ನಾವು ಪ್ರಾಕೃತಿಕವಾಗಿ ಕಣ್ಣಳತೆಯಲ್ಲಿ ಎದುರುಗೊಳ್ಳುವ ಅಚ್ಚರಿಗಳನ್ನು ಕಂಡು ಆಗಾಗ ತಬ್ಬಿಬ್ಬಾಗುತ್ತೇವೆ. ನಮ್ಮೊಳಗೂ ಒಂದು ಅಚ್ಚರಿ ತುಂಬಿಕೊಂಡು ರೋಮಾಂಚಿತರಾಗುತ್ತೇವೆ. ಆದರೆ ನಮ್ಮೆಲ್ಲರ ಕಣ್ಣಾಚೆಗಿರುವ ಅದ್ಭುತ ವಿಚಾರಗಳದ್ದೊಂದು ವಿಶಾಲ ಸಾಗರವೇ ಇದೆ. ಅದೇನೇ ಅಧ್ಯಯನಗಳು, ಸಂಶೋಧನೆಗಳಾದರೂ ನಮಗೆ ದಕ್ಕುವುದು ಅದರಲ್ಲೊಂದು ಹನಿ ಮಾತ್ರ. ಇದೀಗ ಜಾಗತಿಕ ಮಟ್ಟದಲ್ಲಿ ಕೆಲವಾರು ನಿಗೂಢ ಸ್ಥಳಗಳ ಬಗ್ಗೆ ಅನೇಕ ವಿಚಾರಗಳು ಜಾಹೀರಾಗಿವೆ. ಆದರೆ ಬಹುತೇಕವು ವಿಜ್ಞಾನದ ನಿಲುಕಿಗೂ ಸಿಗದೆ ಸತಾಯಿಸುತ್ತಿವೆ. ಇದೀಗ ಕೆಂಪು ಸಮುದ್ರದ ಗರ್ಭದಲ್ಲಿ ಪತ್ತೆಯಾಗಿರುವ ಡೆತ್ ಪೂಲ್ ಕೂಡಾ ಅಂಥಾ ನಿಗೂಢಗಳ ಸಾಲಿಗೆ ಹೊಸಾ ಸೇರ್ಪಡೆಯಂತಿದೆ.
ಕೆಂಪು ಸಮುದ್ರವೆಂದರೇನೇ ಅಚ್ಚರಿಗಳ ಕೊಂಪೆ. ಅದರ ನಾನಾ ಬಗೆಗಳನ್ನು ಈಗಾಗಲೇ ಸಂಶೋಧನೆಗಳು ಮತ್ತು ಅನ್ವೇಷಣೆಗಳ ಮೂಲಕ ಜಾಹೀರುಗೊಳಿಸಲಾಗಿದೆ. ಮಿಯಾಮಿ ವಿಶ್ವವಿದ್ಯಾಲಯದ ಸ್ಯಾಮ್ ಪುರ್ಕಿಸ್ ಸಾರಥ್ಯದಲ್ಲಿ ಒಂದು ಸಮರ್ಥವಾದ ತಂಡ ಕೆಂಪು ಸಮುದ್ರದ ಆಳ ಪ್ರದೇಶದಲ್ಲಿನ ಈ ಕೊಳವನ್ನು ಪತ್ತೆಹಚ್ಚಿದೆ. ವಿದ್ಯುತ್ ಚಾಲಿತವಾದ ಪರಿಕರದ ಸಹಾಯದಿಂದ ಈ ಸಂಶೋಧನೆಯನ್ನು ನಡೆಸಲಾಗಿದೆ. ಇಂಥಾದ್ದೊಂದು ಅನ್ವೇಷಣೆ ನಡೆದದ್ದು ಕೆಂಪು ಸಮುದ್ರದ ೧೭೭೦ ಅಡಿ ಆಳದಲ್ಲಿ. ಸತತವಾಗಿ ಸಾಗರ ಗರ್ಭದಲ್ಲಿ ಹತ್ತು ಗಂಟೆಗಳ ಕಾಲ ಯಾನ ನಡೆಸಿದ್ದ ಆ ವಿದ್ಯುತ್ ಚಾಲಿತ ಯಂತ್ರ ಕಡೇಯ ಐದು ನಿಮಿಷದ ಅವಧಿಯಲ್ಲಿ ಭಯಾನಕವಾದ ಡೆತ್ ಪೂಲ್ ಅನ್ನು ಪತ್ತೆಹಚ್ಚಿದೆ.
ಅಷ್ಟೊಂದು ಆಳದಲ್ಲಿ ಮೈಚಾಚಿಕೊಂಡಿರುವ ಡೆತ್ ಪೂಲ್ ಹಲವಾರು ಭಯಾನಕ ಚಹರೆಗಳನ್ನು ಹೊಂದಿದೆ. ಇದರೊಳಗಿನ ನೀರು ಸಮುದ್ರದ ಮಾಮೂಲಿ ನೀರಿಗಿಂತಲೂ ಬಹಳಷ್ಟು ಪಟ್ಟು ಹೆಚ್ಚು ಉಪ್ಪಾಗಿದೆ. ಅದರಲ್ಲಿ ಯಾವುದೇ ಲವಣಾಂಶ ಮತ್ತು ಆಮ್ಲಜನಕದ ಇರುವಿಕೆ ಇಲ್ಲ. ಈ ಕಾರಣದಿಂದ ಆ ಕೊಳದೊಳಗೆ ಪ್ರವೇಶಿಸುವ ಯಾವುದೇ ಜೀವಿಯಾದರೂ ಅರೆಕ್ಷಣದಲ್ಲಿಯೇ ಉಪ್ಪಿನ ಕಾಯಿಯಂತಾಗಿ ಬಿಡುತ್ತೆ. ಅಲ್ಲಿಂದ ಬದುಕಿ ಬರುವುದಕ್ಕೆ ಯಾವ ಆಪ್ಷನ್ನುಗಳೂ ಸಿಗಲು ಸಾಧ್ಯವೇ ಇಲ್ಲ. ಹೈಡ್ರೋಜನ್ ಸಲ್ಫೇಟ್ನಂಥಾ ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿರೋದರಿಂದ ಅದರ ಸಂಪರ್ಕಕ್ಕೆ ಬಂದ ಜೀವಿಗಳು ಬದುಕೋ ಸಾಧ್ಯತೆಗಳೇ ಇಲ್ಲ ಅಂತ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ನೂರಕ್ಕೆ ನೂರರಷ್ಟು ಕೊಲ್ಲುವ ಗುಣಗಳನ್ನು ಹೊಂದಿರುವ ಈ ಕೊಳ ಕೆಲ ಪರಾವಲಂಬಿ ಭಕ್ಷಕಗಳ ಪಾಲಿಗೆ ವರವೂ ಹೌದು. ಇದು ಸಾಗರದೊಳಗಿನ ಆಹಾರ ಸರಪಳಿಯನ್ನು ಮುಂದುವರೆಸುವ ಕ್ರಮವೂ ಹೌದು. ಇಂಥಾ ಭಯಾನಕ ಡೆತ್ ಪೂಲ್ ಕಾಣ ಸಿಕ್ಕಿರೋದು ಇದೇ ಮೊದಲು. ಆದ್ದರಿಂದ ಇದು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿದೆ. ಇದುವೇ ಸಾಗರದಾಳದ ಭಯಾನಕ ಅಚ್ಚರಿಗಳಿಗೆ ಕನ್ನಡಿ ಹಿಡಿದಿದೆ. ಇಂಥಾ ಡೆತ್ ಪೂಲ್ಗಳು ಇತರೇ ಸಾಗರದಾಳದಲ್ಲಿಯೂ ಇರುತ್ತವಾ? ಅಥವಾ ಅದರ ಚಹರೆಗಳು ರೂಪಾಂತರಗೊಂಡಿರುತ್ತವಾ ಎಂಬ ದಿಕ್ಕಿನಲ್ಲಿ ಮತ್ತಷ್ಟು ಅಧ್ಯಯನಕ್ಕೆ ಮಿಯಾಮಿ ವಿಶ್ವವಿದ್ಯಾಲಯದ ತಂಡ ಅಣಿಗೊಂಡಿದೆ.