ಮನುಷ್ಯರೆಂದರೆ ಒಂದೇ ತಲೆ, ಒಂದೇ ಮುಖ, ಇಂತಿಂಥಾದ್ದೇ ಅಂಗಗಳು ಮತ್ತು ಅವುಗಳಿಗೊಂದಿಷ್ಟು ನಿಖರ ರಚನೆಗಳಿರುತ್ತವೆ. ಆದರೆ ಪ್ರಕೃತಿಯ ವೈಚಿತ್ರ್ಯ ಮಾತ್ರ ಆ ಗೆರೆ ದಾಟಿಕೊಂಡು ಕೆಲ ಮನುಷ್ಯರನ್ನು ಸೃಷ್ಟಿಸಿ ಬಿಡುತ್ತೆ. ಅದಕ್ಕೆ ಉದಾಹರಣೆಯಾಗಿ ಹತ್ತಾರು ವಿಚಿತ್ರಗಳಿವೆ. ಎರಡು ದೇಹಗಳು ಒಂದಕ್ಕೊಂದು ಹೊಸೆದುಕೊಂಡಿರೋ ಸಯಾಮಿಗಳು ನಮಗೆಲ್ಲ ಪರಿಚಿತ. ಅವುಗಳನ್ನು ನೋಡಿಯೇ ಅದೆಷ್ಟೋ ಸಲ ನಾವೆಲ್ಲ ಹೌಹಾರುತ್ತೇವೆ. ಆದರೆ ಅದನ್ನೇ ಮೀರಿಸುವಂಥ ವಿಚಿತ್ರವಾದ ಮನುಷ್ಯರು ಈ ನೆಲದಲ್ಲಿ ನಡೆದಾಡಿದ್ದಾರೆ. ಅಂಥವರೆಲ್ಲ ಕಡೇಯವರೆಗೂ ವೈದ್ಯಕೀಯ ಜಗತ್ತಿಗೇ ಸವಾಲೆಸೆಯುವಂತೆ ಬದುಕಿ ಹೋಗಿದ್ದಾರೆ.
ಹದಿನೆಂಟನೇ ಶತಮಾನದಲ್ಲಿ ಬದುಕಿದ್ದ ಎಡ್ವರ್ಡ್ ಮಾರ್ಡಾರ್ಕ್ ಎಂಬಾತ ವಿಚಿತ್ರದಲ್ಲಿಯೇ ವಿಚಿತ್ರ ಸೃಷ್ಟಿಗೊಂದು ತಾಜಾ ಉದಾಹರಣೆ. ಅಸಾಧ್ಯ ಬುದ್ಧಿವಂತಿಕೆ ಹೊಂದಿದ್ದ ಎಡ್ವರ್ಡ್ಗೆ ಪ್ರಾಕೃತಿಕವಾಗಿಯೇ ಶಾಪದಂಥಾ ದೇಹ ರಚನೆ ಬಂದಿತ್ತು. ಹಾಗಂತ ಆತನ ದೇಹದಲ್ಲೇನು ಬೇರೆಯವರಿಗಿಂತ ಭಿನ್ನವಾದ, ವಿಚಿತ್ರವಾದ ರಚನೆಗಳಿರಲಿಲ್ಲ. ನೋಡಿದರೆ ಮಾಮೂಲಿ ಮನುಷ್ಯನಂತೆಯೇ ಕಾಣಿಸುತ್ತಿದ್ದ ಆತನಿಗೆ ತಲೆಯಲ್ಲಿಯೂ ಒಂದು ಮುಖವಿತ್ತು. ಮಾಮೂಲಿಯಾಗಿರೋ ಮುಖದ ಹಿಂಬಾಗದಲ್ಲಿ ಮೂಗು, ಬಾಯಿ, ಕಣ್ಣುಗಳಿರೋ ಮತ್ತೊಂದು ಮುಖವಿತ್ತು!
ಮಾಮೂಲಿ ಮುಖವನ್ನೇ ಹೋಲುವಂಥಾ ಎರಡನೇ ಮುಖದಲ್ಲಿ ಆತನಿಗೆ ಮಾತಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅದರಲ್ಲಿಯೂ ಒಂದಷ್ಟು ಭಾವನೆಗಳನ್ನು ಹೊಮ್ಮಿಸಬಹುದಾಗಿತ್ತು. ಅಷ್ಟೇ ಆಗಿದ್ದರೆ ಆತನ ಬದುಕೇನು ಅಷ್ಟಾಗಿ ಸಂಕಷ್ಟಕ್ಕೀಡಾಗುತ್ತಿರಲಿಲ್ಲ. ಆದರೆ ರಾತ್ರಿಯ ಸಮಯದಲ್ಲಿ ಎರಡನೇ ಮುಖದಿಂದ ಚಿತ್ರವಿಚಿತ್ರವಾದ ಶಬ್ದಗಳು ಬರೀ ಅವನಿಗೆ ಮಾತ್ರವೇ ಕೇಳುವಂತೆ ಹೊಮ್ಮುತ್ತಿತ್ತಂತೆ. ಅದರಿಂದ ಅದೆಷ್ಟು ಕಿರಿ ಕಿರಿಗೀಡಾಗುತ್ತಿದ್ದನೆಂದರೆ ಸತ್ತೇ ಹೋಗುವಷ್ಟು ಹಿಂಸೆಯಾಗುತ್ತಿತ್ತಂತೆ. ಆದರೆ ಅದೇನೇ ಚಿಕಿತ್ಸೆ ತೆಗೆದುಕೊಂಡರೂ ಎರಡನೇ ಮುಖದ ಶಬ್ಧ ಮಾತ್ರ ನಿಂತಿರಲಿಲ್ಲ. ಅದನ್ನು ತಾಳಲಾರದೆ ಕಡೆಗೂ ಎಡ್ವರ್ಡ್ ಆತ್ಮಹತ್ಯೆಗೆ ಶರಣಾಗಿದ್ದ!