ಇಂದು ಆವಿಷ್ಕಾರ, ಸಂಶೋಧನೆಗಳ ಭರಾಟೆಯೂ ಹೆಚ್ಚಾಗಿದೆ. ಅದಕ್ಕೆ ಸ್ಪರ್ಧೆಯೊಡ್ಡುವಂತೆ ಮಾನವರನ್ನು ನಾನಾ ಬಗೆಯ ಕಾಯಿಲೆಗಳೂ ಕೂಡಾ ಬಾಧಿಸಲಾರಂಭಿಸಿವೆ. ಆದರೆ ಕಾಸೊಂದಿದ್ದರೆ ಅದೆಂಥಾ ಕಾಯಿಲೆಗಳನ್ನಾದರೂ ವಾಸಿ ಮಾಡುವಂಥ, ಸಾವಿನ ಕ್ಷಣಗಳನ್ನು ಮತ್ತೊಂದಷ್ಟು ಕಾಲಾವಧಿಗೆ ಮುಂದೆ ತಳ್ಳುವಂಥಾ ಔಷಧಿಗಳೂ ಇದ್ದಾವೆ. ಆಧುನಿಕ ಜೀವನಶೈಲಿಯೇ ಜನರನ್ನು ಇಂಥಾ ಕಾಯಿಲೆ ಕಸಾಲೆಗಳ ಕೋರೆ ಹಲ್ಲುಗಳಲ್ಲಿ ಸಿಲುಕಿಸಿವೆ ಅನ್ನೋ ಅಪವಾದವೂ ಇದೆ.
ಆಯ್ತು, ಈಗಿನ ದಿನಮಾನದಲ್ಲಿ ಕಲುಷಿತ ವಾತಾವರಣ ಮನುಷ್ಯನ ದೇಹವನ್ನು ಕಾಯಲೆಗಳ ಕೊಂಪೆಯನ್ನಾಗಿಸಿದೆ. ಹಾಗಂತ ನಮ್ಮ ಪೂರ್ವಜರನ್ನು ಇಂಥಾ ಕಾಯಿಲೆಗಳೂ ಬಾಧಿಸುತ್ತಿರಲಿಲ್ಲವಾ ಅನ್ನೋ ಪ್ರಶ್ನೆ ಕಾಡುತ್ತೆ. ಪ್ರಮಾಣ ಕೊಂಚ ಕಡಿಮೆಯಿದ್ದರೂ ಕೂಡಾ ಮಾರಣಾಂತಿಕ ಕಾಯಿಲೆಗಳು ಮತ್ತು ಸಾಂಕ್ರಾಮಿಕಗಳು ಎಲ್ಲ ಕಾಲದಲ್ಲಿಯೂ ಇದ್ದವು. ಈಗಾದರೆ ಅಂಥಾ ಕಾಯಿಲೆಗಳು ಸಲೀಸಾಗಿ ಬಂದೆರಗದಂತೆ ತಡೆಯುವಂಥಾ, ಅದರ ವಿರುದ್ಧ ಹೋರಾಡುವಂಥ ಲಸಿಕೆಗಳಿದ್ದಾವೆ. ಆದರೆ ಅದರ ಕಲ್ಪನೆಯೂ ಇಲ್ಲದಿದ್ದ ಕಾಲದಲ್ಲಿ ಜನ ಏನು ಮಾಡುತ್ತಿದ್ದರು? ಈ ಪ್ರಶ್ನೆಯೇ ಭಯಾನಕ ಸತ್ಯಗಳನ್ನ ಮುಖಾಮುಖಿಯಾಗಿಸುತ್ತೆ.
ನಮ್ಮ ಪೂರ್ವಜರು ಅದಕ್ಕಾಗಿ ಒಂದಿಷ್ಟು ವಿಚಿತ್ರ ಎನ್ನಿಸುವ, ಭಯ ಆವರಿಸಿಕೊಳ್ಳುವಂಥಾ ಮಾರ್ಗೋಪಾಯಗಳನ್ನ ಅನುಸರಿಸುತ್ತಿದ್ದರು. ಅದರಲ್ಲಿಯೂ ಯುರೋಪಿಯನ್ನರು ಹದಿನೇಳನೇ ಶತಮಾನದಲ್ಲಿ ಕಂಡುಕೊಂಡಿದ್ದ ಮಾರ್ಗವಂತೂ ತುಂಬಾನೇ ಭಯಾನಕ. ಯಾಕಂದ್ರೆ, ಅವರು ಕಾಯಿಲೆಗಳಿಂದ ಪಾರಾಗಲು ಶವದ ಭಾಗಗಳನ್ನು ಪುಡಿ ಮಾಡಿ ತಿನ್ನುತ್ತಿದ್ದರಂತೆ. ಮೊದಲಿಗೆ ಮಮ್ಮಿಗಳ ದೇಹದ ತುಣುಕುಗಳನ್ನು ಪುಡಿ ಮಾಡಿ ಒಳಗಿಳಿಸಿಕೊಳ್ಳುತ್ತಿದ್ದರು. ನಂತರ ಫ್ರೆಶ್ ಆದ ಮನುಷ್ಯರ ಮಾಂಸವನ್ನೇ ಮೆಲ್ಲುವ ಮೂಲಕ ಕಾಯಿಲೆಗಳಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಶ್ರೀಮಂತ ಯೂರೋಪಿಯನ್ನರು ಅನುಸರಿಸುತ್ತಿದ್ದರಂತೆ!