ಪ್ರೇಮತೀವ್ರತೆಯ ಹಾಡೀಗ ಸರ್ವಾಂತರ್ಯಾಮಿ!
ಇದೀಗ ಕನ್ನಡ ಚಿತ್ರರಂಗದಲ್ಲಿ ಥರ ಥರದ ಸಿನಿಮಾಗಳ ಹಂಗಾಮಾ ಶುರುವಾಗಿದೆ. ಇದೀಗ, ಹಾಗೆ ಹೊಸತನದ ಗಂಧ ಮೆತ್ತಿಕೊಂಡಿರುವ ಅನೇಕ ಚಿತ್ರಗಳು ಕೆಲಸ ಕಾರ್ಯಗಳನ್ನೆಲ್ಲ ಪೂರೈಸಿಕೊಂಡು ಬಿಡುಗಡೆಗೆ ಅಣಿಯಾಗಿ ನಿಂತಿವೆ. ಈ ಪಟ್ಟಿಯಲ್ಲಿ ದಾಖಲಾಗುತ್ತಲೇ, ಒಂದಷ್ಟು ನಿರೀಕ್ಷೆಗೂ ಕಾರಣವಾಗಿರುವ ಚಿತ್ರ ಧಮಾಕಾ. ಚಿತ್ರೀಕರಣ ಆರಂಭವಾದ ಕ್ಷಣದಿಂದ ಇಲ್ಲಿಯವರೆಗೂ ಧಮಾಕಾ ಒಂದಷ್ಟು ಸುದ್ದಿಯಾಗುತ್ತಾ ಬಂದಿದೆ. ಇತ್ತೀಚಿನ ದಿನಗಳಲ್ಲಿ ಅದು ಸೌಂಡು ಮಾಡುತ್ತಿರೋದು ಒಂದು ಮುದ್ದಾದ ಹಾಡೊಂದರ ಮೂಲಕ. ಪ್ರೇಮದ ಭಾವಗಳು ಹಾಡಾದರೆ ಅದು ಯಾವ ಕಾಲಕ್ಕೂ ಚೆಂದವೇ. ಸಾಮಾನ್ಯವಾಗಿ ಪೀಳಿಗಿಯಿಂದ ಪೀಳಿಗೆಗೆ ಭಾವನೆಇಗಳೂ ಬದಲಾಗುತ್ತಾ ಸಾಗುತ್ತವೆ. ಪ್ರೀತಿ ಕೂಡಾ ಅದರ ವಲಯಕ್ಕೆ ಬರುತ್ತದೆ. ಹಾಗೆ ಬದಲಾದ ಈ ಜನರೇಷನ್ನಿನ ಪ್ರೇಮ ಪುಳಕಗಳನ್ನು ಬಚ್ಚಿಟ್ಟುಕೊಂಡಿರೋ ಈ ಹಾಡೀಗ ಎಲ್ಲೆಡೆ ಹರಿದಾಡುತ್ತಿದೆ. ಈ ಮೂಲಕ ಟ್ರೆಂಡ್ ಸೆಟ್ ಮಾಡಿದೆ.
ಇದು ಲಕ್ಷ್ಮಿ ರಮೇಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಅದೀಗ ‘ನಾನು ಹೋಗೋಕೂ ಮೊದಲು’ ಎಂಬ ನವಿರಾದ ಹಾಡಿನ ಮೂಲಕ ಸದ್ದು ಮಾಡುತ್ತಿದೆ. ಸಿದ್ದು ಮೂಲಿಮನಿ ಮತ್ತು ಪ್ರಿಯಾ ಜೆ ಆಚಾರ್ ನಟಿಸಿರುವ ಈ ಹಾಡು ತನ್ನ ಮುದ್ದಾದ ಸ್ವರೂಪದ ಮೂಲಕ ಮೋಡಿ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ರೀಲ್ಸ್ ಸೇರಿದಂತೆ ನಾನಾ ರೂಪಾಂತರಗಳೊಂದಿಗೆ ಇದು ಟ್ರೆಂಡ್ ಸೆಟ್ ಮಾಡುತ್ತಿದೆ. ಹೀಗೆ ಹಾಡೊಂದು ಟ್ರೆಂಡ್ ಸೆಟ್ ಮಾಡಿತೆಂದರೆ, ತಾನೇತಾನಾಗಿ ಆ ಸಿನಿಮಾ ಮೇಲೆ ಮೋಹ ಮೂಡಿಕೊಳ್ಳುತ್ತೆ. ಇಂಥಾ ಭಾವ ಸ್ಫುರಿಸೋ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿದ ಸಾಕಷ್ಟು ಉದಾಹರಣೆಗಳೂ ಇದ್ದಾವೆ. ಧಮಾಕಾ ಕೂಡಾ ಆ ಸಾಲಿಗೆ ಸೇರಿಕೊಳ್ಳುವ ಕುರುಹುಗಳೇ ದಟ್ಟವಾಗಿ ಗೋಚರಿಸುತ್ತಿವೆ.
ನಂದಿ ಎಂಟರ್ಪ್ರೈಸಸ್ ಅರ್ಪಿಸಿ, ಎಸ್ ಆರ್ ಮೀಡಿಯಾ ಪ್ರಿಡಕ್ಷನ್ಸ್ ಬ್ಯಾನರಿನಡಿಯಲ್ಲಿ ಸುನೀಲ್ ಎಸ್ ರಾವ್ ಮತ್ತು ಅನ್ನಪೂರ್ಣ ಪಾಟೀಲ್ ನಿರ್ಮಾಣ ಮಾಡಿರುವ ಚಿತ್ರ ಧಮಾಕಾ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್ ಪೇಟೆ ಮತ್ತು ನಯನಾ ಜೋಡಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಸಿದ್ದು ಮೂಲಿಮನಿ ಮತ್ತು ಪ್ರಿಯಾ ಕೂಡಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ ಸಂಯೋಜನೆ ಮಾಡಿ, ವಿಜಯ ಪ್ರಕಾಶ್ ಮತ್ತು ಮಾನಸ ಹೊಳ್ಳ ಹಾಡಿರುವ ಈ ಸಾಂಗಿನಲ್ಲಿ ಸಿದ್ದು ಮತ್ತು ಪ್ಗರಿಯಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕ್ಯೂಟ್ ಲವ್ ಸ್ಟೋರಿ ಸೇರಿದಂತೆ, ಒಂದಷ್ಟು ಸಂಕೀರ್ಣ ಕಥಾ ಹಂದರ ಹೊಂದಿರುವ ಈ ಚಿತ್ರವೀಗ ಸದರಿ ಹಾಡಿನ ಮೂಲಕವೇ ಪ್ರೇಕ್ಷಕರನ್ನು ಆವರಿಸಿಕೊಂಡಿದೆ.