ಬೆಂಗಳೂರಲ್ಲಿ ಮತ್ತೆ ಡ್ರಗ್ಸ್ ಮಾಫಿಯಾ ಸದ್ದು ಮಾಡಿದೆ. ಐವರು ಡ್ರಗ್ಸ್ ದಂಧೆಕೋರರನ್ನು ಬಂಧಿಸಿರುವ ಪೊಲೀಸರು ನಾಲಕ್ಕು ಕೋಟಿ ಮೌಲ್ಯದ ಡ್ರಗ್ಸ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದಂಧೆಯ ಮಂದಿ ಮಕ್ಕಳು ಮರಿಗಳನ್ನು, ಮಾನಸಿಕ ಅಸ್ವಸ್ಥರನ್ನೂ ಕೂಡಾ ಬಳಸಿಕೊಳ್ಳುತ್ತಿರುವ ಅಂಶ ಈಗಾಗಲೇ ಜಾಹೀರಾಗಿದೆ. ಇದೀಗ ಬಡ ಮಹಿಳೆಯರನ್ನೂ ಅದಕ್ಕೆ ಬಳಸಿಕೊಳ್ಳುತ್ತಿರೋ ವಿಚಾರ ಈ ಪ್ರಕರಣದ ಮೂಲಕ ಬಯಲಾಗಿದೆ. ಈ ಗ್ಯಾಂಗಿನೊಂದಿಗೆ ಇಬ್ಬರು ಮಹಿಳೆಯರೂ ತಗುಲಿಕೊಂಡಿದ್ದಾರೆ.
ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂದೆಲ್ಲಾ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಬೆಂಗಳೂರು ನಗರಕ್ಕೆ ಮಾದಕದ್ರವ್ಯ ಲೋಕದಲ್ಲಿ ಬಳಕೆಯಲ್ಲಿರುವ ಹೆಸರು ಡ್ರಗ್ಸ್ ಯಾರ್ಡ್ ಆಫ್ ಕರ್ನಾಟಕ. ಈ ಕಳಂಕ ರಾಜಧಾನಿಗೆ ಸುಮ್ಮನೆ ಮೆತ್ತಿಕೊಂಡಿಲ್ಲ. ದೇಶ ವಿದೇಶಗಳ ಡ್ರಗ್ ಪೆಡ್ಲರ್ಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಬೆಂಗಳೂರಿನ ಡ್ರಗ್ ಮಾಫಿಯಾ ವಾರ್ಷಿಕ ಕೋಟಿಗಟ್ಟಲೆ ಮೌಲ್ಯದ ಮಾದಕದ್ರವ್ಯವವನ್ನು ಅಮದು ಮಾಡಿಕೊಂಡು ಅನಂತರ ರಾಜ್ಯದಲ್ಲಿ ಬೇಡಿಕೆ ಇರುವ ನಗರಗಳಿಗೆ ಕಳುಹಿಸುವ ವ್ಯವಸ್ಥಿತ ಜಾಲದ ಹೃದಯವನ್ನಾಗಿ ಈ ನಗರವನ್ನು ಬಳಸಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಕಳೆದ ಮೂರು ವರ್ಷಗಳಲ್ಲಿ ೭೦೦ಂ ಕೆ.ಜಿ. ಡ್ರಗ್ಸ್ ಜಪ್ತಿಯಾಗಿರುವ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ಅಧಿಕೃತ ದಾಖಲೆಗಳಿಂದಲೇ ಸಿಗುತ್ತದೆ. ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ ಇದು ಅಧಿಕೃತವಾಗಿ ಜಪ್ತಿಯಾದ ಮಾದಕವಸ್ತುಗಳ ಪ್ರಮಾಣ ಮಾತ್ರ. ಇದರ ನೂರು ಪಟ್ಟು ರಾಜ್ಯದಲ್ಲಿ ಬಳಕೆಯಾಗುತ್ತಿರಬಹುದು ಎಂದು ಅಂದಾಜಿಸುತ್ತಾರೆ. ಈ ಮಾತನ್ನು ನಂಬುವುದಾದರೇ ಕರ್ನಾಟಕದಲ್ಲಿ ಡ್ರಗ್ ದಂಧೆ ಕೋಟ್ಯಾಂತರ ಮೌಲ್ಯದ ಉದ್ದಿಮೆಯಾಗೆ ಬೆಳೆದುಕೊಂಡಿದೆ.
ಈವತ್ತು ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವುದು ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ. ಇದರ ಗ್ರಾಹಕರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೇ ಎಂಬುದು ನಿಜಕ್ಕೂ ಬೆಚ್ಚಿ ಬೀಳಿಸುವ ವಾಸ್ತವ. ಕೇಲವ ಬೆಂಗಳೂರು ಮಾತ್ರ ಡ್ರಗ್ಸ್ ದಾವಾನಲ ಅಂದುಕೊಂಡರೆ ಅದು ಸುಳ್ಳು. ಇದು ಈ ದಂಧೆಗ ಕೇಂದ್ರ ಸ್ಥಾನವಷ್ಟೇ. ಇಲ್ಲಿಂದಲೇ ಹುಬ್ಬಳ್ಳಿ, ಧಾರವಾಡ, ಮಂಗಳೂರು, ಶಿವಮೊಗ್ಗದಂಥಾ ಊರುಗಳಿಗೂ ರವಾನೆಯಾಗುತ್ತಿದೆ. ಆ ಏರಿಯಾಗಳಲ್ಲಿಯೂ ಸಹ ಇದಕ್ಕೆ ಶಾಲಾ ಕಾಲೇಜು ವಿದ್ಯಾರ್ಥಿಗಳೇ ಗ್ರಾಹಕರು. ವಯೋಸಹಜ ಕೌತುಕದಿಂದ ಒಂದು ಬಾರಿ ಮಾದಕ ವಸ್ತುಗಳ ಚಟಕ್ಕೆ ಬಿದ್ದವರು ಅದು ಸಿಕ್ಕರೂ, ಸಿಗದಿದ್ದರೂ ರಾಕ್ಷಸರಾಗಿ ಬಿಡುತ್ತಾರೆ. ಈ ಅಮಲಿಗೆ ಕೇವಲ ಹುಡುಗರು ಮಾತ್ರವಲ್ಲದೇ ಹುಡುಗೀರೂ ಬಲಿ ಬೀಳುತ್ತಿರುವುದು ಕಠೋರ ಸತ್ಯ. ಇದಕ್ಕೆ ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಮಂಗಳೂರಿನ ಹುಡುಗಿಯೇ ಸಾಕ್ಷಿ.