ನಮ್ಮ ನಡುವೆ ಸಾಕಷ್ಟು ಜಾನರ್ಗಳ ಸಿನಿಮಾಗಳನ್ನು ಬಹುವಾಗಿ ಇಷ್ಟ ಪಡುವವರು ಕಾಣ ಸಿಗುತ್ತಾರೆ. ಆದ್ದರಿಂದಲೇ ಒಂದು ವೆರೈಟಿಯ ಚಿತ್ರ, ಮತ್ತೊಂದು ಅಭಿರುಚಿಯವರಿಗೆ ಪಥ್ಯವಾಗುವುದಿಲ್ಲ. ಹೀಗೆ ಭಿನ್ನ ಅಭಿರುಚಿಗಳನ್ನೆಲ್ಲ ಒಟ್ಟಿಗೆ ಕೂರಿಸಿ, ಮನಸಾರೆ ಮನೋರಂಜನೆಯನ್ನು ಧಾರೆಯೆರೆಯೋ ಛಾತಿ ಇರೋದು ಪಕ್ಕಾ ಕಾಮಿಡಿ ಜಾನರಿನ ಚಿತ್ರಗಳಿಗಷ್ಟೇ. ಒಂದೊಳ್ಳೆ ಕಥೆ, ಅದಕ್ಕೆ ಹೊಸೆದುಕೊಂಡಿರುವ ಕಾಮಿಡಿ… ಇಷ್ಟಿದ್ದುಬಿಟ್ಟರೆ ಗೆಲುವು ದಕ್ಕುವುದು ಕಷ್ಟವೇನಲ್ಲ. ಸದ್ಯದ ಮಟ್ಟಿಗೆ ಅಂಥಾದ್ದೊಂದು ಭರವಸೆ ಮೂಡಿಸಿರುವ ಚಿತ್ರ, ಲಕ್ಷ್ಮಿ ರಮೇಶ್ ನಿರ್ದೇಶನದ ಧಮಾಕ. ಈಗಾಗಲೇ ಟೀಸರ್ ಮತ್ತು ಹಾಡುಗಳಿಂದ ಸೆಳೆದಿದ್ದ ಈ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಈ ಮೂಲಕ ಇದೊಂದು ಪಕ್ಕಾ ಭರ್ಜರಿ ಕಾಮಿಡಿಯ ಧಮಾಕಾ ಎಂಬ ವಿಚಾರ ಖಾತರಿಯಾಗಿದೆ.
ವಿಶೇಷವೆಂದರೆ, ಈ ಟ್ರೈಲರ್ಗೆ ಖ್ಯಾತ ಕಾಮಿಡಿ ನಟ ಚಿಕ್ಕಣ್ಣ ಧ್ವನಿ ನೀಡಿದ್ದಾರೆ. ಘನ ಗಂಭೀರವಾದ ಹಿನ್ನೆಲೆ ಧ್ವನಿಯೊಂದಿಗೆ ತೆರುಕೊಳ್ಳುವ ಟ್ರೈಲರ್, ಅಕ್ಷರಶಃ ನಗುವಿನ ವಠಾರಕ್ಕೆ ಕೊಂಡೊಯ್ದು ಬಿಡುತ್ತೆ. ಇದರೊಂದಿಗೇ ಒಂದಷ್ಟು ಪಾತ್ರಗಳ ಝಲಕ್ಕುಗಳೂ ಹೊಳೆಯುತ್ತವೆ. ಶಿವರಾಜ್ ಕೆ.ಆರ್ ಪೇಟೆಗೆ ಇದರೊಂದಿಗೆ ಒಂದೊಳ್ಳೆ ಪಾತ್ರ ಸಿಕ್ಕಿರುವ ಸುಳಿವುಗಳೂ ಸ್ಪಷ್ಟವಾಗುತ್ತವೆ. ಕಾಮಿಡಿ ಬೇಸಿನ ನಟನೆಯಲ್ಲಿ ಶಿವರಾಜ್ ಎಂಥಾ ಪ್ರತಿಭೆ ಎಂಬುದು ಕಾಮಿಡಿ ಕಿಲಾಡಿಗಳು ಶೋನಲ್ಲಿಯೇ ಸಾಬೀತಾಗಿತ್ತು. ಆ ನಂತರವೂ ಅವರು ಚಿತ್ರರಂಗದಲ್ಲಿ ನಟನಾಗಿ ನೆಲೆ ಕಂಡುಕೊಳ್ಳುತ್ತಾರೆಂಬ ಭರವಸೆಯೂ ಮೂಡಿ ಬಂದಿತ್ತು. ಧಮಾಕದಲ್ಲವರಿಗೆ ಒಂದೊಳ್ಳೆ ಪಾತ್ರ ಸಿಕ್ಕಿರೋದರಿಂದ ಅಂಥಾದ್ದೊಂದು ಭರವಸೆ ಈ ಮೂಲಕ ಸಾಕಾರಗೊಳ್ಳುವ ಸೂಚನೆಗಳಿವೆ.
ಹಾಗಾದರೆ, ಈ ಸಿನಿಮಾದ ಕಥೆ ಏನು? ಒಂದಿಡೀ ಚಿತ್ರ ಯಾವ ಸ್ವರೂಪದಲ್ಲಿ ಮೂಡಿ ಬಂದಿದೆ ಅಂತೆಲ್ಲ ಪ್ರಶ್ನೆಗಳೇಳೋದು ಸಹಜ. ಈ ಬಗ್ಗೆ ನಿರ್ದೇಶಕರು ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇದೊಂದು ಪಕ್ಕಾ ಕಾಮಿಡಿ ಎಂಟರ್ಟೈನರ್ ಚಿತ್ರ. ಮಧ್ಯಮ ವರ್ಗದ ರೊಟೀನ್ ಬದುಕೇ ಇಲ್ಲಿನ ಕಥೆಯ ಕೇಂದ್ರಬಿಂದು. ಪ್ರತೀ ದಿನದ ಬೆಳಗನ್ನು ಎಣ್ಣೆ ಏಟಿನ ಹ್ಯಾಂಗೋವರ್ ಮೂಲಕವೇ ಎದುರುಗೊಂಡು, ದಿನವಿಡೀ ಮಗುವಿನಂತೆ ಬದುಕುವ, ಕತ್ತಲಾಗುತ್ತಲೇ ಚಿತ್ತಾಗಿ ಅಬ್ಬರಿಸುವ ಒಂದು ಪಾತ್ರ. ಅದಾಗ ತಾನೇ ಲವ್ವಲ್ಲಿ ಬಿದ್ದು ಪ್ರೇಮದ ಫ್ರೆಶ್ ಆದ ಅನುಭೂತಿಯಲ್ಲಿ ಮಿಂದೇಳುವ ಮತ್ತೊಂದು ಪಾತ್ರ… ಡ್ಯುಯೆಲ್ ಕ್ಯಾರೆಕ್ಟರಿನ ಕುಡುಕನ ಭೂಮಿಕೆಯಲ್ಲಿ ಬಿಚ್ಚಿಕೊಳ್ಳುವ ಈ ಕಥಾನಕದಲ್ಲಿ ಮಜಬೂತಾದ ಪಾತ್ರಗಳಿವೆ. ಅರೆಕ್ಷಣವೂ ಸಾವರಿಸಿಕೊಳ್ಳಲಾಗದಂಥಾ ಮಸ್ತ್ ಕಾಮಿಡಿಯೂ ಧಮಾಕಾದಲ್ಲಿದೆ.
ಕರುನಾಡಿನ ಖ್ಯಾತ ಜೋಡಿ ಎಂದೇ ಗುರುತಿಸಿಕೊಂಡಿರುವ ನಯನಾ ಮತ್ತು ಶೆವರಾಜ್ ಕೆ.ಆರ್ ಪೇಟೆ ಇಲ್ಲಿ ಮತ್ತೆ ಒಟ್ಟಾಗಿ ನಟಿಸಿದ್ದಾರೆ. ಅದಕ್ಕೆ ಹಿರಿಯ ಕಲಾವಿದರ ದಂಡೇ ಸಾಥ್ ಕೊಟ್ಟಿದೆ. ಪ್ರಭಾಕರ್ ಕೋಟೆ, ಮೋಹನ್ ಜುನೇಜಾ, ಮೈಕೋ ನಾಗರಾಜ್, ಪ್ರಕಾಶ್ ತುಮಿನಾಡು ಸೇರಿದಂತೆ ಒಂದಷ್ಟು ಕಲಾವಿದರು ಬೇರೆಯದ್ದೇ ಶೇಡಿನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ಎಸ್ ಆರ್ ಮೀಡಿಯಾ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಸುನೀಲ್ ಎಸ್ ರಾಜ್ ಮತ್ತು ಅನ್ನಪೂರ್ಣ ಪಾಟೀಲ್ ನಿರ್ಮಾಣ ಮಾಡಿದ್ದಾರೆ. ಹಾಲೇಶ್ ಎಸ್. ಛಾಯಾಗ್ರಹಣ, ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ, ವಿನಯ್ ಕುಮಾರ್ ಕೂರ್ಗ್ ಸಂಕಲನ ಈ ಚಿತ್ರಕ್ಕಿದೆ.