ಕರ್ನಾಟಕದಲ್ಲಿ ಮತ್ತೊಮ್ಮೆ ಕೆಲಸಕ್ಕೆ ಬಾರದ ಸ್ಟಾರ್ ವಾರ್ ಮುನ್ನೆಲೆಗೆ ಬಂದಿದೆ. ಹೊಸಪೇಟೆಯಲ್ಲಿ ನಡೆದ ಕ್ರಾಂತಿ ಚಿತ್ರದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಡೆಬಾರದ್ದು ನಡೆದು ಹೋಗಿದೆ. ಅಲ್ಲಿ ನೆರೆದಿದ್ದ ಜನಸ್ತೋಮದ ನಡುವೆ ಯಾವನೋ ತಲೆಮಾಸಿದವನೊಬ್ಬ ದರ್ಶನ್ಗೆ ಗುರಿಯಿಟ್ಟು ಚಪ್ಪಲಿ ಎಸೆದಿದ್ದಾನೆ. ಇದೀಗ ಅದರ ಹಿಂಚುಮುಂಚಿನ ಘಟನಾವಳಿಗಳ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯಲಾರಂಭಿಸಿವೆ. ಹಾಗಾದರೆ, ಇದರ ಹಿಂದಿರೋ ಹಿಕ್ಮತ್ತುಗಳೇನು? ಇದರಲ್ಲಿ ಅಪ್ಪು ಅಭಿಮಾನಿಗಳ ಪಾತ್ರವಿದೆಯಾ? ಅಭಿಮಾನಿಗಳ ಹೆಸರಿನಲ್ಲಿ ರಾಜಕೀಯ ಹಿತಾಸಕ್ತಿ ಕೆಲಸ ಮಾಡಿದೆಯಾ? ಈ ಹಿಂದೆ ದರ್ಶನ್ ಅದೃಷ್ಟ ಲಕ್ಷ್ಮಿಯ ವಿಚಾರದಲ್ಲಿ ಆಡಿದ್ದೊಂದು ಮಾತು ವಿವಾದವೆಬ್ಬಿಸಿತ್ತಲ್ಲಾ? ಅದರ ಬಗ್ಗೆ ಕುದ್ದುಹೋಗಿದ್ದ ಪಟಾಲಮ್ಮೊಂದು ಈ ಮೂಲಕ ದರ್ಶನ್ ವಿರುದ್ಧ ಸೇಡು ತೀರಿಸಿಕೊಂಡಿತಾ… ಹೀಗೆ ಪ್ರಶ್ನೆಗಳ ಸರಮಾಲೆಯೇ ಇದೆ. ಸದ್ಯಕ್ಕೆ ದಿಕ್ಕು ದಿಕ್ಕುಗಳಲ್ಲಿಯೂ ನಾನಾ ಬಗೆಯ ಉತ್ತರಗಳು ಚೆದುರಿ ಬಿದ್ದಂತೆ ಭಾಸವಾಗುತ್ತಿದೆ.
ಸ್ಟಾರ್ವಾರ್, ಅಭಿಮಾನ, ಅಸಮಾಧಾನಗಳೆಲ್ಲ ಏನೇ ಇದ್ದರೂ ಕಲಾವಿದನೊಬ್ಬನಿಗೆ ಈ ಪರಿಯಾಗಿ ಅವಮಾನಿಸೋದು ಖಂಡಿತವಾಗಿಯೂ ಸರಿಯಲ್ಲ. ದರ್ಶನ್ ಮಾತ್ರವಲ್ಲ; ಯಾವ ನಟ, ನಟಿಯರ ಮೇಲೂ ಇಂಥಾದ್ದೊಂದು ಪ್ರಹಾರವಾಗೋದನ್ನು ಯಾರೊಬ್ಬರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗೊಂದುವೇಳೆ ಅದನ್ನೂ ಸಮರ್ಥಿಸಿಕೊಂಡರೆ, ಅಂಥವರನ್ನು ಮನುಷ್ಯರೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮೇಲು ನೋಟಕ್ಕೆ ದರ್ಶನ್ ಒರಟೊರಟಾಗಿ ಕಾಣಿಸಬಹುದು. ಅವರ ನೇರವಾದ ಮಾತುಗಳೇ ವಿವಾದಗಳಿಗೂ ಕಾರಣವಾಗಿರಬಹುದು. ಒಮ್ಮೊಮ್ಮೆ ಆತ ಫಿಲ್ಟರಿಲ್ಲದೆ ಮನಬಂದಂತೆ ಮಾತಾಡುವ ಮೂಲಕ ತನಗ್ಯಾರೂ ಎದುರುನಿಲ್ಲುವಂತಿಲ್ಲ ಎಂಬಂತೆ ಮಾತಾಡೋದು ಅಹಮ್ಮಿಕೆಯ ಪರಮಾವಧಿಯಂತೆ ಕಾಣಿಸಬಹುದು. ಆದರೆ, ದರ್ಶನ್ ನಡೆದು ಬಂದಿರೋ ದಾರಿ, ಕ್ಲಾಪ್ ಬಾಯ್ ಆಗಿದ್ದುಕೊಂಡು ಸೂಪರ್ ಸ್ಟಾರ್ ಆಗಿ ಬೆಳೆದು ನಿಂತ ಪರಿಗಳಿವೆಯಲ್ಲಾ? ಅವುಗಳಿಗೆ ಯಾರೂ ಅಗೌರವ ತೋರುವಂತಿಲ್ಲ.
ಅಷ್ಟಕ್ಕೂ ದರ್ಶನ್ ಯಾರ ನೆರಳಿನಲ್ಲಿಯೋ, ಯಾರ ಹೆಸರು ಹೇಳಿಕೊಂಡೋ ಬೆಳೆದವರಲ್ಲ. ತಂದೆ ಪ್ರಸಿದ್ಧ ಕಲಾವಿದನಾಗಿದ್ದರೂ, ಓರ್ವ ಸಾಮಾನ್ಯ ಹುಡುಗ ಅನುಭವಿಸುವ ಎಲ್ಲ ಅವಮಾನಗಳನ್ನೂ ನುಂಗಿಕೊಂಡು ಮೇಲೆದ್ದು ನಿಂತವರು ದರ್ಶನ್. ಹಾಗೆ ಹಂತ ಹಂತವಾಗಿ ಬೆಳೆದು ಬಂದ ದರ್ಶನ್ ಇದೀಗ ಕರ್ನಾಟಕದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ನಟನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೀಗೆ ಕಡುಗಷ್ಟದಿಂದ ಬೆಳೆದು ಬಂದ ನಟನೊಬ್ಬನಿಗೆ ಚಪ್ಪಲಿ ಎಸೆದು ಅವಮಾನಿಸೋದಿದೆಯಲ್ಲಾ? ಅದು ಕೇವಲ ದರ್ಶನ್ ಒಬ್ಬರಿಗೆ ಮಾಡಿದ ಅವಮಾನವಲ್ಲ; ಕರುನಾಡಿನ ಕಲಾ ಪರಂಪರೆಗೇ ಮಾಡಿರುವ ಅವಮಾನ.
ಯಾವಾಗ ಹೊಸಪೇಟೆಯಲ್ಲಿ ದರ್ಶನ್ ಕಡೆಗೆ ಚಪ್ಪಲಿ ತೂರಿ ಬಂತೋ, ಆ ಕ್ಷಣದಿಂದ ದರ್ಶನ್ ಮತ್ತು ಪುನೀತ್ ಅಭಿಮಾನಿಗಳ ನಡುವೆ ಸಮರ ಶುರುವಾಗಿದೆ. ಮೇಲುನೋಟಕ್ಕೆ ಇದು ಅಪ್ಪು ಅಭಿಮಾನಿಗಳ ಕಡೆಯಿಂದಾದ ಕೃತ್ಯ ಎಂಬುದನ್ನು ಬಿಂಬಿಸಲು ಶತ ಪ್ರಯತ್ನಗಳಾಗುತ್ತಿವೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮರೆಯಾಗಿ ವರ್ಷ ಕಳೆದಿದೆ. ಬಹುಶಃ ಅವರಿಂದು ನಮ್ಮ ನಡುವಲ್ಲಿದ್ದಿದ್ದರೆ ಖಂಡಿತವಾಗಿಯೂ ಮಮ್ಮಲ ಮರುಗುತ್ತಿದ್ದರು. ಅಷ್ಟಕ್ಕೂ ಇಂಥಾದ್ದೊಂದು ಕೃತ್ಯದ ಹೊಣೆಯನ್ನು ಅವರ ಅಭಿಮಾನಿಗಳ ಹೆಗಲಿಗೆ ರವಾನಿಸುವ ಕುಕೃತ್ಯಗಳೂ ನಡೆಯುತ್ತಿರಲಿಲ್ಲವೇನೋ…
ಹಾಗಾದರೆ, ಇದು ಉನ್ಮಾದದಲ್ಲಿದ್ದ ಅಪ್ಪು ಅಭಿಮಾನಿಗಳ ಕೃತ್ಯವಾ? ಅಭಿಮಾನದ ಹೆಸರಿನಲ್ಲಿ ಇಂಥಾದ್ದೊಂದು ದುರಾದೃಷ್ಟಕರ ಸನ್ನಿವೇಶ ಸೃಷ್ಟಿಯಾಯಿತಾ ಅಂತ ನೋಡ ಹೋದರೆ, ಮತ್ತೊಂದು ಆಯಾಮದ ವಿದ್ಯಮಾನಗಳು ತಣ್ಣಗೆ ನಡೆದಿರಬಹುದಾದ ಸೂಚನೆಗಳು ಸಿಗುತ್ತವೆ. ಅದರಲ್ಲಿ ರಾಜಕೀಯ, ಸೈಂದ್ಧಾತಿಕ ಪ್ರತಿರೋಧಗಳೂ ನುಸುಳಿಕೊಂಡಿರುವ ಅನುಮಾನ ಹುಟ್ಟುತ್ತದೆ. ಇತ್ತೀಚೆಗಷ್ಟೇ ದರ್ಶನ್ ಸಂದರ್ಶನವೊಂದರಲ್ಲಿ ಆಡಿದ್ದ ಮಾತುಗಳು ವಿವಾದಕ್ಕೀಡಾಗಿದ್ದವು. ಅದೃಷ್ಟ ಲಕ್ಷಮಿಯನ್ನು ಬಟ್ಟೆ ಬಿಚ್ಚಿ ಬೆಡ್ ರೂಮಿನಲ್ಲಿ ಕೂರಿಸಿಕೊಳ್ಳಬೇಕು ಎಂಬಂಥಾ ಮಾತುಗಳು ಅವರ ಕಡೆಯಿಂದ ತೂರಿ ಬಂದಿದ್ದವು. ಹಾಗಾದಾಕ್ಷಣವೇ ಸಂಸ್ಕøತಿಯನ್ನು ಗುತ್ತಿಗೆ ತೆಗೆದುಕೊಂಡಂತಾಡುವ ಬಿಜೆಪಿ ಪ್ರಣೀತ ಮನಃಸ್ಥಿತಿಗಳು ಮುಗಿಬಿದ್ದಿದ್ದವು.
ಹಿಂದೂ ದೇವತೆಯ ಬಗ್ಗೆ ಮಾತಾಡಿದ ದರ್ಶನ್ಗೆ ಟಾಂಗ್ ಕೊಡಲು ಆ ಪಡೆ ಅಭಿಮಾನಿಗಳನ್ನು ಬಳಸಿಕೊಂಡಿತಾ? ಆ ಪಡೆಯೇ ದರ್ಶನ್ ಅವರತ್ತ ಚಪ್ಪಲಿ ತೂರಿ ಅದನ್ನು ಅಪ್ಪು ಅಭಿಮಾನಿಗಳ ತಲೆಗೆ ಕಟ್ಟುವ ಪ್ರಯತ್ನ ನಡೆಸಿತಾ? ಇದರ ಹೊಣೆಯನ್ನು ಬಿಜೆಪಿ ಸಚಿವ ಆನಂದ್ ಸಿಂಗ್ ಕಡೆಯ ಮಂದಿ ವಹಿಸಿಕೊಂಡಿದ್ದರಾ ಅಂತೆಲ್ಲ ಅನುಮಾನಗಳು ಕಾಡಲಾರಂಭಿಸಿವೆ. ಇದು ಎಲ್ಲ ನಟರ ಅಭಿಮಾನಿಗಳ ಪಾಲಿಗೂ ಕೂಡಾ ಎಚ್ಚರದ ಕರೆಗಂಟೆ. ಯಾಕೆಂದರೆ, ಅಭಿಮಾನದ ಹೆಸರಲ್ಲಿ ಹೀಗೆ ಬಡಿದಾಟಕ್ಕಿಳಿದರೆ, ಅದರಲ್ಲಿ ಯಾರೋ ಬೇಳೆ ಬೇಯಿಸಿಕೊಳ್ಳುತ್ತಾರೆ. ಯಾರೋ ಕಿತ್ತಾಡಿಕೊಳ್ಳುತ್ತಾರೆ. ಇನ್ಯಾರಿಗೋ ಅವಮಾನವಾಗಿ, ಮತ್ಯಾರೋ ಫಾಯಿದೆ ಗಿಟ್ಟಿಸಿಕೊಳ್ಳುತ್ತಾರೆ. ಅದಕ್ಕೆ ಅವಕಾಶ ಕೊಡಬಾರದೆಂದರೆ, ಅಭಿಮಾನಿಗಳೆಲ್ಲ ಸ್ಟಾರ್ ವಾರ್ ಎಂಬ ಭ್ರಮೆಯಿಂದ ಹೊರಬರೋದೊಂದೇ ದಾರಿ!
ಈ ಚಪ್ಪಲಿ ಎಸೆತದ ಹಿಂದೆ ಯಾರೇ ಇದ್ದರೂ ಇದೊಂದು ಖಂಡನಾರ್ಹ ಘಟನೆ. ಇದರ ಹಿಂದೆ ಯಾರಿದ್ದಾರೆ? ಅವರ ಮನಸಲ್ಲಿ ಎಂಥಾ ಅಜೆಂಡಾಗಳಿದ್ದಾವೆ, ಆ ಕಿಡಿಗೇಡಿಗಳನ್ನು ಪ್ರೇರೇಪಿಸಿದವರ್ಯಾರೆಂಬ ಬಗ್ಗೆ ಅಮೂಲಾಗ್ರ ತನಿಖೆಯಾಗಬೇಕಿದೆ. ಸದ್ಯಕ್ಕೆ ಶಿವರಾಜ್ ಕುಮಾರ್ ಸೇರಿದಂತೆ ಎಲ್ಲರೂ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಕಿಚ್ಚಾ ಸುದೀಪ್ ಕೂಡಾ ಬಹುಕಾಲದ ಮುನಿಸು ಮರೆತು ಕುಚಿಕ್ಕು ಗೆಳೆಯನ ಪರವಾಗಿ ಮಾತಾಡಿದ್ದಾರೆ. ಹೀಗೆ ಎಲ್ಲ ನಟರೂ ಒಂದಾಗಿ, ಅಭಿಮಾನಿಗಳನ್ನೂ ಒಂದುಗೂಡಿಸಿದರೆ ಖಂಡಿತವಾಗಿಯೂ ಇಂಥಾ ಕೃತ್ಯಗಳು ಮರುಕಳಿಸೋದಿಲ್ಲ. ಇನ್ನೆಂದೂ ಇಂಥಾ ಘಟನೆಗಳು ನಡೆಯದಿರಲಿ, ಕಕ್ಷಗಳ ಸರಮಾಲೆಗಳನ್ನೇ ಕಂಡುಂಡು ಸಾಧಿಸಿ ತೋರಿಸಿದ ದರ್ಶನ್ರಂಥಾ ನಟರು ಘಾಸಿಗೊಳ್ಳದಿರಲೆಂಬ ಹಾರೈಕೆ ನಮ್ಮದು…