ಪ್ರತಿಭೆ ಮತ್ತು ಪೊರಿಶ್ರಮವೆಂಬುದಿದ್ದರೆ, ಚಿತ್ರರಂಗದಲ್ಲಿನ ಪುಟ್ಟ ಹೆಜ್ಜೆಯೂ ರಾಜಮಾರ್ಗವಾಗಿ ಬದಲಾಗಿ ಬಿಡುತ್ತೆ. ಅವಕಾಶಗಳ ಹಿಂದೆ ಅವಕಾಶಗಳ ಸಂತೆ ನೆರೆದು ಮತ್ಯಾವುದೋ ಎತ್ತರಕ್ಕೇರಿಸುತ್ತೆ. ಈ ಮಾತಿಗೆ ಉದಾಹರಣೆಯಂಥಾ ಒಂದಷ್ಟು ಪ್ರತಿಭಾನ್ವಿತರು ಕನ್ನಡ ಚಿತ್ರರಂಗದಲ್ಲಿದ್ದಾರೆ. ಆ ಯಾದಿಯಲ್ಲಿ ಇತ್ತೀಚಿನ ಸೇರ್ಪಡೆಯಂತಿರುವವರು ಧರ್ಮಣ್ಣ ಕಡೂರು. ರಾಮಾ ರಾಮಾ ರೇ ಎಂಬ ಚಿತ್ರದ ಮೂಲಕ ನಟನಾಗಿ ಎಡಂಟ್ರಿ ಕೊಟ್ಟಿದ್ದ ಧರ್ಮಣ್ಣ, ಆ ನಂತರದಲ್ಲಿ ಅನೇಕ ಚಿತ್ರಗಳಲ್ಲಿ ಕಾಮಿಡಿ ನಟನಾಗಿ ಮಿಂಚಿದ್ದರು. ಇದೀಗ ಅವರ ಮುಂದೆ ಅಕ್ಷರಶಃ ರಾಜಯೋಗ ಅವತರಿಸಿದೆ!
ಸಿಕ್ಕ ಪಾತ್ರಗಳನ್ನು ಕಣ್ಣಿಗೊತ್ತಿಕೊಂಡು ನಟಿಸೋ ಮನಃಸ್ಥಿತಿ ಹೊಂದಿರುವವರು ಧರ್ಮಣ್ಣ. ರಾಮಾ ರಾಮಾ ರೇ ಚಿತ್ರದಲ್ಲಿ ಈ ಹುಡುಗ ನಟಿಸಿದ್ದ ಪರಿ ಕಂಡು ಚಿತ್ರಪ್ರೇಮಿಗಳೆಲ್ಲ ಅಚ್ಚರಿಗೊಂಡಿದ್ದರು. ಭಿನ್ನ ಬಗೆಯದ್ದಾಗಿದ್ದ ಆ ಚಿತ್ರದ ಜೀವಾಳವೇ ಈ ಪಾತ್ರ ಎಂಬಷ್ಟರ ಮಟ್ಟಿಗೆ ಧರ್ಮಣ್ಣನ ಖ್ಯಾತಿ ಹಬ್ಬಿಕೊಂಡಿತ್ತು. ಹಾಗೆ ರಾಮ ರಾಮಾ ರೇ ಚಿತ್ರದಲ್ಲಿನ ಆ ಪಾತ್ರ ಕಂಡವರೆಲ್ಲ, ಈ ಹುಡುಗ ನಟನಾಗಿ ನೆಲೆ ಕಂಡುಕೊಳ್ಳುತ್ತಾನೆಂಬ ಭವಿಷ್ಯ ನುಡಿದಿದ್ದರು. ಅದು ನಿಜವಾಗಿ ವರ್ಷಗಳೇ ಕಳೆದಿವೆ. ಕಾಮಿಡಿ ಪಾತ್ರಗಳಲ್ಲಿ ಬ್ಯುಸಿಯಿರುವಾಗಲೇ ಧರ್ಮಣ್ಣ `ರಾಜಯೋಗ’ ಅಂತೊಂದು ಸಿನಿಮಾ ಮೂಲಕ ಹೀರೋ ಆಗಿಬಿಟ್ಟಿದ್ದಾರೆ!
ಈಗಾಗಲೇ ಕಿರುತೆರೆಯಲ್ಲಿ ಒಂದಷ್ಟು ವರ್ಷಗಳಿಂದ ಪಳಗಿಕೊಂಡಿರುವ ಲಿಂಗರಾಜ ಉಚ್ಚಂಗಿ ದುರ್ಗ ನಿರ್ದೇಶನದಲ್ಲಿ ಮೂಡಿ ಬರಲಿರುವ ಚಿತ್ರ ರಾಜಯೋಗ. ಹಾಗಾದರೆ ಈ ಚಿತ್ರದ ಕಥೆ ಏನು? ಅದು ಯಾವ ಜಾನರಿನದ್ದೆಂಬ ಕುತೂಹಲ ಸಹಜವಾಗಿಯೇ ಕಾಡುತ್ತದೆ. ಈ ಬಗ್ಗೆ ಚಿತ್ರ ತಂಡ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದೆ. ಆ ಪ್ರಕಾರವಾಗಿ ಹೇಳೋದಾದರೆ, ರಾಜಯೋಗ ಕಾಮಿಡಿ ಮತ್ತು ಎಮೋಷನಲ್ ಅಂಶಗಳನ್ನು ಹದವಾಗಿ ಬೆರೆಸಿರುವ ಚೆಂದದ ಕಥೆಯನ್ನೊಳಗೊಂಡಿದೆ. ಈ ಮೂಲಕ ಹೀರೋ ಆಗಿರುವ ಧರ್ಮಣ್ಣಗೆ ಸ್ಪೆಷಲ್ಲೆಂಬಂಥಾ ಪಾತ್ರವೇ ಸಿಕ್ಕಿದೆಯಂತೆ. ಅಂತೂ ರಾಜಯೋಗದ ಮೂಲಕ ಧರ್ಮಣ್ಣ ಪ್ರತಿಭೆಯ ಮಗ್ಗುಲು ಪರಿಚಯವಾಗಲಿದೆ!
ಶ್ರೀರಾಮನಾಥನ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಸ್ನೇಹಿರು ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅದಾಗಲೇ ರಾಜಯೋಗ ಎಪ್ಪತ್ತು ಭಾಗದಷ್ಟು ಚಿತ್ರೀಕರಣ ಮುಗಿಸಿಕೊಂಡಿದೆ. ಈ ಹೊತ್ತಿನಲ್ಲಿ ಒಂದಿಡೀ ಸಿನಿಮಾದ ಸಾರವನ್ನು ಹಿಡಿದಿಟ್ಟುಕೊಂಡಂಥಾ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಲಾಗಿದೆ. ಉಳಿಕೆ ಮಾಹಿತಿಗಳು ಇಷ್ಟರಲ್ಲಿಯೇ ಜಾಹೀರಾಗಲಿದೆ. ಸಾಮಾನ್ಯವಾಗಿ ಒಂದಷ್ಟು ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಲೇ ಕೆಲವರಿಗೆ ನಾಯಕನಾಗೋ ಆಸೆ ಚಿಗುರುತ್ತದೆ. ಆದರೆ ಅಂಥಾ ಯಾವ ಗೋಜಿಗೂ ಹೋಗದೆ ಸಿಕ್ಕ ಪಾತ್ರಗಳಲ್ಲಿ ಖುಷಿ ಕಂಡುಕೊಂಡಿದ್ದವರು ಧರ್ಮಣ್ಣ. ಈ ಅವಕಾಶ ಅವರಿಗೆ ತಾನೇ ತಾನಾಗಿ ಒಲಿದು ಬಂದಿದೆ. ರೈತಾಪಿ ವರ್ಗದಿಂದ ಬಂದು, ಕಡುಗಷ್ಟದಿಂದ ನೆಲೆ ಕಂಡುಕೊಂಡಿರುವ ಧರ್ಮಣ್ಣನಿಗೆ ಒಳ್ಳೆಯದ್ದಾಗಲಿ, ಅವರು ನಾಯಕನಾಗಿಯೂ ಯಶಸ್ವಿಯಾಗಲೆಂದು `ಸಿನಿ ಶೋಧ’ ಹಾರೈಸುತ್ತದೆ…