ಹುಷಾರು ನಿಮಗೆ ಗೊತ್ತಿಲ್ಲದೆ ನಿಮ್ಮೊಳಗೂ ಅಡಗಿರಬಹುದು ಈ ರೋಗ!
ಯಾವುದನ್ನೇ ಆದ್ರೂ ಆಳವಾಗಿ ಹಚ್ಚಿಕೊಳ್ತಾ ಹೋದಂತೆ ಅದೊಂದು ಕಾಯಿಲೆಯಾಗಿ ಬೇರಿಳಿಸೋ ಅಪಾಯವೇ ಹೆಚ್ಚು. ಕೆಲವೊಮ್ಮೆ ನಾವು ಮಾಮೂಲು ಅಂದುಕೊಳ್ಳೋ ಅದೆಷ್ಟೋ ಮಾನಸಿಕ ಪಲ್ಲಟಗಳು ನಮ್ಮನ್ನೇ ಹಿಂಸೆಗೀಡುಮಾಡೋ ಅಪಾಯವಿರುತ್ತೆ. ನಿಮಗೆ ಅಚ್ಚರಿಯಾದೀತು, ಆದ್ರೆ ಸಿನಿಮಾ, ಕ್ರೀಡೆ ಸೇರಿದಂತೆ ನೀವ್ಯಾರನ್ನಾದ್ರೂ ಅಪಾರವಾಗಿ ಹಚ್ಚಿಕೊಂಡ್ರೆ ಅದೂ ಕೂಡಾ ಒಂದು ಮಾನಸಿಕ ವ್ಯಾಧಿಯಾಗಿ ಮಾರ್ಪಾಡಾಗಬಹುದು. ಇದು ವಿಚಿತ್ರವಾದ್ರೂ ಸತ್ಯ. ವಿಶ್ವದಲ್ಲಿ ಅದೆಷ್ಟೋ ಮಂದಿ ಇಂಥಾದ್ದೊಂದು ಹೇಳಿಕೊಳ್ಳಲಾರದ ಕಾಯಿಲೆಯಿಂದ ಪರಿತಪಿಸ್ತಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ತಾರೆಯರ ಬಗ್ಗೆ ವಿಪರೀತ ಅಭಿಮಾನವಿರುತ್ತೆ. ಸಿನಿಮಾಗಳಲ್ಲಿ ಅಂಥವ್ರ ಅಭಿನಯ ನೋಡಿ ಮೆಚ್ಚಿಕೊಳ್ಳೋದು, ಅವರನ್ನೊಮ್ಮೆ ಭೇಟಿಯಾಗಬೇಕಂತ ಹಂಬಲಿಸೋದೆಲ್ಲ ಮಾಮೂಲಿ. ಆದ್ರೆ ಅದನ್ನ ಮೀರಿದ ಮತ್ತೊಂದು ಹಂತವಿದೆ. ಅದು ಸೀರಿಯಸ್ಸಾಗಿ ಅಂಥಾ ತಾರೆಯರೊಂದಿಗೆ ಲವ್ವಲ್ಲಿ ಬೀಳೋ ಹಂತ. ನೀವೇನಾದ್ರು ಆ ಘಟ್ಟ ತಲುಪಿಕೊಂಡಿದ್ದೀರಾದ್ರೆ ಕೊಂಚ ಯೋಚಿಸಿ ಅದ್ರಿಂದ ಹೊರ ಬನ್ನಿ. ಯಾಕಂದ್ರೆ ಅದೊಂದು ಭ್ರಾಮಕ ಕಾಯಿಲೆ!
ಇಂಥಾ ಕಾಯಿಲೆಗೆ ಮನೋ ವೈದ್ಯರು ಎರಟೋಮೇನಿಯಾ ಎಂಬ ಹೆಸರಿಟ್ಟಿದ್ದಾರೆ. ಅದೇನಾದ್ರೂ ಉಲ್ಬಣಿಸಿದ್ರೆ ಸ್ಕಿಜೋಫ್ರೇನಿಯಾ, ಬೈಪೋಲಾರ್ ಡಿಸಾರ್ಡರ್ನಂಥಾ ಮನೋರೋಗಗಳಷ್ಟೇ ಅಪಾಯಕ್ಕೀಡು ಮಾಡುತ್ತೆ. ಹಾಗಾದ್ರೆ ಈ ಕಾಯಿಲೆಯ ನಿಖರ ಲಕ್ಷಣಗಳೇನು ಅನ್ನೋದನ್ನ ಮೊದಲು ತಿಳಿಯೋಣ. ಗಂಡು ಅಥವಾ ಹೆಣ್ಣಿಗೆ ವಿರುದ್ಧ ಲಿಂಗದ ಸೆಲೆಬ್ರಿಟಿಗಳ ಮೇಲೆ ಇಂಥಾ ಭ್ರಮೆಯ ಲವ್ವಾದ್ರೆ ಮುಗಿದೇ ಹೋಯ್ತು. ಅವರೊಂದಿಗೆ ಲವ್ವಲ್ಲಿ ಬಿದ್ದವರಂತೆ ನಂಬಿ ಭಾವ ಲೋಕದಲ್ಲಿ ಮಿಂದೇಳ್ತಾರೆ. ಅದು ಮೊದಲ ಘಟ್ಟ. ನಂತರ ಅವರೂ ಕೂಡಾ ತಮ್ಮನ್ನ ಪ್ರೀತಿಸ್ತಾರೆಂದೇ ಭ್ರಮಿಸಿ ಸಂಭ್ರಮಿಸ್ತಾರೆ. ಅದು ಯಾವ ರೇಂಜಿಗಿರುತ್ತೆ ಅಂದ್ರೆ, ಆ ಸೆಲೆಬ್ರಿಟಿ ತನ್ನನ್ನು ಪ್ರೀತಿಸ್ತಿದ್ದಾರೆಂದು ಹತ್ತಿರದವರ ಬಳಿ ಹೇಳಿಕೊಂಡು ಓಡಾಡೋಕೆ ಶುರು ಮಾಡಿ ಬಿಡ್ತಾರೆ.