ಮನಸಿಗೆ ಘಾಸಿಯಾದಾಗ, ದೊಡ್ಡ ಮಟ್ಟದಲ್ಲಿ ಪೆಟ್ಟುಗಳು ಬಿದ್ದಾಗ, ಸೋತು ಕೂತಾಗ ಅದೆಂಥಾ ಗಟ್ಟಿ ಆಸಾಮಿಗಳಾದ್ರೂ ಅತ್ತು ಬಿಡ್ತಾರೆ. ಅಂಥಾ ಘಳಿಗೆಯಲ್ಲಿ ಒಳಗಿನ ಬೇಗುದಿಗಳೆಲ್ಲವೂ ಧ್ರವ ರೂಪ ಧರಿಸಿ ಕಣ್ಣೀರಾಗಿ ಬಸಿದು ಹೋಯ್ತೇನೋ ಎಂಬಂಥ ನಿರಾಳ ಭಾವ ಆವರಿಸುತ್ತೆ. ಇದು ಎಲ್ಲರಿಗೂ ಬದುಕಿನ ಒಂದಲ್ಲ ಒಂದು ಘಟ್ಟದಲ್ಲಿ ಅರಿವಿಗೆ ಬರೋ ಸಾರ್ವತ್ರಿಕ ಸತ್ಯ. ಆದ್ರೆ ಅದೇಕೋ ಹೀಗೆ ಹಗುರಾಗಿಸೋ ಅಳುವಿಗೆ ಬಲಹೀನತೆಯ ಬಣ್ಣ ಸವರಲಾಗಿದೆ. ಆದ್ದರಿಂದಲೇ ಜನ ಅಳುವನ್ನು ಮರೆಮಾಚಿ ಗಟ್ಟಿಗರೆಂಬ ಮುಖವಾಡ ಧರಿಸಿ ಬದುಕುವಂತಾಗಿದೆ.
ಆದ್ರೆ ಅಳುವೆಂಬುದು ಬಲಹೀನತೆಯಲ್ಲ; ಅದು ಎಂಥಾ ನೋವಿಗೂ ಮದ್ದಾಗಬಲ್ಲ ಸಂಜೀವಿನಿ ಅನ್ನೋದನ್ನು ಸಂಶೋಧನೆಗಳೇ ಸಾಬೀತುಪಡಿಸಿವೆ. ಅಷ್ಟಕ್ಕೂ ಅತ್ತರೆ ನಿರಾಳವಾಗುತ್ತೆಂಬುದನ್ನ ಜನರಿಗೆ ಪರಿಚಯಿಸೋದಕ್ಕೆ ಯಾವ ರಿಸರ್ಚುಗಳೂ ಬೇಕಾಗಿಲ್ಲ. ಪ್ರತಿಯೊಬ್ಬರಿಗೂ ಅನುಭವ ಜನ್ಯವಾಗಿಯೇ ಅದು ಅರಿವಿಗೆ ಬಂದಿರುತ್ತೆ. ಆದರೂ ಈ ಬಗ್ಗೆ ಇದುವರೆಗೂ ವೈಜ್ಞಾನಿಕ ತಳಹದಿಯಲ್ಲಿ ಒಂದಷ್ಟು ಸಂಶೋಧನೆಗಳು ನಡೆದಿವೆ. ಅದೆಲ್ಲವೂ ಅಳು ನಗುವನ್ನೇ ಮೀರಿಸುವ ಸಂಜೀವಿನಿ ಅನ್ನೋದನ್ನ ಸಾರಿ ಹೇಳಿವೆ.
ತೀರಾ ನೋವಾದಾಗ ನಾವು ಪೈನ್ ಕಿಲ್ಲರ್ ಟ್ಯಾಬ್ಲೆಟ್ ತಗೋತೀವಿ. ಬದುಕಂದ ಮೇಲೆ ಅಂಥಾ ನೋವುಗಳಾಗುತ್ತಲೇ ಇರುತ್ತವೆ. ದೇಹಕ್ಕಾದ ನೋವಿಗಾದ್ರೆ ಪೈನ್ ಕಿಲ್ಲರ್ ತಗೊಂಡು ಹೊದ್ದು ಮಲಗಬಹುದು. ಮನಸಿಗಾದ ನೋವಿಗೆ ಯಾವ ಮುಲಾಮು ಹಚ್ಚಲು ಸಾಧ್ಯ? ಒಂದು ವೇಳೆ ಒತ್ತಡ ನಿವಾರಣೆಯ ಮಾತ್ರೆ ಅಭ್ಯಾಸವಾದ್ರೆ ಅದು ಡ್ರಗ್ಸಿಗಿಂತಲೂ ಭೀಕರವಾಗಿ ಕಾಡುತ್ತೆ. ಆದ್ರೆ ಅಳು ಅನ್ನೋದು ಮನಸಿನ ಮಟ್ಟಿಗೆ ಪೈನ್ ಕಿಲ್ಲರ್ನಂತೆಯೇ ಕಾರ್ಯ ನಿರ್ವಹಿಸುತ್ತೆ.
ಯಾವುದಾದ್ರೂ ನೋವಾದಾಗ ಭೋರಿಟ್ಟು ಅತ್ತರ ದೇಹದೊಳಗೆ ಹಲವಾರು ಬದಲಾವಣೆಗಳಾಗುತ್ವೆ. ಜಡಿದು ಮಳೆ ಸುರಿದ ನಂತರದ ನಿರಭ್ರ ಆಕಾಶದಂತೆ ಮನಸು ತಿಳಿಯಾಗುತ್ತೆ. ಅದು ಅಷ್ಟಕ್ಕೇ ನಿಲ್ಲೋದಿಲ್ಲ. ದೇಹದೊಳಗೆ ಅದು ಅನೇಕ ಶಕ್ತಿಯ ಕಣಗಳನ್ನ ತುಂಬುತ್ತೆ. ಅದರಿಂದ ನೋವಿನೊಂದಿಒಗೆ ಸಿಟ್ಟೂ ಕಡಿಮೆಯಾಗಿ ಸುತ್ತಿಕೊಂಡ ಸಮಸ್ಯೆಗಳನ್ನ ದಾಟಿಕೊಳ್ಳುವ ಬುದ್ಧಿವಂತಿಕೆ ಪ್ರದರ್ಶಿಸೋಕೆ ಅನುವು ಮಾಡಿ ಕೊಡುತ್ತೆ. ನಿಖರವಾಗಿ ಹೇಳಬೇಕಂದ್ರೆ ಆಗಾಗ ಅಳುತ್ತಿದ್ರೆ ಮನಸು ತಂತಾನೇ ರಿಫ್ರೆಶ್ ಆಗತ್ತೆ. ನೆನಪಿರಲಿ, ಪ್ರಾಕೃತಿಕ ಪೈನ್ ಕಿಲ್ಲರ್ ಅಳುವಿಗೆ ಗಂಡು ಹೆಣ್ಣೆಂಬ ಲಿಂಗ ಬೇಧವಿಲ್ಲ.