ಮತ್ತೆ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾದ ಸದ್ದು ಮೊಳಗಿದೆ. ಈ ಮಾಫಿಯಾಕ್ಕೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕಗಳಿದ್ದಾವೆಂಬ ಬಗ್ಗೆ ಈ ಹಿಂದಿನಿಂದಲೇ ಗುಮಾನಿಗಳಿದ್ದವು. ಅದು ಯಾವ ಸಂಶಯಗಳಿಗೂ ಎಡೆ ಮಾಡಿಕೊಡದಂತೆ ಈಗಾಗಲೇ ನಿಜವಾಗಿದೆ. ಅದು ಮತ್ತೊಮ್ಮೆ ಸಾಬೀತಾಗಿರೋದು ಬಾಲಿವುಡ್ಡಿನ ಖ್ಯಾತ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಕಪೂರ್ ಬೆಂಗಳೂರಿನಲ್ಲಿ ತಗುಲಿಕೊಳ್ಳುವ ಮೂಲಕ. ಹಲಸೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಎಂಜಿ ರಸ್ತೆಯ ಐಶಾರಾಮಿ ಹೊಟೇಲಿನಲ್ಲಿ ನಡೆಯುತ್ತಿದ್ದ ಪಾರ್ಟಿಯೊಂದಕ್ಕೆ ರೇಡು ನಡೆಸಿದಾಗ ನಶೆಗೆ ವಶವಾಗಿ ತೇಲಾಡುತ್ತಿದ್ದ ಗ್ಯಾಂಗೊಂದು ರೆಡ್ ಹ್ಯಾಂಡಾಗಿಯೇ ತಗುಲಿಕೊಂಡಿದೆ. ಆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಮೂವತೈದಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಅದರಲ್ಲಿ ನಟ ಸಿದ್ಧಾಂತ್ ಕಪೂರ್ ಮಾದಕ ವಸ್ತುಗಳನ್ನು ಸೇವಿಸಿದ್ದಾನೆಂಬುದೂ ಪಕ್ಕಾ ಆದಂತಿದೆ.
ನಿಮಗೆಲ್ಲ ಮರೆತು ಹೋಗಲು ಸಾಧ್ಯವೇ ಇಲ್ಲ. ಕಳೆದ ಒಂದೆರಡು ವರ್ಷಗಳಿಂದ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ರಾಗಿಣಿ, ಸಂಜನಾರಂಥ ನಟೀಮಣಿಯರು ಜೈಲುಪಾಲಾಗಿ ವಾಪಾಸಾದದ್ದೂ ಆಗಿದೆ. ಸದ್ಯಕ್ಕೆ ಈ ನಟಿಯರಿಬ್ಬರೂ ಏನೂ ಆಗೇ ಇಲ್ಲವೆಂಬಂತೆ ಮತ್ತೆ ಬಣ್ಣ ಬಳಿದುಕೊಂಡು ಓಡಾಡುತ್ತಿದ್ದಾರೆ. ಅದರ ಬೆನ್ನಲ್ಲಿಯೇ ಈಗ ಬಾಲಿವುಡ್ನೊಂದಿಗೆ ನಂಟು ಹೊಂದಿರುವಂಥಾ ಸದರಿ ಪ್ರಕರಣವನ್ನು ಹಲಸೂರು ಪೊಲೀಸರು ಬೇಧಿಸಿದ್ದಾರೆ. ಹೈಟೆಕ್ ದಂಧೆ, ದೋಖಾವಳಿಗಳ ಕರ್ಮಭೂಮಿಯಂತಾಗಿರೋ ಎಂಜಿ ರಸ್ತೆಯ ದಿ ಪಾರ್ಕ್ ಹೊಟೇಲಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದೆಯೆಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಇಂಥಾ ಬಂಧನಗಳಿಂದ ಆಗುವ, ಈಗಾಗಲೇ ಆಗಿರುವ ಪ್ರಯೋಜನವೇನೆಂಬ ಪ್ರಶ್ನೆ ಮಾತ್ರವೇ ಪ್ರಜ್ಞಾವಂತರಲ್ಲಿದೆ.
ಈ ಪ್ರಶ್ನೆ ನಾಗರಿಕ ವಲಯದಲ್ಲಿ ಸೃಷ್ಟಿಯಾಗಿರೋದಕ್ಕೆ ಖಂಡಿತವಾಗಿಯೂ ಕಾರಣಗಳಿದ್ದಾವೆ. ಈಗೊಂದಷ್ಟು ವರ್ಷಗಳಿಂದ ಸತತವಾಗಿ ಪೊಲೀಸರು, ಸಿಸಿಬಿ ಮಂದಿ ಡ್ರಗ್ಸ್ ದಂಧೆಕೋರರ ಹೆಡೆ ಮೆಟ್ಟಲು ಶತ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಸಂಜನಾ ಮತ್ತು ರಾಗಿಣಿ ಕೇಸಿನಲ್ಲಂತೂ ಪೊಲೀಸರು ತೀರಾ ನಿಷ್ಟುರವಾಗಿ ತನಿಖೆ ನಡೆಸುತ್ತಿರುವಂತೆ ಬಿಂಬಿಸಿಕೊಂಡಿದ್ದರು. ಆ ಪ್ರಕರಣದಲ್ಲಿ ಅಂತಾರಾಜ್ಯ ಡ್ರಗ್ ಪೆಡ್ಲರ್ಗಳ ಜಾಡು ಸಿಕ್ಕಿದೆ ಎಂಬಂತೆಯೂ ಗುಲ್ಲೆಬ್ಬಿಸಲಾಗಿತ್ತು. ಆದರೆ, ಆ ತನಿಖೆ ಎತ್ತ ಸಾಗುತ್ತಿದೆ? ಸೆರೆ ಸಿಕ್ಕವರರ ಕಥೆ ಏನಾಯ್ತು? ಈ ಸಮಾಜವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಡ್ರಗ್ಸ್ ಜಾಲವನ್ನು ಈ ಕ್ಷಣಕ್ಕೂ ನಾಮಾವಶೇಷ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ? ಇಂಥಾ ಪ್ರಶ್ನೆಗಳು ಸಾರ್ವಜನಿಕರಲ್ಲಿದೆ. ನಿಖರವಾಗಿ ಉತ್ತರಿಸುವ ಔದಾರ್ಯವನ್ನು ಮಾತ್ರ ಖಾಕಿ ಪಡೆ ತೋರಿಸುತ್ತಿಲ್ಲ.
ಇದೀಗ ದಕ್ಷ ಪೊಲೀಸ್ ಅಧಿಕಾರಿ ಎಂದೇ ಹೆಸರುವಾಸಿಯಾಗಿರುವ ಪ್ರತಾಪ್ ರೆಡ್ಡಿ ಪೊಲೀಸ್ ಆಯುಕ್ತರಾಗಿದ್ದಾರೆ. ಈ ಸಮಾಜದಲ್ಲಿ ಆಳವಾಗಿ ಬೇರೂರಿರುವ ಸಖಲ ದಂಧೆಗಳ ಚಹರೆಯೂ ಅವರಿಗೆ ಅರಿವಿದೆ. ಈ ಕಾರಣದಿಂದಲೇ ಸಿಸಿಬಿಗೂ ಸೂಕ್ತ ನಿದರ್ಶನ ನೀಡಿ, ಪ್ರತೀ ಪೊಲೀಸ್ ಠಾಣೆಗಳನ್ನೂ ಕೂಡಾಡ್ರಗ್ಸ್ ದಂಧೆಯ ವಿರುದ್ಧ ಸನ್ನದ್ಧವಾಗುವಂತೆ ಮಾಡುವ ನಿಟ್ಟಿನಲ್ಲಿ ಅವರು ಕಾರ್ಯ ನಿರ್ವಹಿಸುತ್ತಾರೆಂಬ ಬಗ್ಗೆ ಜನರಲ್ಲಿ ನಂಬಿಕೆ ಇದೆ. ಅದನ್ನು ಉಳಿಸಿಕೊಳ್ಳುವ ಭಾರ ಪ್ರತಾಪ್ ರೆಡ್ಡಿಯವರ ಮೇಲಿದೆ. ನಿಷ್ಠುರವಾಗಿ ಹೇಳಬೇಕೆಂದರೆ, ಡ್ರಗ್ಸ್ ವಿಚಾರದಲ್ಲಿ ಇಡೀ ರಾಜ್ಯದ ಪೊಲೀಸ್ ವ್ಯವಸ್ಥೆ ನಿಜಕ್ಕೂ ವಿಫಲವಾಗಿದೆ. ಇದುವರೆಗೂ ಸಿಕ್ಕಿರುವ ಕೆಲ ಅಂಕಿ ಅಂಶಗಳೇ ಈ ಮಾತನ್ನು ಪುಷ್ಟೀಕರಿಸುವಂತಿವೆ.
ಇದೇ ಪೊಲೀಸ್ ಇಲಾಖೆ ಡ್ರಗ್ಸ್ ಮಾಫಿಯಾವನ್ನು ಬಡಿದು ಮಲಗಿಸುವ ಪಣ ತೊಟ್ಟಂತೆ ಆಗಾಗ ಅಬ್ಬರಿಸುತ್ತೆ. ಆದರೆ ಪದೇ ಪದೆ ಜನರ ಗಮನವನ್ನು ಬೇರೆಡೆಗೆ ಸೆಳೆದು, ಮೂಲ ತನಿಖೆಯ ಹಾದಿಯಲ್ಲಿಯೇ ಪೊಲೀಸ್ ಇಲಾಖೆ ಎಡವಟ್ಟು ಮಾಡಿಕೊಳ್ಳುತ್ತಿದೆ. ಕಳೆದ ಬಾರಿಯ ವಿಚಾರವನ್ನೇ ಗಮನಸಿ. ಅದ್ಯಾರೋ ರಾಗಿಣಿ, ಸಂಜನಾ ಮುಂತಾದ ಆರಕ್ಕೇರದ ಮೂರಕ್ಕಿಳಿಯದ ನಟಿಯರನ್ನು ಡ್ರಗ್ಸ್ ದಂಧೆಯಲ್ಲಿ ಬಂಧಿಸಲಾಗಿತ್ತು. ಈ ಬಾರಿ ಅದ್ಯಾವನೋ ಬಾಲಿವುಡ್ಡಿನ ಸವಕಲು ನಟ ಸಿದ್ಧಾಂತ್ ಕಪೂರನನ್ನು ಬಂಧಿಸಲಾಗಿದೆ. ಮಾಧ್ಯಮಗಳೂ ಕೂಡಾ ಇಂಥಾ ಸೆಲೆಬ್ರಿಟಿಗಳನ್ನು ಬಂಧಿಸಿದಾಗ ಬೇರೆ ದಿಕ್ಕಿನಲ್ಲಿ ಅಬ್ಬರಿಸುತ್ತಾವೆಯೇ ಹೊರತು, ನಿಜವಾದ ದಿಕ್ಕಿಗೆ ತನಿಖೆಯ ಹಾದಿ ಹೊರಳಿಕೊಳ್ಳುವಂತೆ ಮಾಡೋದು ಮಾಧ್ಯಮಗಳಿಗೂ ಬೇಕಿಲ್ಲ.
ಹಾಗಾದರೆ, ಚಿಲ್ಟು ಪಲ್ಟುಗಳೆಲ್ಲ ಡ್ರಗ್ಸ್ ಮಾರೋದನ್ನು ಪೊಲೀಸರು ಪತ್ತೆಹಚ್ಚುತ್ತಾರೆ. ಆದರೆ ಬೇರೆ ಬೇರೆ ರಾಜ್ಯಗಳಿಂದ, ದೇಶಗಳಿಂದ ಗಾಂಜಾ ಸರಬರಾಜು ಮಾಡುವ ದಂಧೆಕೋರರನ್ನು ಹತ್ತಿಕ್ಕಲು ಪೊಲೀಸರಿಂದ ಯಾಕೆ ಸಾಧ್ಯವಾಗುತ್ತಿಲ್ಲ? ಗಾಂಜಾ ದಂಧೆಯ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿರುವಾಗಲೇ ಹೈಫೈ ಪಾರ್ಟಿಗಳಲ್ಲಿ ಗಾಂಜಾ ಸರಬರಾಜಾಗುತ್ತದೆ. ಆ ಗಾಂಜಾ ಎಲ್ಲಿಂದ ಬರುತ್ತದೆ? ಪೊಲೀಸ್ ಇಲಾಖೆಯಲ್ಲಿಯೇ ಖದೀಮರಿಲ್ಲದೇ ಈ ದಂಧೆ ಈ ಪರಿಯಾಗಿ ವಿಜೃಂಭಿಸಲು ಸಾಧ್ಯವೇ? ಈ ಎಲ್ಲ ಪ್ರಶ್ನೆಗಳನ್ನು ಹರವಿಕೊಂಡು ಕೂತರೆ, ಕೆಲ ಘಟ್ಟಗಳಲ್ಲಿ ಪೊಲೀಸರೇ ಪಟ್ಟಭದ್ರರ ಮರ್ಜಿಗೆ ಬೀಳುತ್ತಿದ್ದಾರೇನೋ ಎಂಬಂಥಾ ಸಂಶಯಗಳು ಕಾಡುತ್ತವೆ. ಯಾಕೆಂದರೆ, ಈವತ್ತಿಗೆ ಈ ನಾಡಿನ ಹಲವಾರು ರಜಕಾರಣಿಗಳ ಮಕ್ಕಳೇ ಡ್ರಗ್ ಅಡಿಕ್ಟುಗಳಾಗಿದ್ದಾರೆ. ಇಂಥಾ ರಾಜಕಾರಣಿಗಳು ತಮ್ಮ ಮಕ್ಕಳು ತಗುಲಿಕೊಂಡು ಮಾನ ಹರಾಜಾಗುತ್ತದೆ ಎಂದಾದಾಗ ಸುಮ್ಮನಿರಲು ಸಾಧ್ಯವೇ. ಪೊಲೀಸ್ ಇಲಾಖೆಯ ಮೇಲೆ ಒತ್ತಡ ತಂದು ಪ್ರಕರಣ ಮುಚ್ಚಿಹಾಕುತ್ತಾರೆ. ಅಲ್ಲಿಗೆ ಡ್ರಗ್ ಪೆಡ್ಲರ್ಗಳ ಒಂದು ಜಾಲವೇ ಸೇಫ್ ಆಗುತ್ತದೆ.
ಈವತ್ತಿಗೆ ಸಿನಿಮಾ ನಟನಟಿಯರು ಡ್ರಗ್ಸ್ ಸೇವನೆ ಮಾಡುತ್ತಾರೆಂಬುದೇ ದೊಡ್ಡ ಸುದ್ದಿಯಾಗುತ್ತಿದೆ. ಮೀಡಿಯಾಗಳೂ ಕೂಡಾ ಅದರತ್ತಲೇ ಫೋಕಸ್ಸು ಮಾಡುತ್ತಿವೆ. ಆದರೆ ಈವತ್ತಿಗೆ ಈ ದಂಧೆ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿಕೊಂಡಿದೆ. ತೀರಾ ಮಲೆನಾಡಿನಂಥಾ ಹಳ್ಳಿ ಮೂಲೆಗಳಿಗೂ ಆ ಜಾಲ ಹಬ್ಬಿಕೊಂಡಿದೆ. ಅಷ್ಟಕ್ಕೂ ಈ ಗಾಂಜಾ ಚಟ ಅಂಟಿಕೊಳ್ಳಲು ದೊಡ್ಡ ಕಾರಣವೇ ಬೇಕಿಲ್ಲ. ಆ ಕ್ಷಣದ ಡಿಪ್ರೆಷನ್, ಲವ್ ಫೇಲ್ಯೂರಿನಂಥಾ ಕಾಮನ್ ಸಮಸ್ಯೆಗಳೂ ಕೂಡಾ ಡ್ರಗ್ಸ್ ಜಾಲದ ವಿಸ್ತರಣೆಯ ಸರಕುಗಳೇ. ಅಂಥಾ ತೊಳಲಾಟದಲ್ಲಿರುವ ವಿದ್ಯಾರ್ಥಿಗಳ ಕೈಯಳತೆಯಲ್ಲಿಯೇ ಡ್ರಗ್ಸ್ ಜಾಲ ಕಾರ್ಯ ನಿರ್ವಹಿಸುತ್ತಿದೆ. ಆದರೆ ಅದನ್ನು ಹತ್ತಿಕ್ಕುವಂಥಾ ಪರಿಣಾಮಕಾರಿ ಮಾರ್ಗಗಳನ್ನು ಅದೇಕೋ ಪೊಲೀಸರು ಹುಡುಕುತ್ತಿಲ್ಲ.
ಪೊಲೀಸರ ಮೇಲೆ ಡ್ರಗ್ಸ್ ವಿಚಾರವಾಗಿ ಆರೋಪಗಳು ಕೇಳಿ ಬಂದಾಗೆಲ್ಲ, ಅವರು ತಾವು ಹಿಡಿದಿರುವ ಕೇಸುಗಳ ಸಂಖ್ಯೆಯನ್ನು ಎತ್ತಿ ಹಿಡಿಯುತ್ತಾರೆ. ಕಳೆದ ಮೂರು ವರ್ಷಗಳಲ್ದಲಿ ಹತ್ತತ್ತಿರ ಹನ್ನೆರಡು ಸಾವಿರದಷ್ಟು ಡ್ರಗ್ಸ್ ಕೇಸುಗಳು ನಮ್ಮ ರಾಜ್ಯದಲ್ಲಿಯೇ ಪತ್ತೆಯಾಗಿವೆ ಎಂದರೆ ಯಾರಿಗಾದರೂ ಅಚ್ಚರಿಯಾಗದಿರೋದಿಲ್ಲ. ಅರೇ ಪೊಲೀಸರು ಇಷ್ಟೊಂದು ಆಕ್ಟೀವ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರಲ್ಲಾ ಅನ್ನೋ ಮೆಚ್ಚುಗೆಯೂ ಮೂಡಿಕೊಳ್ಳಬಹುದು. ಆದರೆ ಈ ಅಂಕಿಅಂಶ ಪೊಲೀಸ್ ಇಲಾಖೆಯ ಗಟ್ಟಿತನವನ್ನು ಸಾರುತ್ತಿಲ್ಲ. ಬದಲಾಗಿ ವೈಫಲ್ಯವನ್ನು ಎತ್ತಿ ತೋರಿಸುತ್ತಿವೆ. ಯಾಕೆಂದರೆ, ಮೂರು ವರ್ಷಗಳಲ್ಲಿ ದಾಖಲಾಗಿರುವ ಈ ಪರಿಯ ಕೇಸುಗಳು ಡ್ರಗ್ಸ್ ಮಾಫಿಯಾ ಕರುನಾಡನ್ನು ವ್ಯಾಪಕವಾಗಿ ಆವರಿಸಿಕೊಂಡಿರೋದಕ್ಕೆ ಸ್ಪಷ್ಟ ಸಾಕ್ಷಿ.
ಇಂಥಾ ಪ್ರಕರಣಗಳಲ್ಲಿ ಹಾದಿ ಬೀದಿಗಳಲ್ಲಿ ಡ್ರಗ್ಸ್ ಮಾರಾಟ ಮಾಡುವವರನ್ನು ಬಂಧಿಸಲಾಗುತ್ತದೆ. ಆದರೆ ಅವರಿಗೆ ಅಂತಾರಾಜ್ಯಗಳಿಂದ ನಶೆ ತುಂಬಿ ಕಳಿಸುವ ಜಾಲವಾನ್ನು ಮಟ್ಟ ಹಾಕುವತ್ತ ಗಂಭೀರವಾದ ಪ್ರಯತ್ನಗಳು ನಡೆಯುತ್ತಿಲ್ಲ. ಹಾಗೊಂದು ವೇಳೆ ಅದು ನಡೆದಿದ್ದರೆ ಖಂಡಿತವಾಗಿಯೂ ಕರುನಾಡಿನ ತುಂಬೆಲ್ಲ ಡ್ರಗ್ಸ್ ಕಮಟು ಹಬ್ಬಿಕೊಳ್ಳುತ್ತಿರಲಿಲ್ಲ. ವಿಷಾಧನೀಯ ಸಂಗತಿಯೆಂದರೆ ಸರ್ಕಾರಗಳೂ ಕೂಡಾ ಡ್ರಗ್ಸ್ ಮಾಫಿಯಾ ತಡೆಗೆ ಪರಿಣಾಮಕಾರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದ ನಶೆಯ ದಾಸರನ್ನು ವಿಮುಕ್ತಿಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ನಗೆಪಾಟಲಿನ ಸಂಗತಿಗಳನ್ನು ಸರ್ಕಾರಗಳು ಹರಿಯ ಬಿಡುತ್ತಿವೆ. ಆದರೆ ನಶೆ ಹಬ್ಬಿಸುವ ಜಾಲವನ್ನು ಹೆಡೆಮುರಿ ಕಟ್ಟದ ಹೊರತು ನಶೆಗೆ ದಾಸರಾಗುವುದನ್ನು ತಡೆಯಲಾಗೋದಿಲ್ಲ ಎಂಬ ಕನಿಷ್ಟ ಕಾಮನ್ಸೆನ್ಸ್ ಕೂಡಾ ಈ ಸರ್ಕಾರಗಳಿಗೆ ಇದ್ದಂತಿಲ್ಲ!
ಈವತ್ತಿಗೂ ನಾನಾ ರಾಜ್ಯಗಳ ಗಡಿಯಿಂದ ಕೇಜಿಗಟ್ಟಲೆ ಡ್ರಗ್ಸ್ ಕರ್ನಾಟಕಕ್ಕೆ ಹರಿದು ಬರುತ್ತಿದೆ. ಇದು ಇಡೀ ಸಮಾಜವನ್ನೇ ನಾಮಾವಶೇಷ ಮಾಡುವ ದುಷ್ಟ ದಂಧೆ. ಈ ಬಗ್ಗೆ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಈ ಕೂಡಲೆ ಕ್ರಮ ಕೈಗೊಳ್ಳಬೇಕಿದೆ. ಸಿನಿಮಾ ನಟ ನಟಿಯರನ್ನು ಬಂಧಿಸಿ ಡೌಲು ತೋರಿಸೋದನ್ನು ಬಿಟ್ಟು ನಮ್ಮ ಮಕ್ಕಳು ಮರಿಗಳನ್ನು ಈ ಮಾಫಿಯಾದ ಕಪಿಮುಷ್ಟಿಗೆ ಸಿಗದಂತೆ ಕಾಪಾಡುವ ಕೆಲಸ ತುರ್ತಾಗಿ ಆಗಬೇಕಿದೆ. ಇದು ಕೇವಲ ಬೆಂಗಳೂರಿನಲ್ಲಿ ಜಾರಿಗೆ ಬಂದರೆ ಸಾಲದು. ಗಾಂಜಾ ಮಾಫಿಯಾವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದ ಪ್ರತೀ ಹಳ್ಳಿಗಳಲ್ಲಿಯೂ ಸಮರೋಪಾದಿಯಲ್ಲಿ ನಡೆಯಬೇಕಿದೆ. ಗೃಹ ಸಚಿವ ಅರಗ ಜ್ಞಾನೇಂದ್ರರ ತವರಾದ ತೀರ್ಥಹಳ್ಳಿ ಸಾಗರ ಮುಂತಾದೆಡೆಗಳಲ್ಲಿಯೇ ಮಂದಿ ಗಾಂಜಾ ವಶವಾಗಿದ್ದಾರೆ. ಅವರು ಈ ದಂಧೆಯನ್ನು ತಡೆಗಟ್ಟಲು ಒಂದಿಡೀ ಪೊಲೀಸ್ ಇಲಾಖೆಯನ್ನೇ ಸನ್ನದ್ಧಗೊಳಿಸಬೇಕಿದೆ.