ಕಳೆದ ವರ್ಷದ ಗೆಲುವಿನ ಸಿಹಿ ಮತ್ತು ಅದರಿಂದಾಗಿಯೇ ಸ್ಫುರಿಸಿದ ಭರವಸೆಗಳ ಒಡ್ಡೋಲಗದಲ್ಲಿ ಕನ್ನಡ ಚಿತ್ರರಂಗ ಹೊಸಾ ಸಂವತ್ಸರಕ್ಕೆ ತೆರೆದುಕೊಂಡಿದೆ. ಅದಕ್ಕೆ ಮತ್ತಷ್ಟು ಆವೇಗ ನೀಡುವಂಥಾ ಒಂದಷ್ಟು ಸಿನಿಮಾಗಳು ಗೆಲುವಿನ ಖಾತೆ ತೆರೆಯಲು ಸನ್ನದ್ಧವಾಗಿ ನಿಂತಿವೆ. ಆ ಯಾದಿಯಲ್ಲಿ ಮೊದಲ ಸಾಲಿನ ಸ್ಥಾನ ಗಿಟ್ಟಿಸಿಕೊಂಡಿರುವ ಚಿತ್ರ ಧೈರ್ಯಂ ಸರ್ವತ್ರ ಸಾಧನಂ. ಈಗಾಗಲೇ ಲಿರಿಕಲ್ ಸಾಂಗ್ ಸೇರಿದಂತೆ ನಾನಾ ಬಗೆಯಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ, ಒಂದಷ್ಟು ನಿರೀಕ್ಷೆ, ಭರವಸೆಗಳನ್ನು ಹುಟ್ಟುಹಾಕಿದೆ. ಇದೇ ಹೊತ್ತಿನಲ್ಲಿ ಸೆನ್ಸಾರ್ ಅನ್ನೂ ಮುಗಿಸಿಕೊಂಡು, ಇನ್ನೇನು ಅತೀ ಶೀಘ್ರದಲ್ಲಿ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸಲಾರಂಭಿಸಿದೆ.
ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ `ಹೆಂಡವೇ ನಮ್ಮನೆ ದ್ಯಾವರು’ ಎಂಬೊಂದು ವೀಡಿಯೋ ಸಾಂಗ್ ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿತ್ತು. ಇದರೊಂದಿಗೆ ಸದರಿ ಚಿತ್ರದ ಬಗೆಗಿನ ಕುತೂಹಲ ಪ್ರೇಕ್ಷಕರೆದೆಗೆ ದಾಟಿಕೊಂಡಿತ್ತು. ಈ ಹಾಡು ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿರುವಾಗಲೇ ಚಿತ್ರತಂಡ ಬಿಡುಗಡೆಗೆ ಮುಹೂರ್ತ ಹುಡುಕಲಾರಂಭಿಸಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ, ತಿಂಗಳೊಪ್ಪತ್ತಿನಲ್ಲಿಯೇ ಧೈರ್ಯಂ ಸರ್ವತ್ರ ಸಾಧನಂ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ಹೀಗೆ ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿರುವ ಈ ಸಿನಿಮಾ ತಂಡದಲ್ಲಿ ಗಾಢ ಭರವಸೆಯಿದೆ; ಈ ಕಂಟೆಂಟನ್ನು ಪ್ರೇಕ್ಷಕರೆಲ್ಲ ಅಪ್ಪಿ ಒಪಪಿಕೊಳ್ಳಿದ್ದಾರೆಂಬ ನಂಬುಗೆಯೂ ಇದೆ. ಸದ್ಯದ ವಾತಾವರಣ ಅದನ್ನು ಅಕ್ಷರಶಃ ನಿಜವಾಗಿಸುವಂತಿದೆ.
ಅಂದಹಾಗೆ, ಇದು ಎ.ಆರ್ ಸಾಯಿರಾಮ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಈಗಾಗಲೇ ನಿರ್ದೇಶನ ವಿಭಾಗ, ಛಾಯಾಗ್ರಹಣ, ಸಂಕಲನ, ಸಾಹಿತ್ಯ ಸೇರಿದಂತೆ ಚಿತ್ರರಂಗದ ನಾನಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುವವರು ಸಾಯಿರಾಮ್. ಬಹುಶಃ ಅಂಥಾ ಭಿನ್ನ ಅಭಿರುಚಿಯನ್ನಿಟ್ಟುಕೊಂಡು, ಎಲ್ಲಡೆಯೂ ಸೈ ಅನ್ನಿಸಿಕೊಂಡ ವಿರಳ ಸಾಲಿನಲ್ಲಿ ಸಾಯಿರಾಮ್ ಖಂಡಿತವಾಗಿಯೂ ಸೇರಿಕೊಳ್ಳುತ್ತಾರೆ. ಘಟಾನುಘಟಿ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡು, ಬದುಕು ಎತ್ತೆತ್ತ ಹೊಯ್ದಾಡಿಸಿದರೂ ನಿರ್ದೇಶನವನ್ನೇ ಗಿರಿಯೆಂದುಕೊಂಡಿದ್ದ ಸಾಯಿರಾಮ್ ಪಾಲಿಗೆ ಧೈರ್ಯಂ ಸರ್ವತ್ರ ಸಾಧನಂ ನಿಜಕ್ಕೂ ಮಹತ್ವದ ಚಿತ್ರ.
ಡಾರ್ಕ್ ಆಕ್ಷನ್ ಜಾನರಿಗೆ ಸೇರಬಹುದಾದ ಈ ಚಿತ್ರದ ಕಥೆ ಆ ಕ್ಷಣದ ಅನಿವಾರ್ಯತೆಗೆ ಹುಟ್ಟಿರುವಂಥಾದ್ದಲ್ಲ. ನಿರ್ದೇಶಕ ಸಾಯಿರಾಮ್ ಅದಕ್ಕಾಗಿ ವರ್ಷಾಂತರಗಳಿಂದಲೂ ಶ್ರಮಿಸಿದ್ದಾರೆ. ಇದರ ನಾಯಕನ ಪಾತ್ರಕ್ಕಾಗಿ ವಿವನ್ ಎಂಬ ಹುಡುಗನನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆತನಿಗಾಗಿ ಪ್ರತ್ಯೇಕವಾಗಿ ವರ್ಕ್ಶಾಪ್ಗಳನ್ನು ನಡೆಸಿ, ಆ ಪಾತ್ರಕ್ಕೆ ತಯಾರು ಮಾಡಲಾಗಿದೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ಅನುಷಾ ರೈ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇನ್ನುಳಿದಂತೆ ಬಲ ರಾಜ್ವಾಡಿ, ವರ್ಧನ್ ತೀರ್ಥಹಳ್ಳಿ, ಯಶ್ ಶೆಟ್ಟಿ ಮುಂತಾದವರ ತಾರಾಗಂಗಣ, ಈಗಾಗಲೇ ಯಶಸ್ವೀ ಸಿನಿಮಾಗಳ ಭಾಗವಾಗಿರುವ ಪ್ರತಿಭಾವಂತ ತಾಂತ್ರಿಕ ವರ್ಗದ ಸಮಾಗಮದಿಂದ ಧೈರ್ಯಂ ಸರ್ವತ್ರ ಸಾಧನಂ ಚಿತ್ರ ರೂಪುಗೊಂಡಿದೆ.