ಶೋಧ ನ್ಯೂಸ್ ಡೆಸ್ಕ್: ಇಡೀ ದೇಶದಲ್ಲಿಂದು ಹವಾಮಾನ ವೈಪರೀತ್ಯದ ಮನ್ಸೂಚನೆಗಳು ವ್ಯಾಪಕವಾಗಿಯೇ ಕಾಣಿಸಲಾರಂಭಿಸಿದೆ. ಏಕಾಏಕಿ ಮೇಘಸ್ಫೋಟದಂಥಾ ವಿದ್ಯಮಾನಗಳು ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗಿ ಘಟಿಸುತ್ತಿವೆ. ಇದೆಲ್ಲವೂ ಮುಂದೆ ಬಂದೆರಗಲಿರುವ ಘನ ಘೋರ ದಿನಗಳ ಸ್ಯಾಂಪಲ್ಲುಗಳೆಂಬಂತೆ ಪರಿಸರವಾದಿಗಳು, ವಿಜ್ಞಾನಿಗಳು ಅಭಿಪ್ರಾಯ ಪಡುತ್ತಿದ್ದಾರೆ. ಇದಕ್ಕೆ ಸ್ಪಷ್ಟ ಸಾಕ್ಷಿ ಎಂಬಂತೆ ಇದೀಗ ಹಿಮಾಚಲ ಪ್ರದೇಶವೂ ಸೇರಿದಂತೆ ನಾನಾ ಕಡೆಗಳಲ್ಲಿ ಮೇಘಸ್ಫೋಟಗಳಾಗುತ್ತಿವೆ. ಹಿಮಾಚಲ ಪ್ರದೇಶದ ಧರ್ಮಶಾಲಾ ಪ್ರದೇಶದಲ್ಲಿ ಕೇವಲ ಹನ್ನೆರಡು ಗಂಟೆಗಳ ಅವಧಿಯಲ್ಲಿ ಸುರಿದ ಮಳೆಯ ಪ್ರಮಾಣ ಕಂಡು ಸರ್ವರೂ ಹೌಹಾರಿದ್ದಾರೆ!
ಇದೀಗ ಇಡೀ ಹಿಮಾಚಲ ಪ್ರದೇಶದಾದ್ಯಂತ ಬಾರೀ ಮಳೆಯಾಗುತ್ತಿದೆ. ಅದರಲ್ಲಿಯೂ ಧಮ ಶಾಲಾದಲ್ಲಿ ರಾತ್ರಿ ಒಂಬತ್ತರಿಂದ ಬೆಳಗ್ಗೆ ಒಂಬತ್ತು ಗಂಟೆಯ ಅವಧಿಯಲ್ಲಿ ೩೩೩ ಮಿಲಿ ಮೀಟರ್ ಮಳೆಗಾಗಿ ಬಿಟ್ಟಿದೆ. ಇದು ನಿಜಕ್ಕೂ ಅಚ್ಚರಿದಾಯಕ ಬೆಳವಣಿಗೆಯೇ. ಇದನ್ನಿಟ್ಟುಕೊಂಡು ಹವಾಮಾನ ತಜ್ಞರು ನಾನಾ ದಿಕ್ಕಿನಲ್ಲಿ ವಿಶ್ಲೇಷಣೆ ನಡೆಸುತ್ತಿದ್ದಾರೆ. ಹಾಗಾದರೆ, ಇಂಥಾ ವರ್ಷಧಾರೆ ಹಿಮಾಚಲ ಪ್ರದೇಶದಲ್ಲಿ ಈ ಹಿಂದೆಂದೂ ಸುರಿದಿಲ್ಲವಾ ಎಂಬ ನಿಟ್ಟಿನಲ್ಲಿಯೂ ಒಂದು ಸರ್ವೆ ನಡೆಸಿದ್ದಾರೆ. ಅದರ ಫಲಿತಾಂಶ ಇದು ಅರವತ್ನಾಲಕ್ಕು ವರ್ಷಗಳಲ್ಲಿಯೇ ಆಗಿರುವ ಮಹಾಮಳೆ ಎಂಬುದನ್ನು ಸಾಕ್ಷೀಕರಿಸಿದೆ.
ಅದರನ್ವಯ ಹೇಳೋದಾದರೆ, ಆಗಸ್ಟ್ ಆರು ೧೯೫೮ರಲ್ಲಿ ಹೀಗೆಯೇ ಭಾರೀ ಮಳೆಯಾಗಿತ್ತು. ಆ ದಿನ ಇಪ್ಪತ್ನಾಲಕ್ಕು ಘಂಟೆಗಳ ಅವಧಿಯಲ್ಲಿ ೩೧೬ ಮಿಲಿಮೀಟರ್ ಮಳೆಯಾಗಿತ್ತು. ಆದರೆ ಈ ವರ್ಷದಲ್ಲಿ ಹನ್ನೆರಡು ಗಂಟೆಗಳಲ್ಲಿಯೇ ಆ ಪ್ರಮಾಣದ ಮಳೆಯಾಗಿದೆ. ಇದರ ಪರಿಣಾಮವೆಂಬಂತೆ ಧರ್ಮಶಾಲಾದ ಆಸುಪಾಸಿನಲ್ಲಿ ಭೂಕುಸಿತ ಪ್ರಮಾಣಗಳು ಹೆಚ್ಚಾಗಿವೆ. ಗುಡ್ಡಗಾಡು ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.