರತಾಪ್ ಸಿಂಂಹನಿಗೆ ತಬ್ಬಲಿ ಸ್ಥಿತಿಯೊಂದು ಸುತ್ತಿಕೊಂಡಿದೆ. ಒಳಸುಳಿಗಳನ್ನು ಬಲ್ಲ, ಕ್ಷೇತ್ರದೊಳಗಿನ ಪಲ್ಲಟಗಳ ಅರಿವಿರುವವರಿಗೆ ಇದು ನಿರೀಕ್ಷಿತ. ದೂರದಿಂದ ಸಿಂಹದ ಅಟಾಟೋಪಗಳನ್ನು ಕಂಡಿದ್ದವರಿಗಿದು ಅನಿರೀಕ್ಷಿತ ಆಘಾತ!
ಅದೇನೇ ಗೋಳಾಡಿದರೂ, ಆನ್ ಲೈನಲ್ಲಿ ಕಣ್ಣೀರಿಟ್ಟರೂ ಪ್ರತಾಪ್ ಸಿಂಹ ಟಿಕೆಟ್ ವಂಚಿತನಾಗೋದು ಪಕ್ಕಾ. ಖುದ್ದು ಪ್ರತಾಪ್ ಇದು ರಾಜ್ಯದ ಕೆಲ ನಾಯಕರ ಷಡ್ಯಂತ್ರ ಅಂತೆಲ್ಲ ಪರೋಕ್ಷವಾಗಿ ಬಿಂಬಿಸಲು ಯತ್ನಿಸುತ್ತಿದ್ದಾರೆ. ಈ ಮೂಲಕ ಕುದುರಿಕೊಳ್ಳುವ ಅನುಕಂಪದಲ್ಲಿ ಕಳೆದು ಹೋದ ರಾಜಕೀಯ ಕಿಮ್ಮತ್ತನ್ನು ಸಂಭಾಳಿಸಿಕೊಳ್ಳುವ ಜಾಣ ನಡೆ ಸಿಂಹದ ಕಡೆಯಿಂದ ಜಾಹೀರಾಗುತ್ತಿದೆ. ಇದೆಲ್ಲವನ್ನೂ ಕಂಡ ಸೋಶಿಯಲ್ ಮೀಡಿಯಾಗಳ ಸಿಂಹಾಭಿಮಾನಿಗಳು ಧಾರಾಕಾರವಾಗಿ ಕಣ್ಣೀರು ಸುರಿಸುತ್ತಿದ್ದಾರೆ. ಪ್ರತಾಪ್ ಸಿಂಹನನ್ನು ಅಭಿವೃದ್ಧಿಯ ಹರಿಕಾರ ಎಂಬಂಥಾ ಅತಿಶಯದ ಮಾತುಗಳಿಂದ ಉಬ್ಬಿಸುತ್ತಿದ್ದಾರೆ. ಇದು ಯಡಿಯೂರಪ್ಪ, ವಿಜಯೇಂದ್ರ ಮುಂತಾದವರ ಹಿಕ್ಮತ್ತೆಂಬಂತೆ ಬಿಂಬಿಸುವ ಪ್ರಯತ್ನಗಳೂ ನಡೆಯುತ್ತಿವೆ. ಹಾಗಾದರೆ, ನಿಜಕ್ಕೂ ನಡೆದಿರುವುದೇನು? ಟಿಕೆಟು ತಪ್ಪಿಸಿಕೊಂಡ ಸಿಂಹ ಕುಂಯ್ಯೋ ಅನ್ನಲು ಕಾರಣರಾದವರು ಯಾರು? ಈ ಪ್ರಶ್ನೆಗಳನ್ನಿಟ್ಟುಕೊಂಡು ತಲಾಷಿಗಿಳಿದರೆ ಒಂದಷ್ಟು ಅಚ್ಚರಿದಾಯಕ ವಿದ್ಯಮಾನಗಳು ಎದುರಾಗುತ್ತವೆ!
ಯದುವೀರ್ ಮಾವನ ಮ್ಯಾಜಿಕ್ಕು!
ಪ್ರತಾಪ್ ಸಿಂಹನಿಗೆ ಟಿಕೆಟಿಲ್ಲ ಎಂಬ ಸುದ್ದಿ ಜಾಹೀರಾಗಿ, ಆತ ಲೈವ್ ಬಂದು ಭಾವುಕನಾಗುವಲ್ಲಿಗೆ ಮೈಸೂರು-ಕೊಡಗು ಕ್ಷೇತ್ರಕ್ಕೆ ಹೊಸಾ ಅಭ್ಯರ್ಥಿಯ ಆಗಮನದ ಸ್ಪಷ್ಟ ಸೂಚನೆ ರವಾನೆಯಾಗಿದೆ. ಯದುವೀರ್ ಒಡೆಯರ್ ಈ ಬಾರಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಅಷ್ಟಕ್ಕೂ ಈ ಹಿಂದಿನ ಒಂದಷ್ಟು ವಿಧಾನಸಭಾ ಚುನಾವಣೆಗಳಲ್ಲಿಯೇ ಯದುವೀರ್ ರನ್ನು ಅಖಾಡಕ್ಕಿಳಿಸುವ ಪ್ರಯತ್ನ ನಡೆದಿತ್ತು. ಅದೇಕೋ ಯದುವೀರ ಹಿಂದೆ ಸರಿದಿದ್ದರು. ಆದರೆ, ಲೋಕಸಭಾ ಚುನಾವಣಾ ಅಖಾಡಕ್ಕಿಳಿಯುವುದಕ್ಕೆ ಮಾತ್ರ ಯದುವೀರ್ ಉತ್ಸುಕರಾಗಿದ್ದಾರೆಂಬ ಮಾತುಗಳು ಅರಮನೆಯ ಅಂತಃಪುರದಿಂದಲೇ ಹೊರಬೀಳುತ್ತಿವೆ. ಯಾವಾಗ ಅಳೀಮಯ್ಯನಿಗೆ ಸಂಸತ್ತಿಗೆ ತೆರಳೋ ಮನಸಾಗಿದೆ ಅಂತ ಮನವರಿಕೆಯಾಯ್ತೋ, ಆಗ ರಾಜಸ್ಥಾನದ ಮಾವಯ್ಯ ಹರ್ಷವರ್ಧನ್ ಸಿಂಗ್ ಅಖಾಡಕ್ಕಿಳಿದು ಬಿಟ್ಟಿದ್ದಾರೆ!
ಈ ಹರ್ಷವರ್ಧನ್ ಸಿಂಗ್ ಡುಂಗರಾಪುರ್ ಯದುವೀರ್ ಮಡದಿ ತ್ರಿಶಿಕಾರ ತಂದೆ. ರಾಜಸ್ಥಾನದ ಡುಂಗಾರಪುರ ರಾಜಮನೆತನದ ಹರ್ಷವರ್ಧನ್ ಈ ಕಾಲಮಾನಕ್ಕೂ ರಾಜವೈಭೋಗದ ಬದುಕನ್ನು, ಪ್ರತಿಷ್ಠೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಮೋದಿ ಪ್ರಧಾನಿಯಾದ ನಂತರದಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಅಧಿಕೃತವಾಗಿ ಗುರುತಿಸಿಕೊಂಡಿದ್ದ ಹರ್ಷವರ್ಧನ್, ಈ ಹಿಂದೆ ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಆತ ಎಂಥಾ ಪ್ರಭಾವಿಯೆಂದರೆ, ಈ ಕ್ಷಣಕ್ಕೂ ಪ್ರಧಾನಿ ಮೋದಿಯಿಂದ ಹಿಡಿದು, ಗೃಹಸಚಿವ ಅಮಿತ್ ಶಾ ವರೆಗೆ ಎಲ್ಲ ಪ್ರಭಾವಿಗಳೊಂದಿಗೂ ಖಾಸಾ ಗೆಳೆತನ ಹೊಂದಿದ್ದಾರೆ. ಒಂದು ಮೂಲದ ಪ್ರಕಾರ, ಖುದ್ದ ಹರ್ಷವರ್ಧನ್ ಸಿಂಗ್ ಮೋದಿ, ಅಮಿತ್ ಷಾರನ್ನು ಭೇಟಿ ಮಾಡಿ ಮೈಸೂರು ಕೊಡಗು ಕ್ಷೇತ್ರದಿಂದ ತನ್ನ ಅಳಿಯನನ್ನು ಕಣಕ್ಕಿಳಿಸುವಂತೆ ಪ್ರಸ್ವಾನೆಯನ್ನಿಟ್ಟಿದ್ದಾರೆ. ಆ ನಂತರ ನಡೆದ ವಿದ್ಯಮಾನಗಳು ಪ್ರತಾಪ್ ಸಿಂಹನಿಗೆ ಸಲೀಸಾಗಿ ಮನೆಯ ದಾರಿ ತೋರಿಸಿಬಿಟ್ಟಿವೆ!
ವಾತಾವರಣವೇ ಅದಲು ಬದಲು!
ಯದುವೀರ್ ಮಾವ ಇಂಥಾದ್ದೊಂದು ಬೇಡಿಕೆ ಇಡುತ್ತಲೇ ಮೈಸೂರು ಕೊಡಗು ಕ್ಷೇತ್ರದ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಲು ಮುಂದಾದದ್ದು ಅಮಿತ್ ಷಾ. ಈ ಬಗ್ಗೆ ಗ್ರೌಂಡ್ ರಿಪೋರ್ಟ್ ತರಿಸಿಕೊಂಡಿದ್ದ ಷಾಗೆ ಈ ಬಾರಿ ಟಿಕೇಟು ಕೊಟ್ಟರೂ ಪ್ರತಾಪ್ ಗೆಲ್ಲೋದು ಕಷ್ಟ ಎಂಬುದು ಸ್ಪಷ್ಟವಾಗಿತ್ತು. ಎರಡು ಅವಧಿಯಲ್ಲಿ ಗೆದ್ದ ಪ್ರತತಾಪ್ ಸಿಂಹ ತನ್ನ ದಾರಿ ಸುಗಮಗೊಳಿಸಿಕೊಳ್ಳುವ ಉಮೇದಿನಲ್ಲಿ ಪಕ್ಷಸಂಘಟನೆಯನ್ನು ಛಿದ್ರಗೊಳಿಸಿದ್ದ ಸತ್ಯವೊಂದು ಅಮಿತ್ ಶಾ ಮುಂದೆ ತೆರೆದುಕೊಂಡಿತ್ತು. ಖುದ್ದು ಈ ಭಾಗದ ಬಿಜೆಪಿಯ ಬಹುತೇಕ ಮುಖಂಡರು, ಪ್ರಭಾವಿಗಳೇ ಸಿಂಹದ ಪ್ರತಾಪ ಕಂಡು ರೊಚ್ಚಿಗೆದ್ದಿದ್ದಾರೆಂಬ ಸತ್ಯವೂ ತಲುಪಿಕೊಂಡಿತ್ತು. ಹಾಗೊಂದು ವೇಳೆ ಸಿಂಹ ಎಲ್ಲಿ ನಿಂತರೂ ಗೆಲ್ಲುವ ಛಾರ್ಮ್ ಹೊಂದಿದ್ದರೆ, ಅದಕ್ಕೊಂದು ವ್ಯವಸ್ಥೆಯಾಗುತ್ತಿತ್ತೇನೋ…
ಆದರೆ, ಸ್ವಂತ ಕ್ಷೇತ್ರದಲ್ಲಿಯೇ ನಿತ್ರಾಣಗೊಂಡಿರೋ ಸಿಂಹ, ಮತ್ಯಾವ ಕ್ಷೇತ್ರದಲ್ಲಿಯೂ ಬಚಾವಾಗೋದು ಕಷ್ಟ ಎಂಬುದು ಅಮಿತ್ ಶಾಗೂ ಸ್ಪಷ್ಟವಾಗಿದೆ. ಇದಾಗುತ್ತಲೇ ಮೋದಿ ಮುಂದೆ ಈ ಬಗ್ಗೆ ಷಾ ಪ್ರಸ್ತಾಪಿಸಿದ್ದಾರೆ. ಎಷ್ಟೆಂದರೂ ಪತ್ರಕರ್ತನಾಗಿದ್ದ ಸಂದರ್ಭದಲ್ಲಿ ಪ್ರತಾಪ್ ಮೋದಿಯ ಬಗ್ಗೆ ಥಾನುಗಟ್ಟಲೆ ಬರೆದಿದ್ದರಲ್ಲಾ? ಅದಕ್ಕೆ ಎರಡು ಸುತ್ತಿಗೆ ಮೆರೆಯುವ ಅವಕಾಶದ ಇನಾಮು ಸಾಕೆನಿಸಿತೇನೋ… ಮೋದಿಯ ಕಡೆಯಿಂದಲೂ ಪ್ರತಾಪ್ ಗೆ ಟಾಂಗ್ ಕೊಡಲು ಇಷಾರೆ ಸಿಕ್ಕಿದೆ. ಅಷ್ಟಾಗುತ್ತಲೇ ಹರ್ಷವರ್ಧನ್ ಸಿಂಗ್ ರನ್ನು ಸಂಪರ್ಕಿಸಿದ್ದ ಷಾ ಹಸಿರು ನಿಶಾನೆ ತೋರಿಸಿದ್ದಾರೆ. ಅಲ್ಲಿಗೆ ಪ್ತಾಪ್ ಸಿಂಹನಿಗೆ ಮೈಸೂರು ಕೊಡಗು ಕ್ಷೇತ್ರದ ನಂಟು ಖಾಯಮ್ಮಾಗಿ ಕಳಚಿಕೊಂಡಂತಾಗಿದೆ. ಗಮನೀಯ ಅಂಶವೆಂದರೆ, ಈಗ ಪ್ರತಾಪ್ ರಾಜ್ಯದ ಕೆಲ ನಾಯಕರೇ ತನ್ನನ್ನು ತುಳಿಯುತ್ತಿದ್ದಾರೆ ಎಂಬರ್ಥದಲ್ಲಿ ಮಾತಾಡುತ್ತಿದ್ದಾರೆ. ಆದರೆ, ಟಿಕೆಟ್ ಕೈತಪ್ಪಿದ್ದರ ಹಿಂದೆ ರಾಜಸ್ಥಾನದ ನಂಟಿದೆಯೇ ಹೊರತು, ಅದರ ಸುತ್ತ ರಾಜ್ಯ ನಾಯಕರ ನೆರಳು ಕಾಣಿಸುತ್ತಿಲ್ಲ!
ಪ್ರತಾಪ್ ಗೆಲುವಿನ ಹಿಂದಿದೆ ರಹಸ್ಯ!
ಪ್ರತಾಪ್ ಸಿಂಹ ಹಾಸನ ಸೀಮೆಯವರು. ನಾನಾ ಲೆಕ್ಕಾಚಾರಗಳ ಕಾರಣದಿಂದ ಆತನಿಗೆ ಮೈಸೂರು ಕೊಡಗು ಕ್ಷೇತ್ರದಿಂದ ಟಿಕೇಟು ಸಿಕ್ಕಿತ್ತು. ಎರಡೆರಡು ಸಲ ಗೆಲುವೂ ಕೂಡಾ ಸಲೀಸಾಗಿಯೇ ದಕ್ಕಿತ್ತು. ಅದಕ್ಕೆ ಮೋದಿ ಅಲೆ ಕಾರಣ ಅಂತ ಅನೇಕರು ಹೇಳೋದಿದೆ. ಆದರೆ, ಪ್ರತಾಪ್ ಗೆಲುವಿನ ಹಿಂದೆ ರಾಜಕಾರಣದ ಆಂತರಿಕ ಒಡಂಬಡಿಕೆ, ಕಿತ್ತಾಟ ಮತ್ತು ಅದರ ಫಲವಾಗಿ ಚದುರಿದ ಒಕ್ಕಲಿಗರ ಓಟುಗಳೆಲ್ಲವೂ ಕಾರಣವಾಗಿತ್ತೆಂಬುದು ಆತ್ಯಂತಿಕ ಸತ್ಯ. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿ ಅಲೆಯಾಚೆಗೆ ಪ್ರತಾಪ್ ನನ್ನು ಗೆಲ್ಲಿಸಿದ್ದು ಮೈಸೂರು ಕೊಡಗು ಕ್ರೇತ್ರದ ರಾಜಕೀಯ ವಲಯದಲ್ಲಿ ನಡೆದಿದ್ದ ಆಂತರಿಕ ಪಲ್ಲಟಗಳಷ್ಟೇ.
ಪ್ರತಾಪ್ ಮೊದಲ ಚುನಾವಣೆಯ ಸಂದರ್ಭದಲ್ಲಿಯೂ ಈ ಕ್ಷೇತ್ರ ಆತನ ಗೆಲುವಿಗೆ ತಂತಾನೇ ಹದಗೊಂಡಿತ್ತು. ಆ ಕಾಲಕ್ಕೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಅಡಗೂರು ವಿಶ್ವನಾಥ್ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದರು. ಗಮನಿಸಲೇ ಬೇಕಾದ ವಿಚಾರವೆಂದರೆ, ಒಕ್ಕಲಿಗ ಸಮುದಾಯದಿಂದ ಯಾವ ಅಭ್ಯರ್ಥಿಯೂ ಕಣದಲ್ಲಿರಲಿಲ್ಲ. ಇದೇ ಸಂದರ್ಭದಲ್ಲಿ ಜೆಡಿಎಸ್ ಕೂಡಾ ನಿವೃತ್ತ ಜಡ್ಜ್ ಚಂದ್ರಶೇಖರಯ್ಯ ಅವರನ್ನು ಕಣಕ್ಕಿಳಿಸಿ ಲಿಂಗಾಯತ ಮತ ಸೆಳೆಯಲು ಪ್ರಯತ್ನಿಸಿತ್ತು. ಅದರ ಹಿಂದಿದ್ದದ್ದು ಒಕ್ಕಲಿಗ ಮತಗಳು ಒಂದು ಕಡೆ ಸರಿಯಲೆಂಬ ಉದ್ದೇಶವಷ್ಟೇ. ಇದೇ ಹಂತದಲ್ಲಿ ಸಿಕ್ಕಸಿಕ್ಕಲ್ಲಿ ಪ್ರಹಾರ ನಡೆಸುತ್ತಿದ್ದ ವಿಶ್ವನಾಥ್ ರನ್ನು ಸೋಲಿಸುವುದು ಮಾತ್ರವೇ ಕುಮಾರಸ್ವಾಮಿ ಮತ್ತು ದೇವೇಗೌಡರ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಕಡೆಯಿಂದ ಪ್ರತಾಪ್ ಸಿಂಹನಿಗೆ ಓಟು ಹಾಕಿ ಎಂಬ ಸಂದೇಶವೊಂದು ಗುಪ್ತವಾಗಿ ಜೆಡಿಎಸ್ ಒಕ್ಕಲಿಗ ನಾಯಕರಿಗೆ ರವಾನೆಯಾಗಿತ್ತು. ಬಹುತೇಕ ಕಾಂಗ್ರೆಸ್ ಕಡೆಯ ಒಕ್ಕಲಿಗ ಮತಗಳೂ ಸಿಂಹನಿಗೆ ಬಿದ್ದಿದ್ದರಿಂದಾಗಿ ಆತ ಗೆಲುವು ಕಾಣುವಂತಾಗಿತ್ತು!
ಹೀಗೆ ಗೆದ್ದು ಮೊದಲ ಅವಧಿ ಸವೆಸಿದ್ದ ಪ್ರತಾಪ್ ಸಿಂಹನ ಪಾಲಿಗೆ ಎರಡನೇ ಅವಧಿಯಲ್ಲಿಯೂ ಅದೃಷ್ಟ ಕೈ ಹಿಡಿದಿತ್ತು. ಆ ಹಂತದಲ್ಲಿ ಕಾಂಗ್ರೆಸ್ ಜೆಡಿಎಸ್ ಖದರ್ ಇರುವ ಒಕ್ಕಲಿಗ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿದಿದ್ದರೆ, ಜೆಡಿಎಸ್ ಸಾಥ್ ಕೊಟ್ಟಿದ್ದರೆ ಪ್ರತಾಪ್ ಗೆಲುವು ಖಂಡಿತವಾಗಿಯೂ ಕಷ್ಟವಾಗುತ್ತಿತ್ತು. ಆದರೆ ಈ ಮೈತ್ರಿ ಅಭ್ಯರ್ಥಿಯಾಗಿ ವಿಜಯಶಂಕರ್ ಕಣಕ್ಕಿಳಿದರು. ಈತ ಅದಾಗಲೇ ತೆರೆಮರೆಗೆ ಸರಿದಿದ್ದ ರಾಜಕಾರಣಿ. ಒಂದು ವೇಳೆ ಈ ಜಾಗಕ್ಕೆ ಛಾತಿ ಇರುವ ಒಕ್ಕಲಿಗ ಅಭ್ಯರ್ಥಿ ಬಂದಿದ್ದರೆ ಚಿತ್ರಣವೇ ಬೇರೆಯದ್ದಿರುತ್ತಿತ್ತು. ಒಕ್ಕಲಿಗ ಮತಗಳು ಪ್ರತಾಪನತ್ತ ಮತ್ತೆ ಹರಿದಿದ್ದರಿಂದ ಎರಡನೇ ಬಾರಿಗೆ ಗೆಲುವು ದಕ್ಕಿತ್ತು.
ಸಿಂಹಕ್ಕೆ ಗ್ಯಾಸ್ ಟ್ರಬಲ್!
ಈ ಬಾರಿ ಮಾತ್ರ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಎರಡು ಬಾರಿ ಗೆದ್ದ ಮದ, ಬೆಂಗಳೂರು ಮೈಸೂರು ಕಾರಿಡಾರ್ ರಸ್ತೆಯ ಮೂಲಕಪಡೆದುಕೊಂಡಿದ್ದ ಬಿಟ್ಟಿ ಬಿಲ್ಡಪ್ಪುಗಳ ನಡುವೆ ಪ್ರತಾಪ್ ಕಡೆಯಿಂದ ಸಾಲು ಸಾಲು ಎಡವಟ್ಟುಗಳಾಗುತ್ತಾ ಬಂದಿವೆ. ಅದೆಲ್ಲದರ ಫಲವಾಗಿ ಈವತ್ತಿಗೆ ಬಿಜೆಪಿ ಪಾಳೆಯದ ಸ್ಥಳೀಯ ಮುಖಂಡರುಗಳೇ ಪ್ರತಾಪ್ ಸಿಂಹನನ್ನು ಕಂಡರೆ ಉರಿದು ಬೀಳುವಂತಾಗಿದೆ. ಚುನಾವಣೆ ಒಂದಷ್ಟು ದೂರವಿದ್ದಾಗಲೇ ಅವರೆಲ್ಲ ಪ್ರತಾಪನಿಗೆ ಸೋಲಿನ ರುಚಿ ತೋರಿಸಲು ತಯಾರಾಗಿ ಬಿಟ್ಟಿದ್ದರು. ಪ್ರತಾಪ್ ಅದ್ಯಾವ ಪರಿಯಲ್ಲಿ ಮರೆಯಲಾರಂಭಿಸಿದ್ದರೆಂದರೆ, ಖುದ್ದು ಮೈಸೂರು ಸೀಮೆಯ ಹಿರಿಯ ಬಿಜೆಪಿ ನಾಯಕರನ್ನೇ ಸಾರ್ವಜನಿಕವಾಗಿ ಮುಜುಗರಕ್ಕೀಡು ಮಾಡಲಾರಂಭಿಸಿದ್ದರು. ತೀರಾ ಪಕ್ಷದ ಪರಿಧಿಯಲ್ಲಿ ಪರಿಹರಿಸಿಕೊಳ್ಳಬಹುದಾದ ಸೂಕ್ಷ್ಮ ಸಂಗತಿಗಳನ್ನು ಹಾದಿರಂಪ ಮಾಡುವ ಮೂಲಕ ಶಿಸ್ತಿನ ಸರಹದ್ದು ದಾಟಿ ಬಿಟ್ಟಿದ್ದರು.
ಕೃಷ್ಣರಾಜ ಕ್ಷೇತ್ರದಲ್ಲಿ ರಾಮದಾಸ್ ಶಾಸಕರಾಗಿದ್ದಾಗ ಗುಂಬಜ್ ವಿವಾದಕ್ಕೆ ಕಿಚ್ಚು ಹಚ್ಚಿದ್ದದ್ದು ಇದೇ ಪ್ರತಾಪ್ ಸಿಂಹ. ಈ ಹಿನ್ನೆಲೆಯಲ್ಲಿ ರಾಮದಾಸ್ ಮೇಲೆ ಕೆಸರೆರಚಿದ್ದ ಸಿಂಹನ ವಿರುದ್ಧ ಬಿಜೆಪಿ ಪಾಳೆಯದಲ್ಲಿಯೇ ಆಕ್ರೋಶ ಮೂಡಿಕೊಂಡಿತ್ತು. ಇನ್ನುಳಿದಂತೆ, ಮೈಸೂರಿನ ಒಡಲಲ್ಲಿ ಅಡುಗೆ ಅನಿಲ ಕನೆಕ್ಷನ್ನು ಮಾಡಲು ಕಂಡ ಕಂಡಲ್ಲಿ ನೆಲ ಅಗೆಯಲಾಗಿತ್ತಲ್ಲಾ? ಅದರಿಂದ ಬಂದ ಕಮಿಷನ್ ಬಾಬತ್ತನ್ನು ಪಾಲಿಕೆ ಮಟ್ಟದ ಮುಖಂಡರಿಗಾಗಲಿ, ಇತರೇ ಮುಖಂಡರಿಗಾಗಲಿ ಕೊಡದೆ ತಾನೇ ಜೇಬಿಗಿಳಿಸಿದ್ದರೆಂಬ ಆರೋಪವೂ ಸಿಂಹನ ಮೇಲಿದೆ. ಈ ವಿಚಾರದಲ್ಲಿ ತಿರುಗಿ ಬಿದ್ದ ಬಿಜೆಪಿ ಮಂದಿಗೇ ಆವಾಜು ಹಾಕುವ ಮೂಲಕ ಸಿಂಹ ಎಲ್ಲರನ್ನೂ ಎದುರುಹಾಕಿಕೊಂಡಿತ್ತು. ಕೇವಲ ಗ್ಯಾಸ್ ಲೈನ್ ವಿಚಾರದಲ್ಲಿ ಮಾತ್ರವಲ್ಲ; ಎಲ್ಲದರಲ್ಲಿಯೂ ಸರ್ವಾರಿಕಾರಿಯಂತೆ ಪಾರಮ್ಯ ಮೆರೆದು, ಫಾಯಿಧೆ ಗಿಟ್ಟಿಸಿಕೊಳ್ಳುತ್ತಾ ಬಂದಿರುವ ಪ್ರತಾಪ್ ವಿರುದ್ಧ ಮೈಸೂರು ಕೊಡಗು ಕ್ಷೇತ್ರದ ಬಿಜೆಪಿಯಲ್ಲಿ ಅಕ್ಷರಶಃ ಕುದಿತವಿದೆ.
ಹೊರಗಿನವರೇ ಗೆಳೆಯರು!
ಹೀಗೆ ಸ್ವಪಕ್ಷದ ಶಾಸಕರು, ಮುಖಂಡರ ವಿರುದ್ಧ ಬಹಿರಂಗವಾಗಿ ಮಾತಾಡುತ್ತಾ, ಮುಜುಗರಕ್ಕೆ ಸಿಲುಕಿಸುತ್ತಾ ಬಂದಿದ್ದ ಸಿಂಹ, ಪಕ್ಷದ ಶಿಸ್ತನ್ನು ಉಲ್ಲಂಘಿಸುತ್ತಾ ಸಾಗಿ ಬಂದಿದ್ದರು. ಒಂದೆಡೆ ಸ್ವಪಕ್ಷೀಯರನ್ನು ಪರಕೀಯರಂತೆ ಕಾಣುತ್ತಾ, ಬೇರೆ ಪಕ್ಷದವರೊಂದಿಗೆ ಆತ್ಮೀಯ ನಂಟು ಹೊಂದಿದ್ದೇ ಪ್ರತಾಪ್ ಸಿಂಹನ ಪ್ರಧಾನ ಯಡವಟ್ಟಾಗಿ ಗೋಚರಿಸುತ್ತದೆ. ಜಿಟಿ ದೇವೇಗೌಡ, ಸಾರಾ ಮಹೇಶ್ ಮುಂತಾದವರೊಂದಿಗೆ ಗಳಸ್ಯಕಂಠಸ್ಯ ನಂಟು ಹೊಂದಿರೋ ಸಿಂಹಕ್ಕೆ ಕ್ಷೇತ್ರದ ಸ್ವಪಕ್ಷೀಯರೆಂದರೇನೇ ಅಲರ್ಜಿ. ಲೋಕಸಭಾ ಚುನಾವಣೆಯಲ್ಲಿ ತನ್ನ ಗೆಲುವಿಗೆ ಬೇಕಾದ ಅನುಕೂಲ, ಮಿಲಾಪಿಗಳನ್ನು ಅಚ್ಚುಕಟ್ಟಾಗಿ ನಡೆಸಿದ್ದ ಪ್ರತಾಪ್, ವಿಧಾನಸಭಾ ಚುನಾವಣೆ ಬಂದಾಕ್ಷಣ ತಟಸ್ಥ ಧೋರಣೆ ಅನುಸರಿಸಿದ್ದಾರೆಂಬ ಆರೋಪವಿದೆ.
2018 ವಿಧಾನಸಭಾ ಚುನಾವಣೆಯಲ್ಲಿ ಪಿರಿಯಾಪಟ್ಟಣದಿಂದ ಕಣಕ್ಕಿಲಿದಿದ್ದ ಮಹದೇವ್ ಗೆ ಅನುಕೂಲವಾಗುವಂತೆ ಪ್ರತಾಪ್ ನಡೆದುಕೊಂಡಿದ್ದರು. ಬಿಜೆಪಿ ಓಟುಗಳನ್ನು ತಿರುಗಿಸಿ, ಮಹದೇವ್ ಗೆಲ್ಲುವಂತೆ ಮಾಡಿದ್ದರೆಂಬ ಮಾತಿದೆ. ಆ ನಂತರವೂ ಪ್ರತಾಪನ ಸಹಕಾರ ಮಹದೇವನತ್ತ ಹರಿದು ಹೋಗಿದೆ. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗಲೂ ಅವರ ಮುಂದೆ ನಡಬಗ್ಗಿಸಿ ನಿಂತು ಪಿರಿಯಾಪಟ್ಟಣಕ್ಕೆ ಕೋಟಿ ಕೋಟಿ ಅನುದಾನ ಕೊಡಿಸಲೂ ಸಿಂಹ ಬೆವರು ಹರಿಸಿದೆ. ಇನ್ನುಳಿದಂತೆ ಜಿಟಿ ದೇವೇಗೌಡ. ಕೆಆರ್ ನಗರ ಸಾ ರಾ ಮಹೇಶ್ ಮುಂತಾದವರ ಜೊತೆ ನಿಕಟ ನಂಟು ಸಿಂಹಕ್ಕಿದೆ. ಈ ಹಿಂದೆ ಚುನಾವಣೆಗಳ ಸಂದರ್ಭದಲ್ಲಿ ತಟಸ್ಥ ಧೋರಣೆಯ ಮೂಲಕ ಇಂಥವರಿಗೆಲ್ಲ ಅನುಕೂಲ ಮಾಡಿಕೊಟ್ಟ ಆರೋಪವೂ ಇದ್ದೇ ಇದೆ. ಇದೆಲ್ಲವನ್ನೂ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಅದು ಅಮಿತ್ ಶಾಗೂ ತಲುಪಿದೆ. ಇದೆಲ್ಲವೂ ಯದುವೀರ್ ಪಾಲಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ!
ಸಿಂಹಕ್ಕೆ ಟಿಕೆಟ್ ತಪ್ಪಿದ್ದರಿಂದ ನೊಂದವರ್ಯಾರು?
ಪ್ರತಾಪ್ ಸಿಂಹ ಸೀಮೆಗಿಲ್ಲದ ಕೆಲಸಗಳನ್ನೆಲ್ಲ ಕಡಿದು ಕಟ್ಟೆ ಹಾಕಿರುವಂತೆ ಆಗಾಗ ಪೋಸು ಕೊಡುತ್ತಾ ಬಂದಿದ್ದಾರೆ. ಈ ಕೆಲಸವನ್ನು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅತ್ಯಂತ ವ್ಯವಸ್ಥಿತವಾಗಿಯೇ ಮೈಲೇಜು ಗಿಟ್ಟಿಸಿಕೊಂಡಿದ್ದಾರೆ. ಇನ್ನುಳಿದಂತೆ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಮಾಡಿ, ತಾನು ಅಭಿವೃದ್ಧಿಯ ಮುಂದಾಳು ಎಂಬಂತೆÀ ತೋರಿಸಿಕೊಳ್ಳಲು ಪ್ರತಾಪ್ ಮುಂದಾಗಿದ್ದರು. ಆದರೆ, ಅದೂ ಕೂಡಾ ಕಮೀಷನ್ ಕಿಸುರಿನ ಭಾಗ ಅಂತ ಖುದ್ದು ಬಿಜೆಪಿ ವಲಯದಲ್ಲಿಯೇ ಮಾತಾಡಿಕೊಳ್ಳುತ್ತಾರೆ. ಪುಣ್ಯಕ್ಕೆ ಸಾಂಸ್ಕøತಿಕ ನಗರಿಗೆ ಕುಂದುಂಟಾಗುತ್ತದೆಂದು ನಾಗರಿಕರು ರೊಚ್ಚಿಗೆದ್ದಿದ್ದರಿಂದ ಆ ಪ್ರಾಜೆಕ್ಟು ಗೋತಾ ಹೊಡೆದಿದೆ. ಊರುತುಂಬಾ ಅಗೆದು ಬಗೆದು, ಅದರಲ್ಲಿಯೇ ಲಾಭ ಗಿಟ್ಟಿಸಿಕೊಂಡಿರುವ ಪ್ರತಾಪ್ ಈವತ್ತಿಗೂ ಸರಿಪಡಿಸಲಾಗಿಲ್ಲ!
ಈವತ್ತಿಗೆ ಪ್ರತಾಪ್ ಸಿಂಹನಿಗೆ ಟಿಕೇಟು ತಪ್ಪಿದ್ದಕ್ಕೆ ಮೈಸೂರು ಕೊಡಗು ಕ್ಷೇತ್ರದ ಬಿಜೆಪಿಗರಿಗೆ ಖುಷಿಯೇ ಇದ್ದಂತಿದೆ. ಆದರೆ ಬೇರೆ ಪಕ್ಷಗಳಲ್ಲಿರುವ ಸಿಂಹದ ನೆಂಟರಿಷ್ಟರಿಗೆಲ್ಲ ತಡಕೊಳ್ಳಲಾರದಷ್ಟು ದುಃಖವಾಗಿದೆ. ಮೈಸೂರಿನ ಮಗ್ಗುಲಲ್ಲಿ, ಒಡಲಲ್ಲಿ ಇಂಥಾ ಅನೇಕರು ಒಟ್ಟಾಗಿ ಕೂತು ಅತ್ತಿದ್ದರೂ ಅಚ್ಚರಿಯೇನಿಲ್ಲ. ಯಾಕೆಂದರೆ ಸಿಂಹ ಅವರೆಲ್ಲರಿಗೂ ಆ ಮಟ್ಟಿಗೆ ಆತ್ಮೀಯವಾಗಿತ್ತು. ಜಿಟಿ ದೇವೇಗೌಡರ ಮಗ ಹರೀಶ್ ಗೌಡಗೂ ಪ್ರತಾಪ್ ಆತ್ಮೀಯ. ಹರೀಶ್ ಈಗ ಹುಣಸೂರು ಎಂಎಲ್ಎ. ಆತ ಶಾಸಕನಾಗುತ್ತಲಕೇ ಪ್ರಸ್ತಾವನೆ ಸಲ್ಲಿಸಿದ್ದ ಪ್ರತಾಪ ಬಿಳೆಕೆರೆವರೆಗೆ ಚತಷ್ಪಥ ರಸ್ತೆಗಾಗಿ ಎಪ್ಪತ್ತಾರು ಕೋಟಿಯಷ್ಟು ಕೇಂದ್ರಹ ಹಣ ಕೊಡಿಸಿದ್ದಾರೆ. ನಿತಿನ್ ಗಡ್ಕರಿಯೇ ಅದನ್ನು ಬಿಡುಗಡೆಗೊಳಿಸಿದ್ದಾರೆ. ಇತ್ತೀಚೆಗೆ ಗಡ್ಕರಿ ಆ ಕಾಮಗಾರಿಗೆ ಗುದ್ದಲಿ, ಪೂಜೆ ಮಾಡಿದ್ದಾರೆ.
ಒಟ್ಟಾರೆಯಾಗಿ, ಟಿಕೆಟು ತಪ್ಪಿದ್ದರ ಹಿಂದೆ ನಿಜಕ್ಕೂ ಪ್ರತಾಪ್ ಸಿಂಹನ ಸ್ವಯಂಕೃತ ಅಪರಾಧಗಳ ಹೊರತಾಗಿ ಬೇರೇನೂ ಇಲ್ಲ. ಹೇಗಿದ್ದರೂ ತನಗೇ ಟಿಕೆಟು ಪಕ್ಕಾ ಎಂಬ ಭರವಸೆಯಲ್ಲಿ ಆನೆ ನಡೆದಿದ್ದೇ ದಾರಿ ಎಂಬಂತೆ ಮುಂದುವರೆದಿದ್ದರಿಂದಲೇ ಈ ಸ್ಥಿತಿ ಬಂದೊದಗಿದೆ. ತನ್ನ ಪ್ರಭೆಯ ಮುಂದೆ ಕ್ಷೇತ್ರದಲ್ಲಿರುವ ಇತರೇ ಮುಖಂಡರು ಲೆಕ್ಕಕ್ಕಿಲ್ಲ ಎಂಬಂಥಾ ಅಹಮ್ಮಿಕೆ, ಬೇರೆ ಪಕ್ಷದವರನ್ನು ಓಲೈಸಿಕೊಂಡು, ತನ್ನ ಗೆಲುವಿಗೆ ಮಣ್ಣು ಹೊತ್ತವರ ಬಾಯಿಗೆ ಮಣ್ಣು ತುರುಕೋ ದುರ್ಭುದ್ಧಿಗಳೇ ಪ್ರತಾಪನಿಗೆ ಗುನ್ನ ಮಡಗಿವೆ. ಇದೆಲ್ಲವೂ ಅಳೀಮಯ್ಯನನ್ನು ಎಂಪಿ ಮಾಡುವ ರಾಜಸ್ಥಾನದ ದೊರೆ ಹರ್ಷವರ್ಧನ್ ಸಿಂಗ್ ಗೆ ಸಹಕಾರಿಯಾಗಿದೆ. ಇದರ ಹಿಂದೆ ಯಡ್ಡಿ, ಅವರ ಪುತ್ರ ವಿಜಯೇಂದ್ರ ಸೇರಿದಂತೆ ರಾಜ್ಯ ನಾಯಕರ ನೆರಳಿಲ್ಲ. ಇದೆಲ್ಲದರಾಚೆಗೆ, ಪ್ರತಾಪ್ ಸಿಂಹ ಮುಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಮೂಲಕ ಬಿಕ್ಕಳಿಸಿ ಅತ್ತರೆ ಆತನ ಅಭಿಮಾನಿಗಳ್ಯಾರೂ ಮನಸಿಗೆ ತೆಗೆದುಕೊಳ್ಳುವಂತಿಲ್ಲ. ಯಾಕೆಂದರೆ, ಈವತ್ತಿಗೆ ಸಿಂಹದ ಎದೆಮೇಲಿರುವ ಚಪ್ಪಡಿಯ ಮೇಲೆ ಆತ ಮಾಡಿಕೊಂಡು ಬಂದಿರುವ ಯಡವಟ್ಟುಗಳ ರಾಶಿ ಇದೆ!